ಕಾಂಗ್ರೆಸ್ ಪಕ್ಷವು ಈಚಿನ ಕೆಲವು ವರ್ಷಗಳಿಂದ ಎದುರಿಸುತ್ತಿರುವ ಸೈದ್ಧಾಂತಿಕ, ರಾಜಕೀಯ ಹಾಗೂ ನಾಯಕತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳು ಅಹಮದಾಬಾದ್‌ನಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅಧಿವೇಶನದ ನಂತರವೂ ಹಾಗೇ ಉಳಿದುಕೊಂಡಿವೆ. ಪಕ್ಷವು ಬಹಳ ಹಿನ್ನಡೆ ಕಂಡಿರುವ ಸಂದರ್ಭದಲ್ಲಿ ಅಧಿವೇಶನ ನಡೆಯಿತು, ಅಲ್ಲಿ ಕೆಲವು ಚರ್ಚೆಗಳು ಆದವು, ಆತ್ಮಾವಲೋಕನ ಸಹ ನಡೆಯಿತು. ಈಗ ಪಕ್ಷವು ಮೂರು ರಾಜ್ಯಗಳಲ್ಲಿ ಮಾತ್ರ ಸರ್ಕಾರದ ನೇತೃತ್ವ ವಹಿಸಿದೆ. ಕಳೆದ ವರ್ಷದ ಲೋಕಸಭಾ ಚುನಾವಣೆ ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಪಕ್ಷವು ಕಳಪೆ ಸಾಧನೆ ತೋರಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಿತಾದರೂ ನಂತರದ ಚುನಾವಣೆಗಳಲ್ಲಿ ಬಿಜೆಪಿಯು ಮತ್ತೆ ಬಲ ಹೆಚ್ಚಿಸಿಕೊಂಡ ಪರಿಣಾಮವಾಗಿ ಲೋಕಸಭಾ ಚುನಾವಣೆ ಯಲ್ಲಿನ ಕಾಂಗ್ರೆಸ್ಸಿನ ಸಾಧನೆಯು ಗೌಣವಾಗಿದೆ. ಮೂರು ದಶಕಗಳಿಗಿಂತ ಹೆಚ್ಚಿನ ಅವಧಿಯಿಂದ ಪಕ್ಷವು ಅಧಿಕಾರದಿಂದ ಹೊರಗಿರುವ ರಾಜ್ಯದಲ್ಲಿ ಎಐಸಿಸಿ ಅಧಿವೇಶನ ಆಯೋಜಿಸಿದ್ದಕ್ಕೆ ಒಂದಿಷ್ಟು ಸಾಂಕೇತಿಕತೆ ಇದೆ. ಗುಜರಾತ್ ರಾಜ್ಯವು ಈಗಿನ ಮಟ್ಟಿಗೆ ಬಿಜೆಪಿಯ ಪ್ರಾಬಲ್ಯದ ಸಂಕೇತ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ‘ತನ್ನವರು’ ಎಂದು ದೃಢವಾಗಿ ಹೇಳಲು ಸಹ ಕಾಂಗ್ರೆಸ್ ಯತ್ನಿಸಿತು. ಆದರೆ ಕಾಂಗ್ರೆಸ್ಸಿನ ಸಮಸ್ಯೆಯು ಸಂಕೇತಗಳ ಆಚೆಗೂ ಇದೆ.
ಕಾಂಗ್ರೆಸ್ಸಿನ ಸೈದ್ಧಾಂತಿಕ ನಿಲುವನ್ನು ಬಿಜೆಪಿಯು ಬಹಳ ಆಕ್ರಮಣಕಾರಿಯಾಗಿ ಪ್ರಶ್ನಿಸುತ್ತಿದೆ. ಹಿಂದೆ ಇದ್ದಂತಹ ರಾಜಕೀಯ ಪ್ರಾಬಲ್ಯವು ಕಾಂಗ್ರೆಸ್ಸಿಗೆ ಈಗ ಇಲ್ಲ. ಕಾಂಗ್ರೆಸ್ ಪಕ್ಷವು ಪ್ರತಿಪಾದಿಸುವುದಾಗಿ ಹೇಳುವ ಕೆಲವು ಮೌಲ್ಯಗಳಾದ ಧರ್ಮನಿರಪೇಕ್ಷ ನಿಲುವು, ಬಹುತ್ವ, ಒಕ್ಕೂಟ ವ್ಯವಸ್ಥೆಗೆ ಗೌರವ, ರಾಷ್ಟ್ರೀಯತೆ ಮತ್ತು ಒಳಗೊಳ್ಳುವಿಕೆಯಂಥವುಗಳನ್ನು ಬಿಜೆಪಿಯು ಭಿನ್ನ ಬಗೆಯಲ್ಲಿ ವ್ಯಾಖ್ಯಾನಿಸಿದೆ. ಕೆಲವು ಮೌಲ್ಯಗಳನ್ನು ಬಿಜೆಪಿಯು ತನ್ನದೆಂಬುದಾಗಿ ಬಿಂಬಿಸಿಕೊಂಡಿದೆ. ಧರ್ಮನಿರಪೇಕ್ಷ ನಿಲುವನ್ನು ಬಿಜೆಪಿಯು ತುಷ್ಟೀಕರಣ ಎಂದು ಚಿತ್ರಿಸಿದೆ, ರಾಷ್ಟ್ರೀಯತೆಗೆ ಈಗ ಹೆಚ್ಚಿನ ಬಲ ಸಿಕ್ಕಿದೆ. ಹಿಂದುಳಿದ ವರ್ಗಗಳು ಹಾಗೂ ಇನ್ನೂ ದುರ್ಬಲವಾಗಿಯೇ ಇರುವ ಕೆಲವು ಸಮುದಾಯಗಳ ಬೆಂಬಲವು ಕಡಿಮೆ ಆಗಿದ್ದುದು ಕಾಂಗ್ರೆಸ್ಸಿನ ಅವನತಿಗೆ ಒಂದು ಕಾರಣ. ಬಿಜೆಪಿ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ಈ ವರ್ಗಗಳ ಬೆಂಬಲವನ್ನು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿವೆ, ತಮ್ಮದಾಗಿಸಿಕೊಂಡಿವೆ. ದೇಶದ ಎಲ್ಲೆಡೆ ಜಾತಿ ಜನಗಣತಿ ನಡೆಯಬೇಕು, ಸಾಮಾಜಿಕ ನ್ಯಾಯಕ್ಕೆ ಆದ್ಯತೆ ಸಿಗಬೇಕು ಎಂದು ಕಾಂಗ್ರೆಸ್ ಹೇಳುತ್ತಿರುವುದರ ಹಿಂದೆ ಹಿಂದುಳಿದ ವರ್ಗಗಳ ಬೆಂಬಲವನ್ನು ಮತ್ತೆ ತನ್ನದಾಗಿಸಿಕೊಳ್ಳುವ ಉದ್ದೇಶ ಇದೆ. ಆದರೆ, ಇಂಥದ್ದೊಂದು ರಾಜಕೀಯ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರುವ ಸಾಮರ್ಥ್ಯವು ಕಾಂಗ್ರೆಸ್ಸಿಗೆ ಇದೆಯೇ ಎಂಬ ಅನುಮಾನವೂ ಇದೆ. ಜಾತಿ ಜನಗಣತಿಯ ವಿಚಾರವು ಈಚೆಗೆ ನಡೆದ ಯಾವುದಾದರೂ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ನೆರವಿಗೆ ಬಂದಿದೆಯೇ ಎಂಬುದು ಚರ್ಚಾರ್ಹ. ‘ಇಂಡಿಯಾ’ ಮೈತ್ರಿಕೂಟದ ಜೊತೆ ಕಾಂಗ್ರೆಸ್ಸಿನ ಸಂಬಂಧವು ಈಗ ಅಸ್ಪಷ್ಟವಾಗಿದೆ.
ಕಾಂಗ್ರೆಸ್ಸಿನ ನಾಯಕತ್ವ ಹಾಗೂ ಸಂಘಟನೆಯ ಹಂತಗಳಲ್ಲಿ ಹಲವು ಸವಾಲುಗಳು ಇವೆ. ಪಕ್ಷದ ರಾಜಕೀಯ ಸಂದೇಶವನ್ನು ಜನರಿಗೆ ಮುಟ್ಟಿಸಲು ದೇಶದ ಹಲವೆಡೆ ಕಾಂಗ್ರೆಸ್ಸಿಗೆ ತಳಮಟ್ಟದ ಕಾರ್ಯಕರ್ತರಿಲ್ಲ. ಈಗ ಜಿಲ್ಲಾ ಮಟ್ಟದ ನಾಯಕತ್ವದ ಮೇಲೆ ಗಮನ ನೀಡುವ ಕಾರ್ಯತಂತ್ರ ಪಾಲಿಸಲು ಪಕ್ಷ ಚಿಂತನೆ ನಡೆಸಿದೆ. ತಳಮಟ್ಟದಿಂದ ಹೊಸ ನಾಯಕತ್ವವನ್ನು ಬೆಳೆಸಲು ಪಕ್ಷ ಚಿಂತನೆ ನಡೆಸಿದ್ದರೆ ಅದು ಒಳ್ಳೆಯದೇ. ಆದರೆ ತೀರಾ ಕೇಂದ್ರೀಕೃತವಾಗಿರುವ, ಅಧಿಕಾರದ ಶ್ರೇಣಿಗಳನ್ನು ಹೊಂದಿರುವ ಮತ್ತು ಗುಂಪುಗಳಾಗಿ ಒಡೆದುಹೋಗಿರುವ ಪಕ್ಷದಲ್ಲಿ ಈ ಕಾರ್ಯತಂತ್ರದಿಂದಾಗಿ ಅನಿರೀಕ್ಷಿತ ಪರಿಣಾಮಗಳು ಉಂಟಾಗಬಹುದು. ಪಕ್ಷದಲ್ಲಿ ನಾಯಕತ್ವಕ್ಕೆ ಸಂಬಂಧಿಸಿದಂತೆ ಇನ್ನೂ ಒಂದು ಮುಖ್ಯವಾದ ವಿಚಾರ ಇದೆ. ಕುಟುಂಬಕೇಂದ್ರಿತವಾದ ನಾಯಕತ್ವವು ರಾಜಕೀಯದ ಬಗ್ಗೆ ಅರಿವು ಇರುವವರಲ್ಲಿ ವಿಶ್ವಾಸ ಮೂಡಿಸುವಂತೆ ಇಲ್ಲ. ಆದರೆ ಈ ನಾಯಕತ್ವವನ್ನು ಬಿಟ್ಟುಕೊಡಲು ಪಕ್ಷಕ್ಕೆ ಸಾಧ್ಯವಿಲ್ಲ. ಜನರಿಗೆ ಇನ್ನಷ್ಟು ಹತ್ತಿರವಾಗಲು ಪಕ್ಷವು ಹೊಸ ಆಲೋಚನೆಗಳನ್ನು ಮತ್ತು ಸಂಕಥನಗಳನ್ನು ಕಂಡುಕೊಳ್ಳಲು ಇನ್ನೂ ತಿಣುಕಾಡುತ್ತಿದೆ. ಪಕ್ಷವು ಮತ್ತೆ ಪುಟಿದೆದ್ದು ಬರಬೇಕು ಎಂದಾದರೆ, ಅದು ತನ್ನ ದೌರ್ಬಲ್ಯಗಳನ್ನು
ಸರಿಪಡಿಸಿಕೊಳ್ಳಬೇಕು, ದ್ವಂದ್ವಗಳನ್ನು ನಿವಾರಿಸಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.