ADVERTISEMENT

ಶಾಶ್ವತ ಪರಿಹಾರ ಮುಖ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂಬ ಮುಖ್ಯಮಂತ್ರಿಯವರ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ಹಿಂದಿನ ಹಲವು ಮುಖ್ಯಮಂತ್ರಿಗಳು ನೀಡಿದ್ದ ಹೇಳಿಕೆಯನ್ನೇ ಸದಾನಂದ ಗೌಡರು ಪುನರುಚ್ಚರಿಸಿದ್ದಾರೆ. `ನೇತ್ರಾವತಿ ತಿರುವು ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ~ ಎಂದು ಸ್ಪಷ್ಟವಾಗಿ ಹೇಳಿರುವುದಷ್ಟೆ ಹೊಸದು. ಕರಾವಳಿ ಪ್ರದೇಶದವರಾದ ಮುಖ್ಯಮಂತ್ರಿ ನೇತ್ರಾವತಿ ತಿರುವು ಯೋಜನೆ ಜಾರಿಗೆ ಒಪ್ಪಿಗೆ ನೀಡುತ್ತಾರೆ ಎಂದು ನಿರೀಕ್ಷಿಸಲಾಗದು.

ನೇತ್ರಾವತಿ ತಿರುವು ಯೋಜನೆ ಜಾರಿಗೊಳಿಸಿ ಐದು ಜಿಲ್ಲೆಗಳ ನೀರಿನ ಬವಣೆ ನೀಗಿಸುವುದಾಗಿ ಹಿಂದಿನ ಹಲವು ಸರ್ಕಾರಗಳು ಕಳೆದ 10-15 ವರ್ಷಗಳಿಂದ ಜನರ ಮೂಗಿಗೆ `ತುಪ್ಪ~ ಹಚ್ಚುತ್ತಲೇ ಬಂದಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಇಪ್ಪತ್ತೆರಡು ಸಣ್ಣ ಪುಟ್ಟ ನದಿಗಳಿಂದ ಒಟ್ಟು ಭಾರೀ ಪ್ರಮಾಣದ ನೀರು ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿದೆ. ಈ ನೀರಿನಲ್ಲಿ ಸ್ವಲ್ಪ ಭಾಗವನ್ನು ಬಳಸಿಕೊಂಡರೆ ಐದು ಜಿಲ್ಲೆಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂಬ ಹಿನ್ನೆಲೆಯಲ್ಲಿ ಐದು ಜಿಲ್ಲೆಗಳ ಜನರು ಈ ಯೋಜನೆ ಬಗ್ಗೆ ಅಶಾಭಾವ ತಾಳಿದ್ದರು. ನೇತ್ರಾವತಿ ತಿರುವು ಯೋಜನೆ ಜಾರಿಯಾದರೆ ಪಶ್ಚಿಮಫಟ್ಟದ ಪರಿಸರ ಹಾಗೂ ಜೀವ ವೈವಿಧ್ಯಕ್ಕೆ ಹಾನಿಯಾಗುತ್ತದೆ ಎಂಬ ಅಭಿಪ್ರಾಯವೂ ಇದೆ. ಅದೇನೇ ಇರಲಿ, `ನೇತ್ರಾವತಿ ತಿರುವು ಯೋಜನೆಯನ್ನು ಜಾರಿಗೆ ತರುತ್ತೇವೆ~ ಎಂದು ಮತ್ತೆ ಹುಸಿ ಭರವಸೆ ನೀಡುವ ಬದಲು ಪರ್ಯಾಯ ವ್ಯವಸ್ಥೆಗೆ ಚಿಂತನೆ ನಡೆಸುವ ಸರ್ಕಾರದ ಪ್ರಯತ್ನ ಸ್ವಾಗತಾರ್ಹ.

ಕುಡಿಯುವ ನೀರಿನ ಕೊರತೆ ಇರುವ ಐದೂ ಜಿಲ್ಲೆಗಳಲ್ಲಿ ಜೀವ ನದಿಗಳಿಲ್ಲ. ಸಣ್ಣ ಪುಟ್ಟ ನದಿಗಳಲ್ಲಿ ಮಳೆಗಾಲದಲ್ಲೂ ನೀರು ಹರಿಯುವುದಿಲ್ಲ. ಈ ಜಿಲ್ಲೆಗಳಲ್ಲಿ ಸಾವಿರಾರು ಕೆರೆಗಳಿದ್ದರೂ ಅವುಗಳಲ್ಲಿ ಹೂಳು ತುಂಬಿದೆ. ತುಂಗಭದ್ರಾ ನದಿಯಲ್ಲಿ (ಕೃಷ್ಣಾ ಕೊಳ್ಳದ ನದಿಗಳ ಹೆಚ್ಚುವರಿ ನೀರು ಹಂಚಿಕೆ -`ಬಿ~ ಸ್ಕೀಮ್ ಪ್ರಕಾರ) ಲಭ್ಯವಾಗುವ ಹೆಚ್ಚುವರಿ ನೀರನ್ನು ಕುಡಿಯಲು ಬಳಸಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಒಂದೆರಡು ಜಿಲ್ಲೆಗಳಿಗೆ ನೀರು ಪೂರೈಸಲು ಸಾಧ್ಯವಿದೆ.

ಅದಕ್ಕಿಂತ ಮುಖ್ಯವಾಗಿ ಈ ಐದೂ ಜಿಲ್ಲೆಗಳಲ್ಲಿ ಅಂತರ್ಜಲದ ಮಟ್ಟ ಹೆಚ್ಚಿಸಲು ಮಳೆ ನೀರು ಸಂಗ್ರಹಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಆದ್ಯತೆ ಕೊಡಬೇಕು. ಕೆರೆಗಳ ಹೂಳೆತ್ತಿ ಅಲ್ಲಿ ಮಳೆಯ ನೀರು ಸಂಗ್ರಹಿಸಬೇಕು. ಕೆರೆಗಳಿಲ್ಲದ ಕಡೆ ಸಣ್ಣ ಪುಟ್ಟ ಕಟ್ಟೆಗಳನ್ನು ನಿರ್ಮಿಸಲು ಸಾಧ್ಯವಿದೆ. ಈ ಕಾರ್ಯಕ್ರಮಗಳು ಗ್ರಾಮ ಪಂಚಾಯ್ತಿಗಳು ಹಾಗೂ ಜನರ ಸಹಭಾಗಿತ್ವದಲ್ಲಿ ನಡೆಯಬೇಕು. ಮಳೆಯ ನೀರು ಸಂಗ್ರಹಿಸುವ ಕಾರ್ಯಕ್ರಮಗಳ ಜಾರಿಗೆ ಸರ್ಕಾರ ಆರ್ಥಿಕ ನೆರವು ನೀಡುವುದರ ಜತೆಗೆ ಅನುಷ್ಠಾನದ ನೇತೃತ್ವ ವಹಿಸಬೇಕು.

ಮಳೆಯ ನೀರು ನೆಲದಲ್ಲೇ ಇಂಗುವಂತೆ ಮಾಡುವ ಮೂಲಕವೇ ಅಂತರ್ಜಲದ ಮಟ್ಟ ಹೆಚ್ಚಿಸುವ ಕಾರ್ಯಕ್ರಮಗಳು ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿವೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಅಂತರ್ಜಲ ಹೆಚ್ಚಿಸುವ ಪ್ರಯತ್ನಕ್ಕೆ ಒತ್ತು ನೀಡಿದರೆ ಈ ಸಮಸ್ಯೆಗೆ ಪರಿಹಾರ ಸಿಕ್ಕೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.