ADVERTISEMENT

ಶೀಘ್ರ ನ್ಯಾಯದಾನದ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಮಂದಗತಿಯಲ್ಲಿ ಸಾಗುತ್ತಿದ್ದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ   ಕೆಲ­ವಾ­­ದರೂ ಪ್ರಕರಣಗಳಲ್ಲಿ ತ್ವರಿತವಾಗಿ ಇತ್ಯರ್ಥವಾಗುತ್ತಿ­ರು­ವುದು  ಸಮಾಧಾನ ತರುವ ವಿಷಯ. ಮುಂಬೈನ ಶಕ್ತಿಮಿಲ್ ಆವರಣದಲ್ಲಿ 18 ವರ್ಷ ವಯಸ್ಸಿನ ಟೆಲಿಫೋನ್ ಆಪರೇಟರ್ ಮೇಲೆ ನಡೆದ  ಅತ್ಯಾ­ಚಾರ ಪ್ರಕ­ರಣದ ವಿಚಾರಣೆಯನ್ನು 8 ತಿಂಗಳ ಒಳಗೆ ಮುಗಿಸಿ ನಾಲ್ಕು ಮಂದಿ ಅಪರಾಧಿಗಳಿಗೆ  ಜೀವಾವಧಿ ಶಿಕ್ಷೆ ವಿಧಿಸಿದ್ದು ಆಶಾದಾಯಕ ಬೆಳವ­ಣಿಗೆ.

ಅವರಲ್ಲಿ ಮೂವರು, ಪತ್ರಕರ್ತೆಯೊಬ್ಬರ ಮೇಲೆ ಅದೇ ಜಾಗದಲ್ಲಿ ನಡೆದ ಇನ್ನೊಂದು ಅತ್ಯಾಚಾರ ಪ್ರಕರಣದಲ್ಲೂ ಭಾಗಿಯಾಗಿ­ದ್ದರು. 18 ವರ್ಷ ತುಂಬದ ಇನ್ನಿಬ್ಬರು ಆರೋಪಿಗಳ  ವಿಚಾರಣೆ ಪ್ರತ್ಯೇಕವಾಗಿ ಬಾಲ ನ್ಯಾಯ ಕಾಯ್ದೆಯ ಅನ್ವಯ ನಡೆಯುತ್ತಿದೆ.  ‘ಅತ್ಯಾಚಾರ ನಡೆಸಿದ ಅಪರಾ­ಧಿ­­ಗಳಿಗೆ ಕ್ಷಮೆ ನೀಡುವುದು ಎಂದರೆ ನ್ಯಾಯ ದಾನವನ್ನು ಅಪಹಾಸ್ಯ ಮಾಡಿ­ದಂತೆ. ಪೂರ್ವಯೋಜಿತ ಸಂಚಿನಿಂದ ಈ ಅತ್ಯಾಚಾರ ಎಸಗಲಾಗಿದೆ’ ಎಂದು ಅತ್ಯಾ­ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ನೀಡಿದ ಸೆಷನ್ಸ್ ನ್ಯಾಯಾಧೀ­ಶರು ಹೇಳಿ­ದ್ದಾರೆ.

ಅತ್ಯಾಚಾರದಂತಹ ಪ್ರಕರಣಗಳಲ್ಲಿ ವಿಚಾರಣೆ ಮಂದಗತಿ ಯಲ್ಲಿ ಸಾಗಿದರೆ ಅದರಿಂದ ಕೃತ್ಯ ಎಸಗಿದ ವ್ಯಕ್ತಿಗೆ ಲಾಭವಾಗಬಹುದೇ ಹೊರತು ಸಂತ್ರಸ್ತರಿಗೆ ಅಲ್ಲ. ನ್ಯಾಯದಾನ ವಿಳಂಬ ಎಂದರೆ ನ್ಯಾಯವನ್ನು ನಿರಾಕರಿಸಿದಂತೆ. ಸಾಕ್ಷಿಗಳಿಗೆ ಬೆದರಿಕೆ, ಸಾಕ್ಷ್ಯ ನಾಶ, ಪ್ರಕರಣ ದುರ್ಬಲ ಗೊಳಿಸಲು ಆರೋಪಿಗಳ ಹತ್ತು ಹಲವು ತಂತ್ರಗಳು– ಇವು ನ್ಯಾಯದಾನ ವ್ಯವಸ್ಥೆಗೆ ದೊಡ್ಡ ಅಡಚಣೆಗಳಾಗುತ್ತವೆ.  ಆದರೆ 2012ರ ಡಿಸೆಂಬರ್

ತಿಂಗ­ಳಿ­ನಲ್ಲಿ ದೆಹಲಿ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಹಾಗೂ ಸಾವಿನ ಪ್ರಕರ­ಣಕ್ಕೆ ಸಾರ್ವಜನಿಕರಿಂದ ವ್ಯಕ್ತವಾದ ಆಕ್ರೋಶ, ಚಳವಳಿ ಹಾಗೂ ಮಾಧ್ಯಮ­ಗಳು ಬೀರಿದ ಪ್ರಭಾವದಿಂದಾಗಿ ಈಗ   ಅತ್ಯಾಚಾರ ಕಾನೂನು­ಗಳು ಬಿಗಿ­ಗೊಂಡಿರುವುದು ಸಕಾರಾತ್ಮಕ ಬೆಳವಣಿಗೆ. ನ್ಯಾಯದಾನ ಪ್ರಕ್ರಿಯೆಯಲ್ಲಿ ಇದು ಪ್ರತಿಫಲನಗೊಳ್ಳುತ್ತಿದೆ.

ಪೊಲೀಸರಿಂದ ಶೀಘ್ರಗತಿಯಲ್ಲಿ ತನಿಖೆ,  ಕಾನೂನಿನ ಕೈಯಿಂದ ಆರೋಪಿ ತಪ್ಪಿಸಿಕೊಳ್ಳದಂತೆ ಸಾಕ್ಷ್ಯಾಧಾರ ಸಂಗ್ರಹ, ಸಾಕ್ಷಿಗಳಿಗೆ ರಕ್ಷಣೆ ಮತ್ತು ಧೈರ್ಯ ತುಂಬುವ ಕೆಲಸ ನಡೆದರೆ ಅತ್ಯಾಚಾರ ಪ್ರಕರಣವನ್ನು ಅರ್ಧ ಗೆದ್ದಂತೆ. ಶೀಘ್ರ­ಗತಿಯಲ್ಲಿ ತನಿಖೆ ಮತ್ತು ವಿಚಾರಣೆ ಎಲ್ಲಾ ಅತ್ಯಾಚಾರ ಪ್ರಕರಣಗಳಿಗೂ ಅನ್ವಯವಾಗಬೇಕು. ಪತ್ರಿಕೆಗಳಲ್ಲಿ ಪ್ರಮುಖ ಸುದ್ದಿಗಳಾಗುವ ಅಥವಾ ಪ್ರಮುಖ ನಗರಗಳಲ್ಲಿ ನಡೆಯುವ ಪ್ರಕರಣಗಳು ಮಾತ್ರವಲ್ಲ ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಕುರಿತೂ ವಿಚಾರಣೆ ತೀವ್ರಗತಿಯಲ್ಲಿ ಆಗಬೇಕು.  ಶೀಘ್ರಗತಿಯಲ್ಲಿ  ತಮಗೆ ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಸಂತ್ರಸ್ತರಿಗೆ ಸಿಗುವುದು ಅಗತ್ಯ.

ಮುಂಬೈ­ನಲ್ಲಿ ನಡೆದ ಎರಡೂ ಪ್ರಕರಣಗಳು ನಗರಮಧ್ಯದಲ್ಲಿ ನಡೆದಂತ­ಹವು. ಇದರಿಂದಾಗಿ ಮುಂಬೈ ನಗರ ಮಹಿಳೆಯರಿಗೆ ಸುರಕ್ಷಿತ ಎನ್ನುವ ಭಾವನೆ ಕಳಚಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯೋಗದ ಸ್ಥಳಗಳಲ್ಲಿ ತಾವು ಸುರಕ್ಷಿತ ಎನ್ನುವ ಭಾವನೆ ಮಹಿಳೆಯರಿಗೆ ಮೊದಲು ಮೂಡಬೇಕು. ಇದಕ್ಕೆ ತಕ್ಕ ವಾತಾವರಣ ನಿರ್ಮಾಣ ಆಗಬೇಕು. 

ಅಪರಾಧ ನಡೆಸಿಯೂ ತಾವು ಪಾರಾ­­ಗಲು ಸಾಧ್ಯ ಎನ್ನುವುದು ಅಪರಾಧಿ ಮನೋಭಾವ ಹೊಂದಿರು­ವ­ವ­ರಲ್ಲಿ ಹೆಚ್ಚುತ್ತಿರು-­ವುದೇ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಕಾರಣ. ಇಂತಹ ಅಪರಾಧಗಳನ್ನು ತಡೆಗಟ್ಟಲು ಹೆಚ್ಚಿನ ನಿಗಾ ವ್ಯವಸ್ಥೆ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT