ಮಾನಹಾನಿಗೆ ಸಂಬಂಧಿಸಿದ ಕಾನೂನುಗಳಿಂದ ‘ಕ್ರಿಮಿನಲ್’ ಅಪರಾಧದ ಆಯಾಮವನ್ನು ತೆಗೆಯುವ ಚಿಂತನೆ ಸ್ವಾಗತಾರ್ಹ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಘನತೆಯಿಂದ ಬಾಳುವ ಹಕ್ಕನ್ನು ಎತ್ತಿಹಿಡಿಯುತ್ತದೆ.
ಮಾನಹಾನಿಗೆ ಸಂಬಂಧಿಸಿದಂತೆ ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳಿಂದ ‘ಕ್ರಿಮಿನಲ್’ ಅಪರಾಧದ ಆಯಾಮವನ್ನು ತೆಗೆಯಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ಸಲಹೆಯು ಬಹುಕಾಲದಿಂದ ಇರುವ ಬೇಡಿಕೆಯೊಂದಕ್ಕೆ ಬಲ ನೀಡುವ ಕೆಲಸ ಮಾಡಿದೆ. ಮಾನಹಾನಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಕಾಣುವುದು ನ್ಯಾಯಸಮ್ಮತವಲ್ಲ; ಅಂತಹ ಕಾನೂನನ್ನು ಜನರನ್ನು ಬೆದರಿಸಲು ಹಾಗೂ ಅವರಿಗೆ ಸುದೀರ್ಘ ಅವಧಿಗೆ ಕಿರುಕುಳ ನೀಡಲು ಬಳಸಲಾಗುತ್ತಿದೆ ಎಂಬ ಅರ್ಥವು ಸುಪ್ರೀಂ ಕೋರ್ಟ್‌ನ ಮಾತುಗಳಲ್ಲಿ ಇದೆ. ಈ ಮಾತುಗಳನ್ನು ಹೇಳುವಾಗ ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಅವರು ವಿಚಾರಣೆಯ ಹಂತದಲ್ಲಿ ಬಾಕಿ ಇರುವ ಮಾನನಷ್ಟ ಪ್ರಕರಣಗಳ ಬಗ್ಗೆ ಕಳವಳವನ್ನೂ ವ್ಯಕ್ತಪಡಿಸಿದ್ದಾರೆ. ನ್ಯಾಯಮೂರ್ತಿ ಸುಂದರೇಶ್ ಅವರು ನ್ಯಾಯಮೂರ್ತಿ ಸತೀಶ್‌ಚಂದ್ರ ಶರ್ಮ ಅವರೂ ಇರುವ ವಿಭಾಗೀಯ ಪೀಠದ ನೇತೃತ್ವ ವಹಿಸಿದ್ದಾರೆ.
‘ಫೌಂಡೇಷನ್ ಆಫ್ ಇಂಡಿಪೆಂಡೆಂಟ್ ಜರ್ನಲಿಸಂ’ ಎಂಬ ಸಂಸ್ಥೆಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಈ ಪೀಠವು ನಡೆಸುತ್ತಿದೆ. ಸುದ್ದಿತಾಣವೊಂದನ್ನು ನಡೆಸುತ್ತಿರುವ ಈ ಸಂಸ್ಥೆಯು 2016ರಲ್ಲಿ ಪ್ರಕಟವಾದ ಲೇಖನವೊಂದಕ್ಕೆ ಸಂಬಂಧಿಸಿದ ಮಾನನಷ್ಟ ಮೊಕದ್ದಮೆಯ ವಿಚಾರವಾಗಿ ಜಾರಿ ಮಾಡಿರುವ ನೋಟಿಸ್ ಅನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದೆ. 2016ರಲ್ಲಿ ನೀಡಿದ ಒಂದು ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಮಾನನಷ್ಟ ಪ್ರಕರಣಗಳನ್ನು ಕ್ರಿಮಿನಲ್ ಆಯಾಮದಿಂದ ಕಾಣುವುದು ಸಾಂವಿಧಾನಿಕವೇ ಆಗಿದೆ ಎಂದು ಹೇಳಿತ್ತು. ಅಲ್ಲದೆ, ಸಂವಿಧಾನದ 21ನೇ ವಿಧಿಯು ನೀಡಿರುವ ಘನತೆಯ ಹಕ್ಕನ್ನು ರಕ್ಷಿಸುವ ಅಗತ್ಯವನ್ನು ಈ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 499 ಹಾಗೂ 500ರ ಅಡಿಯಲ್ಲಿ, ಮಾನಹಾನಿ ಉಂಟುಮಾಡುವುದನ್ನು ಕ್ರಿಮಿನಲ್ ಅಪರಾಧವನ್ನಾಗಿ ಕಾಣಲಾಗಿತ್ತು. ಈ ಸೆಕ್ಷನ್‌ಗಳನ್ನು ಭಾರತೀಯ ನ್ಯಾಯ ಸಂಹಿತೆಯು (ಬಿಎನ್‌ಎಸ್) ಸೆಕ್ಷನ್ 356ರಲ್ಲಿ ಉಳಿಸಿಕೊಂಡಿದೆ.
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗಳನ್ನು ಜನರನ್ನು ಕಿರುಕುಳಕ್ಕೆ ಗುರಿಪಡಿಸಲು ಬಳಕೆ ಮಾಡುವುದು ಹೆಚ್ಚಾಗುತ್ತಿದೆ. ಅದರಲ್ಲೂ ಮುಖ್ಯವಾಗಿ, ಸಾರ್ವಜನಿಕ ಜೀವನದಲ್ಲಿ ಇರುವ ರಾಜಕೀಯ ಮುಖಂಡರಂತಹ ವ್ಯಕ್ತಿಗಳನ್ನು ನ್ಯಾಯಾಲಯದ ಕಟಕಟೆಗೆ ಎಳೆದು, ಜೈಲುಶಿಕ್ಷೆಯ ಭೀತಿಯನ್ನು ಅವರ ಮನಸ್ಸಿನಲ್ಲಿ ಜೀವಂತವಾಗಿ ಉಳಿಸಲು ಬಳಸಿಕೊಳ್ಳಲಾಗುತ್ತಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಕೂಡ ಇದನ್ನು ಅಸ್ತ್ರವನ್ನಾಗಿ ಬಳಕೆ ಮಾಡಲಾಗಿದೆ. ಈ ಅಸ್ತ್ರಕ್ಕೆ ಗುರಿಯಾದ ಹಲವರ ಪೈಕಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೂ ಒಬ್ಬರು. ಪತ್ರಕರ್ತರನ್ನು ಹಾಗೂ ಮಾಧ್ಯಮ ಸಂಸ್ಥೆಗಳನ್ನು ಗುರಿಯಾಗಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನೇರವಾಗಿ ಆಕ್ರಮಣ ನಡೆಸಲು ಕೂಡ ಈ ಕಾನೂನನ್ನು ಬಳಕೆ ಮಾಡಲಾಗಿದೆ. ಹಲವು ಕಡೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ; ಅವು ಕ್ರಿಮಿನಲ್ ಪ್ರಕರಣಗಳಾದ ಕಾರಣ ಆರೋಪಿ ಸ್ಥಾನದಲ್ಲಿ ಇರುವವರು ಖುದ್ದಾಗಿ ಹಾಜರಾಗಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ. ವಿಚಾರಣೆ ಶುರುವಾಗುವುದಕ್ಕೂ ಮೊದಲು ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆ ಇರುತ್ತದೆ, ವಿಚಾರಣೆ ಶುರುವಾದ ನಂತರದಲ್ಲಿ ಅದು ದೀರ್ಘ ಅವಧಿಗೆ ನಡೆಯಬಹುದು.
ಇಂತಹ ಪ್ರಕರಣಗಳಲ್ಲಿ ‘ಸತ್ಯ’ವು ಗುರಾಣಿಯಾಗಿ ರಕ್ಷಣೆಗೆ ಒದಗಿಬರುವುದಿಲ್ಲವಾದ ಕಾರಣ, ಸಾರ್ವಜನಿಕ ಹಿತವನ್ನು ಕಾಯುವ ಉದ್ದೇಶದಿಂದ ‘ಮಾನಹಾನಿಕರ’ ಎಂದು ಆರೋಪಿಸಲಾದ ಮಾತುಗಳನ್ನು ಆಡಲಾಗಿದೆ ಎಂಬುದನ್ನು ಆರೋಪಿಯೇ ಸಾಬೀತು ಮಾಡಬೇಕಾಗುತ್ತದೆ. ಈ ಕಾನೂನಿನ ವಿನ್ಯಾಸ ಹೇಗಿದೆ ಎಂದರೆ, ಇದು ಆರೋಪಿಯ ವಿರುದ್ಧವಾಗಿ ಕೆಲಸ ಮಾಡುತ್ತದೆ, ನ್ಯಾಯ ಹಾಗೂ ಸಾಂವಿಧಾನಿಕ ಹಕ್ಕುಗಳ ಮೂಲ ತತ್ತ್ವವನ್ನು ಇದು ಉಲ್ಲಂಘಿಸುತ್ತದೆ. ಈ ಕಾನೂನು ವಸಾಹತು ಕಾಲದ ಪಳೆಯುಳಿಕೆ. ಇದು ಪ್ರಜಾತಂತ್ರದ ವಿರೋಧಿ. ಆದರೆ, ಇಂತಹ ಪ್ರಕರಣಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ಸುಪ್ರೀಂ ಕೋರ್ಟ್, ಕೆಳಹಂತದ ನ್ಯಾಯಾಲಯಗಳಿಗೆ ಕಿವಿಮಾತು ಹೇಳಿದ್ದುದು ಪರಿಣಾಮಕಾರಿ ಆಗಿಲ್ಲ.
ವ್ಯಕ್ತಿಗಳು ಹಾಗೂ ಸಂಸ್ಥೆಗಳ ಘನತೆಯನ್ನು ಕಾಯಲು ಅಗತ್ಯವಿರುವ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿವೆ. ಮಾನಹಾನಿ ಆಗಿದೆ ಎಂಬ ಕಾರಣ ನೀಡಿ ವ್ಯಕ್ತಿಗಳು, ಸಂಸ್ಥೆಗಳು ಕ್ರಿಮಿನಲ್ ಕಾನೂನಿನ ಬಳಕೆಗೆ ಮುಂದಾಗಬೇಕಿಲ್ಲ. ಮಾನನಷ್ಟಕ್ಕೆ ಪರಿಹಾರವನ್ನು ಒದಗಿಸಿ ಕೊಡುವ ಸಿವಿಲ್ ಕಾನೂನು ಪ್ರಕ್ರಿಯೆಗಳು ಅಗತ್ಯ ರಕ್ಷಣೆಯನ್ನು ಒದಗಿಸುತ್ತವೆ. ಅವು ಘನತೆಯಿಂದ ಬದುಕುವ ಹಕ್ಕನ್ನು ರಕ್ಷಿಸುತ್ತವೆ. ಅದೇ ಸಂದರ್ಭದಲ್ಲಿ ಅವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ಕಾಪಾಡುತ್ತವೆ. ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಹಲವು ದೇಶಗಳು ಮಾನನಷ್ಟವನ್ನು ಕ್ರಿಮಿನಲ್ ಅಪರಾಧವನ್ನಾಗಿ ಕಾಣುವುದನ್ನು ನಿಲ್ಲಿಸಿವೆ. ಭಾರತವೂ ಇಂಥದ್ದೊಂದು ಬದಲಾವಣೆಗೆ ಸಿದ್ಧವಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಈಗ ಆಡಿರುವ ಮಾತುಗಳ ಮೂಲಕ ಸೂಚ್ಯವಾಗಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.