ADVERTISEMENT

‘ಬಡವರ ಬಂಧು’ ಬಲಪಡಿಸಿ ; ಸಣ್ಣ ವ್ಯಾಪಾರಿಗಳಿಗೆ ಶಕ್ತಿ ತುಂಬಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:39 IST
Last Updated 20 ಸೆಪ್ಟೆಂಬರ್ 2019, 19:39 IST
   

ಪ್ರತೀ ಸಲ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಹೊಸ ಯೋಜನೆಗಳು ಪ್ರಕಟವಾಗುತ್ತವೆ. ಜನರ ಅಭಿವೃದ್ಧಿಯೇ ತಮ್ಮ ಗುರಿ ಎಂದು ಸಾಧಿಸಲು ಸರ್ಕಾರಗಳು ಇಂತಹ ಯೋಜನೆಗಳನ್ನು ರೂಪಿಸುತ್ತವೆ. ಆ ಯೋಜನೆಗಳಿಗೆ ಆಕರ್ಷಕ ಹೆಸರನ್ನೂ ಕೊಡಲಾಗುತ್ತದೆ. ಹಿಂದಿನ ಸರ್ಕಾರಕ್ಕಿಂತ ತಮ್ಮ ಸರ್ಕಾರ ಹೇಗೆ ಮತ್ತು ಎಷ್ಟು ಭಿನ್ನ ಎನ್ನುವುದನ್ನು ತೋರಿಸುವುದೂ ಹೊಸ ಯೋಜನೆಗಳ ಇನ್ನೊಂದು ಉದ್ದೇಶವಾಗಿರುತ್ತದೆ. ಹೀಗೆ ಘೋಷಣೆಯಾಗುವ ಯೋಜನೆಗಳು ಕೆಲವೊಮ್ಮೆ ನಿಜಕ್ಕೂ ಜನಸಾಮಾನ್ಯರಿಗೆ ಉಪಯುಕ್ತವಾಗಿರುತ್ತವೆ. ಕೆಲವು ಯೋಜನೆಗಳು ಬರೀ ಪ್ರಚಾರಕ್ಕೆ ಬಳಕೆಯಾಗುತ್ತವೆ. ಜೆಡಿಎಸ್‌– ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಯಾದ ‘ಬಡವರ ಬಂಧು’ ಯೋಜನೆಯು ನಗರ, ಪಟ್ಟಣಗಳ ಬಡ ಹಾಗೂ ಅಸಂಘಟಿತ ವ್ಯಾಪಾರಿ ವರ್ಗಕ್ಕೆ ಆಸರೆಯಾಗಿತ್ತು. ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು (ಡಿಸಿಸಿ), ಮಹಿಳಾ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್‌ಗಳ ಮೂಲಕ ಅರ್ಹ ಫಲಾನುಭವಿಗಳಿಗೆ ₹ 2 ಸಾವಿರದಿಂದ ₹ 10 ಸಾವಿರದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಕೊಡುವ ಈ ಯೋಜನೆಯಿಂದ ಚಿಕ್ಕಪುಟ್ಟ ವ್ಯಾಪಾರ ಮಾಡುವವರು ತುಸು ಚೇತರಿಸಿಕೊಂಡಿದ್ದರು. ಯೋಜನೆ ಜಾರಿಯಾದ ಮೊದಲ ಐದು ತಿಂಗಳಲ್ಲಿ 15,200 ಜನರು ಒಟ್ಟು ₹ 9 ಕೋಟಿ ಸಾಲ ಪಡೆದಿರುವುದನ್ನು ನೋಡಿದರೆ, ಇಂತಹ ಕಿರುಸಾಲ ಯೋಜನೆಗಳ ಅಗತ್ಯ ಜನರಿಗೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಎನ್ನುವುದರ ಅರಿವಾಗುತ್ತದೆ.ಎಲ್ಲಕ್ಕಿಂತ ಮುಖ್ಯವಾಗಿ ನಗರಗಳಲ್ಲಿ ‘ಮೀಟರ್‌’ ಬಡ್ಡಿಯ ವಿಷವರ್ತುಲದಿಂದ ಪಾರಾಗಲು ಸಣ್ಣ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ಈ ಯೋಜನೆ ಅತ್ಯುತ್ತಮ ದಾರಿ ತೋರಿಸಿತ್ತು. ಮೀಟರ್‌ ಬಡ್ಡಿ ವ್ಯವಸ್ಥೆಯಲ್ಲಿ ಸಾಲ ಪಡೆದವರು ತಾವು ದುಡಿದ ಹೆಚ್ಚಿನ ಹಣವನ್ನು ಬಡ್ಡಿಗೇ ಕಟ್ಟುವುದು ಅನಿವಾರ್ಯವಾಗಿ, ಸಾಲದ ಅಸಲು ತೀರುವ ಸಾಧ್ಯತೆ ಕಡಿಮೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಉರುಳಿ, ಬಿಜೆಪಿ ನೇತೃತ್ವದ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ‘ಬಡವರ ಬಂಧು’ ಯೋಜನೆ ಬಹುತೇಕ ಸ್ಥಗಿತಗೊಂಡಿರುವುದು ವಿಷಾದದ ಸಂಗತಿ. ಪರಿಣಾಮವಾಗಿ, ಬೀದಿ ಬದಿ ವ್ಯಾಪಾರಿಗಳು ಮತ್ತೆ ಮೀಟರ್‌ ಬಡ್ಡಿಯ ಜಾಲಕ್ಕೆ ಸಿಲುಕುವಂತಾಗಿದೆ.

‘ಬಡವರ ಬಂಧು’ ಯೋಜನೆಯನ್ನು ಮುಂದುವರಿಸುವ ಬಗ್ಗೆ ರಾಜ್ಯದ ಹೊಸ ಸರ್ಕಾರ ಯಾವುದೇ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ಸಹಕಾರಿ ಬ್ಯಾಂಕುಗಳವರು ಹೇಳಿರುವುದು ವಿಪರ್ಯಾಸದ ಸಂಗತಿ. ಯಾವುದೇ ಪಕ್ಷದ ಸರ್ಕಾರವಿರಲಿ, ಅದು ಜಾರಿಗೆ ತಂದ ಯೋಜನೆಯು ನಿರ್ದಿಷ್ಟ ಪಕ್ಷದ ಯೋಜನೆಯಾಗುವುದಿಲ್ಲ, ಅದು ಸರ್ಕಾರದ ಯೋಜನೆ ಎನ್ನುವ ಪ್ರಾಥಮಿಕ ಅರಿವು ಈ ಸಹಕಾರಿ ಬ್ಯಾಂಕುಗಳ ಆಡಳಿತ ಮಂಡಳಿಗಳಿಗೆ ಇಲ್ಲವೇ? ‘ಯೋಜನೆಯಡಿ ಸಾಲ ನೀಡುವುದನ್ನು ಸ್ಥಗಿತಗೊಳಿಸಿ ಎಂದು ಸರ್ಕಾರ ಯಾರಿಗೂ ಹೇಳಿಲ್ಲ. ಆದ್ಯತೆ ಮೇರೆಗೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ’ ಎಂದು ಸಹಕಾರ ಸೊಸೈಟಿಗಳ ಹೆಚ್ಚುವರಿ ರಿಜಿಸ್ಟ್ರಾರ್‌ ಸ್ಪಷ್ಟನೆ ನೀಡಿದ್ದಾರೆ. ಬಡ ಹಾಗೂ ಅಸಂಘಟಿತ ವ್ಯಾಪಾರಿಗಳನ್ನು ಇನ್ನಷ್ಟು ಅಸಹಾಯಕತೆಗೆ ದೂಡುವ ಸಬೂಬುಗಳಿವು ಎನ್ನದೆ ನಿರ್ವಾಹವಿಲ್ಲ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಕ್ಷಣ ಇತ್ತ ಗಮನಹರಿಸಿ ‘ಬಡವರ ಬಂಧು’ ಯೋಜನೆಗೆ ಚೈತನ್ಯ ತುಂಬಲು ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಬೇಕು. ಈ ಯೋಜನೆಯ ಉತ್ತರಾರ್ಧದ ಐದು ತಿಂಗಳ ಅವಧಿಯಲ್ಲಿ 1,400 ಫಲಾನುಭವಿಗಳಿಗೆ ₹ 1.65 ಕೋಟಿ ಸಾಲ ಮಾತ್ರ ಸಿಕ್ಕಿರುವುದನ್ನು ಗಮನಿಸಿದರೆ, ಯೋಜನೆ ಕುರಿತು ಪ್ರಚಾರವೂ ಸರಿಯಾಗಿ ನಡೆದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.ಆರ್ಥಿಕ ಕುಸಿತವನ್ನು ತಡೆದು, ಜನರ ಖರೀದಿ ಸಾಮರ್ಥ್ಯಕ್ಕೆ ಚೇತರಿಕೆ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕಡಿಮೆ ಬಡ್ಡಿ ದರದ ಸಾಲದ ಹರಿವನ್ನು ಹೆಚ್ಚಿಸಬೇಕು ಎಂದು ಕೇಂದ್ರದ ಹಣಕಾಸು ಸಚಿವರೇ ಗುರುವಾರ ಆದೇಶಿಸಿದ್ದಾರೆ. ರಾಜ್ಯದಲ್ಲೂ ಆರ್ಥಿಕತೆ ಕುಸಿದಿರುವ ಹಿನ್ನೆಲೆಯಲ್ಲಿ, ಸಹಕಾರ ಬ್ಯಾಂಕುಗಳ ಸಾಲದ ಹರಿವನ್ನು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಬೇಕು. ‘ಬಡವರ ಬಂಧು’ ಯೋಜನೆಯ ಸಾಲ ಮಂಜೂರಾತಿ ಪ್ರಕ್ರಿಯೆಯನ್ನೂ ಕ್ಷಿಪ್ರ ಮತ್ತು ಸರಳಗೊಳಿಸಲು ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT