ADVERTISEMENT

ಸೇನಾ ನೆಲೆ ಬಳಕೆ ಒಪ್ಪಂದ ಬಾಂಧವ್ಯದಲ್ಲಿ ಹೊಸ ಶಕೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2016, 19:30 IST
Last Updated 1 ಸೆಪ್ಟೆಂಬರ್ 2016, 19:30 IST
ಸೇನಾ ನೆಲೆ ಬಳಕೆ ಒಪ್ಪಂದ ಬಾಂಧವ್ಯದಲ್ಲಿ ಹೊಸ ಶಕೆ
ಸೇನಾ ನೆಲೆ ಬಳಕೆ ಒಪ್ಪಂದ ಬಾಂಧವ್ಯದಲ್ಲಿ ಹೊಸ ಶಕೆ   

ಭಾರತ– ಅಮೆರಿಕ ನಡುವಿನ ಸಂಬಂಧ ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿದೆ. ಇದಕ್ಕೆ ಕಾರಣವಾದದ್ದು, ರಕ್ಷಣಾ ಸಹಕಾರ ಒಪ್ಪಂದ.

ಈಗ ಅಮೆರಿಕ ಪ್ರವಾಸದಲ್ಲಿ ಇರುವ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮತ್ತು ಆ ದೇಶದ ರಕ್ಷಣಾ ಕಾರ್ಯದರ್ಶಿ ಆ್ಯಸ್ಟನ್‌ ಕಾರ್ಟರ್‌ ಸಹಿ ಮಾಡಿದ ‘ಸೇನಾ ಸೌಕರ್ಯ ಪರಸ್ಪರ ಬಳಕೆ’ ಒಪ್ಪಂದದ ಮುಖ್ಯ ತಿರುಳು ಎಂದರೆ, ಎರಡೂ ದೇಶಗಳ ಸೇನಾ ಸೌಲಭ್ಯಗಳ ಪರಸ್ಪರ ಬಳಕೆಗೆ ದೊರೆಯಲಿರುವ ಅವಕಾಶ.

ಇದರಿಂದಾಗಿ ಜಂಟಿ ಸಮರಾಭ್ಯಾಸಗಳನ್ನು ಮತ್ತಷ್ಟು ದಕ್ಷತೆಯಿಂದ ಮತ್ತು ಪರಿಣಾಮಕಾರಿಯಾಗಿ ನಡೆಸಬಹುದು. ರಕ್ಷಣಾ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಮತ್ತು ವಿನಿಮಯ ಮತ್ತಷ್ಟು ಬಲಗೊಳ್ಳಲಿದೆ. ಸೇನಾ ನೆಲೆಗಳಲ್ಲಿ ದುರಸ್ತಿ ಮತ್ತು ಇಂಧನ ಮರುಭರ್ತಿ ಸುಲಭವಾಗಲಿದೆ.

ಇದೇನೂ ದಿಢೀರನೆ ಸಹಿಯಾದ ಒಪ್ಪಂದ ಅಲ್ಲ. 2003ರಲ್ಲಿ ಅಮೆರಿಕ ಈ ಬಗ್ಗೆ ಮೊದಲ ಸಲ ಭಾರತದ ಮುಂದೆ ಪ್ರಸ್ತಾವ ಇಟ್ಟಿತ್ತು. ಅದರ ನಂತರ ಎರಡೂ ದೇಶಗಳ ಮಧ್ಯೆ ಚರ್ಚೆ ನಡೆಯುತ್ತಲೇ ಇತ್ತು. ಅನುಮಾನಗಳನ್ನೆಲ್ಲ ಪರಿಹರಿಸಿಕೊಂಡ ನಂತರ ಈಗ ಒಪ್ಪಂದಕ್ಕೆ ಸಹಿ ಬಿದ್ದಿದೆ.

ಯುದ್ಧ ಹಡಗುಗಳು ಪರಸ್ಪರರ ಬಂದರಿಗೆ ಬಂದಾಗ ಇಂಧನ ಪೂರೈಕೆ, ಸಮರಾಭ್ಯಾಸ, ಪ್ರಾಕೃತಿಕ ವಿಕೋಪದಂತಹ ಸನ್ನಿವೇಶಗಳಲ್ಲಿ ಪರಿಹಾರ ಅಥವಾ ಮಾನವೀಯ ಸಹಾಯಕ್ಕೆ ಪೂರಕವಾದ ಕಾರ್ಯಾಚರಣೆಗಳ ವೇಳೆ ಸೇನಾ ನೆಲೆಗಳನ್ನು ಬಳಸಿಕೊಳ್ಳಬಹುದು.

ಅಗತ್ಯಕ್ಕೆ ಅನುಸಾರವಾಗಿ ಆಹಾರ, ನೀರು ಪೂರೈಕೆ, ವೈದ್ಯಕೀಯ ಸಹಾಯ, ಇಂಧನ, ದಾಸ್ತಾನು, ಬಿಡಿಭಾಗಗಳು, ದುರಸ್ತಿ ಮತ್ತು ನಿರ್ವಹಣೆ ಸೌಲಭ್ಯಗಳನ್ನು  ಕಲ್ಪಿಸುವುದು ಸುಲಭವಾಗಲಿದೆ. ಈ ಸೇವೆಗಳಿಗಾಗಿ ನಗದು ರೂಪದಲ್ಲಿ ಅಥವಾ ಇಂಥದೇ ಸೌಲಭ್ಯವನ್ನು ಬಳಸಿಕೊಳ್ಳುವ ಮೂಲಕ ಪಾವತಿಸುವ ಅವಕಾಶವೂ ಒಪ್ಪಂದದಲ್ಲಿ ಇದೆ.

ಭಾರತದ ಸೇನಾ ನೆಲೆಗಳನ್ನು ಅಮೆರಿಕ ಬಳಸಿಕೊಳ್ಳುವ ರೀತಿಯಲ್ಲಿ ಭಾರತ ಕೂಡ ಅಮೆರಿಕದ ನೆಲೆಗಳನ್ನು ಈ ಉದ್ದೇಶಕ್ಕೆ ಅನಿರ್ಬಂಧಿತವಾಗಿ ಬಳಸಿಕೊಳ್ಳಬಹುದು. ಆದ್ದರಿಂದ ಸಮಾನ ನೆಲೆಯಲ್ಲಿ ಈ ಒಪ್ಪಂದ ಏರ್ಪಟ್ಟಿದೆ; ಇಲ್ಲಿ ಯಾರಿಗೂ ಇನ್ನೊಬ್ಬರ ಮೇಲೆ ಸವಾರಿ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.

‘ಭಾರತದಲ್ಲಿ ಸೇನಾ ನೆಲೆ ಸ್ಥಾಪಿಸಲು ಅಮೆರಿಕಕ್ಕೆ ಅನುಮತಿ ಕೊಡಲೇಬೇಕು ಅಥವಾ ಆ ದೇಶದ ಜತೆ  ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಲೇಬೇಕು ಎನ್ನುವ  ಕಡ್ಡಾಯ   ಇಲ್ಲವೇ ಇಲ್ಲ’ ಎಂದು ರಕ್ಷಣಾ ಇಲಾಖೆ ಸ್ಪಷ್ಟನೆ ನೀಡುವ ಮೂಲಕ ಸಂದೇಹ ನಿವಾರಿಸುವ ಪ್ರಯತ್ನ ಮಾಡಿದೆ.

ಈ ಒಪ್ಪಂದಕ್ಕೆ ಸಹಿ ಮಾಡಿದರೆ ‘ಅಮೆರಿಕ ಸೇನಾಕೂಟದ ಸದಸ್ಯ ದೇಶ ಎಂಬ ಹಣೆಪಟ್ಟಿ ಭಾರತಕ್ಕೆ ಅಂಟಿಕೊಳ್ಳಬಹುದು’ ಎಂಬ ಭೀತಿಯಿಂದ ಹಿಂದಿನ ಯುಪಿಎ ಸರ್ಕಾರ ಸುಮ್ಮನಿತ್ತು.

ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲೂ ಒಪ್ಪಂದಕ್ಕೆ ಸಹಿ ಹಾಕದಂತೆ ರಾಜಕೀಯ ವಲಯಗಳಿಂದ ಮತ್ತು ಸೇನೆಯಿಂದ ಒತ್ತಡ ಇತ್ತು. ಹೀಗಾಗಿ ಭಾರತ ಸಾಕಷ್ಟು ಕೊಸರಾಟ ನಡೆಸಿತ್ತು.  ಇದಕ್ಕೆ ಅಮೆರಿಕ ಮಣಿಯಲೇ ಬೇಕಾಯಿತು.

ಇತರ ದೇಶಗಳ ಜತೆ ಮಾಡಿಕೊಂಡ ಇಂಥದೇ ಒಪ್ಪಂದವನ್ನು ಭಾರತಕ್ಕೆ ಸರಿ ಹೊಂದುವಂತೆ ಪರಿಷ್ಕರಿಸುವುದು ಅದಕ್ಕೆ ಅನಿವಾರ್ಯವಾಯಿತು. ಈ ಒಪ್ಪಂದದಿಂದಾಗಿ, ‘ರಕ್ಷಣಾ ವಿಷಯದಲ್ಲಿ ಯಾವ ಗುಂಪಿಗೂ ಸೇರದೆ ತಟಸ್ಥವಾಗಿರುವ ಧೋರಣೆಯಿಂದ ದೂರ ಸರಿದಂತಾಗಿದೆ’ ಎಂಬುದು ಕಾಂಗ್ರೆಸ್‌ನ ಆಕ್ಷೇಪ.

ರಾಷ್ಟ್ರೀಯ ಸಹಮತ ಇಲ್ಲದೆಯೇ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದು ಅದು ಹೇಳುತ್ತಿದೆ. ‘ಸರ್ಕಾರ ದೇಶದ ಸಾರ್ವಭೌಮತ್ವವನ್ನು ಕಡೆಗಣಿಸಿದೆ, ಮಹತ್ವದ ವಿಚಾರಕ್ಕೆ ಸಂಬಂಧಪಟ್ಟಂತೆ ಸ್ವಾಯತ್ತತೆಯನ್ನು ಒತ್ತೆ  ಇಟ್ಟಿದೆ’ ಎಂದು ಸಿಪಿಎಂ ಟೀಕಿಸಿದೆ.

ಇವಕ್ಕೆಲ್ಲ ಸಮಜಾಯಿಷಿ ಕೊಡುವುದು, ಮನವರಿಕೆ ಮಾಡುವುದು ಸರ್ಕಾರದ ಜವಾಬ್ದಾರಿ. ಆದರೆ ಈ ಮಾದರಿಯ ಒಪ್ಪಂದ ಇದೇ ಮೊದಲಲ್ಲ.  ಬಾಂಗ್ಲಾದೇಶ ಯುದ್ಧಕ್ಕೆ ಸ್ವಲ್ಪ ಮೊದಲು ಅಂದರೆ 1971ರ ಆಗಸ್ಟ್‌ನಲ್ಲಿ ಆಗಿನ ಸೋವಿಯತ್‌ ಒಕ್ಕೂಟದ ಜತೆ ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಕೂಡ ದೂರಗಾಮಿ ಪರಿಣಾಮಗಳುಳ್ಳ ‘ಶಾಂತಿ, ಮೈತ್ರಿ ಮತ್ತು ಸಹಕಾರ’ ಒಪ್ಪಂದ ಮಾಡಿಕೊಂಡಿದ್ದರು.

ಆದರೆ ಅದರಲ್ಲಿ  ಸೇನಾ ನೆಲೆಗಳ ಪರಸ್ಪರ ಬಳಕೆಗೆ ಅವಕಾಶ ಇರಲಿಲ್ಲ.  1991ರ ಜನವರಿಯಲ್ಲಿ ಚಂದ್ರಶೇಖರ್‌ ನೇತೃತ್ವದ ಸರ್ಕಾರ ಇರಾಕ್‌ ಯುದ್ಧದಲ್ಲಿ ಪಾಲ್ಗೊಂಡಿದ್ದ ಅಮೆರಿಕದ ಯುದ್ಧ ವಿಮಾನಗಳಿಗೆ ಭಾರತದಲ್ಲಿ ಇಂಧನ ತುಂಬಿಸಿಕೊಳ್ಳುವ ಅವಕಾಶ ನೀಡಿತ್ತು. ಅದರ ನಂತರ ಜಾಗತಿಕ ರಾಜಕಾರಣ ಊಹೆಗೆ ನಿಲುಕದಂತೆ ಬದಲಾಗಿದೆ.

ಅದಕ್ಕೆ ನಾವೂ ಹೊಂದಿಕೊಳ್ಳಬೇಕು. ಚೀನದಿಂದ ನಮಗೆ ಕಿರಿಕಿರಿ ಇದ್ದೇ ಇದೆ. ಅಮೆರಿಕಕ್ಕೂ ಈ ವಲಯದಲ್ಲಿ ಚೀನದ ಪ್ರಾಬಲ್ಯ ತಡೆಯುವ ಪ್ರಬಲ ಮತ್ತು ವಿಶ್ವಾಸಾರ್ಹ ಮಿತ್ರನ ಅಗತ್ಯವಿದೆ. ಈ ಎಲ್ಲ ದೃಷ್ಟಿಕೋನದಿಂದ ನೋಡಿದಾಗ ಈ ಒಪ್ಪಂದ ಭಾರತ– ಅಮೆರಿಕ ಎರಡಕ್ಕೂ ಪ್ರಯೋಜನಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.