ADVERTISEMENT

ಆದಾಯ ತೆರಿಗೆ ಇಲಾಖೆಯ ವಿಶ್ವಾಸಾರ್ಹತೆಯ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2019, 20:00 IST
Last Updated 29 ಮಾರ್ಚ್ 2019, 20:00 IST
   

ಲೋಕಸಭಾ ಚುನಾವಣೆಯ ಈ ಹೊತ್ತಿನಲ್ಲಿ ಆದಾಯ ತೆರಿಗೆ ಇಲಾಖೆಯು ಕರ್ನಾಟಕದ ವಿವಿಧೆಡೆ ನಡೆಸಿರುವ ಶೋಧ ಕಾರ್ಯಾಚರಣೆಗಳು ವಿವಾದಕ್ಕೆ ಕಾರಣವಾಗಿವೆ. ಆದಾಯ ತೆರಿಗೆ ಇಲಾಖೆ ಕಚೇರಿಯ ಎದುರು ಜೆಡಿಎಸ್‌–ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿರುವುದೇ ಶೋಧ ಕಾರ್ಯಾಚರಣೆಯು ರಾಜಕೀಯ ತಿರುವು ಪಡೆದು ಕೊಂಡಿರುವುದರ ದ್ಯೋತಕ. ಸರ್ಕಾರಿ ಇಲಾಖೆಯೊಂದು ನಿಯತವಾಗಿ ನಡೆಸುವ ಕೆಲಸಗಳು ವಿವಾದಕ್ಕೆ ಈಡಾಗಬಾರದು. ಆದರೆ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಗಳ ಸಂದರ್ಭದಲ್ಲಿ ನಡೆದ ಆದಾಯ ತೆರಿಗೆ ಶೋಧ ಕಾರ್ಯಾಚರಣೆಗಳೆಲ್ಲಾ ವಿವಾದಕ್ಕೆ ಹೇತುವಾಗಿವೆ.

ಆದಾಯ ತೆರಿಗೆ ಇಲಾಖೆಯು ಬಿಜೆಪಿಯ ಎದುರಾಳಿ ಪಕ್ಷಗಳ ನಾಯಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಶೋಧ ನಡೆಸುತ್ತಿರುವುದು ಈಗ ಗುಟ್ಟಾಗಿರುವ ವಿಷಯವೇನೂ ಅಲ್ಲ. ಮಂಡ್ಯ, ಹಾಸನ, ಮೈಸೂರು, ಶಿವಮೊಗ್ಗ ಮೊದಲಾದೆಡೆ ನಡೆದ ಶೋಧ ಕಾರ್ಯಾಚರಣೆಗಳೆಲ್ಲವೂ ಜೆಡಿಎಸ್ ಮುಖಂಡರೊಂದಿಗೆ ಒಂದಲ್ಲಾ ಒಂದು ರೀತಿಯಲ್ಲಿ ನಂಟು ಹೊಂದಿರುವ ವ್ಯಕ್ತಿಗಳ ಮೇಲೆಯೇ ಆಗಿವೆ. ನಿಖಿಲ್ ಕುಮಾರಸ್ವಾಮಿ ಅವರ ಚುನಾವಣೆಯ ಮೇಲ್ವಿಚಾರಣೆಯನ್ನು ವಹಿಸಿಕೊಂಡಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಂಬಂಧಿಕರ ಮನೆಯಲ್ಲಿ ಶೋಧ ನಡೆದಿದೆ. ಈ ಹಿಂದೆ ಡಿ.ಕೆ. ಶಿವಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ನಡೆದಾಗ ಅವರು ಗುಜರಾತ್‌ನ ಕಾಂಗ್ರೆಸ್ ಶಾಸಕರನ್ನು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ವಿವಿಧ ರಾಜ್ಯಗಳಲ್ಲಿ ಚುನಾವಣೆಗಳ ಸಂದರ್ಭದಲ್ಲಿಯೂ ಬಿಜೆಪಿಯೇತರ ಪಕ್ಷಗಳ ನಾಯಕರನ್ನೇ ಗುರಿಯಾಗಿಟ್ಟುಕೊಂಡು ತೆರಿಗೆ ಶೋಧ ಕಾರ್ಯಗಳು ನಡೆದಿದ್ದವು. ನಿರ್ದಿಷ್ಟ ಇಲಾಖೆಯೊಂದನ್ನು ಆಡಳಿತಾರೂಢ ಪಕ್ಷಗಳು ದುರುಪಯೋಗ ಪಡಿಸಿಕೊಂಡರೆ ಅದರ ದೂರಗಾಮಿ ಪರಿಣಾಮಗಳು ಬಹಳ ಕೆಟ್ಟದಾಗಿರುತ್ತವೆ. ಸಿಬಿಐ ಎಂಬ ಸಂಸ್ಥೆ ನಡೆಸುವ ತನಿಖೆಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷಗಳನ್ನು ಹೊರತುಪಡಿಸಿದರೆ ಇನ್ಯಾವ ರಾಜಕೀಯ ಪಕ್ಷಗಳೂ ಒಪ್ಪದ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಅಂದರೆ, ಸಿಬಿಐಗಿದ್ದ ವಿಶ್ವಾಸಾರ್ಹತೆಯನ್ನು ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಇಲ್ಲವಾಗಿಸಲಾಯಿತು. ಇದರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಪಾಲಿದೆ. ತನ್ನ ಅಸ್ತಿತ್ವದ ಆರಂಭದಿಂದಲೂ ಕಾಂಗ್ರೆಸ್ಸಿನ ಈ ಗುಣವನ್ನು ಟೀಕಿಸುತ್ತಾ ಬಂದಿದ್ದ ಬಿಜೆಪಿ, ಈಗ ಅದೇ ಗುಣವನ್ನು ತನ್ನದಾಗಿಸಿಕೊಂಡಿರುವುದನ್ನು ಚುನಾವಣಾ ಕಾಲದ ತೆರಿಗೆ ಶೋಧ ಕಾರ್ಯಾಚರಣೆಗಳು ಹೇಳುತ್ತಿವೆ.

ADVERTISEMENT

ಈಗ ನಡೆದಿರುವ ತೆರಿಗೆ ಶೋಧ ಕಾರ್ಯಗಳಿಗೆ ಸಂಬಂಧಿಸಿ ಮುಖ್ಯವಾಗಿ ಎರಡು ಪ್ರಶ್ನೆಗಳು ಹುಟ್ಟಿಕೊಂಡಿವೆ. ಮೊದಲನೆಯದು, ಕಾರ್ಯಾಚರಣೆ ಯೋಜನೆಯು ಹಲವು ತಿಂಗಳುಗಳ ಹಿಂದೆಯೇ ರೂಪುಗೊಂಡಿದ್ದಿದ್ದರೆ ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ಚುನಾವಣೆಯ ಸಂದರ್ಭವನ್ನೇ ಏಕೆ ಆರಿಸಿಕೊಳ್ಳಲಾಯಿತು? ಎರಡನೆಯದು, ಈ ಶೋಧಗಳೆಲ್ಲವೂ ಬಿಜೆಪಿಯೇತರ ಪಕ್ಷಗಳ ನಾಯಕರನ್ನೇ ಏಕೆ ಕೇಂದ್ರವಾಗಿ ಇಟ್ಟುಕೊಂಡಿವೆ? ಚುನಾವಣೆಗಳಲ್ಲಿ ಹಣದ ಹೊಳೆ ಹರಿಯುವುದು ಈಗ ಬಹಿರಂಗ ರಹಸ್ಯ. ಎಲ್ಲಾ ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಭಾರಿ ಪ್ರಮಾಣದಲ್ಲಿ ಖರ್ಚು ಮಾಡುತ್ತಾರೆ.

ಇದಕ್ಕೆ ಹಣ ಹರಿದು ಬರುವ ದಾರಿಗಳು ಅಕ್ರಮ ಎಂಬುದೂ ನಿಜ. ಈ ಬಗೆಯ ಖರ್ಚಿನಲ್ಲಿ ತೊಡಗಿಕೊಳ್ಳುವುದರಲ್ಲಿ ಬಿಜೆಪಿಯ ಅಭ್ಯರ್ಥಿಗಳೂ ಇದ್ದಾರೆ. ಆದಾಯ ತೆರಿಗೆ ಇಲಾಖೆಯ ಶೋಧಗಳೆಲ್ಲವೂ ಬಿಜೆಪಿಯೇತರ ಪಕ್ಷಗಳ ಅಭ್ಯರ್ಥಿಗಳನ್ನಷ್ಟೇ ಗುರಿಯಾಗಿ ಇಟ್ಟುಕೊಂಡಿದ್ದರೆ ಅದರ ಅರ್ಥವೇನು? ಆ ಇಲಾಖೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುವಂತೆ ಮಾಡುವುದರಲ್ಲಿ ಆಡಳಿತಾರೂಢ ಬಿಜೆಪಿಯ ಪಾತ್ರ ಬಹುದೊಡ್ಡದಿದೆ ಎಂಬುದಂತೂ ಸ್ಪಷ್ಟವಾಗುತ್ತಿದೆ. ಆಡಳಿತದಲ್ಲಿರುವಾಗ ತನ್ನ ಲಾಭಕ್ಕಾಗಿ ಇಲಾಖೆಯೊಂದನ್ನು ದುರುಪಯೋಗ ಪಡಿಸಿಕೊಂಡರೆ ಆ ಇಲಾಖೆ ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಳ್ಳುತ್ತದೆ.

ಜನರಿಗೆ ಬದ್ಧವಾಗಿ ಇರಬೇಕಾದ ಸರ್ಕಾರಿ ಇಲಾಖೆಗಳು, ಅಧಿಕಾರಸ್ಥ ರಾಜಕಾರಣಿಗಳ ಸಾಕುಪ್ರಾಣಿಗಳಾಗುವುದು ಪ್ರಜಾಪ್ರಭುತ್ವ
ವನ್ನು ಒಳಗಿನಿಂದ ಶಿಥಿಲಗೊಳಿಸುತ್ತದೆ. ಆದಾಯ ತೆರಿಗೆ ಇಲಾಖೆಯು ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಅದು ಎಚ್ಚೆತ್ತುಕೊಳ್ಳದೇ ಇದ್ದರೆ ಎಚ್ಚರಿಸುವ ಕೆಲಸದಲ್ಲಿ ನಾಗರಿಕ ಸಮಾಜ ತೊಡಗಿಕೊಳ್ಳಬೇಕಿದೆ. ಇಲ್ಲವಾದರೆ ಆದಾಯ ತೆರಿಗೆ ಇಲಾಖೆಯೂ ಮತ್ತೊಂದು ಸಿಬಿಐ ಆಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.