ADVERTISEMENT

ಸತ್ವ ಪರೀಕ್ಷೆಯ ಕಾಲ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2012, 19:30 IST
Last Updated 26 ಮಾರ್ಚ್ 2012, 19:30 IST

ರಾಜ್ಯದ 123 ತಾಲ್ಲೂಕುಗಳಲ್ಲಿರುವ ಬರಗಾಲ ಪರಿಸ್ಥಿತಿ ನಿರ್ವಹಣೆ ಕುರಿತಂತೆ ಸರ್ಕಾರ ನೀಡುತ್ತಿರುವ ಮಾಹಿತಿಗೂ   ವಾಸ್ತವ ಸ್ಥಿತಿಗೂ ಭಾರೀ ವ್ಯೆತ್ಯಾಸವಿದೆ. ಪರಿಹಾರ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದೇ ಸರ್ಕಾರ ಹೇಳುತ್ತಿದೆ.

ಆದರೆ ಬರಪೀಡಿತ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಕೊರತೆ ಸೇರಿದಂತೆ ಹಲವು ಸಮಸ್ಯೆಗಳಿವೆ.ಬರ ಸಂತ್ರಸ್ತರಿಗೆ ಉದ್ಯೋಗ ಕೊಡುವ ಕಾಮಗಾರಿಗಳೂ ನಡೆಯುತ್ತಿಲ್ಲ. ಈಗ ಇಡೀ ರಾಜ್ಯದಲ್ಲಿ ನೀರಿನ ಕೊರತೆ ಇದೆ.

ಈ ಪರಿಸ್ಥಿತಿಯನ್ನು ನಿಭಾಯಿಸುವ ಜವಾಬ್ದಾರಿಯನ್ನು ಅಧಿಕಾರಿಗಳಿಗೆ ವಹಿಸಿ ಚುನಾಯಿತ ಪ್ರತಿನಿಧಿಗಳು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಗುಳೇ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾವಿರಾರು ದನಕರುಗಳನ್ನು ರೈತರು ಕಸಾಯಿಖಾನೆಗೆ ಮಾರಾಟ ಮಾಡಿದ್ದಾರೆ. ಸರ್ಕಾರ ಗೋಶಾಲೆಗಳನ್ನು ತೆರೆದಿದ್ದರೂ ಅವು ವ್ಯವಸ್ಥಿತವಾಗಿಲ್ಲ. ಈ ವರ್ಷ ಹಿಂಗಾರಿ ಬಿತ್ತನೆಯೂ ಕಡಿಮೆಯಾಗಿದೆ. ತೇವಾಂಶದ ಕೊರತೆಯಿಂದ 12.12 ಲಕ್ಷ ಹೆಕ್ಟೇರ್‌ನಲ್ಲಿದ್ದ ಹಿಂಗಾರಿ ಬೆಳೆಗೆ ಹಾನಿಯಾಗಿದೆ.
 
ಬರ ಪರಿಹಾರ ಕಾರ್ಯಕ್ರಮಗಳಿಗೆ 2606 ಕೋಟಿ ರೂ ನೆರವು ನೀಡುವಂತೆ ರಾಜ್ಯ ಸರ್ಕಾರ ಕಳೆದ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ಸರ್ಕಾರ ಪ್ರಕೃತಿ ವಿಕೋಪ ನಿಧಿಯಿಂದ ರಾಜ್ಯಕ್ಕೆ ಬಿಡುಗಡೆ ಮಾಡಿದ ಹಣ 172 ಕೋಟಿ ರೂಗಳಷ್ಟೇ. ಇದು ರಾಜ್ಯದ ವಾಸ್ತವ ಪರಿಸ್ಥಿತಿ.

ಮುಂದಿನ ಎರಡು ತಿಂಗಳು ರಾಜ್ಯಕ್ಕೆ ಸತ್ವಪರೀಕ್ಷೆಯ ಕಾಲ. ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಇನ್ನಷ್ಟು ಕೆಟ್ಟ ಪರಿಣಾಮಗಳನ್ನು ಜನರು ಅನುಭವಿಸಬೇಕಾದೀತು.

 ಬರ ನಿರ್ವಹಣೆಗೆ ರಾಜ್ಯ ಸರ್ಕಾರ ಇದುವರೆಗೆ 310 ಕೋಟಿ ರೂಗಳನ್ನಷ್ಟೇ ಬಿಡುಗಡೆ ಮಾಡಿದೆ. 123 ತಾಲ್ಲೂಕುಗಳಿಗೆ ಇಷ್ಟು ಹಣ ಸಾಕೇ? ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ರಾಜಕೀಯ ಒತ್ತಡ ತರುವ ಪ್ರಯತ್ನವನ್ನೂ ಸರ್ಕಾರ ಮಾಡುತ್ತಿಲ್ಲ.
 
ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರೂ ಬರ ಪರಿಸ್ಥಿತಿಯನ್ನು ಪ್ರಧಾನಿಯವರ ಗಮನಕ್ಕೆ ತಂದು ಹೆಚ್ಚಿನ ನೆರವು ಕೊಡಿಸುವ ಆಸಕ್ತಿ ತೋರುತ್ತಿಲ್ಲ. ರಾಜ್ಯದ ಯೋಜನೆಗಳ ಮಂಜೂರಾತಿ, ಅನುದಾನ ಬಿಡುಗಡೆ ಇತ್ಯಾದಿ ಕೆಲಸಗಳನ್ನು ನೋಡಿಕೊಳ್ಳಲು ರಾಜ್ಯ ಸರ್ಕಾರದ ನೇಮಿಸಿರುವ ದೆಹಲಿ ಪ್ರತಿನಿಧಿ ಏನು ಮಾಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ.

ಹಿಂದೆ ಬರ ಪೀಡಿತ ಜಿಲ್ಲೆಗಳಿಗೆ ಮುಖ್ಯಮಂತ್ರಿಯವರೇ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದರು. ಮುಖ್ಯಮಂತ್ರಿ ಸದಾನಂದ ಗೌಡರಿಗೆ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲು ಸಮಯ ಇದ್ದಂತಿಲ್ಲ. ಜಿಲ್ಲೆಗಳ ಉಸ್ತವಾರಿ ಸಚಿವರೂ ಈ ಕೆಲಸ ಮಾಡುತ್ತಿಲ್ಲ. ಬರ ಪರಿಸ್ಥಿತಿಯನ್ನು ಸಮರೋಪಾದಿಯಲ್ಲಿ ನಿರ್ವಹಿಸುತ್ತೇವೆ ಎಂಬ ಹೇಳಿಕೆಯನ್ನಷ್ಟೇ ಸರ್ಕಾರ ನೀಡುತ್ತಿದೆ.

ಭೂ ಕಂದಾಯವನ್ನು ಮನ್ನಾ ಮಾಡುವುದರಿಂದ ರೈತರಿಗೆ ಹೆಚ್ಚಿನ ಪ್ರಯೋಜನವಾಗದು. ರಾಜ್ಯ ಸರ್ಕಾರ ಇನ್ನಾದರೂ ಸಂತ್ರಸ್ತರ ಸಮಸ್ಯೆಗಳತ್ತ ಗಮನ ಹರಿಸಬೇಕು. ಬಿಜೆಪಿ  ನಾಯಕರು ಗುಂಪುಗಾರಿಕೆ ಮರೆತು ಮುಖ್ಯಮಂತ್ರಿಯವರು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆದು ಪರಿಸ್ಥಿತಿಯನ್ನು ನಿಭಾಯಿಸುವ ದಿಟ್ಟತನವನ್ನು ಮುಖ್ಯಮಂತ್ರಿಯವರು ಪ್ರದರ್ಶಿಸಬೇಕು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.