ADVERTISEMENT

ಸಂಪಾದಕೀಯ: ಶಾಲಾ ಮಕ್ಕಳಿಗೆ ಮೊಟ್ಟೆ, ಸರ್ಕಾರ ಗಟ್ಟಿ ನಿಲುವು ತಾಳಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 19:36 IST
Last Updated 8 ಡಿಸೆಂಬರ್ 2021, 19:36 IST
ಸಂಪಾದಕೀಯ
ಸಂಪಾದಕೀಯ   

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ನೀಡುವುದಕ್ಕೆ ಕೆಲವು ಮಠಾಧೀಶರು ಹಾಗೂ ಜಾತಿ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತ‍ಪಡಿಸಿರುವುದು ದುರದೃಷ್ಟಕರ. ಮೊಟ್ಟೆ ನೀಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಆಹಾರದ ವಿಷಯದಲ್ಲಿ ಭೇದಭಾವ ಮಾಡಿದಂತಾಗುತ್ತದೆ, ಪಂಕ್ತಿಭೇದಕ್ಕೆ ಅವಕಾಶವಾಗುತ್ತದೆ ಹಾಗೂ ಧಾರ್ಮಿಕ ಸಾಮರಸ್ಯಕ್ಕೆ ಅಡಚಣೆ ಉಂಟಾಗುತ್ತದೆ ಎನ್ನುವ ವಾದಗಳು ಅತಾರ್ಕಿಕವಾದವು. ಮೊಟ್ಟೆಯನ್ನು ತಿನ್ನುವುದು ಅಥವಾ ತಿನ್ನದಿರುವುದನ್ನು ಮಕ್ಕಳ ಆಯ್ಕೆಗೇ ಬಿಟ್ಟಿರುವುದರಿಂದಾಗಿ, ಸಸ್ಯಾಹಾರಿ ಮಕ್ಕಳ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ. ಮಕ್ಕಳಿಗೆ ಹಾಲು, ದ್ವಿದಳ ಧಾನ್ಯ ಹಾಗೂ ಹಣ್ಣುಗಳನ್ನು ನೀಡಬಹುದೆನ್ನುವ ಸಲಹೆ ಸ್ವಾಗತಾರ್ಹ. ಇದರೊಟ್ಟಿಗೆ ಮೊಟ್ಟೆಯನ್ನೂ ನೀಡುವುದರಿಂದ ಮಕ್ಕಳಿಗೆ ಆಯ್ಕೆಯ ಸ್ವಾತಂತ್ರ್ಯ ಒದಗಿಸಿದಂತಾಗುತ್ತದೆ. ವೈವಿಧ್ಯದಲ್ಲಿ ಏಕತೆಯನ್ನು ಕಾಣುವ ಭಾರತದಂತಹ ದೇಶಗಳ ಬಹುತ್ವದ ಚಹರೆಗಳಲ್ಲಿ ಆಹಾರ ವೈವಿಧ್ಯವೂ ಸೇರಿದೆ. ಆದರೆ, ಸೌಹಾರ್ದಕ್ಕೆ ಕಾರಣವಾಗಬೇಕಾದ ಆಹಾರವು ಧರ್ಮ ಮತ್ತು ರಾಜಕೀಯಕ್ಕೆ ಬಳಕೆ
ಯಾಗಿರುವುದೇ ಹೆಚ್ಚು. ಆಹಾರದ ರಾಜಕಾರಣ ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ವಿಷಯದಲ್ಲೂ ವ್ಯಕ್ತವಾಗುತ್ತಿದೆ. ರಾಜ್ಯದ ಶೇ 32ರಷ್ಟು ಮಕ್ಕಳು ಕಡಿಮೆ ತೂಕ ಹಾಗೂ ಕುಂಠಿತ ಬೆಳವಣಿಗೆ ಹೊಂದಿದ್ದು, ಶೇ 45.2ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು 2020–21ರ ‘ನೀತಿ ಆಯೋಗ’ದ ವರದಿ ಹೇಳಿದೆ. ಮಕ್ಕಳಲ್ಲಿನ ಅಪೌಷ್ಟಿಕತೆಗೆ ಮದ್ದಿನ ರೂಪದಲ್ಲಿ ಮೊಟ್ಟೆ ನೀಡುವ ಪ್ರಯೋಗಕ್ಕೆ ಮಹತ್ವವಿದೆ.

ಮಕ್ಕಳಿಗೆ ಮೊಟ್ಟೆ ನೀಡುವ ವಿಷಯದಲ್ಲಿ ಮಠಾಧೀಶರ ಹಸ್ತಕ್ಷೇಪ ಸಲ್ಲದು. ಮೊಟ್ಟೆಗೆ ವ್ಯಕ್ತವಾಗುತ್ತಿರುವ ವಿರೋಧ ಆರೋಗ್ಯಕ್ಕೆ ಸಂಬಂಧಿಸಿದ್ದಾದರೆ,ಆ ಬಗ್ಗೆ ವೈದ್ಯರು ಹಾಗೂ ಪೌಷ್ಟಿಕಾಂಶ ತಜ್ಞರು ಮಾತನಾಡಬೇಕೇ ವಿನಾ ಧರ್ಮಗುರುಗಳಲ್ಲ. ಮೊಟ್ಟೆಯ ವಿಷಯದಲ್ಲಿ ವ್ಯಕ್ತವಾಗುತ್ತಿರುವ ವಿರೋಧವು ಸಮಾಜದ ಕೆಲವು ವರ್ಗಗಳಲ್ಲಿನಆಹಾರ ಶ್ರೇಷ್ಠತೆಯ ಮನೋಭಾವದ ವ್ಯಕ್ತರೂಪ
ದಂತಿದೆ. ಯಾವ ಆಹಾರವೂ ಮೇಲಲ್ಲ, ಯಾವುದೂ ಕೀಳಲ್ಲ ಎನ್ನುವುದು ಸಾಮಾನ್ಯಜ್ಞಾನ. ಧರ್ಮದ ಹೆಸರಿನಲ್ಲಿ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸುವುದರಿಂದ ಮಕ್ಕಳ ಆಹಾರದ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಮಕ್ಕಳಿಗೆ ಮೊಟ್ಟೆಯನ್ನು ನೀಡುವ ಕ್ರಮ ಸಾಮಾಜಿಕ ವೈವಿಧ್ಯದ ಪ್ರಾತ್ಯಕ್ಷಿಕೆಯೂ ಹೌದು. ಆಹಾರ, ಅಭಿರುಚಿ, ಜೀವನಶೈಲಿ, ಸಾಮಾಜಿಕ ಸ್ಥಾನಮಾನಗಳಲ್ಲಿ ಭಿನ್ನತೆ ಹೊಂದಿದ್ದೂ ಭಾರತದ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿ ಗುರುತಿಸಿಕೊಳ್ಳುವುದನ್ನು ಮಕ್ಕಳಿಗೆ ಚೆನ್ನಾಗಿ ಮನದಟ್ಟು ಮಾಡಿಸಲು ಶಾಲೆಗಳಿಗಿಂತಲೂ ಮಿಗಿಲಾದ ಪ್ರಯೋಗಶಾಲೆ ಮತ್ತೊಂದಿಲ್ಲ. ಭಾರತೀಯ ಸಮಾಜದಲ್ಲಿ ಸಂಪೂರ್ಣ ಸಸ್ಯಾಹಾರಿಗಳು ಅಲ್ಪಸಂಖ್ಯಾತರು. ಬಹುಜನರೊಂದಿಗೆ ಅವರು ಆಹಾರದ ವೇದಿಕೆಯನ್ನು ಹಂಚಿಕೊಳ್ಳುವ ಮೂಲಕ ಮುಖ್ಯವಾಹಿನಿಯೊಂದಿಗೆ ಬೆರೆಯುವುದಕ್ಕೆ ಶಾಲೆಗಳಲ್ಲಿ ಮೊಟ್ಟೆ ನೀಡುವ ಪ್ರಯೋಗ ಅವಕಾಶ ಕಲ್ಪಿಸುತ್ತದೆ. ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮುದಾಯಿಕ ಆಚರಣೆಗಳಿಂದ ಹೊರಬಂದು ಸಮಾಜದ ವೈವಿಧ್ಯವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಶಾಲೆ ಅಂಗಳ ಅತ್ಯುತ್ತಮ ವೇದಿಕೆ. ಬಹುತ್ವದ ಕಲಿಕೆಯ ಸಾಧ್ಯತೆಯನ್ನು ಬದಿಗಿಟ್ಟು, ಒಂದೇ ಬಗೆಯ ಆಚಾರ ವಿಚಾರಗಳಿಗೆ ಶಾಲೆಗಳನ್ನು ಸೀಮಿತಗೊಳಿಸುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅಡಚಣೆ ಮಾಡಿದಂತಾಗುತ್ತದೆ. ಕಲಿಕೆಯ ವೇದಿಕೆಗಳನ್ನು ವೈಯಕ್ತಿಕ ಹಾಗೂ ಧಾರ್ಮಿಕ ಸಂಗತಿಗಳ ನೆಪದಲ್ಲಿ ಸಂಕುಚಿತಗೊಳಿಸುವುದು ಸಲ್ಲದು.

ಕಲ್ಯಾಣ ಕರ್ನಾಟಕದ ಜಿಲ್ಲೆಗಳೊಂದಿಗೆ ವಿಜಯಪುರ ಜಿಲ್ಲೆಯ ಶಾಲಾ ಮಕ್ಕಳಿಗೆ ಡಿಸೆಂಬರ್‌ 1ರಿಂದ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡಲಾಗುತ್ತಿದೆ. ಆಹಾರದಲ್ಲಿ ವೈವಿಧ್ಯ ಕಾಣಿಸಿಕೊಂಡ ನಂತರ ಶಾಲಾ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಾಗಿದೆ ಎಂದು ವರದಿಯಾಗಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳ ಸಂಖ್ಯೆ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚು. ಹಾಗಾಗಿ ಅಲ್ಲಿನ ಶಾಲಾ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ವಲಯದ ಹೆಚ್ಚುವರಿ ಆಯುಕ್ತರು ಸಲ್ಲಿಸಿದ ‍ಪ್ರಸ್ತಾವದ ಮೇರೆಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿನ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ಮೊಟ್ಟೆ–ಬಾಳೆಹಣ್ಣು ವಿತರಿಸಲಾಗುತ್ತಿದೆ. ಇದರ ಉಪಯೋಗವನ್ನು 1ರಿಂದ 8ನೇ ತರಗತಿಯ 14.44 ಲಕ್ಷ ಮಕ್ಕಳು ಪಡೆಯುತ್ತಿದ್ದು, ಕಲ್ಯಾಣ ಕರ್ನಾಟಕದ ಶೇ 80ರಷ್ಟು ವಿದ್ಯಾರ್ಥಿಗಳು ಮಧ್ಯಾಹ್ನದ ಊಟದಲ್ಲಿ ಮೊಟ್ಟೆ ಬೇಕೆಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಈ ಯಶಸ್ಸು ರಾಜ್ಯದ ಎಲ್ಲ ಜಿಲ್ಲೆಗಳ ಶಾಲಾ ಮಕ್ಕಳಿಗೂ ಮೊಟ್ಟೆ ನೀಡುವ ಪ್ರಯೋಗ ಆದಷ್ಟು ಬೇಗ ವಿಸ್ತರಣೆಗೊಳ್ಳಲು ಪ್ರೇರಣೆಯಾಗಬೇಕು. ಮೂರು ದಿನದ ಬದಲು, ವಾರದ ಎಲ್ಲ ದಿನಗಳಲ್ಲೂ ಊಟದೊಂದಿಗೆ ಮೊಟ್ಟೆ–ಬಾಳೆಹಣ್ಣು ದೊರೆಯುವಂತಾಗಬೇಕು. ಮಕ್ಕಳ ಆರೋಗ್ಯದ ವಿಷಯದಲ್ಲಿ ಚೌಕಾಸಿ ಸಲ್ಲದು. ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ಬೆಳವಣಿಗೆಗೆ ಮೊಟ್ಟೆ ಅಗತ್ಯ ಎನ್ನುವುದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಪ್ಪಿಕೊಳ್ಳಲಾಗಿದೆ ಹಾಗೂ ಮೊಟ್ಟೆಯನ್ನು ‘ಪರಿಪೂರ್ಣ ಆಹಾರ’ ಎಂದು ಗುರುತಿಸಲಾಗಿದೆ. ಹಾಗಾಗಿ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ಮತ್ತು ಬಾಳೆಹಣ್ಣು ನೀಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬಾರದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.