ADVERTISEMENT

ಕಟ್ಟಡಗಳ ಕುಸಿತ, ಸಾವು ತಪ್ಪಿಸಬಹುದಾಗಿದ್ದ ದುರಂತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ಕಟ್ಟಡಗಳ ಕುಸಿತ, ಸಾವು ತಪ್ಪಿಸಬಹುದಾಗಿದ್ದ ದುರಂತ
ಕಟ್ಟಡಗಳ ಕುಸಿತ, ಸಾವು ತಪ್ಪಿಸಬಹುದಾಗಿದ್ದ ದುರಂತ   

ನಮ್ಮ ಬೆಂಗಳೂರಿನಲ್ಲಿ ಏನು ಆಗುತ್ತಿದೆ? ನಿರ್ಮಾಣ ಹಂತದ ಕಟ್ಟಡಗಳು ಏಕಾಏಕಿ ಉರುಳಿ ಬಿದ್ದು ಅಮಾಯಕರ ಜೀವ ತೆಗೆಯುತ್ತಿವೆ. ಸ್ವಚ್ಛತಾ ಕಾರ್ಮಿಕರು ಒಳಚರಂಡಿ ಗುಂಡಿಗಳಲ್ಲಿ ಇಳಿದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಒಂದೊಂದು ಅನಾಹುತ ನಡೆದಾಗಲೂ ಪ್ರಕರಣ ದಾಖಲಿಸಲಾಗುತ್ತದೆ, ಒತ್ತಡ ಹೆಚ್ಚಾದರೆ ಒಂದಿಷ್ಟು ಜನರನ್ನು ಬಂಧಿಸಲಾಗುತ್ತದೆ. ‘ಇನ್ನು ಇಂತಹ ದುರಂತಗಳು ನಡೆಯದಂತೆ ಉಗ್ರ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅಧಿಕಾರಸ್ಥರಿಂದ ಘೋಷಣೆಗಳು ಹೊರಬೀಳುತ್ತವೆ. ಕ್ರಮೇಣ ಅವರೂ ತಮ್ಮ ವಾಗ್ದಾನ ಮರೆಯುತ್ತಾರೆ, ಜನರೂ ದುರಂತವನ್ನು ಮರೆಯುತ್ತಾರೆ. ಅದು ಮತ್ತೆ ನೆನಪಾಗಬೇಕು ಎಂದರೆ ಇನ್ನೊಂದು ಅನಾಹುತವೇ ನಡೆಯಬೇಕು. ಗಮನಿಸಲೇಬೇಕಾದ ಒಂದು ಸಂಗತಿ ಎಂದರೆ, ಇವೆಲ್ಲ ಪ್ರಾಣ ಹಾನಿಯನ್ನು ತಪ್ಪಿಸಬಹುದಾಗಿದ್ದ ಪ್ರಕರಣಗಳು. ಸ್ವಲ್ಪ ಮುಂದಾಲೋಚನೆ, ಕಾನೂನು ಮತ್ತು ನಿಯಮಗಳ ಕಟ್ಟುನಿಟ್ಟು ಪಾಲನೆ ಮಾಡಿದರೆ ಸಾಕು; ಇವುಗಳ ಮೇಲೆ ನಿಗಾ ಇಡಬೇಕಾದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಾಕು. ಅಮಾಯಕ ಜೀವಗಳನ್ನು ಉಳಿಸಬಹುದು. ಆದರೆ ವಾಸ್ತವ ಬೇರೆಯೇ ಇದೆ. ನಿಯಮಗಳ ಉಲ್ಲಂಘನೆ ಆಗುತ್ತಿದ್ದರೂ, ಗುಣಮಟ್ಟ ಕಾಪಾಡುತ್ತಿಲ್ಲ ಎಂದು ಗೊತ್ತಿದ್ದರೂ ಎಂಜಲು ಕಾಸಿನ ಆಸೆಗಾಗಿ ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ ಅಧಿಕಾರಶಾಹಿ, ಅವರ ಮೇಲೆ ಒತ್ತಡ ತರುವ ಅಧಿಕಾರಸ್ಥ ಜನಪ್ರತಿನಿಧಿಗಳು ಅನಾಹುತ ಮರುಕಳಿಸಲು ಕಾರಣರಾಗುತ್ತಿದ್ದಾರೆ.

ಸರ್ಜಾಪುರ ರಸ್ತೆಯ ಕಸವನಹಳ್ಳಿ ಗೇಟ್‌ ಹತ್ತಿರ ಮೊನ್ನೆ ಮೊನ್ನೆ ಐದು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಇನ್ನೂ ಒಂದಿಬ್ಬರು ಒಳಗೇ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವ ಅನುಮಾನಗಳಿದ್ದರೂ, ದೃಢಪಟ್ಟಿಲ್ಲ. ಮೃತರೆಲ್ಲ ಹೊಟ್ಟೆಪಾಡಿಗಾಗಿ ದೂರದ ಊರುಗಳಿಂದ ಕೂಲಿ ಕೆಲಸಕ್ಕೆ ಬಂದು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ದುಡಿಯುತ್ತಿದ್ದವರು. ತಮ್ಮ ತಮ್ಮ ಕುಟುಂಬಗಳಿಗೆ ಏಕಮಾತ್ರ ಆಸರೆಯಾಗಿದ್ದವರು. ಇವರ ಅವಲಂಬಿಗಳಿಗೆ ಸರ್ಕಾರ ಒಂದಿಷ್ಟು ಪರಿಹಾರ ಕೊಡಬಹುದು. ಆದರೆ ಹೋದ ಜೀವ ಬರುತ್ತದೆಯೇ? ನೋವಿನ ವಿಷಯ ಎಂದರೆ, ಕಟ್ಟಡ ಕುಸಿತ ದುರಂತ ಇದೇ ಮೊದಲೇನಲ್ಲ. 1983ರ ಸೆ. 12ರಂದು ಬೆಂಗಳೂರಿನಲ್ಲಿ 8 ಅಂತಸ್ತಿನ ಗಂಗಾರಾಮ್‌ ಕಟ್ಟಡ ಕುಸಿದು 120ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಮೃತರ ಅವಲಂಬಿಗಳಿಗೆ ಪರಿಹಾರ ಸಿಕ್ಕಿದ್ದು 21 ವರ್ಷಗಳ ನಂತರ. ಅದರ ನಂತರವೂ ಪದೇ ಪದೇ ದುರಂತಗಳು ಆಗುತ್ತಲೇ ಇವೆ. 2012 ರಿಂದ ಈಚೆಗೆ 10ಕ್ಕೂ ಹೆಚ್ಚು ಕಟ್ಟಡಗಳು ನಿರ್ಮಾಣ ಹಂತದಲ್ಲಿ ಕುಸಿದಿವೆ. ಸುಮಾರು 30 ಜನ ಸಾವಿಗೀಡಾಗಿದ್ದಾರೆ. ಮೊದಲ ಅನಾಹುತ ನಡೆದಾಗಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬಹುಮಹಡಿ ಕಟ್ಟಡಗಳ ನಿರ್ಮಾಣದ ಮೇಲೆ ನಿಗಾ ಇಟ್ಟಿದ್ದರೆ ಬಹುಪಾಲು ದುರಂತಗಳು ಮರುಕಳಿಸುತ್ತಿರಲಿಲ್ಲ. ಆದ್ದರಿಂದ ಕಟ್ಟಡಗಳ ಪರವಾನಗಿ ನೀಡಿಕೆ ಮತ್ತು ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಟ್ಟಡ ನಿರ್ಮಿಸುವವರ ನಡುವಿನ ಅಪವಿತ್ರ ಮೈತ್ರಿಯನ್ನು ಮುರಿಯಬೇಕು. ಕಟ್ಟಡಗಳ ಮಾಲೀಕರ ಜತೆ ಅವುಗಳ ಎಂಜಿನಿಯರ್‌ಗಳನ್ನೂ ಹೊಣೆ ಮಾಡಬೇಕು.

ಒಳಚರಂಡಿ ಗುಂಡಿಗಳ ಸ್ವಚ್ಛತೆ ಕೂಡ ಸರಣಿ ದುರಂತಗಳಿಗೆ ಕಾರಣವಾಗುತ್ತಿದೆ. ಇಲ್ಲಿಯೂ, ಸಮರ್ಪಕ ಮುಂಜಾಗ್ರತೆ ವಹಿಸದೇ ಇರುವುದು ಮತ್ತು ನಿರ್ಲಕ್ಷ್ಯದಿಂದ ಅನೇಕ ಸ್ವಚ್ಛತಾ ಕಾರ್ಮಿಕರು ಸಾವಿಗೀಡಾಗುತ್ತಿದ್ದಾರೆ. 1995ರಿಂದ ಈಚೆಗೆ ನಮ್ಮ ರಾಜ್ಯದಲ್ಲಿ ಇಂತಹ 35 ಪ್ರಕರಣಗಳು ವರದಿಯಾಗಿವೆ. 72 ಜನರನ್ನು ಬಲಿ ತೆಗೆದುಕೊಂಡಿವೆ. ಇವರೆಲ್ಲ ದಲಿತ ಸಮುದಾಯಕ್ಕೆ ಸೇರಿದವರು. ಆಧುನಿಕ ಯಂತ್ರೋಪಕರಣಗಳು ಲಭ್ಯವಿರುವ ಈ ಕಾಲದಲ್ಲಿಯೂ ಮಲದ ಗುಂಡಿ, ಒಳಚರಂಡಿ ಗುಂಡಿಗಳ ಸ್ವಚ್ಛತೆಗೆ ಮನುಷ್ಯರನ್ನೇ ಬಳಸುವುದು ಅಮಾನವೀಯ. ಇನ್ನೊಬ್ಬರ ಜೀವದ ಬಗ್ಗೆ ತೋರಿಸುತ್ತಿರುವ ನಿರ್ಲಕ್ಷ್ಯಕ್ಕೆ ನಿದರ್ಶನ. ಆದ್ದರಿಂದ ಇನ್ನಾದರೂ ಇಂತಹ ದುರಂತಗಳು ಕೊನೆಯಾಗಬೇಕು. ಅಮೂಲ್ಯ ಜೀವಗಳ ಸಾವು ನಿಲ್ಲಬೇಕು. ಸರ್ಕಾರ ಕೂಡ ಕಟ್ಟುನಿಟ್ಟು ಕ್ರಮ ಕೈಗೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.