ADVERTISEMENT

ಕೋವಿಡ್‌ ತಡೆ ಮಾರ್ಗಸೂಚಿ ಪಾಲನೆ: ಪ್ರಧಾನಿ ಎಚ್ಚರಿಕೆ ಜನರಿಗೆ ಮನದಟ್ಟಾಗಲಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 3:38 IST
Last Updated 22 ಅಕ್ಟೋಬರ್ 2020, 3:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೋವಿಡ್‌ ಪಿಡುಗಿನ ನಡುವೆಯೇ ಹಬ್ಬಗಳ ಋತು ಆರಂಭವಾಗಿದೆ. ನವರಾತ್ರಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹಲವು ಹಬ್ಬಗಳ ಸಂಭ್ರಮ ಇದೆ. ದೀಪಾವಳಿ, ಈದ್ ಮಿಲಾದ್‌, ಕ್ರಿಸ್‌ಮಸ್‌ ಬರಲಿವೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರದ ಏಳೆಂಟು ತಿಂಗಳಲ್ಲಿ ಬಂದ ಯಾವ ಹಬ್ಬವೂ ವಿಜೃಂಭಣೆಯಿಂದ ಆಚರಣೆ ಆಗಲಿಲ್ಲ. ಕೊರೊನಾ ಸೋಂಕು ಹರಡುವ ಭಯ ಮತ್ತು ಲಾಕ್‌ಡೌನ್‌ ಅದಕ್ಕೆ ಕಾರಣವಾಗಿತ್ತು. ಈಗ, ಲಾಕ್‌ಡೌನ್‌ ಇಲ್ಲ. ಪ್ರತೀ ದಿನ ಪತ್ತೆಯಾಗುತ್ತಿರುವ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಜನರಲ್ಲಿ ನಿರಾಳ ಭಾವ ಮೂಡಿರಲೂಬಹುದು. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಂಗಳವಾರ ಸಂಜೆ ಮಾತನಾಡಿ ಎಚ್ಚರಿಕೆ ನೀಡಿದ್ದಾರೆ. ಲಾಕ್‌ಡೌನ್‌ ಇಲ್ಲದಿದ್ದರೂ ಕೊರೊನಾ ನಮ್ಮ ನಡುವೆಯೇ ಇದೆ, ಕೋವಿಡ್‌ಗೆ ಲಸಿಕೆಯಾಗಲೀ ಔಷಧವಾಗಲೀ ಇಲ್ಲ, ಆದ್ದರಿಂದ ಜನರು ತಮ್ಮ ಎಚ್ಚರ ಬಿಡಲೇಬಾರದು ಎಂದಿದ್ದಾರೆ. ನಮ್ಮ ನಿರ್ಲಕ್ಷ್ಯದಿಂದಾಗಿ ಹಬ್ಬದ ಸಂಭ್ರಮವು ದುಃಖವಾಗಿ ಬದಲಾಗಬಹುದು ಎಂಬ ಕಿವಿಮಾತನ್ನೂ ಹೇಳಿದ್ದಾರೆ. ಜನರು ಮಾಸ್ಕ್‌ ಧರಿಸುತ್ತಿಲ್ಲ, ಪರಸ್ಪರರಿಂದ ಅಂತರ ಕಾಯ್ದುಕೊಳ್ಳುತ್ತಿಲ್ಲ ಎಂಬ ವಿಚಾರವನ್ನು ಬಹಳ ಕಳವಳದಿಂದ ಪ್ರಧಾನಿಯವರು ಹೇಳಿದ್ದಾರೆ. ಕೋವಿಡ್‌ ಮಾರ್ಗಸೂಚಿಗಳನ್ನು ಜನರು ಉಲ್ಲಂಘಿಸುವ ವಿಡಿಯೊಗಳನ್ನು ನೋಡಿದ್ದಾಗಿ ಅವರು ತಿಳಿಸಿದ್ದಾರೆ. ಜನರು ಮಾಸ್ಕ್ ಧರಿಸದೆ ಅಡ್ಡಾಡುತ್ತಿರುವುದು, ಅಂತರ ಕಾಯ್ದುಕೊಳ್ಳದೇ ಇರುವುದು ಎಲ್ಲ ಕಡೆ ಕಂಡುಬರುತ್ತಿರುವ ದೃಶ್ಯ. ಮಾರ್ಗಸೂಚಿಯನ್ನು ಪಾಲಿಸಿ, ಎಚ್ಚರ ವಹಿಸಬೇಕಾಗಿರುವುದು ಎಲ್ಲರ ಕರ್ತವ್ಯ. ಲಸಿಕೆ ಮತ್ತು ಔಷಧ ಇಲ್ಲದ ರೋಗವು ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ವೈಯಕ್ತಿಕ ಮತ್ತು ಸಾಮುದಾಯಿಕ ಹೊಣೆಗಾರಿಕೆ. ಈ ವಿಚಾರಕ್ಕೆ ಪ್ರಧಾನಿ ಒತ್ತು ಕೊಟ್ಟು ಮಾತನಾಡಿದ್ದಾರೆ. ಮಾರ್ಗಸೂಚಿಗಳನ್ನು ಪಾಲಿಸದ ವ್ಯಕ್ತಿಗಳು ತಮ್ಮ ಜೀವವನ್ನು ಮಾತ್ರವಲ್ಲದೆ ಕುಟುಂಬದಲ್ಲಿರುವ ಮಕ್ಕಳು ಮತ್ತು ಹಿರಿಯರ ಜೀವವನ್ನು ಕೂಡ ಗಂಡಾಂತರಕ್ಕೆ ತಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ಈ ಎಚ್ಚರಿಕೆ ಯನ್ನು ಜನರು ಅತೀವ ಗಂಭೀರವಾಗಿ ಪರಿಗಣಿ ಸಲೇಬೇಕು. ಹಬ್ಬಗಳೆಂದರೆ ಎಲ್ಲರೂ ಕೂಡಿ ನಲಿಯುವ ಸಂದರ್ಭ ಎಂಬುದು ನಿಜ. ಆದರೆ, ಯಾವ ಹಬ್ಬವೂ ಜೀವಕ್ಕಿಂತ ಮಿಗಿಲಾದುದಲ್ಲ ಎಂಬ ಎಚ್ಚರ ನಮ್ಮಲ್ಲಿ ಇರಲೇಬೇಕು. ಮುಂದಿನ ಕೆಲ ತಿಂಗಳಲ್ಲಿ ಕೋವಿಡ್‌ಗೆ ಲಸಿಕೆ ಬರುವ ನಿರೀಕ್ಷೆ ಈಗ ಬಲಗೊಂಡಿದೆ. ಹಾಗಾಗಿ, ಲಸಿಕೆ ಲಭ್ಯವಾದ ಮೇಲೆ ಹಬ್ಬಗಳನ್ನು ಜೋರಾಗಿಯೇ ಆಚರಿಸೋಣ. ಈ ವರ್ಷದ ಹಬ್ಬಗಳ ಸಂಭ್ರಮವನ್ನು ಮನೆಗೆ ಸೀಮಿತಗೊಳಿಸೋಣ.

ಸಾಂಕ್ರಾಮಿಕವು ಕಾಣಿಸಿಕೊಂಡ ಬಳಿಕ ಪ್ರಧಾನಿಯವರು ದೇಶದ ಜನರನ್ನು ಉದ್ದೇಶಿಸಿ ಮಾಡಿದ ಏಳನೇ ಭಾಷಣ ಇದು. ಪ್ರಧಾನಿ ಭಾಷಣ ಮಾಡಲಿದ್ದಾರೆ ಎಂಬ ಪ್ರಕಟಣೆ ಹೊರಬಿದ್ದಾಗಲೇ ಜನರ ನಿರೀಕ್ಷೆಗಳು ಗರಿಗೆದರಿದ್ದವು. ಕೋವಿಡ್‌ ಮತ್ತು ಲಾಕ್‌ಡೌನ್‌ನ ಪರಿಣಾಮವಾಗಿ ದೊಡ್ಡ ಸಂಖ್ಯೆಯ ಜನರು ಇನ್ನೂ ಸಂಕಷ್ಟದಲ್ಲಿದ್ದಾರೆ. ಹಬ್ಬದ ಸಂದರ್ಭದಲ್ಲಿ ಯಾವುದಾದರೂ ಕೊಡುಗೆ ಅಥವಾ ರಿಯಾಯಿತಿಯನ್ನು ಪ್ರಧಾನಿ ಪ್ರಕಟಿಸಬಹುದು ಎಂಬ ಆಸೆ ಹೊಂದಿದ್ದವರೂ ಇದ್ದರು. ಕೋವಿಡ್‌ನಿಂದಾದ ಆರ್ಥಿಕ ಹಿನ್ನಡೆಯ ಪರಿಹಾರಕ್ಕೆ ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದ ಪ್ಯಾಕೇಜ್‌ಗಳನ್ನೂ ಪ್ರಕಟಿಸಲಾಗಿದೆ. ಸರ್ಕಾರ ಕೈಗೊಂಡ ಈ ಕ್ರಮಗಳ ಪರಿಣಾಮ ಏನಾಗಿದೆ, ಎಷ್ಟು ಜನರಿಗೆ ಪ್ರಯೋಜನವಾಗಿದೆ, ಆರ್ಥಿಕ ಚಟುವಟಿಕೆ ಯಾವ ಮಟ್ಟದಲ್ಲಿ ಚಿಗುರಿಕೊಂಡಿದೆ ಮತ್ತು ಅರ್ಥ ವ್ಯವಸ್ಥೆಯು ಮತ್ತೆ ಹಳಿಗೆ ಬರಲು ತಮ್ಮ ಯೋಜನೆಗಳೇನು ಎಂಬುದನ್ನು ಮೋದಿಯವರು ಜನರ ಮುಂದಿಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಹೊಸ ಕೊಡುಗೆ ಅಥವಾ ರಿಯಾಯಿತಿಯನ್ನು ಎದುರು ನೋಡುತ್ತಿದ್ದ ವರಿಗೂ ನಿರಾಸೆಯಾಗಿದೆ. ಇಡೀ ಜಗತ್ತನ್ನು ಇನ್ನಿಲ್ಲದಂತೆ ಕಾಡಿದ ಪಿಡುಗಿನ ಪರಿಣಾಮದಿಂದ ಜನರು ಹೊರಗೆ ಬರಲು ಉಪ‍ದೇಶ, ಎಚ್ಚರಿಕೆಗಳಷ್ಟೇ ಸಾಕಾಗಲಿಕ್ಕಿಲ್ಲ. ಕಳೆದುಕೊಂಡದ್ದನ್ನೆಲ್ಲ ಮತ್ತೆ ಸೃಷ್ಟಿಸಿಕೊಂಡು ಜನರು ಮತ್ತು ದೇಶ ಮುಂದೆ ಸಾಗಲು ವಾಸ್ತವದ ನೆಲೆಗಟ್ಟಿನಲ್ಲಿ, ಗಟ್ಟಿ ಚಿಂತನೆಯಲ್ಲಿ ರೂಪುಗೊಂಡ ಯೋಜನೆಗಳು ಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.