ADVERTISEMENT

ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ

ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ಸಂಬಂಧಿಸಿದ ಗೊಂದಲ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಈ ಗೊಂದಲವನ್ನು ಕಾಂಗ್ರೆಸ್‌ ಹೈಕಮಾಂಡ್‌ ತಕ್ಷಣ ಬಗೆಹರಿಸಬೇಕು.

ಸಂಪಾದಕೀಯ
Published 23 ನವೆಂಬರ್ 2025, 23:18 IST
Last Updated 23 ನವೆಂಬರ್ 2025, 23:18 IST
<div class="paragraphs"><p>ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ</p></div>

ಸಂಪಾದಕೀಯ: ಅಧಿಕಾರ ಹಸ್ತಾಂತರದ ಗೊಂದಲ– ವರಿಷ್ಠರ ಮಧ್ಯಪ್ರವೇಶ ಅನಿವಾರ್ಯ

   

ನಾಯಕತ್ವ ಬದಲಾವಣೆ ಮತ್ತು ಸಂ‍ಪುಟ ಪುನರ್‌ ರಚನೆಗೆ ಸಂಬಂಧಿಸಿದ ಕಾಂಗ್ರೆಸ್‌ ಪಕ್ಷದೊಳಗಿನ ಮುಸುಕಿನ ಗುದ್ದಾಟ ಕಿರುತೆರೆಯ ಧಾರಾವಾಹಿಯಂತೆ ಮುಂದುವರಿದಿರುವುದು ಆಡಳಿತಯಂತ್ರ ದುರ್ಬಲಗೊಳ್ಳುವ ಅಪಾಯಕ್ಕೆ ಎಡೆಮಾಡಿಕೊಡುತ್ತಿದೆ.

ಈ ಗುದ್ದಾಟ ಈಗಿನದ್ದಾಗಿರದೆ, 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಿಚ್ಚಳ ಬಹುಮತ ಪಡೆದ ದಿನವೇ ಆರಂಭಗೊಂಡಿದ್ದಾಗಿದೆ. ಮತದಾರರ ವಿಶ್ವಾಸ ಗಳಿಸಿದ ಕಾಂಗ್ರೆಸ್‌ ಮುಂದಿದ್ದ ಪ್ರಮುಖ ಸವಾಲು ಆಡಳಿತಕ್ಕೆ ಸಂಬಂಧಿಸಿದ್ದಾಗಿರದೆ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಅವರಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಯಾರನ್ನು ಕೂರಿಸುವುದು ಎನ್ನುವುದಾಗಿತ್ತು.

ADVERTISEMENT

ದೆಹಲಿಯಲ್ಲಿ ನಡೆದ ಮಾತುಕತೆ ಸರಣಿಗಳ ನಂತರ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹಾಗೂ ಶಿವಕುಮಾರ್‌ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಎರಡೂವರೆ ವರ್ಷಗಳ ನಂತರ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರಿಸಬೇಕು ಎನ್ನುವ ಒಪ್ಪಂದದ ಮೇರೆಗೆ ಪಕ್ಷದ ವರಿಷ್ಠರು ಸಮಸ್ಯೆ ಬಗೆಹರಿಸಿದ್ದಾರೆ ಎನ್ನುವ ವದಂತಿಗಳಿದ್ದವು.

ಈಗ ಆ ವದಂತಿ ಮೂರ್ತರೂಪ ತಳೆದಂತೆ ಕಾಣಿಸುತ್ತಿದ್ದು, ಶಿವಕುಮಾರ್‌ ಅವರನ್ನು ಬೆಂಬಲಿಸುವ ಶಾಸಕರ ಗುಂಪು ದೆಹಲಿಗೆ ತೆರಳಿ ತಮ್ಮ ನಾಯಕನಿಗೆ ಅಧಿಕಾರ ಹಸ್ತಾಂತರಿಸಬೇಕೆಂದು ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದೆ. ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ, ಅಧಿಕಾರ ಹಸ್ತಾಂತರದ ಯಾವ ಒಪ್ಪಂದವೂ ಆಗಿಲ್ಲ,ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಪೂರ್ಣಾವಧಿ ಪೂರೈಸುತ್ತಾರೆ ಎಂದು ಕೆಲವು ಸಚಿವರು ಹೇಳಿಕೆ ನೀಡಿದ್ದಾರೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕಾದ ಕಾಂಗ್ರೆಸ್‌ನ ದೆಹಲಿ ನಾಯಕತ್ವ ಮೌನವಾಗಿರುವುದರಿಂದ ಡೋಲಾಯಮಾನ ಪರಿಸ್ಥಿತಿ ಮುಂದುವರಿದಿದೆ.

ಪ್ರಸ್ತಕ ಗೊಂದಲದ ಪರಿಸ್ಥಿತಿ ರೂಪುಗೊಳ್ಳಲು ಸಿದ್ದರಾಮಯ್ಯಅವರ ವಿರೋಧಾಭಾಸದ ಹೇಳಿಕೆಗಳೂ ಕಾರಣವಾಗಿವೆ. 2018 ಹಾಗೂ 2023ರಚುನಾವಣೆಗಳಲ್ಲಿ, ಇದೇ ತಮ್ಮ ಕೊನೆಯಸ್ಪರ್ಧೆ ಎಂದು ಹೇಳಿದ್ದ ಅವರು, ಬೆಂಬಲಿಗರು ಒತ್ತಾಯಿಸಿದರೆ ಮತ್ತೊಂದು ಅವಧಿಗೆ ಸ್ಪರ್ಧಿಸುವುದಾಗಿ ಈಗ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಯಾಗಿ ಅವಧಿ ಪೂರ್ಣಗೊಳಿಸುವುದಾಗಿ ಹಾಗೂ ಮುಂದಿನ ಬಜೆಟ್‌ ತಾವೇ ಮಂಡಿಸುವುದಾಗಿ ಹೇಳಿರುವ ಅವರು, ಹೈಕಮಾಂಡ್‌ ಕೈಗೊಳ್ಳುವ ಯಾವುದೇ ತೀರ್ಮಾನವನ್ನು ಒಪ್ಪುವುದಾಗಿಯೂ ಹೇಳಿದ್ದಾರೆ. ಈ ವಿರೋಧಾಭಾಸದ ಮಾತುಗಳು ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿವೆ. 2026ರ ಫೆಬ್ರುವರಿಯವರೆಗೆ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಮುಂದುವರಿಯಲಿದ್ದು, ಆ ಮೂಲಕ ದೀರ್ಘ ಕಾಲ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಡಿ. ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಂದೂ ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಅವರ ಜಾಗಕ್ಕೆ ದಲಿತರೊಬ್ಬರು ಬರಲಿದ್ದಾರೆ ಎನ್ನುವ ಊಹಾಪೋಹವೂ ಇದೆ. ಈ ನಡುವೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ತಾವು ಸಿದ್ಧ ಎಂದು ಶಿವಕುಮಾರ್‌ ಪ್ರಕಟಿಸಿರು ವುದು ಇಡೀ ವಿದ್ಯಮಾನಕ್ಕೆ ಹೊಸ ತಿರುವು ನೀಡಿದೆ ಹಾಗೂ ಅವರ ಮಾತನ್ನು ಅಧಿಕಾರ ಹಸ್ತಾಂತರಕ್ಕೆ ಹೈಕಮಾಂಡ್‌ ನೀಡಿರುವ ಹಸಿರು ನಿಶಾನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕಾಂಗ್ರೆಸ್‌ ಪಕ್ಷದ ಆಂತರಿಕ ವಿದ್ಯಮಾನಗಳೇನೇ ಇರಲಿ, ನಾಯಕತ್ವಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಆಡಳಿತದ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡುತ್ತಿದೆ. ಸರ್ಕಾರವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಅಸ್ಪಷ್ಟತೆ ಆಡಳಿತ ಯಂತ್ರವನ್ನು ದುರ್ಬಲ ಗೊಳಿಸಲಿದೆ ಹಾಗೂ ಅಧಿಕಾರಿಗಳು ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ; ತ್ವರಿತವಾಗಿ ವಿಲೇವಾರಿ ಆಗಬೇಕಾದ ಕಡತಗಳು ನನೆಗುದಿಗೆ ಬೀಳುತ್ತವೆ. ಶಾಸಕರು ಹಾಗೂ ಸಚಿವರು ಗುಂಪು ರಾಜಕಾರಣದಲ್ಲಿ ತೊಡಗುವುದು ಸರ್ಕಾರವನ್ನು ದುರ್ಬಲಗೊಳಿಸಿದಂತಾಗುತ್ತದೆ; ಮತದಾರರಿಗೆ ಕೆಟ್ಟ ಸಂದೇಶ ನೀಡಿದಂತಾಗುತ್ತದೆ.

ರಾಜಕೀಯ ದ್ವಂದ್ವದ ಪರಿಣಾಮ ಈಗಾಗಲೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ತಮ್ಮ ಹಿಂದಿನ ಅವಧಿಯಂತೆ ಪರಿಣಾಮಕಾರಿ ಆಗಿಲ್ಲ ಹಾಗೂ ಶಿವಕುಮಾರ್‌ ಪಾಳಯದಲ್ಲಿನ ಅಸಹನೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಪರಿಸ್ಥಿತಿ ಮತ್ತಷ್ಟು ವಿಷಮಿಸುವ ಮೊದಲು, ಕಾಂಗ್ರೆಸ್‌ ಹೈಕಮಾಂಡ್‌ ಮೌನ ಮುರಿದು, ಮಧ್ಯಪ್ರವೇಶಿಸಬೇಕಾಗಿದೆ; ಅಧಿಕಾರ ಹಸ್ತಾಂತರದ ಗೊಂದಲಕ್ಕೆ ತಾರ್ಕಿಕ ಅಂತ್ಯ ನೀಡಬೇಕಾಗಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವುದು ಹೈಕಮಾಂಡ್‌ ಉದ್ದೇಶವಾಗಿದ್ದಲ್ಲಿ,ತಕ್ಷಣ ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿ. ಇಲ್ಲವಾದಲ್ಲಿ, 2028ರವರೆಗೂ ಮುಖ್ಯಮಂತ್ರಿ ಸ್ಥಾನದಲ್ಲಿ ಯಾವ ಬದಲಾವಣೆಯೂ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಲಿ. ದೇಶದ ಅಭಿವೃದ್ಧಿ ಎಂಜಿನ್‌ ರೂಪದಲ್ಲಿ ಕರ್ನಾಟಕ ಗುರ್ತಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ರಾಜಕೀಯ ಗೊಂದಲಗಳಿಂದಾಗಿ ರಾಜ್ಯದಲ್ಲಿ ಅಸ್ಥಿರತೆ ಉಂಟಾಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.