ADVERTISEMENT

ಸಂಸದೀಯ ವೇದಿಕೆ ದುರ್ಬಳಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಈಚಿನ ವರ್ಷಗಳಲ್ಲಿ ದೇಶವು ಕಂಡ ಭಾರಿ ಪ್ರಮಾಣದ  ಭ್ರಷ್ಟಾಚಾರದ ಪ್ರಕರಣ 2ಜಿ ತರಂಗಾಂತರ ಹಂಚಿಕೆಯ ಹಗರಣ. ಒಂದು ಲಕ್ಷ ಕೋಟಿ ರೂಪಾಯಿಗೂ  ಹೆಚ್ಚಿನ ಹಣಕಾಸು ಅವ್ಯವಹಾರ ನಡೆದ ಈ ಪ್ರಕರಣ ಇದೀಗ ಸುಪ್ರೀಂ ಕೋರ್ಟಿನ ಆದೇಶದ ಅನ್ವಯ ಕೇಂದ್ರ ತನಿಖಾ ಮಂಡಲಿಯ ತನಿಖೆಯಲ್ಲಿ (ಸಿಬಿಐ) ಮುಂದುವರಿದಿದೆ.

ಹಗರಣದಲ್ಲಿ ಭಾಗಿಯಾದ ಉನ್ನತ ಅಧಿಕಾರದಲ್ಲಿದ್ದ ವ್ಯಕ್ತಿಗಳು ತನಿಖೆಯ ಹಂತದಲ್ಲಿಯೇ ಜೈಲು ಸೇರಿದ್ದಾರೆ. ಈ ಬೆಳವಣಿಗೆಯಿಂದ ಈ ಪ್ರಕರಣ ತುಂಬ ಗಂಭೀರ ಸ್ವರೂಪದ್ದೆಂಬುದು ಸ್ಪಷ್ಟವಾಗಿದೆ. ಈ ಮೊದಲು, ಇದೇ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಒಪ್ಪಿಸಬೇಕೆಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದಾಗ ಆಡಳಿತಾರೂಢ ಯುಪಿಎ, ಅದಕ್ಕೆ ಮಣಿಯದೆ ಸಂಸತ್ತಿನ ಚಳಿಗಾಲದ ಅಧಿವೇಶನವನ್ನೇ ಬಲಿಕೊಟ್ಟಿತ್ತು. ಪ್ರಕರಣದ ತನಿಖೆಗೆ ವಿರೋಧ ಪಕ್ಷದ ಮುಖಂಡರ ಅಧ್ಯಕ್ಷತೆ ಇರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) ಪರಿಶೀಲನೆಗೆ ಒದಗಿಸಿದರೆ ಸಾಕು ಎಂದು ಹಠ ಹಿಡಿದಿತ್ತು. ಈ ಮೂಲಕ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಪ್ರಬಲ ಸಂಸದೀಯ ವೇದಿಕೆ ಎಂದೂ ಪ್ರತಿಪಾದಿಸಿತ್ತು.
 
ಆಡಳಿತಾರೂಢ ಪಕ್ಷದ ಸದಸ್ಯರ ಜೊತೆಗೆ ಪ್ರತಿ ಪಕ್ಷಗಳ ಸದಸ್ಯರ ಪ್ರಾತಿನಿಧ್ಯ ಇರುವ ಈ ಸಮಿತಿ ವಾಸ್ತವದಲ್ಲಿ ಸರ್ಕಾರದ ದಾಖಲೆಗಳನ್ನು ಆಧರಿಸಿ ನಿಜವನ್ನು ಬಯಲಿಗೆ ಎಳೆಯುವ ಸತ್ಯಶೋಧಕ ತಂಡ. ಸಾಂವಿಧಾನಿಕ ಮಹತ್ವದ ಸಂಸದೀಯ ವೇದಿಕೆ. ಬಿಜೆಪಿಯ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅಧ್ಯಕ್ಷತೆಯ ಈ ಸಮಿತಿಗೆ ಆಗಿರುವ ಗತಿಯನ್ನು ಗಮನಿಸಿದರೆ ಭ್ರಷ್ಟಾಚಾರ ಬಯಲಿಗೆಳೆಯುವ ಕರ್ತವ್ಯ ನಿರ್ವಹಿಸುವುದಿರಲಿ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ಈ ರಾಜಕೀಯ ಪಕ್ಷಗಳು ತಮ್ಮಲ್ಲಿ ಪೈಪೋಟಿ ನಡೆಸುತ್ತಿರುವಂತೆ ತೋರುತ್ತದೆ.

ಜಂಟಿ ಸಂಸದೀಯ ರಚನೆಯಾಗಿರುವ ಕಾರಣ ತರಂಗಾಂತರ ಹಂಚಿಕೆಯ ಪ್ರಕರಣವನ್ನು ಸಮಿತಿ ಪರಿಶೀಲಿಸುವುದಕ್ಕೆ ಮೊದಲಿನಿಂದ ಅಡ್ಡಿಪಡಿಸಿದ ಆಡಳಿತಾರೂಢ ಕಾಂಗ್ರೆಸ್ ಸದಸ್ಯರು, ಸಮಿತಿಯ ಕೊನೆಯ ಸಭೆಯಲ್ಲಿ ಡಿಎಂಕೆ ಮತ್ತು ಬಿಎಸ್‌ಪಿ ಸದಸ್ಯರ ಬಲದಿಂದ ಮುರಳಿ ಮನೋಹರ ಜೋಷಿ ಅವರನ್ನೇ ಅಧ್ಯಕ್ಷ ಸ್ಥಾನದಿಂದ ‘ವಜಾ’ ಮಾಡಿ ಇನ್ನೊಬ್ಬರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರಲ್ಲದೆ, ಜೋಷಿ ಅವರು ಸಿದ್ಧಪಡಿಸಿದ ವರದಿಯ ಕರಡನ್ನು ‘ಪಕ್ಷದ ಕಾರ್ಯಸೂಚಿಯಂತೆ ರಚಿಸಿದ್ದಾರೆ’ ಎಂದು ಆರೋಪಿಸಿ ತಿರಸ್ಕರಿಸಿದ್ದು ಹಿಂದೆಂದೂ ನಡೆಯದಂತಹ ನಡವಳಿಕೆ. ಲೋಕಸಭೆಯ ಸ್ಪೀಕರ್ ಅವರಿಗೆ ಸಲ್ಲಿಸುವುದಕ್ಕಿಂತ ಮೊದಲೇ ಜೋಷಿ ಅವರು ಸಿದ್ಧಪಡಿಸಿದ್ದ ಕರಡು ವರದಿ ಬಹಿರಂಗವಾಗಿರುವುದು ಇನ್ನೊಂದು ಅಪಚಾರ. ಇದರ ನೈತಿಕ ಹೊಣೆ ಅಧ್ಯಕ್ಷ ಸ್ಥಾನದಲ್ಲಿದ್ದ ಮುರಳಿ ಮನೋಹರ ಜೋಷಿ ಅವರದೇ ಎಂಬುದರಲ್ಲಿ ಅನುಮಾನವಿಲ್ಲ.

ತಮ್ಮ ‘ವಜಾ’ ಹಾಗೂ ಕರಡು ವರದಿಯನ್ನು ಸಮಿತಿಯ ಸದಸ್ಯರು ‘ತಿರಸ್ಕರಿಸಿದ’ ನಂತರವೂ ಅದೇ ವರದಿಯನ್ನು ಲೋಕಸಭೆಯ ಸ್ಪೀಕರ್ ಅವರಿಗೆ ಸಲ್ಲಿಸಿ ಜೋಷಿ ಕೈತೊಳೆದುಕೊಂಡಿದ್ದಾರೆ. ಈ ಬೆಳವಣಿಗೆಗಳು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿವೆ. ಸಂಸದೀಯ ವೇದಿಕೆಗಳನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳುವ ರಾಜಕೀಯ ಪಕ್ಷಗಳ ಚಿಲ್ಲರೆತನವನ್ನೂ ಬಯಲು ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.