ADVERTISEMENT

ಸಂಪಾದಕೀಯ | ಕೋವಿಡ್‌ ಮಾರ್ಗಸೂಚಿ: ಸರ್ಕಾರದ ನಿಲುವು ಮತ್ತೆ ಮತ್ತೆ ಬದಲಾಗುವುದೇಕೆ?

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 19:30 IST
Last Updated 5 ಏಪ್ರಿಲ್ 2021, 19:30 IST
   

ಕೋವಿಡ್‌ ಮಾರ್ಗಸೂಚಿ ಜಾರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮಾತು ಮತ್ತು ನಡವಳಿಕೆಗೆ ತಾಳಮೇಳ ಇರುವಂತೆ ಕಾಣಿಸುತ್ತಿಲ್ಲ. ಒಂದೆಡೆ ಮಾರ್ಗಸೂಚಿಯ ನಿರಂತರ ಪರಿಷ್ಕರಣೆ; ಮತ್ತೊಂದೆಡೆ, ಪ್ರಜಾಪ್ರತಿನಿಧಿಗಳಿಂದಲೇ ಮಾರ್ಗಸೂಚಿಯ ಉಲ್ಲಂಘನೆ. ಸಿನಿಮಾ ಮಂದಿರಗಳಲ್ಲಿ ಶೇ 50ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದ ಸರ್ಕಾರವು ಅದನ್ನು ಮರುದಿನವೇ ಪರಿಷ್ಕರಿಸಿ ಏಪ್ರಿಲ್‌ 7ರವರೆಗೆ ಯಥಾಸ್ಥಿತಿ ಮುಂದುವರಿಸಿದೆ.

ಜಿಮ್‌ಗಳ ಕಾರ್ಯನಿರ್ವಹಣೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಿದ್ದ ಸರ್ಕಾರ, ಪರಿಷ್ಕೃತ ಆದೇಶದಲ್ಲಿ ಗರಿಷ್ಠ ಸಾಮರ್ಥ್ಯದ ಶೇ 50ರಷ್ಟು ಪ್ರವೇಶಕ್ಕೆ ಅನುಮತಿ ನೀಡಿದೆ. ಕೋವಿಡ್‌ ಮಾರ್ಗಸೂಚಿಗೆ ಸಂಬಂಧಿಸಿದಂತೆ ಸರ್ಕಾರದ ಈ ಗೊಂದಲ ಇಂದಿನದೇನೂ ಅಲ್ಲ. ಸಭಾಂಗಣದೊಳಗೆ ನಡೆಯುವ ಕಾರ್ಯಕ್ರಮಗಳಿಗೆ ಹಲವು ನಿರ್ಬಂಧ ಗಳನ್ನು ಹೇರಿದ್ದ ಸರ್ಕಾರ, ಹೊರಾಂಗಣ ಕಾರ್ಯಕ್ರಮಗಳ ಬಗ್ಗೆ ಉದಾರವಾಗಿತ್ತು.

ಕಳೆದ ವರ್ಷ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಆರಂಭದಲ್ಲಿ ಅವಕಾಶವನ್ನು ನಿರಾಕರಿಸಿ, ನಂತರ ಷರತ್ತುಬದ್ಧ ಆಚರಣೆಗೆ ಅವಕಾಶ ಕಲ್ಪಿಸಿತ್ತು. ಮಾರ್ಗಸೂಚಿ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಗೊಂದಲಗಳನ್ನು ಗಮನಿಸಿದರೆ, ಪರಿಣಾಮದ ಬಗ್ಗೆ ಯೋಚಿಸದೆ ವಿವೇಚನಾರಹಿತವಾಗಿ ನಿರ್ಧಾರ ಕೈಗೊಳ್ಳುತ್ತಿರುವಂತೆ ಕಾಣಿಸುತ್ತದೆ. ತನಗೇ ಗೊಂದಲ ಇರುವ ಮಾರ್ಗಸೂಚಿಯನ್ನು ಜನ ಪಾಲಿಸಬೇಕೆಂದು ಸರ್ಕಾರ ನಿರೀಕ್ಷಿಸುತ್ತಿದೆ.

ADVERTISEMENT

ಈ ಗೊಂದಲಗಳೊಂದಿಗೆ ಸರ್ಕಾರ ವಿಧಿಸಿದ ನಿರ್ಬಂಧ ಗಳನ್ನು ಜನಪ್ರತಿನಿಧಿಗಳೇ ಮುರಿಯುತ್ತಿರುವ ವಿರೋಧಾಭಾಸವನ್ನೂ ನೋಡುತ್ತಿದ್ದೇವೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಭಾಗಿಯಾಗಿದ್ದ ಕಾಗಿನೆಲೆ ಕನಕ‍‍ಪೀಠದ ಹರಿಹರ ಬೆಳ್ಳೂಡಿ ಶಾಖಾಮಠದ ಕಾರ್ಯಕ್ರಮದಲ್ಲಿ ಕೋವಿಡ್‌ ಮಾರ್ಗಸೂಚಿ ಪಾಲನೆ ಆಗಿಲ್ಲದಿರುವು ದನ್ನು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಛಾಯಾಚಿತ್ರಗಳೇ ಹೇಳುವಂತಿವೆ.

ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ, ತಮ್ಮ ತಂದೆ–ತಾಯಿ ಕೊರೊನಾ ಸೋಂಕಿಗೆ ಒಳಗಾಗಿ ರುವುದರಿಂದ ಕ್ವಾರಂಟೈನ್‌ನಲ್ಲಿ ಇರುವುದಾಗಿ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪಕ್ಷದ ಕಾರ್ಯಕರ್ತರ ಸಭೆಯೊಂದರಲ್ಲಿ ಭಾಗವಹಿಸಿದ್ದಾರೆ. ಕೋವಿಡ್‌ ಮಾರ್ಗಸೂಚಿ ಅನುಸರಿಸುವ ದಿಸೆಯಲ್ಲಿ ಸಾರ್ವಜನಿಕರಿಗೆ ಮೇಲ್ಪಂಕ್ತಿಯಾಗಬೇಕಾಗಿದ್ದ ಜನಪ್ರತಿನಿಧಿಗಳೇ ಬೇಕಾಬಿಟ್ಟಿಯಾಗಿ ನಡೆದುಕೊಂಡಿರುವ ಅನೇಕ
ನಿದರ್ಶನಗಳಿವೆ.

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳುತ್ತಲೇ ಇದ್ದಾರೆ. ಆದರೆ, ಅವರು ಭಾಗವಹಿಸಿರುವ ಕಾರ್ಯಕ್ರಮಗಳಲ್ಲೇ ಮಾಸ್ಕ್‌ ಧರಿಸದೆ ಇರುವವರು ಕಾಣಿಸಿಕೊಂಡಿದ್ದಾರೆ. ಮಾಸ್ಕ್‌ ಧರಿಸದಿರುವುದಕ್ಕೆ ಜನಸಾಮಾನ್ಯರ ಮೇಲೆ ಕ್ರಮ ಜರುಗಿಸಿರುವುದನ್ನು ಬಿಟ್ಟರೆ, ರಾಜಕಾರಣಿಗಳು ಅಥವಾ ಪ್ರಭಾವಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲರು ತಾಲ್ಲೂಕು ಆರೋಗ್ಯಾಧಿಕಾರಿಯನ್ನು ತಮ್ಮ ಮನೆಗೆ ಕರೆಸಿಕೊಂಡು ಲಸಿಕೆ ಹಾಕಿಸಿಕೊಂಡಿದ್ದರು.

ಆ ಪ್ರಕರಣದಲ್ಲಿ ಆರೋಗ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಸಚಿವರ ಮೇಲಲ್ಲ. ‍ಪ್ರಭಾವಿಗಳಾದರೆ ತಪ್ಪು ಮಾಡಿದರೂ ಅದರಿಂದ ಪಾರಾಗಬಹುದು ಎನ್ನುವುದನ್ನು ಇಂತಹ ಪ್ರಕರಣಗಳು ಸೂಚಿಸುತ್ತವೆ. ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಪ್ರತ್ಯೇಕ ಕಾನೂನುಗಳಿವೆಯೇ ಎಂದು ಹೈಕೋರ್ಟ್‌ ಪ್ರಶ್ನಿಸಿದ ನಂತರವೂ ಕಾನೂನು ಪಾಲನೆಯಲ್ಲಿನ ತಾರತಮ್ಯ ಧೋರಣೆ ಮುಂದುವರಿಯುತ್ತಲೇ ಇದೆ. ಕೊರೊನಾದಿಂದ ಮಾತ್ರವಲ್ಲ, ಜನಪ್ರತಿನಿಧಿಗಳಬೇಜವಾಬ್ದಾರಿ ನಡವಳಿಕೆಯಿಂದ ಆಗಬಹುದಾದ ಅಪಾಯಗಳಿಂದಲೂ ಜನರನ್ನು ಕಾಪಾಡಬೇಕಾಗಿದೆ. ಸಾರ್ವಜನಿಕರಲ್ಲಿಯೂ ಕೆಲವರು ಕೋವಿಡ್‌ ಮಾರ್ಗಸೂಚಿಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ಸರ್ಕಾರದ ಎಚ್ಚರಿಕೆಯ ನಡುವೆಯೂ ಕಲ್ಯಾಣ ಮಂಟಪಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದು ಮಾತ್ರವಲ್ಲ; ಮಾಸ್ಕ್‌ ಧರಿಸುವ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಪ್ರಾಥಮಿಕ ಎಚ್ಚರಿಕೆಗಳನ್ನೂ ಅನುಸರಿಸುತ್ತಿಲ್ಲ. ಮಾರುಕಟ್ಟೆ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕಂಡುಬರುತ್ತಿರುವ ಜನಜಂಗುಳಿಗೂ ಕೊರೊನಾ ಭಯ ಇದ್ದಂತಿಲ್ಲ. ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ಹೆಚ್ಚು ಜನರು ಒಂದೆಡೆ ಸೇರದಂತೆ ನೋಡಿಕೊಳ್ಳುವುದಾಗಿ ಸರ್ಕಾರ ಹೇಳಿದೆ. ಆದರೆ, ರೋಡ್‌ ಶೋಗಳು ಸೇರಿದಂತೆ ಜನರನ್ನು ಸೇರಿಸುವ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಈ ನಿರ್ಲಕ್ಷ್ಯ ಮುಂದುವರಿದರೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಹು ದೊಡ್ಡ ಅಪಾಯವನ್ನು ರಾಜ್ಯ ಎದುರಿಸಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.