ADVERTISEMENT

ಸಂಪಾದಕೀಯ |ಪರೀಕ್ಷೆ: ಸರ್ಕಾರ–ರುಪ್ಸಾ ತಿಕ್ಕಾಟ; ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಂಟಕ

ಸಂಪಾದಕೀಯ
Published 13 ಮಾರ್ಚ್ 2024, 23:36 IST
Last Updated 13 ಮಾರ್ಚ್ 2024, 23:36 IST
   

ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆ- ಕಾಲೇಜುಗಳ 5, 8, 9 ಹಾಗೂ 11ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸುವ ವಿಚಾರವಾಗಿ ನಡೆದಿರುವ ಬೆಳವಣಿಗೆಗಳು ಅತ್ಯಂತ ದುರದೃಷ್ಟಕರ. ಈ ವಿಷಯದಲ್ಲಿ, ಕೇಂದ್ರಬಿಂದುವಾದ ವಿದ್ಯಾರ್ಥಿಗಳ ಹಿತವನ್ನೇ ಸಂಪೂರ್ಣವಾಗಿ ಕಡೆಗಣಿಸಲಾಗಿದ್ದು, ಅವರ ಭವಿಷ್ಯದೊಂದಿಗೆ ಚೆಲ್ಲಾಟ ಆಡಲಾಗುತ್ತಿದೆ. ಬೋರ್ಡ್‌ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಮೊಂಡಾಟಕ್ಕೆ ಬಿದ್ದ ರಾಜ್ಯ ಸರ್ಕಾರಕ್ಕಾಗಲೀ,
ಈ ನಿರ್ಧಾರವನ್ನು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಕ್ಕಾಗಲೀ (ರುಪ್ಸಾ) ವಿದ್ಯಾರ್ಥಿಗಳ ಬಗ್ಗೆ ಕಾಳಜಿಯೇ ಇದ್ದಂತಿಲ್ಲ. ಇಲ್ಲದಿದ್ದರೆ ಅವು ಹೀಗೆ ಪರಸ್ಪರ ತೊಡೆ ತಟ್ಟಿ ಪರೀಕ್ಷೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿರಲಿಲ್ಲ. ಭಿನ್ನ ಕೋರ್ಟ್‌ ಪೀಠಗಳಿಂದ ಬಂದ ಭಿನ್ನ ಆದೇಶಗಳು ಕೂಡ ಬೋರ್ಡ್‌ ಪರೀಕ್ಷೆಗೆ ಸಂಬಂಧಿಸಿದ ಗೊಂದಲ ತಿಳಿಗೊಳಿಸುವ ಬದಲು ಮತ್ತಷ್ಟು ಗೋಜಲುಗೊಳಿಸಿದವು. ಮಂಗಳವಾರ ಪರೀಕ್ಷೆ ಬರೆದು ಹೋದ ಮಕ್ಕಳಿಗೆ ಬುಧವಾರದಿಂದ ಪರೀಕ್ಷೆ ಇರುವುದಿಲ್ಲ ಎಂದು ಹೇಳಿದರೆ ಅವರ ಮೇಲಾಗುವ ಪರಿಣಾಮ ಎಂತಹದ್ದು ಎಂಬುದನ್ನು ಶಿಕ್ಷಣ ಕ್ಷೇತ್ರದ ಪ್ರಮುಖರು ಯೋಚಿಸದಿರುವುದು ಆಶ್ಚರ್ಯ. ಸರ್ಕಾರ ಮತ್ತು ರುಪ್ಸಾ ನಡುವಿನ ತಿಕ್ಕಾಟದ ಬಿಸಿಯನ್ನು ಶಾಲಾ ಮಕ್ಕಳು ಹಾಗೂ ಶಿಕ್ಷಕರು ಅನುಭವಿಸಿದ್ದಾರೆ. ಬೋರ್ಡ್‌ ಪರೀಕ್ಷೆ ಇದೆ ಎಂದು ಮಕ್ಕಳು ಸಿದ್ಧತೆ ಮಾಡಿಕೊಂಡಿದ್ದರು. ಈಗ ಅರ್ಧಂಬರ್ಧ ಪರೀಕ್ಷೆ ಮುಗಿದಿದೆ. ಮಿಕ್ಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮುಂದೆ ನಡೆಯುತ್ತವೆಯೋ ಇಲ್ಲವೋ, ನಡೆಯುವುದಾದರೆ ಯಾವಾಗ ಎಂಬುದರ ಬಗ್ಗೆ ಸ್ಪಷ್ಟತೆಯೂ ಇಲ್ಲ. ಮಕ್ಕಳ ಮಾನಸಿಕ ಸ್ಥಿತಿಯ ಮೇಲೆ ಈ ಬೆಳವಣಿಗೆಗಳು ಎಂತಹ ಪರಿಣಾಮ ಬೀರಬಲ್ಲವು ಎಂಬುದನ್ನು ಗೊಂದಲಕ್ಕೆ ಕಾರಣರಾದವರೆಲ್ಲ ಒಮ್ಮೆ ಯೋಚಿಸಬೇಕಿತ್ತು. ಬೋರ್ಡ್‌ ಪರೀಕ್ಷೆ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠ ರದ್ದುಗೊಳಿಸಿತ್ತು. ಈ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ಕಳೆದ ವಾರ ಮಧ್ಯಂತರ ತಡೆ ನೀಡಿತ್ತು. ಇತ್ತ, ನಿಗದಿಯಂತೆ ಸರ್ಕಾರ ಪರೀಕ್ಷೆ ಆರಂಭಿಸಿದರೆ, ಅತ್ತ ರುಪ್ಸಾ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ವಿಭಾಗೀಯ ನ್ಯಾಯಪೀಠದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಗೊಳಿಸಿದೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸುವ ಸಂವಿಧಾನದ ಆಶಯವನ್ನು ಜಾರಿಗೊಳಿಸಲು ಶಿಕ್ಷಣ ಹಕ್ಕು ಕಾಯ್ದೆಯನ್ನು 2010ರಲ್ಲಿ ಜಾರಿಗೊಳಿಸಿತು. ಈ ಕಾಯ್ದೆಯ ಒಂದು ಮಹತ್ವದ ಅಂಶವೆಂದರೆ, ಶಾಲೆಗೆ ಪ್ರವೇಶ ಪಡೆದ ಯಾವುದೇ ಮಗುವನ್ನು ಎಲಿಮೆಂಟರಿ ಶಿಕ್ಷಣ ಮುಗಿಯುವವರೆಗೆ ಯಾವುದೇ ತರಗತಿಯಲ್ಲಿ ನಪಾಸು ಮಾಡುವಂತಿಲ್ಲ ಅಥವಾ ಪ್ರಾಥಮಿಕ ಶಿಕ್ಷಣವು ಪೂರ್ಣಗೊಳ್ಳುವವರೆಗೆ ಮಗುವನ್ನು ಶಾಲೆಯಿಂದ ಹೊರಹಾಕುವಂತಿಲ್ಲ. ಶಾಲೆಗೆ ಸೇರಿದ ಪ್ರತಿ ಮಗುವೂ ಕೊನೇಪಕ್ಷ ಎಂಟು ವರ್ಷ ಗುಣಮಟ್ಟದ ಶಾಲಾ ಶಿಕ್ಷಣ ಪಡೆಯಬೇಕು ಎಂಬುದು ಈ ಕಾಯ್ದೆಯ ಸದಾಶಯ. ಹೀಗಾಗಿಯೇ, ಬೋರ್ಡ್‌ ಪರೀಕ್ಷೆ ನಡೆಸುವ ಸರ್ಕಾರದ ಕ್ರಮವು ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್‌ 30ರ ಸ್ಪಷ್ಟ ಉಲ್ಲಂಘನೆ ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠ ವ್ಯಾಖ್ಯಾನಿಸಿತ್ತು. ಪರೀಕ್ಷಾ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಈ ಪರೀಕ್ಷೆಯನ್ನು ನಡೆಸಬಾರದು ಎಂದೂ ಸೂಚಿಸಿತ್ತು. ‘ನಿರ್ದಿಷ್ಟ ಅಂಕಗಳನ್ನು ಪಡೆಯದ ಮಕ್ಕಳನ್ನು ‘ಫೇಲ್‌’ ಎಂದು ಘೋಷಿಸಿ, ಶೈಕ್ಷಣಿಕ ವ್ಯವಸ್ಥೆಯಿಂದ ಅವರನ್ನು ಹೊರದೂಡಲು ಬೋರ್ಡ್‌ ಪರೀಕ್ಷೆಗಳನ್ನು ಆಯುಧವನ್ನಾಗಿ ಬಳಸಲಾಗುತ್ತದೆ; ಪರೀಕ್ಷೆ ನಡೆಸುವುದು ಸುಲಭದ ಕೆಲಸ. ಕಲಿಸುವುದು, ಕಲಿಕೆಗೆ ಅಗತ್ಯ ಭೂಮಿಕೆ ಸಿದ್ಧಪಡಿಸುವುದು ಮತ್ತು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸುವುದು ಅತ್ಯಂತ ಕಷ್ಟದ ಕೆಲಸ’ ಎಂದು ಶಿಕ್ಷಣತಜ್ಞರು ವಿಶ್ಲೇಷಿಸುತ್ತಾರೆ. ‘ವಾಸ್ತವದಲ್ಲಿ ಇದು ಪರೀಕ್ಷೆ ಅಲ್ಲ, ಸಂಕಲನಾತ್ಮಕ ಮೌಲ್ಯಮಾಪನ. ಇದರಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಅಗತ್ಯವಿಲ್ಲ. ಇದೊಂದು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಕ್ರಮ’ ಎಂಬುದು ರಾಜ್ಯ ಸರ್ಕಾರದ ವಾದ. 9 ಹಾಗೂ 11ನೇ ತರಗತಿಗಳು ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂಬ ಸಂಗತಿಯನ್ನೂ ಕೋರ್ಟ್‌ ಗಮನಕ್ಕೆ ಸರ್ಕಾರ ತಂದಿದೆ. ಈ ಮಧ್ಯೆ
ಕೋರ್ಟ್‌ ಆದೇಶಗಳು ಬರುವ ಮೊದಲೇ 11ನೇ ತರಗತಿಯ ಪರೀಕ್ಷೆಗಳು ಮುಗಿದುಹೋಗಿವೆ. 

ವಿದ್ಯಾರ್ಥಿಗಳು ತೇರ್ಗಡೆಯಾಗಬೇಕಿಲ್ಲ ಎಂದರೆ ಪರೀಕ್ಷೆಗಳನ್ನು ಯಾಕೆ ನಡೆಸಬೇಕು? ಶಾಲೆಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಪರೀಕ್ಷೆಯನ್ನೇ ಅಸ್ತ್ರವಾಗಿ ಬಳಸಬೇಕೇ ಎಂಬ ಪ್ರಶ್ನೆಗಳೂ ಉದ್ಭವಿಸುತ್ತವೆ. ಸರ್ಕಾರ ಹಾಗೂ ರುಪ್ಸಾ ನಡುವಿನ ಈ ಕಾನೂನು ತಿಕ್ಕಾಟ ಮತ್ತು ಅದಕ್ಕೆ ಸಂಬಂಧಿಸಿದಂತೆ ನಡೆದಿರುವ ಬೆಳವಣಿಗೆಗಳು ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಯಾವ ರೀತಿಯಲ್ಲೂ ನೆರವಿಗೆ ಬರುವಂಥವಲ್ಲ. ಬದಲಿಗೆ, ವ್ಯವಸ್ಥೆಯನ್ನು ಇನ್ನಷ್ಟು
ಗೋಜಲುಗೊಳಿಸುವಂತಹವು. ಬೋರ್ಡ್‌ ಪರೀಕ್ಷೆಗಳ ಸಂಬಂಧ ವಿದ್ಯಾರ್ಥಿಗಳಲ್ಲಿ ಭಯವಿದೆ
ಎಂಬುದನ್ನು ಸುಪ್ರೀಂ ಕೋರ್ಟ್‌ ಗುರುತಿಸಿದ್ದು, ಅಂತಹ ಭಯವನ್ನು ಹೋಗಲಾಡಿಸುವ ಕೆಲಸವನ್ನು ಸರ್ಕಾರ ಮೊದಲು ಮಾಡಬೇಕು. ಪರೀಕ್ಷಾ ಪದ್ಧತಿಯ ಬದಲಾವಣೆಗೆ ಸಂಬಂಧಿಸಿದಂತೆ ಶಿಕ್ಷಣ
ತಜ್ಞರೊಂದಿಗೆ ವಿಸ್ತೃತವಾಗಿ ಚರ್ಚೆ ನಡೆಸಬೇಕು. ಶಾಲಾ ಆಡಳಿತ ಮಂಡಳಿಗಳನ್ನು ವಿಶ್ವಾಸಕ್ಕೆ
ತೆಗೆದುಕೊಳ್ಳಬೇಕು. ಯಾವುದೇ ಗೊಂದಲಕ್ಕೆ ಆಸ್ಪದ ಇಲ್ಲದಂತೆ ಎಲ್ಲರೂ ಕುಳಿತು ನಿರ್ಣಯ ಕೈಗೊಳ್ಳಬೇಕು ಮತ್ತು ಆ ನಿರ್ಣಯದಲ್ಲಿ ವಿದ್ಯಾರ್ಥಿಗಳ ಹಿತವೇ ಮುಖ್ಯವಾಗಿರಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.