ಒಂದು ಪ್ರಶ್ನೆಪತ್ರಿಕೆಯನ್ನು ದೋಷರಹಿತವಾಗಿ ಸಿದ್ಧಪಡಿಸಲೂ ಸಾಧ್ಯವಾಗದ ಸ್ಥಿತಿಗೆ ಲೋಕಸೇವಾ ಆಯೋಗ ತಲುಪಿರುವುದು ನಾಚಿಕೆಗೇಡು
ಕರ್ನಾಟಕ ಲೋಕಸೇವಾ ಆಯೋಗವು ಬೇಡದ ಕಾರಣಗಳಿಗೆ ಸುದ್ದಿಯಾಗಿರುವುದೇ ಹೆಚ್ಚು. ಈಗಲೂ ಅಂತಹದೇ ಕಾರಣಕ್ಕೆ ಸುದ್ದಿಯಲ್ಲಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ ಆಗಸ್ಟ್ 27ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯ ಕನ್ನಡ ಪ್ರಶ್ನೆಪತ್ರಿಕೆಯಲ್ಲಿ ಭಾರಿ ಲೋಪದೋಷಗಳು ಪತ್ತೆಯಾಗಿದ್ದರಿಂದ ಡಿ. 29ರಂದು ಮರುಪರೀಕ್ಷೆ ನಡೆಸಲಾಯಿತು.
ಪ್ರಶ್ನೆಪತ್ರಿಕೆಗಳ ಕನ್ನಡ ಭಾಷಾಂತರದಲ್ಲಿ ಈ ಬಾರಿಯೂ ಬಹಳಷ್ಟು ಲೋಪಗಳಾಗಿವೆ. ಕನ್ನಡದಲ್ಲಿನ ಪ್ರಶ್ನೆಗಳನ್ನು ಓದಿದರೆ ಅರ್ಥವೇ ಆಗದಂತಹ ಪ್ರಶ್ನೆಗಳೂ ಇವೆ. ಅಪಾರ್ಥಕ್ಕೆ ಎಡೆಮಾಡುವ ಪ್ರಶ್ನೆಗಳೂ ಇವೆ. ಕನ್ನಡದಲ್ಲಿ ಪ್ರಶ್ನೆ ಅರ್ಥವಾಗದಿದ್ದರೆ ಇಂಗ್ಲಿಷ್‌ನಲ್ಲಿರುವ ಪ್ರಶ್ನೆಯನ್ನು ಓದಿ ಅರ್ಥ ಮಾಡಿಕೊಂಡು ಉತ್ತರ ಬರೆಯಿರಿ ಎಂದು ಆಯೋಗ ಸೂಚಿಸಿರುವುದು ಅದರ ಉದ್ಧಟತನಕ್ಕೆ ದ್ಯೋತಕ. ಕನ್ನಡ ನಾಡಿನಲ್ಲಿ ಕನ್ನಡದಲ್ಲಿಯೇ ಪ್ರಶ್ನೆಪತ್ರಿಕೆ ಸಿದ್ಧ ಮಾಡುವ ಯೋಗ್ಯತೆ ಆಯೋಗಕ್ಕೆ ಇಲ್ಲ ಎಂದರೆ ಅದನ್ನು ಕನ್ನಡ ನಾಡಿಗೆ ಬಗೆದ ದ್ರೋಹ ಎಂದೇ ಪರಿಗಣಿಸಬೇಕಾಗುತ್ತದೆ.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಲ್ಲ ಪರೀಕ್ಷೆಗಳಲ್ಲಿಯೂ ಪ್ರಶ್ನೆಪತ್ರಿಕೆಗಳನ್ನು ಮೊದಲು ಕನ್ನಡದಲ್ಲಿಯೇ ಸಿದ್ಧಪಡಿಸಿ ನಂತರ ಅವುಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸಬೇಕು. ಅದು ಸರಿಯಾದ ಕ್ರಮ. ಒಮ್ಮೆ ತಪ್ಪಾಗಿದೆ ಎಂದು ಮರುಪರೀಕ್ಷೆ ಮಾಡುವಾಗಲೂ ಆಯೋಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದಿಲ್ಲ ಎಂದರೆ ಅದನ್ನು ಉಡಾಫೆ ಧೋರಣೆ ಎಂದೇ ಭಾವಿಸಬೇಕಾಗುತ್ತದೆ. ಆ. 27ರಂದು ನಡೆದ ಪರೀಕ್ಷೆಯಲ್ಲಿ ಕನ್ನಡ ಭಾಷಾಂತರದ ಆಭಾಸ ವಿಪರೀತ ಆಗಿದೆ ಎನ್ನುವುದು ಗೊತ್ತಾದ ಮೇಲೆ ಮರುಪರೀಕ್ಷೆ ಮಾಡುವಾಗ ಗರಿಷ್ಠ ಎಚ್ಚರಿಕೆ ವಹಿಸಬೇಕಿತ್ತು.
ಕನ್ನಡ ನಾಡಿನಲ್ಲಿ ವಿಷಯ ಪರಿಣತಿ ಹೊಂದಿರುವ ಭಾಷಾಂತರಕಾರರಿಗೆ ಕೊರತೆ ಏನೂ ಇಲ್ಲ. ಅಂತಹವರನ್ನು ಸಂಪರ್ಕಿಸಿ ಅಭ್ಯರ್ಥಿಗಳಿಗೆ ಅರ್ಥವಾಗುವ ರೀತಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕಾದುದು ಆಯೋಗದ ಹೊಣೆ. ಈ ಹೊಣೆಯನ್ನು ಸರಿಯಾಗಿ ನಿರ್ವಹಿಸದ ಆಯೋಗವು ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡಿದೆ. ಆಯೋಗದ ಕಿವಿ ಹಿಂಡಿ ಸರಿದಾರಿಗೆ ತರಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲೆ ಇದೆ.
ಡಿ. 29ರಂದು ನಡೆದ ಮರುಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿಯೂ ಲೋಪದೋಷಗಳು ಕಂಡುಬಂದಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಕನ್ನಡದ ಪ್ರಶ್ನೆಪತ್ರಿಕೆಯಲ್ಲಿ ಲೋಪದೋಷ ಹೆಚ್ಚಾಗಿರುವುದರಿಂದ ಕನ್ನಡದಲ್ಲಿ ಉತ್ತರ ಬರೆದ ಅಭ್ಯರ್ಥಿಗಳಿಗೆ ತೊಂದರೆಯಾಗಿದೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಅವರೂ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕ ಆಡಳಿತ ಸೇವೆಗೆ ಸೇರಬೇಕು ಎಂಬ ಕನಸು ಹೊತ್ತ ಹಲವಾರು ಅಭ್ಯರ್ಥಿಗಳಿಗೆ ತೊಂದರೆಯಾಗಿದ್ದು ಮತ್ತೊಮ್ಮೆ ಮರುಪರೀಕ್ಷೆ ನಡೆಸಬೇಕು ಅಥವಾ ಪೂರ್ವಭಾವಿ ಪರೀಕ್ಷೆಯಲ್ಲಿ ಭಾಗಿಯಾದ ಎಲ್ಲರಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಕೆಲವು ಅಭ್ಯರ್ಥಿಗಳು ಇಟ್ಟಿದ್ದಾರೆ. ಅಭ್ಯರ್ಥಿಗಳ ಹೋರಾಟಕ್ಕೆ ವಿರೋಧ ಪಕ್ಷವಾದ ಬಿಜೆಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ. ಆ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವೈಖರಿಯು ಈಗಿರುವುದಕ್ಕಿಂತ ಭಿನ್ನವೇನೂ ಆಗಿರಲಿಲ್ಲ. ಆಯೋಗದ ಕಾರ್ಯಕ್ಷಮತೆ ಹದಗೆಡುವಲ್ಲಿ ಎಲ್ಲ ರಾಜಕೀಯ ಪಕ್ಷಗಳ ಕೊಡುಗೆಯೂ ಇದೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತದಂತಹ ಕಾರಣಗಳಿಗಾಗಿ ಕುಲಗೆಟ್ಟು ಹೋಗಿರುವ ಆಯೋಗಕ್ಕೆ ಕಾಯಕಲ್ಪ ನೀಡಲು ಈ ಹಿಂದೆ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದರು. ಆ ಪ್ರಯತ್ನವೂ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ. ಒಂದು ಪ್ರಶ್ನೆಪತ್ರಿಕೆಯನ್ನು ಸಮರ್ಪಕವಾಗಿ ಸಿದ್ಧಪಡಿಸಲೂ ಸಾಧ್ಯವಾಗದ ಸ್ಥಿತಿಗೆ ಆಯೋಗ ತಲುಪಿರುವುದು ನಾಚಿಕೆಗೇಡು. ಪ್ರಶ್ನೆಪತ್ರಿಕೆಗಳು ದೋಷಮುಕ್ತವಾಗಿರಬೇಕು.
ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಬೇಕು. ಕಾಲಮಿತಿಯಲ್ಲಿ ಪರೀಕ್ಷಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು. ಈ ಎಲ್ಲ ಕಾರಣಗಳಿಗಾಗಿ ಆಯೋಗದ ಕಾರ್ಯವೈಖರಿ ಸುಧಾರಿಸಲು ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಭ್ಯರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಜವಾಬ್ದಾರಿ ಈಗ ರಾಜ್ಯ ಸರ್ಕಾರದ ಮೇಲೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.