ADVERTISEMENT

ಹವಾಮಾನ ವೈಪರೀತ್ಯ ತಡೆಗೆ ತುರ್ತುಕ್ರಮ ಅಗತ್ಯ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2018, 4:39 IST
Last Updated 12 ಅಕ್ಟೋಬರ್ 2018, 4:39 IST
Whether
Whether   

ಭೂಮಿಯ ತಾಪಮಾನ ಏರಿಕೆಯ ನಿಯಂತ್ರಣದ ವಿಚಾರದಲ್ಲಿ ವಿಳಂಬ ಸಲ್ಲದು. ಯಾವಾಗ ಬೇಕಾದರೂ ಸಿಡಿಯಬಹುದಾದ ಬಾಂಬ್ ಆಗಿದೆ ಎಂಬಂತಹ ಸ್ಪಷ್ಟ ಎಚ್ಚರಿಕೆಯನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರ ಸಮಿತಿಯ
(ಐಪಿಸಿಸಿ) ವರದಿ ನೀಡಿದೆ. ಭೂಮಿಯ ಬಿಸಿಯೇರುವಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‍ಗೆ ಸೀಮಿತಗೊಳಿಸಲು ತತ್‍ಕ್ಷಣದ ಕ್ರಿಯೆ ಅವಶ್ಯ.

ಕೈಗಾರಿಕಾಪೂರ್ವ ಕಾಲದಲ್ಲಿದ್ದ ಮಟ್ಟಕ್ಕಿಂತ ಹೆಚ್ಚಿನದಾದ 1.5 ಡಿಗ್ರಿ ಸೆಲ್ಸಿಯಸ್‍ಗಷ್ಟೇ ಸರಾಸರಿ ಜಾಗತಿಕ ಉಷ್ಣಾಂಶ ಏರಿಕೆಯನ್ನು ಕಾಪಾಡಿಕೊಳ್ಳಬೇಕು. ಕೇವಲ ಅರ್ಧ ಡಿಗ್ರಿ ಹೆಚ್ಚಾಗಿ 2 ಡಿಗ್ರಿ ಸೆಲ್ಸಿಯಸ್ ಆದರೂ ಪರಿಣಾಮ ಕೆಟ್ಟದಾಗಿರುತ್ತದೆ. ಅನೇಕ ಕೀಟಗಳು, ಸಸ್ಯಗಳು ಮಾಯವಾಗುತ್ತವೆ. 3 ಡಿಗ್ರಿ ಸೆಲ್ಸಿಯಸ್‍ಗೆ ಏರಿಕೆ ಎಂದರೆ ಮಾಲ್ಡೀವ್ಸ್‌ನಂತಹ ದ್ವೀಪ ರಾಷ್ಟ್ರಗಳು ಮಾಯವಾಗುತ್ತವೆ. ಕೃಷಿ ಹಾಗೂ ಮೀನುಗಾರಿಕೆಯನ್ನು ಜೀವನೋಪಾಯಕ್ಕಾಗಿ ನೆಚ್ಚಿಕೊಂಡಿರುವಂತಹ ಹೆಚ್ಚಿನ ಜನಸಂಖ್ಯೆ ಹೊಂದಿದ ಭಾರತದಂತಹ ರಾಷ್ಟ್ರಗಳ ಮೇಲೆ ಹವಾಮಾನ ಬದಲಾವಣೆ ಬೀರುವ ಪರಿಣಾಮ ವ್ಯಾಪಕವಾದದ್ದು.

ಹವಾಮಾನ ಬದಲಾವಣೆ ಎಂಬುದು ಇಡೀ ಮನುಷ್ಯಕುಲಕ್ಕೇ ದೊಡ್ಡ ಬೆದರಿಕೆ. ಆದರೆ ಇದು ಬರೀ ಬೆದರಿಕೆಯಲ್ಲ. ತಕ್ಷಣದ ವಾಸ್ತವ ಎಂಬುದನ್ನು ಅರಿತುಕೊಳ್ಳಬೇಕು. ಈ ದುರ್ದೆಸೆಯ ಪರಿಣಾಮಗಳು ವಿಶ್ವದಾದ್ಯಂತ ಪಸರಿಸಿಕೊಳ್ಳುತ್ತವೆ. ಹೀಗಾಗಿ, ಭೂ ಬಿಸಿಯ ಕೆಟ್ಟ ಪರಿಣಾಮಗಳನ್ನು ನಾವು ನಿರ್ವಹಿಸಬಹುದಾದ ಮಟ್ಟದಲ್ಲಿ ಇಟ್ಟುಕೊಳ್ಳಬೇಕಾದರೆ, ನಮ್ಮ ಆರ್ಥಿಕತೆ ಹಾಗೂ ಜೀವನ
ವಿಧಾನಗಳನ್ನು ಅಗತ್ಯವಾಗಿ ಬದಲಾಯಿಸಿಕೊಳ್ಳಬೇಕು.

ADVERTISEMENT

ಇದಕ್ಕಾಗಿ ನಮಗಿರುವುದು ಕೇವಲ ಒಂದು ಡಜನ್ ಅಥವಾ ಮತ್ತೊಂದಿಷ್ಟು ವರ್ಷಗಳಿರಬಹುದು ಅಷ್ಟೇ ಎಂದೂ ಈ ವರದಿ ನೀಡಿರುವ ಎಚ್ಚರಿಕೆಯನ್ನು ಕಡೆಗಣಿಸಲಾಗದು. ಇದಕ್ಕಾಗಿ ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದ ಮಹತ್ವಾಕಾಂಕ್ಷೆ ಗುರಿಗಳ ಈಡೇರಿಕೆಗೆ ಜಗತ್ತಿನ ರಾಷ್ಟ್ರಗಳು ಬದ್ಧವಾಗಬೇಕು. ಹವಾಮಾನ ವೈಪರೀತ್ಯ ಪರಿಣಾಮಗಳನ್ನು ತಗ್ಗಿಸುವ ಕ್ರಮಗಳಿಗಾಗಿ ದೇಶಿ ಹಾಗೂ ವಿದೇಶಿ ಮೂಲಗಳಿಂದ ಭಾರಿ ಪ್ರಮಾಣದ ಹಣಹೂಡಿಕೆ ಬೇಕಾಗುತ್ತದೆ. ಅಮೆರಿಕದ ಡೊನಾಲ್ಡ್ ಟ್ರಂಪ್‍ ಸರ್ಕಾರಕ್ಕೆ ಈ ಬಗ್ಗೆ ಸರಿಯಾದ ಅರಿವು ಮೂಡಬೇಕಿದೆ. ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದದಿಂದ ಈಗಾಗಲೇ ಅಮೆರಿಕ ಹೊರಬಂದಿದೆ.ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮೊರಿಸನ್ ಅವರೂ ಪ್ಯಾರಿಸ್ ಒಪ್ಪಂದದಿಂದ ಹೊರಬಂದಿದ್ದಾರೆ. ಹಾಗೆಯೇ ಬ್ರೆಜಿಲ್‍ನ ಹೊಸದಾಗಿ ಆಯ್ಕೆಯಾದ ಅಧ್ಯಕ್ಷರೂ ಪ್ಯಾರಿಸ್ ಒಪ್ಪಂದದಿಂದ ಹೊರಬರಲು ಬಯಸಿದ್ದಾರೆ. ಹವಾಮಾನ ಬದಲಾವಣೆಯ ಪರಿಣಾಮಗಳ ಬಗ್ಗೆ ಹೊಣೆಗಾರಿಕೆ ಹೊರುವುದನ್ನು ನಿರಾಕರಿಸುವಲ್ಲಿನ ಈ ಮನೋಭಾವ ಖಂಡನೀಯ.

ಪಾರದರ್ಶಕ ಹಾಗೂ ಸರಿಯಾದ ಗುರಿ ಇರಿಸಿದ ಹಣಹೂಡಿಕೆಯಿಂದ ಜಾಗತಿಕ ಬಿಸಿ ತಗ್ಗಿಸುವ ಗುರಿಗಳ ಸಾಧನೆ ಸಾಧ್ಯ. ಪ್ಯಾರಿಸ್ ಒಪ್ಪಂದದ ಬದ್ಧತೆಗೆ ಅನುಗುಣವಾಗಿ 2022ರೊಳಗೆ 175 ಗಿಗಾವ್ಯಾಟ್‍ನಷ್ಟು ಮರುಬಳಕೆಯ ಇಂಧನ ಯೋಜನೆಗಳನ್ನುಭಾರತ ಅಳವಡಿಸಿಕೊಳ್ಳಲಿದೆ. ಹವಾಮಾನ ವೈಪರೀತ್ಯ ತಡೆಗೆ ಕೈಗೊಳ್ಳುವ ಕ್ರಮಗಳು ಸುಸ್ಥಿರ ಅಭಿವೃದ್ಧಿಯೆಡೆಗೆ ಹೆಜ್ಜೆ ಹಾಕುವಂತಹವು. ಭಾರತದಲ್ಲಿ ನಗರೀಕರಣದ ಗತಿ ಹೆಚ್ಚಾಗಿದೆ.

ಇಂತಹ ಸಂದರ್ಭದಲ್ಲಿ, ಕಡಿಮೆ ಇಂಗಾಲ ಹಾಗೂ ಸುಸ್ಥಿರ ಅಭಿವೃದ್ಧಿಯೆಡೆ ಹೆಜ್ಜೆ ಹಾಕಲು ಈ ಅವಕಾಶ ಬಳಸಿಕೊಳ್ಳಬೇಕು. ಸಾರಿಗೆ, ಕಟ್ಟಡ ಸೇರಿದಂತೆ ನಗರ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಸುಸ್ಥಿರ ಅಭಿವೃದ್ಧಿ ಹಾದಿಯನ್ನು ತುಳಿಯಬೇಕು. ಭೂಮಿಯ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್‌ ದಾಟಿದರೆ ಭಾರತದಂತಹ ರಾಷ್ಟ್ರಗಳು ಭಾರಿ ಬೆಲೆ ತೆರಬೇಕಾಗುತ್ತದೆ.ಬಿಸಿಗಾಳಿ, ಬರ ಹಾಗೂ ಪ್ರವಾಹದಂತಹ ವಿದ್ಯಮಾನಗಳು ಅಭಿವೃದ್ಧಿಯ ಲಾಭಗಳನ್ನು ಕಸಿಯುತ್ತವೆ ಎಂಬುದು ನಮಗೆ ನೆನಪಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.