ADVERTISEMENT

ಸಾಮಾಜಿಕ ಭದ್ರತೆಗೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ದೇಶದ ಪ್ರಜೆಗಳಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸರ್ಕಾರದ ಕರ್ತವ್ಯ. ಬಡ, ನಿರ್ಗತಿಕರ ಪೋಷಣೆಯ ಜವಾಬ್ದಾರಿ ಸರ್ಕಾರದ್ದು. ಜನತಂತ್ರ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಎಲ್ಲಾ ಆಡಳಿತ ವ್ಯವಸ್ಥೆಗಳಲ್ಲೂ ಅಶಕ್ತರನ್ನು ಸರ್ಕಾರವೇ ಪೋಷಣೆ ಮಾಡಿಕೊಂಡು ಬಂದಿರುವುದನ್ನು ಇತಿಹಾಸದಲ್ಲಿ ನೋಡಬಹುದು. ಜನತಂತ್ರ ವ್ಯವಸ್ಥೆಯಲ್ಲಂತೂ ಈ ಜವಾಬ್ದಾರಿಯನ್ನು ಉಪೇಕ್ಷಿಸುವಂತಿಲ್ಲ.
 
ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಭದ್ರತಾ ಯೋಜನೆಗಳನ್ನು ಜಾರಿಗೆ ತಂದು ಬಡತನ ನಿರ್ಮೂಲನೆಗೆ  ಶ್ರಮಿಸುತ್ತಿವೆ. ಯಾರೂ ಹಸಿವಿನಿಂದ ಸಾಯಬಾರದು ಎಂಬುದು ಈ ಯೋಜನೆಗಳ ಉದ್ದೇಶ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವೃದ್ಧರು, ಅಂಗವಿಕಲರು, ವಿಧವೆಯರು ಮತ್ತು ನಿರ್ಗತಿಕರಿಗೆ ಪ್ರತಿ ತಿಂಗಳೂ ನಿರ್ದಿಷ್ಟ ಹಣವನ್ನು ವೇತನ ರೂಪದಲ್ಲಿ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ.
 
ಈ ವೇತನಕ್ಕೆ ಅರ್ಹರನ್ನು ಗುರುತಿಸುವ ಜವಾಬ್ದಾರಿಯೂ ಸರ್ಕಾರದ್ದೇ. ಈಚಿನ ನಾಲ್ಕಾರು ತಿಂಗಳಿಂದ ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ವೇತನಗಳನ್ನು ನೀಡುವುದನ್ನು ಸ್ಥಗಿತಗೊಳಿಸಿದೆ. ಇದರಿಂದ ಈ ವೇತನವನ್ನೇ ನಂಬಿಕೊಂಡಿದ್ದ ಲಕ್ಷಾಂತರ ಫಲಾನುಭವಿಗಳಿಗೆ ತೊಂದರೆಯಾಗಿದೆ.

ವೇತನ ಸ್ಥಗಿತಗೊಳಿಸಿರುವುದರಿಂದ ಆಗಿರುವ ತೊಂದರೆಯ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನವೂ ಆಗಿಲ್ಲ. ಈ ಸಾಮಾಜಿಕ ಭದ್ರತಾ ಯೋಜನೆಗಳನ್ನು ಜಾರಿಗೆ ತಂದ ರಾಜಕೀಯ ಪಕ್ಷಗಳೂ ಈ ಬೆಳವಣಿಗೆಯ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ಯೋಜನೆಗಳನ್ನು ರೂಪಿಸಿ ಅದು ಪಕ್ಷದ ಸಾಧನೆ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೆ ಬಂದವರು ಏನನ್ನೂ ಹೇಳುತ್ತಿಲ್ಲ.

ಹಣದುಬ್ಬರ, ಬೆಲೆ ಏರಿಕೆ ಮತ್ತಿತರ ಕಾರಣಗಳನ್ನು ಗಮನಕ್ಕೆ ತೆಗೆದುಕೊಂಡು ಸರ್ಕಾರಿ ನೌಕರರೂ ಸೇರಿದಂತೆ ಎಲ್ಲ ವರ್ಗದ ನೌಕರರಿಗೆ ಕಾಲಕಾಲಕ್ಕೆ ವೇತನ ಪರಿಷ್ಕರಣೆ ಆಗುವ ವ್ಯವಸ್ಥೆ ಇದೆ. ಚುನಾಯಿತ ಪ್ರತಿನಿಧಿಗಳೂ ಆಗಾಗ ತಮ್ಮ ವೇತನ ಹಾಗೂ ಭತ್ಯೆಗಳನ್ನು ಹೆಚ್ಚಿಸಿಕೊಳ್ಳುತ್ತಾರೆ.
 
ಆದರೆ ಸಣ್ಣ ಮೊತ್ತದ ಹಣವನ್ನು ವೇತನವಾಗಿ ಪಡೆಯುವ ಬಡಜನರ ಬಗ್ಗೆ ಸರ್ಕಾರಕ್ಕೆ ಕನಿಷ್ಠ ಕಾಳಜಿಯೂ ಇಲ್ಲ. ವೇತನ ಸ್ಥಗಿತಗೊಳಿಸಿರುವುದಕ್ಕೆ ಏನು ಕಾರಣ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಮತ್ತು ವೇತನ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು.

ವಿವಿಧ ವೇತನಗಳಿಗೆ ಅರ್ಹರಾದ ಸಾವಿರಾರು ಜನರು ಸಲ್ಲಿಸಿರುವ ಅರ್ಜಿಗಳು ಕಳೆದ ಒಂದೂವರೆ ವರ್ಷದಿಂದ ಇತ್ಯರ್ಥ ಆಗದೆ ಉಳಿದಿವೆ ಎಂಬ ಮಾತು ಕೇಳಿ ಬಂದಿದೆ. ಜನಪರ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿ ಮುಖಂಡರು ಈ ವಿಷಯದಲ್ಲಿ ತಾಳಿರುವ ನಿರ್ಲಕ್ಷ್ಯ ಧೋರಣೆ ಖಂಡನೀಯ.
 
ವೇತನ ಯೋಜನೆಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣಗಳಿದ್ದರೆ ಅಂತಹ ದೂರುಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕೇ ವಿನಾ ಎಲ್ಲಾ ವೇತನಗಳನ್ನೂ ತಡೆಹಿಡಿಯುವುದು ವಿವೇಕದ ಕ್ರಮವಲ್ಲ.

ಸಣ್ಣ ಪುಟ್ಟ ಸಮಸ್ಯೆಗಳಿಗೂ ಬೀದಿಗೆ ಇಳಿದು ಹೋರಾಟ ಮಾಡುವ ವಿರೋಧ ಪಕ್ಷಗಳು ಲಕ್ಷಾಂತರ ಬಡವರಿಗೆ ಆಗಿರುವ ಅನ್ಯಾಯದ ವಿರುದ್ಧ ಚಕಾರ ಎತ್ತದಿರುವುದು ಜವಾಬ್ದಾರಿಯುತ ವರ್ತನೆಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.