ADVERTISEMENT

ಸಂಪಾದಕೀಯ | ಬೆಂಗಳೂರಿನಲ್ಲಿ ‘ಪ್ರವಾಹ’: ಪರಿಹಾರಗೊತ್ತಿದೆ, ಪರಿಹರಿಸುವ ಮನಸ್ಸಿಲ್ಲ

​ಪ್ರಜಾವಾಣಿ ವಾರ್ತೆ
Published 20 ಮೇ 2022, 19:45 IST
Last Updated 20 ಮೇ 2022, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಾಜ್ಯದ ಆರ್ಥಿಕ ಶಕ್ತಿಕೇಂದ್ರವಾಗಿರುವ ಬೆಂಗಳೂರಿನಲ್ಲಿ ಸರ್ಕಾರದ ಆಡಳಿತಯಂತ್ರ ಹೇಗೆ ಕೆಲಸ ನಿರ್ವಹಿಸುತ್ತಿದೆ ಎಂಬುದನ್ನು ಈ ವಾರ ಸುರಿದ ಮಳೆ ಬಟಾಬಯಲು ಮಾಡಿದೆ. ಹೊರಮಾವು ವಡ್ಡರಪಾಳ್ಯ ದಂತಹ ಕೆಲವು ಬಡಾವಣೆಗಳಲ್ಲಿ ಮಳೆನೀರು ಮನೆಗಳಿಗೆ ನುಗ್ಗಿದೆ. ಮೂರು ದಿನ ಕಳೆದರೂ ನೀರಿನ ಮಟ್ಟ ಇಳಿದಿಲ್ಲ. ಜನರು ಮನೆಯನ್ನೇ ತೊರೆದು ಬೇರೆಡೆ ವಾಸ ಮಾಡಬೇಕಾದ ದುಃಸ್ಥಿತಿ ಇದೆ. ಹೆಚ್ಚು ಮಳೆಯಾದಾಗಲೆಲ್ಲಾ ಬೆಂಗಳೂರಿನಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎಂಬುದು ಗೊತ್ತಿರದ ವಿಚಾರವೇನಲ್ಲ. ಧಾರಾಕಾರವಾಗಿ ಮಳೆಯಾದಾಗಲೂ ನೀರು ಸರಾಗವಾಗಿ ಹರಿದುಹೋಗುವಂತೆ ರಾಜಕಾಲುವೆಗಳನ್ನು ಬಲಪಡಿಸುವುದು ಆಡಳಿತ ಯಂತ್ರದ ಆದ್ಯ ಕರ್ತವ್ಯ. ಜೋರು ಮಳೆಯಾದಾಗ ಲೆಲ್ಲ ಕೆಲವು ಬಡಾವಣೆಗಳಲ್ಲಿ ಪ್ರವಾಹ ಸೃಷ್ಟಿಯಾಗುವುದಕ್ಕೆ ಖಚಿತ ಕಾರಣಗಳು ಏನೆಂಬುದೂ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿದಿದೆ. ಮಳೆ ಸಂತ್ರಸ್ತ ಪ್ರದೇಶಗಳಿಗೆ ಮುಖ್ಯಮಂತ್ರಿ, ಸಚಿವರು ಹಾಗೂ ಅಧಿಕಾರಿಗಳ ದಂಡು ಭೇಟಿ ನೀಡಿ ಸಾಂತ್ವನ ಹೇಳುವ ಪ್ರಹಸನಗಳು ಮರುಕಳಿಸುತ್ತಿವೆಯೇ ವಿನಾ ಮಳೆ ಹಾನಿ ತಡೆಯುವ ಶಾಶ್ವತ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಯಲಹಂಕ ಹಾಗೂ ಕೆ.ಆರ್‌.ಪುರ ಪ್ರದೇಶಗಳಲ್ಲಿ ಕಳೆದ ನವೆಂಬರ್‌ನಲ್ಲಿ ಭಾರಿ ಮಳೆಯಾದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು. ತುರ್ತಾಗಿ ಕೈಗೊಳ್ಳಬೇಕಾದ ಕಾಮಗಾರಿಗಳಿಗೆ ತಕ್ಷಣವೇ ಕ್ರಿಯಾಯೋಜನೆ ರೂಪಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸೂಚನೆ ನೀಡಿದ್ದರು. ಮಳೆ ಹಾನಿ ತಡೆಯಲು 157 ಕಿ.ಮೀ. ಉದ್ದದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಬೇಕು, ಒಟ್ಟು 292 ಕಾಮಗಾರಿಗಳ ಅನುಷ್ಠಾನಕ್ಕೆ ₹1,479 ಕೋಟಿ ಅನುದಾನ ಬೇಕು ಎಂದು ಬಿಬಿಎಂಪಿಯು ಕಳೆದ ಡಿಸೆಂಬರ್‌ನಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ತುರ್ತು ಕಾಮಗಾರಿ ಕೈಗೊಳ್ಳಲು ₹ 411 ಕೋಟಿ ಮಂಜೂರು ಮಾಡುವಂತೆಯೂ ಕೋರಿತ್ತು. ಆದರೆ, ತುರ್ತು ಕಾಮಗಾರಿಗಳ ಕ್ರಿಯಾಯೋಜನೆಗೂ ತಕ್ಷಣ ಅನುಮೋದನೆ ಸಿಗಲಿಲ್ಲ. ಈ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕಳೆದ ತಿಂಗಳು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮತ್ತೊಮ್ಮೆ ಪತ್ರ ಬರೆದರೂ ಸ್ಪಂದನೆ ಸಿಕ್ಕಿರಲಿಲ್ಲ. ಪ್ರವಾಹ ಸಂತ್ರಸ್ತ ಪ್ರದೇಶಗಳಿಗೆ ಭೇಟಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಂತಹ ಪ್ರಹಸನಗಳು ಈಗ ಮರುಕಳಿಸಿದ್ದು ಬಿಟ್ಟರೆ ವ್ಯವಸ್ಥೆ ಸುಧಾರಣೆಯ ದಿಸೆ ಯಲ್ಲಿ ಭರವಸೆ ಮೂಡಿಸುವ ಯಾವ ಪ್ರಯತ್ನವೂ ಕಾಣಿಸುತ್ತಿಲ್ಲ.

ನೀರಿನ ಸಹಜ ಹರಿವಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ರಾಜಕಾಲುವೆಗಳ ನಿರ್ವಹಣೆ ಮಾಡಲೆಂದೇ ಪ್ರತಿವರ್ಷ ₹ 50 ಕೋಟಿ ಅನುದಾನ ಕಾಯ್ದಿರಿಸಲಾಗುತ್ತದೆ. ಮಳೆಗಾಲಕ್ಕೆ ಮುನ್ನವೇ ರಾಜಕಾಲುವೆ ಹಾಗೂ ಮಳೆನೀರು ಚರಂಡಿಗಳ ಹೂಳೆತ್ತುವ ಕೆಲಸ ಸಮಯಕ್ಕೆ ಸರಿಯಾಗಿ ನಡೆದರೆ, ಅನಾಹುತಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸ ಬಹುದು.ಮುಂಗಾರುಪೂರ್ವ ಮಳೆಯು ಸೃಷ್ಟಿಸಿದ ಅವಾಂತರಗಳು ರಾಜಕಾಲುವೆಗಳ ನಿರ್ವಹಣೆ ನಿಜಕ್ಕೂ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿಸಿವೆ. ಬಿಬಿಎಂಪಿಯ ರಾಜಕಾಲುವೆ ವಿಭಾಗದಲ್ಲಿ 25ಕ್ಕೂ ಅಧಿಕ ಎಂಜಿನಿಯರ್‌ಗಳನ್ನು ಇಟ್ಟುಕೊಂಡು ಇಂತಹ ದೈನಂದಿನ ಕೆಲಸಗಳನ್ನೂ ಸರಿಯಾಗಿ ನಿಭಾಯಿಸದಿದ್ದರೆ ಪರಿಸ್ಥಿತಿ ಸುಧಾರಿಸುವುದಾದರೂ ಹೇಗೆ? ಕೆರೆ ಹಾಗೂ ರಾಜಕಾಲುವೆಗಳ ಒತ್ತುವರಿ ಮತ್ತು ರಾಜಕಾಲುವೆಗಳ ದಿಕ್ಕು ಬದಲಾವಣೆಯೂ ಅನೇಕ ಕಡೆ ಸಮಸ್ಯೆ ಉಲ್ಬಣಿಸಲು ಕಾರಣವಾಗುತ್ತಿವೆ. 2016ರಲ್ಲಿ ನಗರದಲ್ಲಿ ಭಾರಿ ಮಳೆಯಾದಾಗ ರಾಜಕಾಲುವೆ ಒತ್ತುವರಿ ತೆರವು ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಲಾಯಿತು. ಆದರೆ, ಪ್ರಭಾವಿಗಳು ಮಾಡಿಕೊಂಡಿದ್ದ ಒತ್ತುವರಿ ತೆರವುಗೊಳಿಸಬೇಕಾಗಿ ಬಂದಾಗ ಜಾಣ ಮರೆವು ಪ್ರದರ್ಶಿಸಲಾಯಿತು. ಅನೇಕ ಕಡೆ ಈಗಲೂ ಒತ್ತುವರಿ ಹಾಗೆಯೇ ಇದೆ. ಒತ್ತುವರಿ ತೆರವಿಗೆ ಈಗಲೂ ಪ್ರಭಾವಿ ವ್ಯಕ್ತಿಗಳೇ ಅಡ್ಡಿಯಾಗಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನೀರು ಹರಿವಿನ ನೈಸರ್ಗಿಕ ಮಾರ್ಗಗಳೂ ಮೂಲ ದಾಖಲೆಗಳಲ್ಲೇ ಬದಲಾಗುವಷ್ಟರ ಮಟ್ಟಿಗೆಇವರ ಪ್ರಭಾವ ಕೆಲಸ ಮಾಡುತ್ತದೆ. ಕೆರೆ, ರಾಜಕಾಲುವೆಗಳಿಗೆ ಸೇರಿದ ಪ್ರದೇಶದಲ್ಲಿ ಕಟ್ಟಡ ಅಥವಾ ಬಡಾವಣೆಗಳನ್ನು ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಬಾಯಿಮಾತಿಗೆ ಸೀಮಿತವಾಗದೆ ಅನುಷ್ಠಾನಕ್ಕೆ ಬಂದರೆ ಮಾತ್ರ ಭವಿಷ್ಯದಲ್ಲಿ ಮಳೆಯಿಂದ ಗೋಳು ಎದುರಾಗುವುದನ್ನು ತಪ್ಪಿಸಬಹುದು.

ಪ್ರವಾಹದಿಂದ ನಗರದ ನಿವಾಸಿಗಳು ಬವಣೆ ಪಡುತ್ತಿರುವುದು ಒಂದೆಡೆಯಾದರೆ, ಇಲ್ಲಿ ಹೂಡಿಕೆ ಮಾಡಿದ ಸಂಸ್ಥೆಗಳೂ ಭಾರಿ ನಷ್ಟ ಎದುರಿಸುವಂತಹ ಸ್ಥಿತಿ ಇದೆ. ಪದೇಪದೇ ಉಂಟಾಗುವ ಪ್ರವಾಹಗಳು ಬೆಂಗಳೂರಿನ ಬ್ರ್ಯಾಂಡ್‌ ಮೌಲ್ಯದ ಮೇಲೂ ಪರಿಣಾಮವನ್ನು ಉಂಟು ಮಾಡುತ್ತವೆ. ಇಲ್ಲಿ ಹೂಡಿಕೆ ಮಾಡಲು ಕಂಪನಿಗಳು ಹಿಂದೇಟು ಹಾಕಬಹುದು. ಈ ಬಗ್ಗೆ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ
ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಬಿಬಿಎಂಪಿ ಸಲ್ಲಿಸಿರುವ ಪರಿಷ್ಕೃತ ಕ್ರಿಯಾಯೋಜನೆ ಪ್ರಕಾರ, ಮಳೆ ಹಾನಿ ತಡೆಯಲು 60.59 ಕಿ.ಮೀ. ಉದ್ದದ ಪ್ರಥಮ ಹಂತದ ರಾಜಕಾಲುವೆ ಹಾಗೂ 102.87 ಕಿ.ಮೀ. ಉದ್ದದ ದ್ವಿತೀಯ ಹಂತದ ರಾಜ ಕಾಲುವೆಯನ್ನು 306 ಕಡೆ ದುರಸ್ತಿ ಮಾಡಬೇಕಿದೆ. ಇವುಗಳಲ್ಲಿ ಒಟ್ಟು 51.76 ಕಿ.ಮೀ. ಉದ್ದದ ರಾಜಕಾಲುವೆಗಳನ್ನು ದುರಸ್ತಿಪಡಿಸುವ 123 ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳಬೇಕು. ಈ ತುರ್ತು ಕಾಮಗಾರಿಗಳನ್ನು ಸರ್ಕಾರ ಸಮರೋಪಾದಿಯಲ್ಲಿ ಅನುಷ್ಠಾನಗೊಳಿಸಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.