ADVERTISEMENT

ಸಂಪಾದಕೀಯ: ಕೋವಿಡ್ ಪರೀಕ್ಷೆ- ಉದಾಸೀನ ಬೇಡ, ಆರ್ಥಿಕ ಚಟುವಟಿಕೆಗೆ ತಡೆ ಸಲ್ಲದು

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 19:31 IST
Last Updated 23 ಜನವರಿ 2022, 19:31 IST
ಸಂಪಾದಕೀಯ
ಸಂಪಾದಕೀಯ   

ಕೋವಿಡ್ ನಿರ್ವಹಣೆಯ ವಿಚಾರವಾಗಿ ಕೆಲವು ದಿನಗಳಿಂದ ಪರಸ್ಪರ ವಿರೋಧಾಭಾಸ ಎಂಬಂತಹ ಸೂಚನೆಗಳು ಬರುತ್ತಿವೆ. ದೇಶದಲ್ಲಿ ಈಚೆಗೆ ಕೆಲವು ದಿನಗಳಿಂದ ದಿನವೊಂದಕ್ಕೆ ಮೂರು ಲಕ್ಷಕ್ಕಿಂತ ಹೆಚ್ಚಿನ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ದೇಶದ ಕೆಲವು ಪ್ರದೇಶಗಳಲ್ಲಿ ಹೊಸ ಪ್ರಕರಣಗಳ ಪ್ರಮಾಣದಲ್ಲಿ ಹೆಚ್ಚಳ ಆಗುತ್ತಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪರೀಕ್ಷೆಗೆ ಗುರಿಪಡಿಸಿದ ಜನರಲ್ಲಿ ಕೋವಿಡ್ ದೃಢಪಡುವಿಕೆ ‍ಪ್ರಮಾಣದಲ್ಲಿ ತುಸು ಇಳಿಕೆ ಕಂಡುಬಂದಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಮುಂದಿನ 14 ದಿನಗಳಲ್ಲಿ ಉತ್ತುಂಗಕ್ಕೆ ತಲುಪಲಿದೆ ಎಂಬ ಮಾತನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಮದ್ರಾಸ್) ವರದಿಯೊಂದು ಹೇಳಿದೆ. ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿರುವ ಕೇರಳದಲ್ಲಿ, ಪರೀಕ್ಷೆಗೆ ಒಳಗಾದವರಲ್ಲಿ ಕೋವಿಡ್ ದೃಢಪಡುತ್ತಿರುವ ಪ್ರಮಾಣವು ಶೇ 40ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ. ಕೇರಳದಲ್ಲಿ ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಪ್ರಮಾಣ ಕೂಡ ಹೆಚ್ಚು ಇದೆ. ಅಂದರೆ, ದೇಶದಲ್ಲಿ ಕೆಲವು ದಿನಗಳಲ್ಲಿ ವರದಿಯಾದ ಕೋವಿಡ್ಹೊಸ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದ್ದು, ಪರೀಕ್ಷೆಗಳನ್ನು ಕಡಿಮೆಗೊಳಿಸಿದ್ದರಿಂದ ಆಗಿರಬಹುದು ಎಂದು ಭಾವಿಸಬಹುದು. ಪರೀಕ್ಷೆಗಳ ಸಂಖ್ಯೆ ದೇಶದಲ್ಲಿ ಆಗಾಗ ಕಡಿಮೆಯಾಗಿದ್ದಿದೆ. ಅಲ್ಲದೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಈಚೆಗೆ ಹೊರಡಿಸಿದ ಮಾರ್ಗಸೂಚಿಯೊಂದರಲ್ಲಿ ಇದ್ದ ನಿರ್ದೇಶನಗಳು ಕೂಡ ಪರೀಕ್ಷೆಯ ಸಂಖ್ಯೆ ಕಡಿಮೆ ಆಗಿರಲಿಕ್ಕೆ ಕಾರಣವಾಗಿರಬಹುದು. ಕೋವಿಡ್ ರೋಗಿಗಳ ಸಂಪರ್ಕಕ್ಕೆ ಬಂದಿರುವ, ರೋಗ ಲಕ್ಷಣಗಳು ಇಲ್ಲದವರನ್ನು ಪರೀಕ್ಷೆಗೆ ಒಳಪ‍ಡಿಸುವ ಅಗತ್ಯ ಇಲ್ಲ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿತ್ತು. ಈ ಮಾರ್ಗಸೂಚಿ ಹೊರಬಿದ್ದ ನಂತರದಲ್ಲಿ ಹಲವು ಕಡೆಗಳಲ್ಲಿ ಪರೀಕ್ಷೆಗಳ ಸಂಖ್ಯೆಯಲ್ಲಿ ಇಳಿಕೆ ಆಗಿತ್ತು.

ಆದರೆ, ಕೇಂದ್ರ ಆರೋಗ್ಯ ಸಚಿವಾಲಯವು ಪರೀಕ್ಷೆಯಲ್ಲಿ ಉದಾಸೀನ ಧೋರಣೆ ತಳೆಯುವುದು ಬೇಡ ಎಂದು ಎಚ್ಚರಿಸಿದೆ. ಸಚಿವಾಲಯ ಹೇಳಿರುವುದು ಸ್ವಾಗತಾರ್ಹ. ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿಯು ಎಲ್ಲ ರಾಜ್ಯಗಳಿಗೂ ಈ ವಿಚಾರವಾಗಿ ಪತ್ರ ಬರೆದಿದ್ದಾರೆ. ಆದರೆ, ಈ ಪತ್ರವು ಐಸಿಎಂಆರ್ ಮಾರ್ಗಸೂಚಿಗಳನ್ನು ಕೂಡ ಅನುಮೋದಿಸಿರುವ ಕಾರಣ, ಪತ್ರದ ಬಗ್ಗೆ ಇನ್ನಷ್ಟು ಸ್ಪಷ್ಟತೆಯ ಅಗತ್ಯ ಇದೆ. ಸ್ಪಷ್ಟತೆ ಇಲ್ಲದ ರೀತಿಯಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಬಾರದು. ಮಾರ್ಗ ಸೂಚಿಗಳು ಹಲವು ರೀತಿಗಳಲ್ಲಿ ವ್ಯಾಖ್ಯಾನಿಸ ಬಹುದಾದ ರೀತಿಯಲ್ಲಿಯೂ ಇರಬಾರದು. ಸೋಂಕನ್ನು ಆರಂಭಿಕ ಹಂತದಲ್ಲಿ ಗುರುತಿಸುವುದೇ ಪರೀಕ್ಷೆಯ ಉದ್ದೇಶ. ಕೊರೊನಾ ವೈರಾಣುವಿನ ರೂಪಾಂತರಿ ತಳಿ ಓಮೈಕ್ರಾನ್‌ನ ಪರಿಣಾಮವನ್ನು ಅರ್ಥ ಮಾಡಿಕೊಳ್ಳುವ ಅತ್ಯಂತ ಪ್ರಮುಖ ಮಾರ್ಗವೆಂದರೆ, ಆಸ್ಪತ್ರೆಗಳಿಗೆ ದಾಖಲಾಗುವವರ ಪ್ರಮಾಣ ಮತ್ತು ಮರಣ ಪ್ರಮಾಣದ ಮೇಲೆ ಗಮನ ಇರಿಸುವುದು. ಇದರ ಜೊತೆಯಲ್ಲಿಯೇ, ಸಾಂಕ್ರಾಮಿಕದ ಹೆಜ್ಜೆ ಯಾವ ರೀತಿಯಲ್ಲಿ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಪರೀಕ್ಷೆಗಳು ದೊಡ್ಡ ಮಟ್ಟದಲ್ಲಿ ನೆರವಿಗೆ ಬರುತ್ತವೆ. ಕೋವಿಡ್‌ ಕ್ಲಸ್ಟರ್‌ಗಳನ್ನು, ವ್ಯಾಪಕವಾಗಿ ಹರಡಿರುವ ಪ್ರದೇಶಗಳನ್ನು ಗುರುತಿಸಲು ಪರೀಕ್ಷೆಗಳು ನೆರವಾಗುತ್ತವೆ. ಪರೀಕ್ಷೆಗಳ ಮೂಲಕ ಇಂಥ ಪ್ರದೇಶಗಳನ್ನು ಗುರುತಿಸಿದರೆ, ಸಾಂಕ್ರಾಮಿಕ ಇನ್ನಷ್ಟು ಹರಡುವುದನ್ನು ತಡೆಯಬಹುದು. ಇದು ಸಾವಿನ ಪ್ರಮಾಣವನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ಹಾಗಾಗಿ, ಪರೀಕ್ಷೆಯ ವಿಚಾರದಲ್ಲಿ ಉದಾಸೀನ ಬೇಡವೇ ಬೇಡ.

ಕೋವಿಡ್ ನಿಭಾಯಿಸುವ ವಿಚಾರದಲ್ಲಿ ಮಹತ್ವದ ನಿರ್ಣಯವೊಂದನ್ನು ಕೈಗೊಂಡಿರುವ ರಾಜ್ಯ ಸರ್ಕಾರವು ವಾರಾಂತ್ಯದ ಕರ್ಫ್ಯೂವನ್ನು ತೆಗೆದುಹಾಕಿದೆ. ಇದು ಸ್ವಾಗತಾರ್ಹ ಕ್ರಮ. ಜನರ ಜೀವವನ್ನೂ ಜೀವನೋಪಾಯವನ್ನೂ ಕಾಪಾಡಬೇಕು ಎಂಬುದಕ್ಕೆ ಇದು ಪೂರಕವಾಗಿ ಇದೆ. ಕೋವಿಡ್‌ಸಾಂಕ್ರಾಮಿಕವನ್ನು ನಿಗ್ರಹದಲ್ಲಿ ಇರಿಸಿಕೊಂಡೇ ವಾಣಿಜ್ಯ ಚಟುವಟಿಕೆಗಳು ಹಾಗೂ ಮನುಷ್ಯನ ಇತರ ದೈನಂದಿನ ಚಟುವಟಿಕೆಗಳು ಸಾಗುವಂತೆ ಮಾಡಬೇಕು. ಆ ದಿಸೆಯಲ್ಲಿ, ವಾರಾಂತ್ಯದ ಕರ್ಫ್ಯೂವನ್ನು ತೆಗೆದುಹಾಕಿದ ಕ್ರಮ ವರ್ತಕ ಸಮುದಾಯಕ್ಕೆ ಸಮಾಧಾನ ತರುವಂಥದ್ದು. ಲಾಕ್‌ಡೌನ್‌ ಜಾರಿಗೆ ತರುವುದು, ಒಂದಿಷ್ಟು ಅಂಗಡಿಗಳನ್ನು ಮಾತ್ರ ಮುಚ್ಚಿಸುವುದು, ವಾರಾಂತ್ಯದ ಅವಧಿಯಲ್ಲಿ ಜನ ಮನೆಗಳಿಂದ ಹೊರಗೆ ಬರಬಾರದು ಎನ್ನುವುದು... ಇಂತಹ ಕ್ರಮಗಳಿಂದ ಕೋವಿಡ್ ನಿಗ್ರಹ ಸಾಧ್ಯವಿಲ್ಲ ಎನ್ನುವುದು ಸರಿಸುಮಾರು ಎರಡು ವರ್ಷಗಳ ಅವಧಿಯಲ್ಲಿ ಗೊತ್ತಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಕಾಯಿಲೆ ನಿಗ್ರಹ ಕಾರ್ಯತಂತ್ರವು ಆರ್ಥಿಕ ಚಟುವಟಿಕೆಗಳಿಗೆ ತಡೆ ಒಡ್ಡುವಂಥದ್ದು ಆಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಯನ್ನು ಹೆಚ್ಚಿಸಬೇಕು, ಕೋವಿಡ್‌ ಪತ್ತೆಯಾದವರಿಗೆ ಸೂಕ್ತ ಚಿಕಿತ್ಸೆ ಒದಗಿಸ ಬೇಕು. ಅದಕ್ಕೆ ಬೇಕಾದ ವೈದ್ಯಕೀಯ ಸೌಕರ್ಯ ಎಲ್ಲೆಡೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇವು ಮಾತ್ರ ಸರ್ಕಾರಗಳಿಗೆ ಆದ್ಯತೆಯ ಕೆಲಸ ಆಗಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.