ADVERTISEMENT

ಹುಲಿಗಳಿಗೆ ಆಪತ್ತು

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST

ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಗಳ ಕಳ್ಳ ಬೇಟೆ ನಡೆಯುತ್ತಿದೆ ಎಂಬ ಸುದ್ದಿಯೇ ಆತಂಕಕಾರಿ. ಕೆಲವು ದಿನಗಳ ಹಿಂದೆ ಕಲ್ಕೆರೆ ಅರಣ್ಯ ವಲಯದಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ (ಜಾ ಟ್ರಾಪ್) ಸಿಕ್ಕಿಕೊಂಡು ಎರಡು ಹುಲಿಗಳು ಸತ್ತಿವೆ ಎಂಬ ಮಾಹಿತಿ ಅರಣ್ಯ ಇಲಾಖೆಯ ಮೂಲಗಳಿಂದಲೇ ಹೊರಬಿದ್ದಿದೆ.

ಆದರೆ ಸತ್ತದ್ದು ಒಂದು ಹುಲಿ, ಅದು ಹಸಿವಿನಿಂದ ಸತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಇನ್ನೊಂದು ಸತ್ತ ಹುಲಿಯನ್ನು ಅವರೇ ಸುಟ್ಟು ಹಾಕಿ ಕಳ್ಳಬೇಟೆಯ ಸಂಚನ್ನು ಮುಚ್ಚಿಹಾಕಿದ್ದಾರೆ ಎಂಬ ಮಾಹಿತಿಯೂ ಕೇಳಿ ಬಂದಿದೆ.
 
ಬೇಟೆಗಾರರನ್ನು ಹಿಡಿದು ಶಿಕ್ಷಿಸಬೇಕಾದ ಅಧಿಕಾರಿಗಳು ಹುಲಿಗಳ ಸಾವಿಗೆ ಸುಳ್ಳು ನೆಪ ಹೇಳುತ್ತಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂರಕ್ಷಣಾ ಯೋಜನೆ ಜಾರಿಯಲ್ಲಿದೆ.

ಅಲ್ಲೇ ಕಳ್ಳಬೇಟೆ ನಡೆಯುತ್ತಿದೆ ಎಂದರೆ ಹುಲಿಗಳ ರಕ್ಷಣೆಯಲ್ಲಿ ಇಲಾಖೆ ವಿಫಲವಾಗಿದೆ ಎಂದೇ ಅರ್ಥ. ತಮ್ಮ ಲೋಪ ಮುಚ್ಚಿಹಾಕಲು ಸುಳ್ಳು ಹೇಳುವ ಅಧಿಕಾರಿಗಳ ವರ್ತನೆ ಖಂಡನೀಯ.
 
ರಾಜ್ಯ ಸರ್ಕಾರ ಹುಲಿಗಳ ಸಾವಿನ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಬೇಕು. ಬಂಡೀಪುರ ಅರಣ್ಯದಲ್ಲಿ ಕಳ್ಳ ಬೇಟೆಯನ್ನು ತಡೆಯಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು.
 
ಉರುಳು ಹಾಕಿ ವನ್ಯಜೀವಿಗಳನ್ನು ಕೊಲ್ಲುವ ಪದ್ಧತಿ ಮಧ್ಯ ಪ್ರದೇಶ ರಾಜ್ಯದ ಬುಡಕಟ್ಟು ಜನರಲ್ಲಿದೆ ಎನ್ನಲಾಗಿದೆ. 2002 ಮತ್ತು 2008ರಲ್ಲಿ ನಾಗರಹೊಳೆ ಅರಣ್ಯದಲ್ಲಿ ಅಂತಹ ಪ್ರಯತ್ನಗಳು ನಡೆದಿದ್ದವು.
 
ಈ ಪ್ರವೃತ್ತಿ ಈಗ ಬಂಡೀಪುರ ಅರಣ್ಯಕ್ಕೂ ಕಾಲಿಟ್ಟಿದೆ. ಈಗ ಇಲಾಖೆ ಕಣ್ಣುಮುಚ್ಚಿ ಕುಳಿತರೆ ಹುಲಿಗಳನ್ನು ರಕ್ಷಿಸುವವರು ಯಾರು?
 ರಾಷ್ಟ್ರೀಯ ಉದ್ಯಾನಗಳೇ ಅಲ್ಲದೆ ರಾಜ್ಯದ ಇತರ ಅರಣ್ಯಗಳ್ಲ್ಲಲೂ ಕಳ್ಳಬೇಟೆ ಅವ್ಯಾಹತವಾಗಿ ನಡೆಯುತ್ತಿದೆ.
 
ಅರಣ್ಯ ಪ್ರದೇಶದಲ್ಲಿ ನಡೆಯುವ ಗಣಿಗಾರಿಕೆ, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ತಲೆ ಎತ್ತಿರುವ ಜಂಗಲ್ ಲಾಡ್ಜ್, ರೆಸಾರ್ಟ್‌ಗಳಿಂದಾಗಿ ಅರಣ್ಯ ಪ್ರದೇಶಗಳಲ್ಲಿ ಜನ ಸಂಚಾರ ಹೆಚ್ಚಾಗಿದೆ. ಮುಕ್ತವಾಗಿ ಓಡಾಡಿಕೊಂಡಿದ್ದ ವನ್ಯಜೀವಿಗಳ ಸಂಚಾರ ಮಾರ್ಗ ಸಂಕುಚಿತಗೊಂಡಿದೆ.
 
ಜಿಂಕೆ, ಕಾಡುಕೋಣ ಮತ್ತಿತರ ಪ್ರಾಣಿಗಳನ್ನು ಬೇಟೆಯಾಡಿ ಕೊಲ್ಲುವ ಪ್ರಯತ್ನಗಳು ನಡೆಯುತ್ತಿರುವುದರಿಂದ ಹುಲಿ, ಚಿರತೆ ಮತ್ತಿತರ ಮೃಗಗಳಿಗೆ ಕಾಡಿನಲ್ಲಿ ಅಹಾರ ಸಿಗುತ್ತಿಲ್ಲ. ಈ ಪ್ರಾಣಿಗಳು ಆಹಾರ ಹುಡುಕಿಕೊಂಡು ಜನ ವಸತಿ ಪ್ರದೇಶಗಳಿಗೆ ನುಗ್ಗುತ್ತಿವೆ.

ಚಿರತೆಗಳ ಹಾವಳಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯವಾಗಿದೆ. ಆನೆಗಳೂ ಊರುಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿವೆ. ರಾಜಕೀಯ ವ್ಯವಹಾರಗಳಲ್ಲೇ ಮುಳುಗಿಹೋಗಿರುವ ಸರ್ಕಾರಕ್ಕೆ ವನ್ಯಜೀವಿಗಳ ರಕ್ಷಣೆಯ ಕಾಳಜಿಯೇ ಇಲ್ಲ.

ಕಾಡು ಪ್ರಾಣಿಗಳು ಊರೊಳಕ್ಕೆ ಬರುವುದನ್ನು ತಡೆಗಟ್ಟಬೇಕು ಎಂದು ಸರ್ಕಾರಕ್ಕೆ ಅನ್ನಿಸಿಯೇ ಇಲ್ಲ. ಕಾಡುಪ್ರಾಣಿಗಳಿಂದ ಜೀವ ಹಾನಿ ಅಥವಾ ಬೆಳೆ ನಷ್ಟವಾದರೆ ಸರ್ಕಾರ ಸಂಬಂಧಪಟ್ಟವರಿಗೆ ಪರಿಹಾರ ಕೊಡುವುದಷ್ಟೇ ತನ್ನ ಕೆಲಸ ಎಂಬಂತೆ ವರ್ತಿಸುತ್ತಿದೆ.

ಒಂದೆಡೆ ಕಳ್ಳ ಬೇಟೆಯ ಹಾವಳಿ ಇದ್ದರೆ, ಇನ್ನೊಂದೆಡೆ ಭೀತಿಗೊಳಗಾದ ಜನರೇ ಚಿರತೆ ಮತ್ತಿತರ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಹುಲಿ, ಚಿರತೆ ಮತ್ತಿತರ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.