ADVERTISEMENT

ವಿಚಿತ್ರ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ರಾಜ್ಯ ವಿಧಾನ ಪರಿಷತ್ತಿನ ಉಪಸಭಾಪತಿ ಪುಟ್ಟಣ್ಣ ಅವರನ್ನು ಆಳುವ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿ ಆ ಸ್ಥಾನದಿಂದ ಕಿತ್ತು ಹಾಕಿದ ಕ್ರಮ ಕರ್ನಾಟಕ ವಿಧಾನ ಮಂಡಲ ಇತಿಹಾಸದಲ್ಲಿ ಅಪರೂಪದ ಪ್ರಕರಣ. ಜನತಂತ್ರ ವ್ಯವಸ್ಥೆಯಲ್ಲಿ ಇದೊಂದು ಕೆಟ್ಟ ಸಂಪ್ರದಾಯ.

ಸಭಾಪತಿ ಮತ್ತು ಉಪಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ತಂದಿರುವ ಪ್ರಕರಣಗಳು ಬೇರೆ ರಾಜ್ಯಗಳಲ್ಲಿಯೂ ನಡೆದಿವೆ. ಗೋವಾ ಮತ್ತು ತಮಿಳುನಾಡು ವಿಧಾನ ಸಭೆಯಲ್ಲೂ ಇಂತಹ ಯತ್ನ ನಡೆದಿದೆಯಾದರೂ, ಅಲ್ಲಿ ವಿರೋಧ ಪಕ್ಷಗಳು ತಂದ ಅವಿಶ್ವಾಸ ನಿರ್ಣಯಗಳಿಗೆ ಸೋಲಾಗಿದೆ.
 
2008ರಲ್ಲಿ ಗೋವಾ ವಿಧಾನ ಸಭಾಧ್ಯಕ್ಷರಾಗಿದ್ದ ಪ್ರತಾಪ್‌ಸಿಂಗ್ ರಾಣೆ ಅವರು ಸದನವನ್ನು ನಿಷ್ಪಕ್ಷಪಾತವಾಗಿ ನಡೆಸುವ ಬದಲು ಕಾಂಗ್ರೆಸ್ ಸರ್ಕಾರದ ಪಕ್ಷಪಾತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವ ಕಾರಣ ನೀಡಿ ಬಿಜೆಪಿ ಮತ್ತು ಗೋಮಾಂತಕ ಪಾರ್ಟಿ ಅವಿಶ್ವಾಸ ತಂದಿದ್ದವು. ಆದರೆ ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಸಭಾಪತಿಯವರ ಗೈರು ಹಾಜರಿಯಲ್ಲಿ ಸದನದ ಕಲಾಪದ ಹೊಣೆ ಹೊರುವ ಉಪಸಭಾಪತಿ ವಿರುದ್ದ ಅವಿಶ್ವಾಸದಂತಹ ಅಸ್ತ್ರ ಬಳಸಿದ್ದು ವಿಚಿತ್ರ ಬೆಳವಣಿಗೆ. ಜನತಂತ್ರ ವ್ಯವಸ್ಥೆಯಲ್ಲಿ ಆಳುವ ಪಕ್ಷವೊಂದು ಅನುಸರಿಸಿದ ಈ ಕ್ರಮ ಸಂಸದೀಯ ಜನತಂತ್ರ ವ್ಯವಸ್ಥೆಯಲ್ಲಿ ಒಂದು ರೀತಿಯಲ್ಲಿ ವಿಲಕ್ಷಣ ನಡವಳಿಕೆ.

ಸದನದಲ್ಲಿ ತನಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಪ್ರತಿ ಪಕ್ಷದ ಮೇಲೆ ಸೇಡಿನ ರಾಜಕೀಯ ನಡೆಸುವುದು ರಾಷ್ಟ್ರೀಯ ಪಕ್ಷವೊಂದಕ್ಕೆ ಶೋಭೆ ತರುವ ಸಂಗತಿಯಲ್ಲ. ಕೆಲವೊಮ್ಮೆ ವಿಧಾನಸಭೆಯಲ್ಲಿ ಮತ್ತು ಲೋಕಸಭೆಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ನಿರಂತರವಾಗಿ ಪ್ರಮುಖ ವಿರೋಧ ಪಕ್ಷಗಳಿಗೆ ಬಿಟ್ಟುಕೊಡುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗಿದೆ. ಸಂಸದೀಯ ಜನತಂತ್ರ ವ್ಯವಸ್ಥೆಯಲ್ಲಿ ಆಳುವ ಪಕ್ಷವು ವಿರೋಧ ಪಕ್ಷವನ್ನು ಗೌರವಿಸುವ ಆದರ್ಶ ಇದರಲ್ಲಿದೆ. ಆದರೆ ಕರ್ನಾಟಕದಲ್ಲಿ ಆಳುವ ಪಕ್ಷ ಸಹನೆ ಕಳೆದುಕೊಂಡಂತೆ ಕಾಣುತ್ತಿದೆ.

ಸದನದಲ್ಲಿ ನಮಗೆ ಬಹುಮತ ಇರುವುದರಿಂದ ಪ್ರತಿ ಪಕ್ಷದ ವ್ಯಕ್ತಿ ಉಪಸಭಾಪತಿ ಸ್ಥಾನದಲ್ಲಿ ಇರಬಾರದು ಎನ್ನುವ ಧೋರಣೆ ಸ್ಪಷ್ಟವಾಗಿ ಕಾಣುತ್ತದೆ. ಇದು ನಿಜಕ್ಕೂ ದುರದೃಷ್ಟಕರ. ಉಪಸಭಾಪತಿ ಸ್ಥಾನವನ್ನು ಅಲಂಕರಿಸುವವರು ರಾಜಕೀಯ ಪಕ್ಷದ ಚಟುವಟಿಕೆಯಿಂದ ದೂರವಿರಬೇಕೆನ್ನುವ ನಿಯಮಗಳೇನೂ ಇಲ್ಲ.

ಆದರೆ ಪುಟ್ಟಣ್ಣ ಅವರು ಕೆಲವು ಸಂದರ್ಭಗಳಲ್ಲಿ ನಡೆಸಿದ ರಾಜಕೀಯ ಚಟುವಟಿಕೆ ಮತ್ತು ಸಚಿವರೊಬ್ಬರ ಬಗೆಗೆ ಮಾಡಿದ ಕಟು ಟೀಕೆಗಳು ಸರ್ಕಾರಕ್ಕೆ ಕಿರಿಕಿರಿ ತಂದಿರುವುದೇ ಈ ಬೆಳವಣಿಗೆಗೆ ಕಾರಣ ಎನ್ನುವುದರಲ್ಲಿ ಮುಚ್ಚಿಡುವಂತಹದ್ದೇನಿಲ್ಲ. ಪುಟ್ಟಣ್ಣ ಅನೇಕ ಸಂದರ್ಭಗಳಲ್ಲಿ ಸದನದ ಹೊರಗೆ ನಡೆದುಕೊಂಡ ರೀತಿ ವಿವಾದವನ್ನೇ ಸೃಷ್ಟಿಸಿದ್ದೂ ದುರದೃಷ್ಟಕರ ಬೆಳವಣಿಗೆ.

ಸಭಾಪತಿ ಅಥವಾ ಉಪಸಭಾಪತಿ ಸ್ಥಾನವನ್ನು ಅಲಂಕರಿಸುವವರು ಸದನದ ಒಳಗೆ ಮತ್ತು ಹೊರಗೆ ಇತರ ಸದಸ್ಯರಿಗೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಆ ದೃಷ್ಟಿಯಿಂದ ಅಂತಹ ಪ್ರಮುಖ ಸ್ಥಾನಗಳಿಗೆ ಆಯ್ಕೆ ಮಾಡುವಾಗಲೇ ರಾಜಕೀಯ ಪಕ್ಷಗಳು ವಿವೇಚನೆ ಪ್ರದರ್ಶಿಸಬೇಕು. ಸಂಸದೀಯ ವ್ಯವಸ್ಥೆಯನ್ನು ಗೌರವಿಸುವವರೆಲ್ಲರ ನಿರೀಕ್ಷೆ ಇದು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.