ADVERTISEMENT

ಸಂಪಾದಕೀಯ | ಆರ್ಥಿಕತೆಯಲ್ಲಿ ಕಾಣದ ಚೇತರಿಕೆ ಹುಸಿಯಾದ ಆಶಾಭಾವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 20:00 IST
Last Updated 13 ಫೆಬ್ರುವರಿ 2020, 20:00 IST
ಆರ್ಥಿಕ ಹಿಂಜರಿತ
ಆರ್ಥಿಕ ಹಿಂಜರಿತ   

ಹನ್ನೊಂದು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ (ಶೇ5) ಕುಸಿದಿರುವ ಆರ್ಥಿಕತೆಯು ಏದುಸಿರು ಬಿಡುತ್ತಿರುವಾಗಲೇ ಇನ್ನೆರಡು ಹೊಸ ಹೊಡೆತಗಳು ಬಿದ್ದಿವೆ. ಕಾರ್ಖಾನೆಗಳಲ್ಲಿ ಡಿಸೆಂಬರ್‌ನಲ್ಲಿನ ಉತ್ಪಾದನೆಯು (ಐಐಪಿ) ಶೇ 0.3ಕ್ಕೆ ಕುಸಿದಿದೆ. 5 ತಿಂಗಳಲ್ಲಿನ 4ನೇ ಕುಸಿತ ಇದಾಗಿದೆ. ಕೈಗಾರಿಕೆ ಉತ್ಪಾದನಾ ಚಟುವಟಿಕೆಗಳು ‍ಪುನಶ್ಚೇತನಗೊಳ್ಳಲಿವೆ ಎನ್ನುವ ಆಶಾಭಾವವನ್ನು ಈ ಬೆಳವಣಿಗೆಯು ಹುಸಿಗೊಳಿಸಿದೆ.

ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ಶೇ 7.59ಕ್ಕೆ ಜಿಗಿದು ಐದೂವರೆ ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಆರ್ಥಿಕತೆಯ ಏಳು ವಲಯಗಳಲ್ಲಿ ಚೇತರಿಕೆಯ ಲಕ್ಷಣಗಳು ಗೋಚರಿಸುತ್ತಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದರು. ಆದರೆ ವಸ್ತುಸ್ಥಿತಿ ಬೇರೆಯೇ ಆಗಿದೆ. ಹಣದುಬ್ಬರದ ಏರಿಕೆಯ ಬೆನ್ನಲ್ಲೇ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್‌ (ಎಲ್‌ಪಿಜಿ) ಬೆಲೆ ಹಠಾತ್ತನೆ ₹144ರಷ್ಟು ಹೆಚ್ಚಾಗಿದೆ. ಸಬ್ಸಿಡಿ ಬಿಟ್ಟುಕೊಟ್ಟಿರುವ ಬಳಕೆದಾರರ ಕಿಸೆಗೆ ಇದರಿಂದಾಗಿ ಕತ್ತರಿ ಬಿದ್ದಿದೆ. ಕೈಗಾರಿಕಾ ಉತ್ಪಾದನೆಯು ಈಗಲೂ ಮಂದಗತಿಯಲ್ಲಿ ಇದೆ. ಚೇತರಿಸಿಕೊಳ್ಳುವ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತಿಲ್ಲ.

ಚೀನಾದ ‘ಕೋವಿದ್‌–19’ ವೈರಸ್‌ ಸೃಷ್ಟಿಸಿರುವ ತಲ್ಲಣದಿಂದಾಗಿ ಬಿಡಿಭಾಗ ಮತ್ತಿತರ ಸರಕು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ದೇಶಿ ಎಲೆಕ್ಟ್ರಾನಿಕ್ ಮತ್ತು ವಾಹನ ತಯಾರಿಕೆ ಉದ್ದಿಮೆಗಳು ಬಾಧಿತವಾಗಲಿವೆ. ಕೈಗಾರಿಕಾ ವಲಯದ ಪಾಲಿಗೆ ಇದೊಂದು ಹೊಸ ಸವಾಲು. 2019ರ ಏಪ್ರಿಲ್‌ನಿಂದ ಈ ಜನವರಿ ಅವಧಿಯಲ್ಲಿನ ಸರಾಸರಿ ಹಣದುಬ್ಬರವು ಮೂರು ವರ್ಷಗಳಲ್ಲಿಯೇ ಗರಿಷ್ಠ ಮಟ್ಟದಲ್ಲಿ ಇದೆ. ಬೆಲೆ ಏರಿಕೆಯ ಸುಳಿಯಿಂದ ಜನಸಾಮಾನ್ಯರಿಗೆ ಸದ್ಯಕ್ಕೆ ಮುಕ್ತಿ ಸಿಗುವ ಸೂಚನೆಗಳು ಕಂಡುಬರುತ್ತಿಲ್ಲ. ಹಾಲು, ಬೇಳೆಕಾಳು, ಖಾದ್ಯತೈಲ, ಸಕ್ಕರೆ, ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ದಿನೇ ದಿನೇ ದುಬಾರಿಯಾಗುತ್ತಿದೆ. ಇದರಿಂದಾಗಿ ಬಡ್ಡಿ ದರವನ್ನು ಆರ್‌ಬಿಐ ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆ ಕ್ಷೀಣಿಸಿದೆ.

ADVERTISEMENT

ಅರ್ಥವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಇದೆ ಎನ್ನುವ ಸರ್ಕಾರದ ವಾದವನ್ನುಐಐಪಿ ಕುಸಿತ ಮತ್ತು ಹಣದುಬ್ಬರ ಹೆಚ್ಚಳವು ಹುಸಿಗೊಳಿಸಿವೆ. ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಮತ್ತು ಹಣದುಬ್ಬರ ನಿಯಂತ್ರಿಸುವ ವಿಷಯದಲ್ಲಿ ಸಮತೋಲನ ಸಾಧಿಸುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಪ್ರಯತ್ನಗಳನ್ನು ಇದು ಕ್ಲಿಷ್ಟಗೊಳಿಸಲಿದೆ. ಹಣಕಾಸು ಸಚಿವರ ಪ್ರತಿಪಾದನೆ ನೋಡಿದರೆ, ಆರ್ಥಿಕತೆ ಬಗ್ಗೆ ಸರ್ಕಾರವೇ ಸಂಪೂರ್ಣ ಕತ್ತಲೆಯಲ್ಲಿ ಇರಬೇಕು, ಇಲ್ಲವಾದರೆ ವಸ್ತುಸ್ಥಿತಿಯನ್ನುಜನರಿಂದ ಮರೆಮಾಚಲು ಕಸರತ್ತು ಮಾಡುತ್ತಿರಬೇಕು ಎನ್ನುವ ಅನುಮಾನ ಮೂಡುತ್ತದೆ.

ಅರ್ಥವ್ಯವಸ್ಥೆಯಲ್ಲಿ ತೀವ್ರ ಸ್ವರೂಪದ ಮಂದಗತಿ ಕಂಡುಬಂದಿರುವುದಕ್ಕೆ ಕೈಗಾರಿಕಾ ವಲಯಕ್ಕೆ ಅಗತ್ಯ ಪ್ರಮಾಣದಲ್ಲಿ ಸಾಲ ಸೌಲಭ್ಯ ದೊರೆಯದಿರುವುದೂ ಮುಖ್ಯ ಕಾರಣ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿನ (ಎನ್‌ಬಿಎಫ್‌ಸಿ) ನಗದು ಬಿಕ್ಕಟ್ಟು, ರಿಯಲ್‌ ಎಸ್ಟೇಟ್‌ ವಲಯದ ಪ್ರಗತಿಗೂ ತೊಡಕಾಗಿದೆ. ಕೈಗಾರಿಕೆ ಉತ್ಪಾದನೆಯು ಕುಸಿದಿರುವುದು ಆರ್ಥಿಕತೆಯ ಪಾಲಿಗೆ ಅಪಾಯಕಾರಿಯಾದ ವಿದ್ಯಮಾನ. ಅರ್ಥವ್ಯವಸ್ಥೆಯ ಆರೋಗ್ಯ ಸುಧಾರಿಸಲು ಸರ್ಕಾರ ಇನ್ನಷ್ಟು ಪರಿಣಾಮಕಾರಿಯಾದ ಚಿಕಿತ್ಸಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಮೂಲ ಸೌಕರ್ಯ ಯೋಜನೆಗಳಿಗೆ ಬಜೆಟ್‌ನಲ್ಲಿ ನೀಡಿರುವ ಆದ್ಯತೆಗಳನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರಲು ಇಚ್ಛಾಶಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.