ADVERTISEMENT

ಸ್ಮಾರಕಗಳ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2011, 19:30 IST
Last Updated 1 ಜೂನ್ 2011, 19:30 IST

ವಿಜಯನಗರ ಕಾಲದ ಶಿಲ್ಪಕಲೆ ಮತ್ತು ವಾಸ್ತು ವೈಭವದ ಪ್ರತೀಕವಾಗಿರುವ ಹಂಪಿಯ ಕೆಲವು ಸ್ಮಾರಕಗಳು ಮಳೆ, ಗಾಳಿ ಇತ್ಯಾದಿ ಪ್ರಾಕೃತಿಕ ದಾಳಿಗೆ ಸಿಕ್ಕಿ ಹಾಳಾಗುತ್ತಿವೆ.

ಮಂಗಳವಾರ ಸುರಿದ ದೊಡ್ಡ ಮಳೆಗೆ ವಿಜಯ ವಿಠ್ಠಲ ದೇವಸ್ಥಾನ ಸಮೀಪದಲ್ಲಿರುವ ಅತ್ಯಾಕರ್ಷಕ `ಕುದುರೆ ಬೊಂಬೆ~ ಮಂಟಪದ ಒಂದು ಮಗ್ಗುಲಿನ ಗೋಡೆಯ ಚಪ್ಪಡಿಗಳು ಕುಸಿದು ಬಿದ್ದಿವೆ. ಐದಾರು ಶತಮಾನಗಳ ಹಿಂದೆ ನಿರ್ಮಿಸಿದ ದೇವಸ್ಥಾನ, ಮಂಟಪ, ರಾಜಗೋಪುರ ಇತ್ಯಾದಿ ಸ್ಮಾರಕಗಳು ಮಳೆಯ ದಾಳಿಗೆ ಕುಸಿದು ಬೀಳುವುದು ಸಹಜವಲ್ಲ.

ನೂರಾರು ವರ್ಷಗಳಿಂದ ಸತತವಾಗಿ ನಿಸರ್ಗದ ದಾಳಿಯನ್ನು ಎದುರಿಸಿ ನಿಂತಿರುವ ಹಂಪಿಯ ಸ್ಮಾರಕಗಳ ಪೈಕಿ ಅನೇಕವು ಸಹಜವಾಗಿಯೇ ದುರ್ಬಲವಾಗಿವೆ. ತೀರಾ ದುರ್ಬಲವಾಗಿರುವ ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಬಲಪಡಿಸುವ ಅಗತ್ಯವಿದೆ. ಈ ಕಾರ್ಯ ಆದ್ಯತೆಯ ಮೇಲೆ ನಡೆಯಬೇಕು. ಇಲ್ಲವಾದರೆ ಈ ಸ್ಮಾರಕಗಳನ್ನು ಉಳಿಸಿಕೊಳ್ಳುವುದು ಕಷ್ಟವಾದೀತು.

ಇಡೀ ಹಂಪಿ ಪರಿಸರದಲ್ಲಿರುವ ಸ್ಮಾರಕಗಳನ್ನು ಯುನೆಸ್ಕೊ ವಿಶ್ವ ಪರಂಪರೆಯ ತಾಣ ಎಂದು ಪರಿಗಣಿಸಿದೆ. ಸ್ಮಾರಕಗಳ ರಕ್ಷಣೆ ಸರಿಯಾಗಿ ನಡೆಯುತ್ತಿದೆಯೇ ಎಂಬುದನ್ನೂ ಗಮನಿಸುತ್ತಿದೆ. ಹಂಪಿಯ ಸ್ಮಾರಕಗಳು ಕರ್ನಾಟಕ ಹಾಗೂ ಭಾರತೀಯ ಕಲೆ ಮತ್ತು ಸಂಸ್ಕೃತಿಯ ಸಂಕೇತ. ಅವನ್ನು ಸಂರಕ್ಷಣೆ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹೊಣೆ. ಅಷ್ಟೇ ಅಲ್ಲ, ಅದಕ್ಕೆ ಜನರ ಸಹಕಾರವೂ ಸಿಗಬೇಕು.

ನೈಸರ್ಗಿಕ ವಿಕೋಪಗಳಿಂದ ಸ್ಮಾರಕಗಳು ಹಾಳಾದರೆ ಅದಕ್ಕೆ ಯಾರನ್ನೂ ಹೊಣೆ ಮಾಡಲಾಗದು. ಆದರೆ ವಿಗ್ರಹಭಂಜಕ ಪ್ರವೃತ್ತಿಯ ಪ್ರವಾಸಿಗರು ಹಾಗೂ ವಿಕೃತ ಮನಸ್ಸಿನ ವ್ಯಕ್ತಿಗಳಿಂದ ಸ್ಮಾರಕಗಳು ಹಾಳಾಗುತ್ತಿವೆ.

ಹಂಪಿಯ ಸ್ಮಾರಕಗಳನ್ನು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಿದೆ. ಕೆಲವು ಸ್ಮಾರಕಗಳ ರಕ್ಷಣೆಗೆ ವಿಶೇಷ ಗಮನ ನೀಡಿದೆ. ಆದರೆ ಅನೇಕ ಸ್ಮಾರಕಗಳಿಗೆ ಇನ್ನೂ ಸೂಕ್ತ ರಕ್ಷಣೆ ಇಲ್ಲ. ಸ್ಮಾರಕಗಳನ್ನು ವಿಕೃತಗೊಳಿಸುವವರಿಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಎಚ್ಚರಿಕೆಯ ಫಲಕಗಳನ್ನು ಹಾಕಿದರೆ ಸಾಲದು.

ನಿಧಿಯ ಆಸೆಗೆ ವಿಗ್ರಹಗಳನ್ನು ಕೀಳುವವರು ಹಾಗೂ ಸ್ಮಾರಕಗಳ ಬಳಿ ಗಾಂಜಾ ಮಾರುವವರು, ಜೂಜು ಹಾಗೂ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದವರಿಂದ ಸ್ಮಾರಕಗಳಿಗೆ ಹಾನಿಯಾಗುತ್ತಿದೆ. ಮೊದಲು ಅವರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಅಗತ್ಯವಿದೆ.

ಹಂಪಿಯ ರಕ್ಷಣೆಗಾಗಿ ರಾಜ್ಯ ಸರ್ಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚಿಸಿದೆ. ಆದರೂ ಸ್ಮಾರಕಗಳಿಗೆ ಹಾನಿಯಾಗುವುದು ನಿಂತಿಲ್ಲ. ಸ್ಮಾರಕಗಳ ರಕ್ಷಣೆಗೆ ವಿಶೇಷ ಕಾವಲು ಪಡೆ ರಚಿಸುವ ಅಗತ್ಯವಿದೆ. ಈ ಪಡೆಗೆ ಸ್ಥಳೀಯರನ್ನೂ ಸೇರಿಸಿಕೊಳ್ಳಬೇಕು.
ಅಷ್ಟೇ ಅಲ್ಲ, ಸ್ಮಾರಕಗಳಿಗೆ ಆಗಿರುವ ಹಾನಿ ಕುರಿತಂತೆ ಸಮಗ್ರ ತನಿಖೆ ನಡೆಯಬೇಕು. ಸ್ಮಾರಕಗಳ ಸಂರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡುತ್ತಿರುವ ಹಣಕಾಸಿನ ನೆರವು ಸಾಲದು. ಇನ್ನಷ್ಟು ನೆರವು ನೀಡಿ ಬದ್ಧತೆ ಇರುವ ಸಿಬ್ಬಂದಿಯನ್ನು ನೇಮಕ ಮಾಡಿದರೆ ಹಂಪಿಯ ಸ್ಮಾರಕಗಳನ್ನು ರಕ್ಷಿಸಲು ಸಾಧ್ಯವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.