ADVERTISEMENT

ಸದಾಶಯ ಸಾಕಾರಗೊಳ್ಳಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:30 IST
Last Updated 8 ಡಿಸೆಂಬರ್ 2013, 19:30 IST

ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮೀಸಲಿಟ್ಟ ಹಣ ಸದ್ಬಳಕೆ ಆಗಬೇಕು ಎಂಬುದು ಸರ್ಕಾರದ ಸದಾಶಯ. ಆದರೆ ಅದು ಕಾರ್ಯರೂಪಕ್ಕೆ ಬರುತ್ತಿಲ್ಲ. ಸರ್ಕಾರಿ ಅಧಿಕಾರಿಗಳ ಉದಾಸೀನ ಧೋರಣೆಯೇ ಅದಕ್ಕೆ ಪ್ರಮುಖ ಅಡ್ಡಿ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಶಿಷ್ಟರ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿ, ಕೋಟ್ಯಂತರ ರೂಪಾಯಿ ಹಣ ನೀಡುತ್ತಲೇ ಬಂದಿವೆ.

ಆದರೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯೇ ಆಗುತ್ತಿಲ್ಲ. ಕೆಲವು ಜಾರಿಯಾದರೂ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳು ಸಿಗುತ್ತಿಲ್ಲ. ಬಿಡುಗಡೆಯಾದ ಹಣದಲ್ಲಿ ದೊಡ್ಡ ಪಾಲು ಬೇರೆ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಸರ್ಕಾರಿ ದಾಖಲೆಗಳಲ್ಲಷ್ಟೇ ಪರಿಶಿಷ್ಟರ ಅಭಿವೃದ್ಧಿ ಆಗುತ್ತಿದೆ!

ಅಧಿಕಾರಿಗಳ ಅಲಕ್ಷ್ಯ ಧೋರಣೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಈಗ ಹೊಸ ಮಸೂದೆ­ಯನ್ನೇ ರೂಪಿಸಿದೆ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನ­ದಲ್ಲಿ ಅದಕ್ಕೆ ಒಪ್ಪಿಗೆಯನ್ನೂ ಪಡೆದುಕೊಂಡಿದೆ. ಪರಿಶಿಷ್ಟರ ಅಭಿವೃದ್ಧಿ ಕಾರ್ಯ­ಕ್ರಮಗಳಿಗೆ ಮಂಜೂರಾದ ಹಣವನ್ನು ಖರ್ಚು ಮಾಡದ ಅಧಿಕಾರಿ­ಗಳಿಗೆ ಜೈಲು ಶಿಕ್ಷೆ ನೀಡುವುದಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಿದೆ. ಹಣವನ್ನು ಬೇರೆ ಉದ್ದೇಶಗಳಿಗೆ ವೆಚ್ಚ ಮಾಡುವುದನ್ನು ನಿಷೇಧಿಸಿದೆ.

ಸರ್ಕಾರದ ಕಾಳಜಿ ಮೆಚ್ಚುವಂಥದ್ದೇ. ಮಸೂದೆ ರೂಪಿಸಿದ ಮಾತ್ರಕ್ಕೆ ಎಲ್ಲವೂ ಸರಿಹೋಗುತ್ತದೆಂದು ಸರ್ಕಾರ ಭಾವಿಸಬಾರದು. ಪರಿಶಿಷ್ಟರ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಯಾಗದಿರುವುದಕ್ಕೆ ಅಧಿಕಾರಿಗಳಷ್ಟೇ ಕಾರಣರಲ್ಲ. ಬೇರೆ ಕಾರಣಗಳೂ ಇವೆ ಎಂಬುದನ್ನು ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು. ಅವನ್ನೆಲ್ಲ ಸರಿಪಡಿಸಿದರೆ ಪರಿಶಿಷ್ಟರ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಸುಗಮ ಆದೀತು.

ಪರಿಶಿಷ್ಟರ ಅಭಿವೃದ್ಧಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಮೀಸಲಿಡುವ ಹಣ ಸಕಾಲದಲ್ಲಿ ಬಿಡುಗಡೆ ಆಗುವುದಿಲ್ಲ. ಈ ಸರ್ಕಾರ ಮಾತ್ರವಲ್ಲ, ಹಿಂದಿನ ಸರ್ಕಾರಗಳ ಅವಧಿಯಲ್ಲೂ ಇದೇ ದೊಡ್ಡ ತೊಂದರೆ. ಹಣಕಾಸು ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚು ಹಣ ಬಿಡುಗಡೆ ಮಾಡಿ ಎಲ್ಲ ಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆ ಅಧಿಕಾರಿಗಳ ಮೇಲೆ ಸರ್ಕಾರ ಒತ್ತಡ ಹಾಕುತ್ತದೆ. ಅಷ್ಟೇ ಅಲ್ಲ; ಅನೇಕ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ಇದೆ.

  ಫಲಾನುಭವಿಗಳನ್ನು ಗುರುತಿಸುವ ಕೆಲಸದಲ್ಲಿ ಸ್ಥಳೀಯ ರಾಜಕೀಯ ಮುಖಂಡರ, ಕಾರ್ಯಕರ್ತರ ಹಸ್ತಕ್ಷೇಪ ಹೇಳತೀರದು. ಇನ್ನು ಪರಿಶಿಷ್ಟ ರಲ್ಲೇ ಅನರ್ಹರು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಅಡ್ಡಿಯಾಗು­ತ್ತಾರೆ. ಈ ಸಂಗತಿಗಳನ್ನೆಲ್ಲ ಸರ್ಕಾರ ಮರೆತಂತೆ ಕಾಣುತ್ತದೆ. ಮೊದಲು ಈ ಅಡ್ಡಿ, ಆತಂಕಗಳನ್ನು ನಿವಾರಿಸಲು ಸರ್ಕಾರ ಮುಂದಾಗಬೇಕು. ರಾಜಕೀಯ ಹಸ್ತ ಕ್ಷೇಪಕ್ಕೆ ಕಡಿವಾಣ ಹಾಕುವ ದಿಟ್ಟತನವನ್ನು  ಪ್ರದರ್ಶಿಸಬೇಕು.

ಅಧಿಕಾರಿಗಳು ಮತ್ತು ನೌಕರರು ಮುಕ್ತವಾಗಿ ಕೆಲಸ ನಿರ್ವಹಿಸುವಂತಹ ವಾತಾವರಣ ಸೃಷ್ಟಿಯಾದರೆ ಕಾರ್ಯಕ್ರಮಗಳ ಅನುಷ್ಠಾನ ಸುಲಭ ಆದೀತು. ಇಷ್ಟಾದ ಮೇಲೂ ಸರಿಯಾಗಿ ಕೆಲಸ ಮಾಡದ ಅಧಿಕಾರಿಗಳನ್ನು ಯಾವ ಮುಲಾಜೂ ಇಲ್ಲದೆ ಜೈಲಿಗೆ ಅಟ್ಟಬೇಕು. ಹೊಸ ಮಸೂದೆಯನ್ನು ಬಳಸಿಕೊಂಡು ಪರಿಶಿಷ್ಟ ಜಾತಿ, ಪಂಗಡಗಳ ಉದ್ಧಾರಕ್ಕೆ ಶ್ರಮಿಸುವ ದೊಡ್ಡ ಜವಾಬ್ದಾರಿಯನ್ನು ನಿರ್ವಹಿಸುವ ಬದ್ಧತೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.