ADVERTISEMENT

ಸಂಪಾದಕೀಯ | ಬಿಬಿಎಂಪಿ: ಟೆಂಡರ್‌ ಅಕ್ರಮಗಳಿಗೆ ಕಡಿವಾಣ ಬೀಳಲಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 21:40 IST
Last Updated 13 ಡಿಸೆಂಬರ್ 2021, 21:40 IST
   

ಸರ್ಕಾರಿ ಕಾಮಗಾರಿಗಳ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಎಂಬ ಉದ್ದೇಶದಿಂದಲೇ ‘ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶ ಕತೆ (ಕೆಟಿಪಿಪಿ) ಕಾಯ್ದೆ’ಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಆದರೆ ಈ ಕಾಯ್ದೆಯ ಆಶಯಗಳನ್ನೇ ಗಾಳಿಗೆ ತೂರುವ ಪ್ರಯತ್ನಗಳು ಅವ್ಯಾಹತವಾಗಿ ನಡೆದಿವೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕಾಮಗಾರಿಗಳಲ್ಲಂತೂ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕೆಟಿಪಿಪಿ ಕಾಯ್ದೆಯ ಅಂಶಗಳನ್ನು ಉಲ್ಲಂಘಿಸುವ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿವೆ.

ಅಧಿಕಾರಿಗಳ ಮೇಲೆ ರಾಜಕಾರಣಿಗಳು ಒತ್ತಡ ಹೇರಿ ತಮಗೆ ಬೇಕಾದ ಗುತ್ತಿಗೆದಾರರಿಗೆ ಕಾಮಗಾರಿಯ ಗುತ್ತಿಗೆ ಕೊಡಿಸು ವುದು ರಾಜಾರೋಷವಾಗಿಯೇ ನಡೆಯುತ್ತಿದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಪೈಪೋಟಿಗೆ ಅವಕಾಶವೇ ಇಲ್ಲದಂತಾಗಿದೆ. ಕಾಮಗಾರಿಯ ಅಂದಾಜು ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತಕ್ಕೆ ಗುತ್ತಿಗೆ ನೀಡುತ್ತಿರುವುದರಿಂದ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟಾಗುತ್ತಿದೆ. ವಿಶೇಷ ಮೂಲಸೌಕರ್ಯ ಯೋಜನೆಯಡಿ ಸರ್ಕಾರ 2017–18ನೇ ಸಾಲಿನಲ್ಲಿ ಬಿಬಿಎಂಪಿಗೆ ₹ 2,191 ಕೋಟಿ ಮಂಜೂರು ಮಾಡಿತ್ತು. ಈ ಮೊತ್ತದಲ್ಲಿ ಎರಡನೇ ಹಂತದ ವೈಟ್‌ಟಾಪಿಂಗ್‌ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಜ್ಞಾನಭಾರತಿ ಆವರಣದಲ್ಲಿ ಆರು ಪ‍ಥಗಳ ರಸ್ತೆಯ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ₹ 35.50 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸುವ ಪ್ರಸ್ತಾವ ಈ ಯೋಜನೆಯಲ್ಲಿ ಇರಲಿಲ್ಲ. ಈ ಪ್ರಸ್ತಾವಕ್ಕೆ ಇತ್ತೀಚೆಗೆ ಒಪ್ಪಿಗೆ ನೀಡಿದ್ದ ಸರ್ಕಾರ, ಹೊಸದಾಗಿ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಪಡೆಯಬೇಕು. ಟೆಂಡರ್ ಕರೆದು ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಬಿಬಿಎಂಪಿಗೆ ಸೂಚಿಸಿತ್ತು. ಟೆಂಡರ್‌ ಕರೆದರೆ ವೆಚ್ಚ ಹೆಚ್ಚಾಗುತ್ತದೆ ಎಂಬ ನೆಪ ಹೇಳಿದ್ದ ಬಿಬಿಎಂಪಿ, ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ನಲ್ಲಿರುವ ಅವಕಾಶ ಬಳಸಿ ಟೆಂಡರ್‌ ಆಹ್ವಾನಿಸದೆಯೇ ಕಾಮ ಗಾರಿ ನಡೆಸಲು ನ. 17ರಂದು ಅನುಮತಿ ಕೋರಿತ್ತು. ಇದು ತುರ್ತು ಕಾಮಗಾರಿ ಅಲ್ಲದಿದ್ದರೂ ಈ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ನೀಡಿತ್ತು. ಟೀಕೆ ವ್ಯಕ್ತವಾದ ಬಳಿಕ ಟೆಂಡರ್ ಕರೆದೇ ಕಾಮಗಾರಿ ನಡೆಸುವಂತೆ ಸೂಚಿಸಿದೆ.

ಹೆಚ್ಚುವರಿ ಕಾಮಗಾರಿಗಳ ನೆಪದಲ್ಲಿ ಮೂಲ ಗುತ್ತಿಗೆ ಮೊತ್ತಕ್ಕಿಂತ ಅನೇಕ ಪಟ್ಟು ಹೆಚ್ಚು ಮೊತ್ತದ ಕಾಮಗಾರಿಗಳನ್ನು ಒಬ್ಬರೇ ಗುತ್ತಿಗೆದಾರರಿಗೆ ವಹಿಸುವ ಮೂಲಕವೂ ಕೆಟಿಪಿಪಿ ಕಾಯ್ದೆಯ ಆಶಯವನ್ನೇ ಬುಡಮೇಲು ಮಾಡಲಾಗುತ್ತಿದೆ. ಪಶ್ಚಿಮ ಕಾರ್ಡ್‌ ರಸ್ತೆಯಲ್ಲಿ ಮೂರು ಕಡೆ ಮೇಲ್ಸೇತುವೆ ನಿರ್ಮಿಸುವ ಒಟ್ಟು ₹ 89.86 ಕೋಟಿ ಮೊತ್ತದ ಪ್ಯಾಕೇಜ್‌ಗೆ 2015ರಲ್ಲಿ ಅನುಮೋದನೆ ನೀಡಲಾಗಿತ್ತು. ಈ ‌ಯೋಜನೆ ಮೊತ್ತಈಗ ₹ 169 ಕೋಟಿಗೆ ಹೆಚ್ಚಳವಾಗಿದೆ.

ADVERTISEMENT

ಈ ಕಾಮಗಾರಿಗಳ ಜೊತೆಗೆ ಹೆಚ್ಚುವರಿಯಾಗಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವ ಸಿದ್ಧವಾಗಿದೆ. ಅಚ್ಚರಿ ಎಂದರೆ ಈ ಕಾಮಗಾರಿಗೂ ಟೆಂಡರ್‌ ಕರೆಯದೆಯೇ ಹಿಂದಿನ ಗುತ್ತಿಗೆದಾರರಿಂದಲೇ ಕೆಲಸ ಮಾಡಿಸಲು ತಯಾರಿ ನಡೆದಿದೆ. ಲೋಕೋಪಯೋಗಿ ಇಲಾಖೆಯ ಈಗಿನ ದರಪಟ್ಟಿ ಪ್ರಕಾರ ಈ ಹೆಚ್ಚುವರಿ ಮೇಲ್ಸೇತುವೆಗೆ ₹ 18.52 ಕೋಟಿ ವೆಚ್ಚವಾಗುತ್ತದೆ. ಹಿಂದಿನ ಗುತ್ತಿಗೆದಾರರಿಂದಅಷ್ಟೇ ಮೊತ್ತದಲ್ಲಿ ಕೆಲಸ ಮಾಡಿಸುವ ಬದಲು ₹ 23.62 ಕೋಟಿ ಪಾವತಿಸಲು ಬಿಬಿಎಂಪಿ ನಿರ್ಧರಿಸಿದೆ. ಬಿಬಿಎಂಪಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಯೋಜನೆಯ ಅಡಿ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಿಸುವ ₹ 119.62 ಕೋಟಿ ಮೊತ್ತದ ಹೆಚ್ಚುವರಿ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಳ್ಳುತ್ತಿದೆ. ಇದಕ್ಕೂ ಕೆಟಿಪಿಪಿ ಕಾಯ್ದೆಯ 4ಜಿ ಸೆಕ್ಷನ್‌ ಅಡಿ ವಿನಾಯಿತಿ ಕೋರಲಾಗಿದೆ. ವಿಪತ್ತು ಪರಿಹಾರ ನಿಧಿಯಡಿ ರಸ್ತೆ ಮತ್ತು ರಾಜಕಾಲುವೆ ದುರಸ್ತಿಪಡಿಸಲು ₹ 1,171 ಕೋಟಿ ಮೊತ್ತದ ಕಾಮಗಾರಿಗೂ ಇದೇ ಸೆಕ್ಷನ್‌ ಅಡಿ ವಿನಾಯಿತಿ ಕೋರಲಾಗಿದೆ.ಟೆಂಡರ್‌ ಆಹ್ವಾನಿಸಿದರೆ ಬೇರೆ ಗುತ್ತಿಗೆದಾರರು ಇದಕ್ಕಿಂತ ಕಡಿಮೆ ಮೊತ್ತಕ್ಕೆ ಕಾಮಗಾರಿ ನಿರ್ವಹಿಸುವ ಅವಕಾಶವಿರುತ್ತದೆ. ಇಂತಹ ಅವಕಾಶ ಕೈಚೆಲ್ಲುವುದು ಎಷ್ಟು ಸರಿ ಎಂಬುದು ಪ್ರಶ್ನೆ.

ಕಾಮಗಾರಿಗಳಿಗೆ ವಾಸ್ತವಕ್ಕಿಂತ ಹೆಚ್ಚು ಅಂದಾಜು ಮೊತ್ತವನ್ನು ನಮೂದಿಸಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವುದಂತೂ ಇತ್ತೀಚೆಗೆ ಚಾಲ್ತಿಗೆ ಬಂದಿರುವ ಅಪಾಯಕಾರಿ ಪರಿಪಾಟ. ಬೆಂಗಳೂರಿನ ಅತಿ ದಟ್ಟಣೆಯ 12 ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ನಿರ್ವಹಣೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ವಾಸ್ತವ ಕ್ಕಿಂತಲೂ ಕೋಟ್ಯಂತರ ರೂಪಾಯಿ ಹೆಚ್ಚು ಅಂದಾಜು ಮೊತ್ತ ನಮೂದಿಸಲಾಗಿತ್ತು. ₹ 1,120 ಕೋಟಿ ವೆಚ್ಚದ ಈ ಯೋಜನೆಯ ಟೆಂಡರ್‌ ಪ್ರಕ್ರಿಯೆಯ ನ್ಯೂನತೆಗಳ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಮರು ಟೆಂಡರ್‌ ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ತಪ್ಪು ಮಾಡಿ ಬಳಿಕ ಸರಿಪಡಿಸುವುದಕ್ಕಿಂತಲೂ ತಪ್ಪು ಆಗದಂತೆ ಎಚ್ಚರ ವಹಿಸುವುದು ಒಳ್ಳೆಯದು. ತಾವೇ ನಿಗದಿಪಡಿಸಿದ ಟೆಂಡರ್‌ ಷರತ್ತುಗಳನ್ನು ಉಲ್ಲಂಘಿಸುವುದರಲ್ಲಿ ಹಾಗೂ ಕಪ್ಪುಪಟ್ಟಿಯಲ್ಲಿರುವ ಗುತ್ತಿಗೆದಾರರ ಬಗ್ಗೆ ಜಾಣ ಕುರುಡು ಪ್ರದರ್ಶಿಸುವಲ್ಲಿ ಬಿಬಿಎಂಪಿ ಎಂಜಿನಿಯರ್‌ಗಳು ಬಲು ನಿಪುಣರು. ಕಾಮಗಾರಿಗಳನ್ನು ಸಣ್ಣ ಸಣ್ಣ ಪ್ಯಾಕೇಜ್‌ಗಳನ್ನಾಗಿ ವಿಭಜಿಸಿ ಟೆಂಡರ್‌ ಪ್ರಕ್ರಿಯೆ ತಪ್ಪಿಸುವುದರಲ್ಲೂ ಎತ್ತಿದ ಕೈ.

ಗುತ್ತಿಗೆದಾರರು ಕೂಟ ರಚಿಸಿಕೊಂಡು ತಮ್ಮವರಲ್ಲೇ ಒಬ್ಬರಿಗೆ ಗುತ್ತಿಗೆ ಸಿಗುವಂತೆ ಮಾಡುವುದು ಟೆಂಡರ್‌ ಅಕ್ರಮದ ಮತ್ತೊಂದು ರೂಪ. ಬಿಬಿಎಂಪಿಯ ಕೆಲವು ವಿಭಾಗಗಳ ಕಾಮಗಾರಿಗಳು, ನಿರ್ದಿಷ್ಟ ವಾರ್ಡ್‌ಗಳ ಕಾಮಗಾರಿಗಳು ಅನೇಕ ವರ್ಷಗಳಿಂದ ಕೆಲವೇ ಕೆಲವು ಗುತ್ತಿಗೆದಾರರ ಪಾಲಾಗುತ್ತಿವೆ.ಸೆಪ್ಟೆಂಬರ್‌ ತಿಂಗಳಲ್ಲಿ ನಡೆದಿದ್ದ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮುಖ್ಯಮಂತ್ರಿ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳಿಗೆ ಐದು ವರ್ಷಗಳಲ್ಲಿ ₹ 20,060 ಕೋಟಿ ವ್ಯಯಿಸಲಾಗಿದೆ. ಆದರೂ ನಗರದಲ್ಲಿ ಸಂಪೂರ್ಣ ದೋಷರಹಿತವಾಗಿರುವ 1 ಕಿ.ಮೀ. ರಸ್ತೆಯೂ ಇಲ್ಲ’ ಎಂದಿದ್ದರು. ಈ ಕಾಮಗಾರಿಗಳ ಲೆಕ್ಕಪರಿಶೋಧನೆ ನಡೆಸುವುದಾಗಿಯೂ ಭರವಸೆ ನೀಡಿದ್ದರು. ಲೆಕ್ಕಪರಿಶೋಧನೆ ಜೊತೆಗೆ ಟೆಂಡರ್‌ ಅಕ್ರಮಗಳ ಸಮಗ್ರ ತನಿಖೆಗೂ ಸರ್ಕಾರ ಕ್ರಮ ಕೈಗೊಳ್ಳಬೇಕು. ಜನರ ತೆರಿಗೆ ಹಣದ ಪ್ರತೀ ರೂಪಾಯಿ ಸದ್ಬಳಕೆ ಆಗುವಂತೆ ಎಚ್ಚರ ವಹಿಸುವುದು ಸರ್ಕಾರದ ಜವಾಬ್ದಾರಿ. ಟೆಂಡರ್‌ ಅಕ್ರಮ ಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.