ADVERTISEMENT

ಸ್ವಯಂಕೃತ ಅಪರಾಧ

​ಪ್ರಜಾವಾಣಿ ವಾರ್ತೆ
Published 29 ಮೇ 2012, 19:30 IST
Last Updated 29 ಮೇ 2012, 19:30 IST

ಕಾವೇರಿ ನೀರು ಹಂಚಿಕೆಯಲ್ಲಿ ತನಗೆ ಅನ್ಯಾಯವಾಗಿದೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ತಮಿಳುನಾಡು ಸತತವಾಗಿ ಮಾಡುತ್ತಾ ಬಂದಿದೆ. ಬೇಸಿಗೆ ಕಾಲದ ಕೊನೆಯ ದಿನಗಳಲ್ಲಿ ಈ ಕೂಗು ಜೋರಾಗಿ ಕೇಳಿಬರುವುದು ರೂಢಿ.
 
ಐದು ವರ್ಷಗಳ ಹಿಂದೆ ಕಾವೇರಿ ನ್ಯಾಯಮಂಡಳಿ ಅಂತಿಮ ಐತೀರ್ಪು ನೀಡಿದಾಗ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ.ಕರುಣಾನಿಧಿ ಪ್ರಾರಂಭದಲ್ಲಿ ಸ್ವಾಗತಿಸಿದ್ದರು. ಆಗಲೂ ವಿರೋಧಿಸಿದ್ದವರು ಮಾಜಿ ಮುಖ್ಯಮಂತ್ರಿಯಾಗಿದ್ದ ಜೆ.ಜಯಲಲಿತಾ. ಇವರು ಮತ್ತೆ ಮುಖ್ಯಮಂತ್ರಿಯಾದ ದಿನದಿಂದ ವಿವಾದವನ್ನು ಕೆದಕುತ್ತಲೇ ಇದ್ದಾರೆ.

ಮೊದಲು, ಕಾವೇರಿ ಐತೀರ್ಪನ್ನು ಪುನರ್‌ಪರಿಶೀಲಿಸಲು ನ್ಯಾಯಮಂಡಳಿಗೆ ನಿರ್ದೇಶನ ನೀಡುವಂತೆ ಸುಪ್ರೀಂಕೋರ್ಟ್ ಮೊರೆಹೋದರು. ಅಲ್ಲಿಂದ ನಿರೀಕ್ಷಿತ ಪ್ರತಿಕ್ರಿಯೆ ಸಿಗದೆ ಇದ್ದಾಗ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಲು ಒತ್ತಡ ಹೇರಿದರು.
 
ಸೋಮವಾರ ನಡೆದ ಈ ಸಭೆಯಲ್ಲಿ ತಮ್ಮ ಬೇಡಿಕೆಗೆ ಮನ್ನಣೆ ಸಿಗದೆ ಇರುವುದನ್ನು ಕಂಡು ಈಗ ಪ್ರಧಾನಿ ಅಧ್ಯಕ್ಷತೆಯ  ಕಾವೇರಿ ನದಿ ಪ್ರಾಧಿಕಾರದ ಸಭೆ ಕರೆಯುವಂತೆ ಒತ್ತಾಯಿಸಿದ್ದಾರೆ.

ಇವೆಲ್ಲವೂ ನದಿ ನೀರು ಹಂಚಿಕೆಯ ವಿವಾದವನ್ನು ಜೀವಂತವಾಗಿಡುವ ತಮಿಳುನಾಡಿನ ಹತಾಶ ಪ್ರಯತ್ನ ಅಷ್ಟೇ. ನೀರು ನಿರ್ವಹಣಾ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈಗಾಗಲೇ ತಮಿಳುನಾಡಿಗೆ ಅಗತ್ಯಕ್ಕಿಂತಲೂ ಹೆಚ್ಚಿನ ನೀರು ಹರಿದುಹೋಗಿದೆ.

ಅಂತಿಮ ಐತೀರ್ಪಿನ ಪ್ರಕಾರ ಹರಿಸಬೇಕಾಗಿರುವ ನೀರು 192 ಟಿಎಂಸಿ, ವಾಸ್ತವವಾಗಿ ಹರಿದುಹೋಗಿರುವುದು 238 ಟಿಎಂಸಿ. ಇನ್ನೇನು ಬೇಕು?ಬಿಳಿಗುಂಡ್ಲು ಜಲಮಾಪನ ಕೇಂದ್ರದ ಮೇಲ್ವಿಚಾರಣೆಯನ್ನು ಕೇಂದ್ರ ಜಲ ಆಯೋಗವೇ ನಡೆಸುತ್ತಿರುವುದರಿಂದ ಅದು ನೀಡುವ ಮಾಹಿತಿಯನ್ನು ನಿರಾಕರಿಸುವ ಸ್ಥಿತಿಯಲ್ಲಿ ತಮಿಳುನಾಡು ಇಲ್ಲ.

ಇದಕ್ಕಾಗಿ `ಬಿಳಿಗುಂಡ್ಲು ಬೇಡ, ಮೆಟ್ಟೂರಿನಲ್ಲಿ ದಾಖಲಾದ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಳ್ಳಬೇಕು~ ಎಂಬ ಹಳೆಯ ಬೇಡಿಕೆಯನ್ನು ಪುನರುಚ್ಚರಿಸಿದೆ.  ಬಿಳಿಗುಂಡ್ಲುವಿನಿಂದ ಮೆಟ್ಟೂರು ವರೆಗಿನ ಮಧ್ಯಂತರ ಜಲಾನಯನ ಪ್ರದೇಶದ ನೀರಿನ ಉತ್ಪನ್ನ ಸುಮಾರು 25 ಟಿಎಂಸಿ.

  ಈ ನೀರನ್ನು ಕರ್ನಾಟಕ ಹರಿಸಬೇಕಾದ ನೀರಿನ ಲೆಕ್ಕಕ್ಕೆ ಸೇರಿಸಬಾರದೆಂಬುದು ತಮಿಳುನಾಡಿನ ಮೊಂಡು ವಾದ. ಈ ವಿವಾದವನ್ನು ಕಾವೇರಿ ನ್ಯಾಯಮಂಡಳಿ ಬಗೆಹರಿಸಿಯಾಗಿದೆ. ಬಿಳಿಗುಂಡ್ಲು ಜಲಮಾಪನ ಕೇಂದ್ರದ ಮಾಹಿತಿ ಆಧಾರದಲ್ಲಿಯೇ ತಮಿಳುನಾಡಿಗೆ ಹರಿಯುವ ನೀರಿನ ಲೆಕ್ಕ ಮಾಡಬೇಕೆಂದು ಐತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಿದೆ.

ಆದುದರಿಂದ ತಮಿಳುನಾಡಿನ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯದಂತೆ ಕರ್ನಾಟಕ ನೋಡಿಕೊಳ್ಳಬೇಕು. ಮತ್ತೊಂದು ಜಲಮಾಪನ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಬಾರದು. ತಮಿಳುನಾಡಿನಲ್ಲಿ ಈಗ ನೀರಿನ ಕೊರತೆ ಕಾಣಿಸಿಕೊಂಡಿದ್ದರೆ ಅದು ಆ ರಾಜ್ಯದ ಸ್ವಯಂಕೃತ ಅಪರಾಧವೇ ಹೊರತು ಅದಕ್ಕೆ ಕರ್ನಾಟಕ ಕಾರಣ ಅಲ್ಲ.

ತಮಿಳುನಾಡಿನಲ್ಲಿ ಏಪ್ರಿಲ್-ಜುಲೈ ಅವಧಿಯಲ್ಲಿ ಬೆಳೆಯಲಾಗುವ ಕುರುವೈ ಬೆಳೆ ಪ್ರದೇಶವನ್ನು ಕಡಿಮೆ ಮಾಡಿ ಆಗಸ್ಟ್-ನವಂಬರ್ ಅವಧಿಯ ಸಾಂಬಾ ಬೆಳೆ ಪ್ರದೇಶವನ್ನು ಹೆಚ್ಚಿಸಬೇಕೆಂದು ಕರ್ನಾಟಕ ಸಲಹೆ ನೀಡುತ್ತಲೇ ಬಂದಿದೆ. ಈಗಿನ ಸಮಸ್ಯೆಗೆ ಇದೊಂದೇ ಪರಿಹಾರ. ಇದನ್ನು ಒಪ್ಪಿಕೊಳ್ಳುವಂತೆ ತಮಿಳುನಾಡಿನ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.