ADVERTISEMENT

ಸ್ವಾಗತಾರ್ಹ ಸೂತ್ರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2012, 19:30 IST
Last Updated 13 ಆಗಸ್ಟ್ 2012, 19:30 IST

ಐದುನೂರು ಕೆವಿಎ ಮತ್ತು ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಹೈಟೆನ್ಷನ್ (ಎಚ್‌ಟಿ) ಬಳಕೆದಾರರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿಗದಿಪಡಿಸಿರುವ `ವೇಳೆ ಆಧಾರಿತ ದರ ಪದ್ಧತಿ~ ಹೆಚ್ಚು ವೈಜ್ಞಾನಿಕ ಮತ್ತು ಸ್ವಾಗತಾರ್ಹ ಎಂದೇ ಹೇಳಬಹುದು.

ಇದೇ ಸೆಪ್ಟೆಂಬರ್ 1ರಿಂದ ಜಾರಿಗೆ ಬರುವ ಹೊಸ ದರ ಸೂತ್ರದ ಪ್ರಕಾರ ಎಚ್‌ಟಿ 2 ಎ ಮತ್ತು ಬಿ ವರ್ಗದ ಗ್ರಾಹಕರು ಸಂಜೆ 6 ರಿಂದ ರಾತ್ರಿ 10ರ ವರೆಗೆ ಬಳಸುವ ಪ್ರತೀ ಯೂನಿಟ್ ವಿದ್ಯುತ್‌ಗೆ ನಿಗದಿತ ದರಕ್ಕಿಂತ ಒಂದು ರೂಪಾಯಿ ಹೆಚ್ಚು ಪಾವತಿಸಬೇಕಾಗುತ್ತದೆ. ಆದರೆ ರಾತ್ರಿ 10 ರಿಂದ ಬೆಳಿಗ್ಗೆ 6ರ ನಡುವೆ ಬಳಸುವ ಪ್ರತೀ ಯೂನಿಟ್‌ಗೆ 1.25 ರೂಪಾಯಿ ರಿಯಾಯಿತಿ ದೊರೆಯುತ್ತದೆ.
 
ರಾತ್ರಿ 6 ರಿಂದ 10ರ ಅವಧಿಯಲ್ಲಿ ವಿದ್ಯುತ್ ಬೇಡಿಕೆ ತುಂಬಾ ಅಧಿಕ. ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಮಾಲ್‌ಗಳು ಮತ್ತಿತರ ವ್ಯಾಪಾರಿ ಸಮೂಹಗಳು ಹೆಚ್ಚು ಹೆಚ್ಚು ದೀಪ ಉರಿಸುವುದು ಇದೇ ಸಮಯದಲ್ಲಿ. ಅಲ್ಲದೆ ಗೃಹ ಬಳಕೆ, ಬೀದಿ ದೀಪಗಳಿಗೂ ಈ ವೇಳೆಯಲ್ಲೇ ಹೆಚ್ಚು ವಿದ್ಯುತ್ ಬೇಕಾಗುತ್ತದೆ.
 
ಹೀಗಾಗಿ ಬೇಡಿಕೆ- ಪೂರೈಕೆ ನಡುವೆ ಸಮತೋಲನ ಸಾಧಿಸಲು ಲೋಡ್ ಶೆಡ್ಡಿಂಗ್, ದಿಢೀರ್ ವಿದ್ಯುತ್ ಕಡಿತದಂಥ ಕ್ರಮ ಅನಿವಾರ್ಯವಾಗಿದ್ದು, ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ.
 
ನಿರಂತರ ವಿದ್ಯುತ್ ಅಗತ್ಯವುಳ್ಳ ಉದ್ಯಮಗಳಿಗೂ ಪದೇಪದೇ ಕಡಿತದಿಂದ ಗಣನೀಯ ನಷ್ಟವಾಗುತ್ತಿದೆ. ಆದ್ದರಿಂದಲೇ ಈ ರೀತಿಯ `ದಂಡ ಮತ್ತು ಪ್ರೋತ್ಸಾಹ~ ಕ್ರಮಗಳು ವಿದ್ಯುತ್ ಬಳಕೆ ವಿಷಯದಲ್ಲಿ ಅನಿವಾರ್ಯ.

ಕರ್ನಾಟಕ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ಈಗಿನ ಸನ್ನಿವೇಶದಲ್ಲಿ ಇಂಥ ಸೂತ್ರ ಅಗತ್ಯವೂ ಇತ್ತು. ಇದರಿಂದ ಸುಮಾರು 400 ಮೆವಾ ವಿದ್ಯುತ್ ಉಳಿತಾಯವಾಗಲಿದೆ ಎಂದು ಅಂದಾಜು.

ಈಗ ದಿನವೊಂದಕ್ಕೆ ವಿದ್ಯುತ್ ಬೇಡಿಕೆ ಸುಮಾರು 8 ಸಾವಿರ ಮೆವಾ. ಆದರೆ ಹೊರರಾಜ್ಯಗಳಿಂದ, ಖಾಸಗಿಯವರಿಂದ ಖರೀದಿಸುತ್ತಿರುವ ವಿದ್ಯುತ್ ಸೇರಿದಂತೆ ಲಭ್ಯವಾಗುತ್ತಿರುವ ಪ್ರಮಾಣ ಸರಾಸರಿ 7 ಸಾವಿರ ಮೆವಾ ಮಾತ್ರ. ಅಂದರೆ ನಿತ್ಯ 1 ಸಾವಿರ ಮೆವಾ ಕೊರತೆ.
 
ಇದರ ಜತೆಗೆ ಈ ವರ್ಷ ವಿದ್ಯುತ್ ಬೇಡಿಕೆ ಶೇ 24ರಷ್ಟು ಹೆಚ್ಚಿದೆ. ಆದ್ದರಿಂದ ಕಟ್ಟುನಿಟ್ಟಿನ ಉಳಿತಾಯ ಕ್ರಮಗಳಿಂದ ಮಾತ್ರ ಈ ಸಂಕಷ್ಟವನ್ನು ನಿಭಾಯಿಸಲು ಸಾಧ್ಯ. ವಿದ್ಯುತ್, ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿಟ್ಟು ಬೇಕಾದಾಗ ಬಳಸುವಂಥ ಸರಕು ಅಲ್ಲ. ವಿದ್ಯುತ್ ಘಟಕಗಳ ಕಾರ್ಯಾರಂಭಕ್ಕೆ ಸಾಕಷ್ಟು ಸಮಯ, ಹಣ ಬೇಕಾಗುತ್ತದೆ.

ಅಲ್ಲದೆ ಜಲವಿದ್ಯುತ್ ಸ್ಥಾವರಗಳ್ಲ್ಲಲಾದರೆ ಬೇಡಿಕೆಗೆ ಅನುಗುಣವಾಗಿ ಉತ್ಪಾದನೆಯನ್ನು ಕೂಡಲೇ ಹೆಚ್ಚು- ಕಡಿಮೆ ಮಾಡಬಹುದು. ಆದರೆ ಈಗ ನಾವು ಬಹುಪಾಲು ಅವಲಂಬಿಸಿರುವುದು ಶಾಖೋತ್ಪನ್ನ, ಪರಮಾಣು ವಿದ್ಯುತ್ ಉತ್ಪಾದನಾ ಘಟಕಗಳನ್ನು. ಅದರಲ್ಲಿ ದಿಢೀರನೆ ಉತ್ಪಾದನೆ ಏರಿಕೆ, ಇಳಿಕೆ ಕಷ್ಟ.

ಪರಿಸ್ಥಿತಿ ಹೀಗಿರುವಾಗ ತಕ್ಷಣಕ್ಕೆ ಲೋಡ್ ಶೆಡ್ಡಿಂಗ್ ತಪ್ಪಿಸಬೇಕು ಎಂದರೆ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಮಿತವ್ಯಯ ಕ್ರಮ ಅನುಸರಿಸುವುದನ್ನು  ನಾವು ಕಲಿಯಲೇ ಬೇಕು, ಪರ್ಯಾಯ ಮಾರ್ಗ ಹುಡುಕಲೇ ಬೇಕು, ಆಡಂಬರ, ಶೃಂಗಾರಕ್ಕಾಗಿ ವಿನಾಕಾರಣ ವಿದ್ಯುತ್ ಪೋಲು ಮಾಡುವ ಪರಿಪಾಠ ನ್ಲ್ಲಿಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.