ADVERTISEMENT

ಮೋದಿ ಪರ ಒಲವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ಭಾರತೀಯ ಜನತಾ ಪಕ್ಷ ಪುನರ‌್ರಚಿಸಿದ ಪದಾಧಿಕಾರಿಗಳ ತಂಡ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದಾಗಿ ದೇಶದ ಗಮನ ಸೆಳೆದಿದೆ. ಸಂಸದೀಯ ಮಂಡಳಿಯಲ್ಲಿ ಪಕ್ಷದ ನಾಯಕರೊಬ್ಬರು ಸ್ಥಾನ ಪಡೆದಿರುವುದು ಅಷ್ಟೇನು ಮಹತ್ವದ ವಿಷಯ ಅಲ್ಲದೆ ಇದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಬಿಂಬಿಸಬಹುದೆಂಬ ಊಹಾಪೋಹಗಳು ಹುಟ್ಟಿಕೊಂಡಿರುವ ಹಿನ್ನೆಲೆಯಿಂದಾಗಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸಲಾಗುತ್ತಿದೆ.

ಪಕ್ಷದ ಅತ್ಯುನ್ನತ ನೀತಿನಿರ್ಧಾರ ಸಮಿತಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಮುಖ್ಯಮಂತ್ರಿ ಮೋದಿ ಆಗಿದ್ದಾರೆ ಮತ್ತು ಅವರ ಪ್ರಮುಖ ಬೆಂಬಲಿಗರಾದ ಕ್ರಿಮಿನಲ್ ಆರೋಪ ಹೊತ್ತಿರುವ ಮಾಜಿ ಸಚಿವ ಅಮಿತ್ ಷಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಈ ಬೆಳವಣಿಗೆಗಳು ಪಕ್ಷದ ಮೇಲೆ ಗುಜರಾತ್ ಮುಖ್ಯಮಂತ್ರಿಗೆ ಇರುವ ಹಿಡಿತಕ್ಕೆ ಸಾಕ್ಷಿ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಪದಾಧಿಕಾರಿಗಳ ತಂಡದ ಪುನರ್ರಚನೆಯಲ್ಲಿ ಮೇಲ್ನೋಟಕ್ಕೆ ಮೋದಿ ಪ್ರಭಾವವೇ ಎದ್ದು ಕಂಡರೂ ತುಸು ಕೆದಕಿ ನೋಡಿದರೆ ಪಕ್ಷದ ಎಲ್ಲ ನಾಯಕರು ತಮಗೆ ಬೇಕಾದವರಿಗೆ ಅವಕಾಶ ಕಲ್ಪಿಸಿರುವುದು ಕಂಡುಬರುತ್ತದೆ. ಒಂದು ರೀತಿ ಅನಧಿಕೃತ `ಕೋಟಾ'ವ್ಯವಸ್ಥೆಯನ್ನು ಅನುಕರಿಸಿದಂತೆ ಕಾಣುತ್ತಿರುವ ಪದಾಧಿಕಾರಿಗಳ ತಂಡದ ಪುನರ್ರಚನೆಯಲ್ಲಿ ರಾಜನಾಥ್‌ಸಿಂಗ್ ಎಲ್ಲ ನಾಯಕರನ್ನು ಮೆಚ್ಚಿಸುವ ಕಸರತ್ತು ನಡೆಸಿದಂತಿದೆ.

ಎಲ್.ಕೆ.ಅಡ್ವಾಣಿಯವರಿಗೆ ಆಪ್ತರಾಗಿರುವ ಮುರಳೀಧರ ರಾವ್, ಬಲಬೀರ್ ಪುಂಜ್ ಮತ್ತು ಉಮಾಭಾರತಿ, ಅರುಣ್ ಜೇಟ್ಲಿ ಅವರಿಗೆ ಆತ್ಮೀಯರಾಗಿರುವ ಧರ್ಮೇಂದ್ರ ಪ್ರಧಾನ್ ಮತ್ತು ಅನುರಾಗ್ ಠಾಕೂರ್ ಹಾಗೂ ರಾಜನಾಥ್‌ಸಿಂಗ್ ಬೆಂಬಲಿಗರಾದ ರಾಜೀವ್ ಪ್ರತಾಪ್ ರೂಡಿ ಮತ್ತು ಸುದರ್ಶನ್ ತ್ರಿವೇದಿ ಸ್ಥಾನ ಪಡೆದಿದ್ದಾರೆ.

ನರೇಂದ್ರಮೋದಿ ಅವರು ಗುಜರಾತ್ ರಾಜ್ಯದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾ ತಾನೊಬ್ಬ `ವಿಕಾಸ ಪುರುಷ'ನೆಂಬಂತೆ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದರೂ ಗುಜರಾತ್ ಗಲಭೆಯ ಕಾರಣದಿಂದಾಗಿ ಅವರಿಗೆ ಅಂಟಿರುವ ಕೋಮುವಾದಿ ಎಂಬ ಕಳಂಕ ಇನ್ನೂ ಸಂಪೂರ್ಣವಾಗಿ ಅಳಿಸಿಹೋಗಿಲ್ಲ. ಈ  ಹಿನ್ನೆಲೆಯಿಂದಾಗಿ ಮೋದಿ ಅವರಿಗೆ ನೀಡಲಾಗಿರುವ ವಿಶೇಷ ಮನ್ನಣೆ, ಪಕ್ಷ ಮರಳಿ ಹಿಂದುತ್ವದ ಅಜೆಂಡಾಕ್ಕೆ ಮರಳುವ ಸೂಚನೆ ಎಂದು ಹೇಳಲಾಗುತ್ತಿದೆ.

ಕಳೆದೆರಡು ಲೋಕಸಭಾ ಚುನಾವಣೆಯಲ್ಲಿನ ಸೋಲು ಬಿಜೆಪಿಯನ್ನು ಗೊಂದಲಕ್ಕೆ ತಳ್ಳಿದೆ. ಬಿಜೆಪಿ ತನ್ನ ಮೂಲ ಕಾರ್ಯಸೂಚಿಯಾದ ಹಿಂದುತ್ವವನ್ನು ಮರೆತ ಕಾರಣಕ್ಕಾಗಿಯೇ ಸೋಲು ಅನುಭವಿಸಬೇಕಾಯಿತು ಎಂದು ವ್ಯಾಖ್ಯಾನಿಸುವವರು ಪಕ್ಷ ಮತ್ತು ಸಂಘ ಪರಿವಾರದಲ್ಲಿದ್ದಾರೆ. ಹಿಂದುತ್ವದ ಕಾರ್ಯಸೂಚಿಯ ಕಾಲ ಮುಗಿದಿದ್ದು ಹೊಸತಲೆಮಾರಿನ ಮತದಾರರು ಹಿಂದುತ್ವಕ್ಕಿಂತಲೂ ಹೆಚ್ಚಾಗಿ ಅಭಿವೃದ್ಧಿಯ ಕಾರ್ಯಸೂಚಿ ಬಗ್ಗೆ ಒಲವು ತೋರುತ್ತಿರುವುದರಿಂದ ಅದೇ ಸರಿಯಾದ ಮಾರ್ಗ ಎನ್ನುವವರೂ ಪಕ್ಷದಲ್ಲಿದ್ದಾರೆ.

ರಾಜನಾಥ್‌ಸಿಂಗ್ ಅವರ ಹೊಸ ತಂಡವನ್ನು ನೋಡಿದರೆ ಪಕ್ಷ ಹಿಂದುತ್ವದ ಕಾರ್ಯಸೂಚಿಯ ಕಡೆ ವಾಲಿರುವಂತೆ ಕಾಣುತ್ತಿದೆ. ಈ ಕಾರಣದಿಂದಾಗಿಯೇ ಕರ್ನಾಟಕ ವಿಧಾನಸಭೆಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆ ಹೊಸ ತಂಡ ಮಾತ್ರವಲ್ಲ ಹೊಸ ಕಾರ್ಯಸೂಚಿ ಎದುರಿಸಲಿರುವ ಮೊದಲ ಸವಾಲು ಕೂಡಾ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.