ADVERTISEMENT

ಸಂಪಾದಕೀಯ| ಬಸವರಾಜ ವಿರುದ್ಧ ಆರೋಪ: ತನಿಖೆ ನಡೆಸುವುದು ಅಗತ್ಯ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2022, 19:31 IST
Last Updated 7 ಸೆಪ್ಟೆಂಬರ್ 2022, 19:31 IST
ಬಸವರಾಜ ದಡೇಸುಗೂರು
ಬಸವರಾಜ ದಡೇಸುಗೂರು    

ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ನೇಮಕಾತಿ ಅಕ್ರಮ ಪ್ರಕರಣ ಹೊಸ ತಿರುವು ಪಡೆದಿದೆ. ಒಂದು ಹುದ್ದೆ ಕೊಡಿಸಲು ₹ 15 ಲಕ್ಷ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕೊಪ್ಪಳ ಜಿಲ್ಲೆ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಎದುರಿಸುತ್ತಿದ್ದಾರೆ. ಶಾಸಕರ ಜತೆ ನಿವೃತ್ತ ಪೊಲೀಸ್ ಕಾನ್‌ಸ್ಟೆಬಲ್ ಪರಸಪ್ಪ ಮಾತನಾಡಿದ್ದಾರೆ ಎನ್ನಲಾದ ಸಂಭಾಷಣೆಯ ಆಡಿಯೊ ಬಹಿರಂಗವಾಗಿದೆ. ‘ಪಿಎಸ್ಐ ನೇಮಕಾತಿಗಾಗಿ ಕೊಟ್ಟಿದ್ದ ₹ 15 ಲಕ್ಷ ವಾಪಸ್ ಕೊಡಿ’ ಎಂದು ಪರಸಪ್ಪ ಅವರ ಮಾತಿನ ಮೂಲಕ ಆರಂಭವಾಗುವ ಆಡಿಯೊದಲ್ಲಿ, ‘ದುಡ್ಡು ಕೊಟ್ಟಿದ್ದೀಯ, ವಾಪಸ್ ಕೊಡುತ್ತೇನೆ ಎಂದು ಹೇಳಿದ್ದೇನಲ್ಲ. ಹಣ ಪಡೆದಿದ್ದೇನೆ. ಆದರೆ, ಸರ್ಕಾರಕ್ಕೆ ಕೊಟ್ಟ ಹಣ ಅದು. ನಿನ್ನ ಕೆಲಸಕ್ಕಾಗಿ ಕೊಟ್ಟಿದ್ದೀಯ. ಸಾಲವನ್ನೇನೂ ಕೊಟ್ಟಿಲ್ಲವಲ್ಲ’ ಎಂದು ಶಾಸಕರು ಹೇಳಿರುವುದು ಆಡಿಯೊದಲ್ಲಿದೆ.ಆ ಧ್ವನಿ ತಮ್ಮದೇ ಎಂದು ದಢೇಸೂಗೂರು ಒಪ್ಪಿಕೊಂಡಿದ್ದಾರೆ. ‘ಈ ವಿಷಯದಲ್ಲಿ ಉಂಟಾಗಿದ್ದ ವಿವಾದ ಇತ್ಯರ್ಥ ಮಾಡಲು ಮಧ್ಯವರ್ತಿ ಕೆಲಸ ಮಾಡಿದ್ದೆ’ ಎಂದೂ ಅವರು ಹೇಳಿಕೊಂಡಿದ್ದಾರೆ. ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಶಾಸಕರು ಭಾಗಿಯಾಗಿರುವ ಆರೋಪಕ್ಕೆ ಇದು ಪುಷ್ಟಿ ನೀಡುವಂತಿದೆ. ಚುನಾಯಿತ ಪ್ರತಿನಿಧಿ ಲಂಚ ಪಡೆಯುವುದುಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ‘ವ್ಯವಹಾರ’ವನ್ನು ಪರೋಕ್ಷವಾಗಿ ಒಪ್ಪಿಕೊಂಡ ಮೇಲೆ ಅವರ ವಿರುದ್ಧ ಕ್ರಮ ಜರುಗಿಸಲು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ ಸರ್ಕಾರ ಸೂಚನೆ ನೀಡಬೇಕಾಗಿತ್ತು ಅಥವಾ ಸಿಐಡಿ ಅಧಿಕಾರಿಗಳೇ ಪ್ರಕರಣ ದಾಖಲಿಸಬೇಕಾಗಿತ್ತು. ಲೋಕಾಯುಕ್ತ ಸಂಸ್ಥೆಯಾದರೂ ಸ್ವಯಂಪ್ರೇರಿತವಾಗಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸುವ ಕೆಲಸ ಮಾಡಬೇಕಿತ್ತು. ಆದರೆ, ಅವು ಯಾವುವೂ ಆಗಿಲ್ಲ. ಅದರ ಬದಲಿಗೆ, ದುಡ್ಡು ವಾಪಸ್ ಕೇಳಿದ ಪರಸಪ್ಪ ಅವರನ್ನು ಶಾಸಕರು ಅವಾಚ್ಯವಾಗಿ ಬೈದಿದ್ದಾರೆ ಎನ್ನಲಾದ ಮತ್ತೊಂದು ಆಡಿಯೊ ಹೊರಬಂದಿದೆ. ಅದರಲ್ಲಿ ‘... ನಿನಗೆ ಒದೀತೀನಿ’ ಎಂದು ಶಾಸಕರು ಬೆದರಿಕೆ ಹಾಕಿರುವುದು ಅಕ್ಷಮ್ಯ. ಸಾರ್ವಜನಿಕರೊಂದಿಗೆ ಗೌರವದಿಂದ ನಡೆದು ಕೊಳ್ಳಬೇಕಾದ ಚುನಾಯಿತ ಪ್ರತಿನಿಧಿಗಳು ಲಜ್ಜೆ ಬಿಟ್ಟು ವರ್ತಿಸುವುದು ಪ್ರಜಾತಂತ್ರಕ್ಕೆ ಮಾಡುವ ಅವಮಾನ. ಸಾರ್ವಜನಿಕ ಜೀವನದಲ್ಲಿ ಪರಿಶುದ್ಧತೆ, ಸೌಜನ್ಯ ಇಲ್ಲದ ಇಂತಹವರು ಚುನಾಯಿತ ಪ್ರತಿನಿಧಿಗಳಾಗಲು ಯೋಗ್ಯರಲ್ಲ. ದಢೇಸೂಗೂರು ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ್ಳಬೇಕು. ಈ ವಿಚಾರವಾಗಿ ಇಲ್ಲಿಯವರೆಗೆ ಬಿಜೆಪಿ ಅಧ್ಯಕ್ಷರಾಗಲೀ ಸರ್ಕಾರದ ಮುಖ್ಯಸ್ಥರಾಗಲೀ ಚಕಾರ ಎತ್ತಿಲ್ಲ ಎಂಬುದು ಸೋಜಿಗದ ಸಂಗತಿ.

2021ರ ಅಕ್ಟೋಬರ್‌ನಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಪರೀಕ್ಷಾ ಅಕ್ರಮ ಪತ್ತೆಯಾಗಿತ್ತು. ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಎಡಿಜಿಪಿ, ಏಳಕ್ಕೂ ಹೆಚ್ಚು ಡಿವೈಎಸ್‌ಪಿಗಳು ಸೇರಿದಂತೆ ಸುಮಾರು 100 ಮಂದಿಯನ್ನು ಈ ಪ್ರಕರಣ ದಲ್ಲಿ ಸಿಐಡಿ ಬಂಧಿಸಿದೆ. ಅಕ್ರಮ ನೇಮಕಾತಿಯ ಹಿಂದೆ ಕಾಂಗ್ರೆಸ್‌ನವರು ಇದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಒಳಗೊಂಡಂತೆ ಕೆಲವು ಸಚಿವರು ಆರೋಪಿಸುತ್ತಾ ಬಂದಿದ್ದಾರೆ. ಈ ಅಕ್ರಮದಲ್ಲಿ ಕಾಂಗ್ರೆಸ್‌ ನಾಯಕರೇ ಭಾಗಿಯಾಗಿದ್ದರೆ ಅವರನ್ನು ಬಂಧಿಸದೇ ಇರುವುದು ಏಕೆ? ಪಿಎಸ್ಐ ನೇಮಕಾತಿ ಅಕ್ರಮ ಪತ್ತೆಯಾದ ಬಳಿಕ ಸಹಾಯಕ ಪ್ರಾಧ್ಯಾಪಕರು, ಕೆಪಿಟಿಸಿಎಲ್ ಕಿರಿಯ ಸಹಾಯಕರು ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆಗಳಲ್ಲೂ ಅಕ್ರಮಗಳು ನಡೆದಿವೆ ಎಂದು ವರದಿಯಾಗಿದೆ. ನೇಮಕಾತಿ ಪ್ರಕ್ರಿಯೆ
ಯಲ್ಲಿ ಈ ಪರಿ ಅಕ್ರಮ ನಡೆಯುತ್ತದೆ ಎಂಬ ಭಾವನೆ ಗಟ್ಟಿಗೊಂಡರೆ, ಯುವ ಸಮುದಾಯವು ನಿರಾಶೆ–ಹತಾಶೆಗೆ ಈಡಾಗುತ್ತದೆ. ಸರ್ಕಾರಿ ಉದ್ಯೋಗಗಳಲ್ಲಿ ಹೆಚ್ಚಿನವು ಅಕ್ರಮ ಎಸಗುವವರ ಪಾಲಾದರೆ ಹಣ ಇಲ್ಲದವರು ಎಲ್ಲಿಗೆ ಹೋಗಬೇಕು? ನೇಮಕಾತಿಗಳಲ್ಲಿನ ಅಕ್ರಮಗಳ ತನಿಖೆಗೆ ವೇಗ ನೀಡಿ, ತಪ್ಪಿತಸ್ಥ ರಿಗೆ ತ್ವರಿತವಾಗಿ ಶಿಕ್ಷೆಯಾಗುವಂತೆ ನೋಡಿಕೊಂಡರೆ ಯುವ ಸಮುದಾಯದಲ್ಲಿ ಭರವಸೆ ಮೂಡೀತು. ಆದರೆ, ತನಿಖೆ ನಡೆಸಿ, ಅಕ್ರಮಗಳಿಗೆ ಶಾಶ್ವತ ತಡೆ ಹಾಕುವ ಇಚ್ಛಾಶಕ್ತಿಯನ್ನು ತೋರಬೇಕಾದ ಸರ್ಕಾರವು ವಿರೋಧ ಪಕ್ಷದವರತ್ತ ಬೊಟ್ಟು ತೋರುವುದರಲ್ಲೇ ನಿರತವಾಗಿದೆ. ಯಾವುದೇ ಪ್ರಕರಣವು ಜನರ ನೆನಪಿನಲ್ಲಿ ಹೆಚ್ಚು ದಿನ ಇರುವುದಿಲ್ಲ ಎಂಬ ಮಾತಿದೆ. ಜನರಲ್ಲಿನ ಮರೆಯುವ ಗುಣವನ್ನೇ ಸರ್ಕಾರಗಳು ನೆಚ್ಚಿಕೊಳ್ಳಲು ಬಯಸುತ್ತವೆ ಮತ್ತು ಅಕ್ರಮಗಳ ತನಿಖೆಯಲ್ಲಿ ಅನಗತ್ಯ ವಿಳಂಬಕ್ಕೆ ದಾರಿ‌‌ ಮಾಡಿಕೊಡುವುದನ್ನು ಪರಿಪಾಟವಾಗಿಸಿಕೊಂಡಿವೆ ಎಂಬುದು ಎಲ್ಲರೂ ಬಲ್ಲ ಸತ್ಯ. ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಅದು ಮರುಕಳಿಸುವುದು ಬೇಡ. ಮುಚ್ಚಿಹಾಕುವ ತಂತ್ರ ಬಳಕೆಯಾಗುವುದೂ ಬೇಡ. ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬೇಕು. ಪ್ರಕರಣವನ್ನು ಈಗಲಾದರೂ ನ್ಯಾಯಾಂಗ ಅಥವಾ ಲೋಕಾಯುಕ್ತ ತನಿಖೆಗೆ ವಹಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT