ADVERTISEMENT

ಸಂಪಾದಕೀಯ | ಜೆಇಇ ಮತ್ತು ನೀಟ್ ಪರೀಕ್ಷೆ: ನಿಗದಿಯಾದಂತೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 21:58 IST
Last Updated 28 ಆಗಸ್ಟ್ 2020, 21:58 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜೆಇಇ ಮತ್ತು ನೀಟ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನದ ವಿರುದ್ಧ ಕಾಂಗ್ರೆಸ್‌ ನೇತೃತ್ವದ ವಿರೋಧ ಪಕ್ಷಗಳು ‘ಪರೀಕ್ಷೆ ನಡೆಸುವುದಕ್ಕಿದು ಸರಿಯಾದ ಸಮಯವಲ್ಲ’ ಎಂದು ಗಟ್ಟಿ ದನಿಯಲ್ಲಿ ಹೇಳುತ್ತಿವೆ. ಕೊರೊನಾ ವೈರಸ್‌ ಸೋಂಕು ದೇಶವನ್ನೆಲ್ಲ ವ್ಯಾಪಿಸಿರುವ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಅಪಾಯಕ್ಕೆ ಒಡ್ಡಲಾಗುತ್ತಿದೆ ಎಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ; ಪರೀಕ್ಷೆಗಳನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಆತಂಕವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಸುರಕ್ಷತೆಯ ಕಾರಣಕ್ಕಾಗಿ ನಿರ್ಣಾಯಕ ಪರೀಕ್ಷೆಗಳನ್ನು ಮುಂದೂಡುವುದು ಸಮಸ್ಯೆಗೆ ಪರಿಹಾರವಲ್ಲ. ಎಂಜಿನಿಯರಿಂಗ್‌ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಜೆಇಇ ಹಾಗೂ ನೀಟ್‌ ಪರೀಕ್ಷೆಗಳನ್ನು ನಡೆಸುವುದು ಅನಿವಾರ್ಯ. ಈ ಪರೀಕ್ಷೆಗಳನ್ನು ಹೊರತುಪಡಿಸಿ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸಿಕೊಡುವ ಪರ್ಯಾಯ ಆಯ್ಕೆಗಳು ನಮ್ಮ ಮುಂದಿಲ್ಲ. ಹಾಗಾಗಿ, ನಿಗದಿಯಾಗಿರುವ ಪರೀಕ್ಷೆಗಳನ್ನು ಮುಂದೂಡುವುದರಿಂದ ಅನುಕೂಲಕ್ಕಿಂತ ಸಮಸ್ಯೆಗಳೇ ಹೆಚ್ಚು. ಕೋವಿಡ್‌–19 ಸೋಂಕಿನ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎನ್ನುವುದನ್ನು ಕೂಡ ಸ್ಪಷ್ಟವಾಗಿ ಹೇಳುವುದು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಪರೀಕ್ಷೆಯನ್ನು ಮುಂದೂಡುವುದರಿಂದ ಅನಗತ್ಯ ಗೊಂದಲಗಳು ಸೃಷ್ಟಿಯಾಗುತ್ತವೆಯೇ ವಿನಾ ಸಮಸ್ಯೆ ತಿಳಿಯಾಗುವುದಿಲ್ಲ. ವಿದ್ಯಾರ್ಥಿಗಳ ಸುರಕ್ಷತೆ ಎನ್ನುವುದನ್ನು ಅವರ ಶಿಕ್ಷಣದ ದೃಷ್ಟಿಯಿಂದಲೂ ಯೋಚಿಸಬೇಕಾಗುತ್ತದೆ. ಪದವಿ ಪ್ರವೇಶ ಹಂತದಲ್ಲಿ ಒಂದು ಶೈಕ್ಷಣಿಕ ವರ್ಷ ನಷ್ಟವಾದರೆ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನವೇ ಏರುಪೇರಾಗುವ ಸಾಧ್ಯತೆಯಿರುತ್ತದೆ. ‘ಶೂನ್ಯ ಶೈಕ್ಷಣಿಕ ವರ್ಷ’ ಸೃಷ್ಟಿಯಾದರೆ ವಿದ್ಯಾರ್ಥಿಗಳ ಜೊತೆಗೆ ಶೈಕ್ಷಣಿಕ ಸಂಸ್ಥೆಗಳೂ ಒತ್ತಡ ಎದುರಿಸಬೇಕಾಗುತ್ತದೆ. ಹಾಗಾಗಿ, ಆಯಾ ವರ್ಷದ ಪರೀಕ್ಷೆಗಳನ್ನು ಹೆಚ್ಚಿನ ವಿಳಂಬವಿಲ್ಲದೆ ನಡೆಸುವುದು ಅಪೇಕ್ಷಣೀಯ.

ಸೆಪ್ಟೆಂಬರ್‌ 1ರಿಂದ ನಡೆಯುವ ಜೆಇಇ ಹಾಗೂ ಸೆ. 13ರಂದು ನಡೆಯುವ ನೀಟ್‌ ಪರೀಕ್ಷೆ ಬರೆಯಲು 24 ಲಕ್ಷಕ್ಕೂ ಹೆಚ್ಚು ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಪರೀಕ್ಷೆಗಾಗಿ ವರ್ಷಪೂರ್ತಿ ಕಠಿಣ ಸಿದ್ಧತೆ ನಡೆಸಿರುತ್ತಾರೆ. ಪರೀಕ್ಷೆಗಳು ಮುಂದಕ್ಕೆ ಹೋಗುವುದರಿಂದ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆಯೂ ಇದೆ. ಹಾಗಾಗಿ, ನಿಗದಿಗೊಂಡಂತೆ ಪರೀಕ್ಷೆಗಳು ನಡೆಯುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಮುಖ್ಯವಾದುದು. ಹಾಗೆಂದು, ವಿದ್ಯಾರ್ಥಿಗಳ ಸುರಕ್ಷತೆಯಲ್ಲಿ ಯಾವುದೇ ರಾಜಿಯಾಗಬೇಕಿಲ್ಲ. ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸಿರುವ ಸಾರ್ವಜನಿಕ ಮಾರ್ಗಸೂಚಿಯು ಪರೀಕ್ಷೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಸುರಕ್ಷಿತ ವಾತಾವರಣದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಎಲ್ಲ ಸವಲತ್ತುಗಳನ್ನು ಕಲ್ಪಿಸಬೇಕು. ಪರೀಕ್ಷಾರ್ಥಿಗಳಿಗೆ ಸೂಕ್ತ ವಾಹನ ವ್ಯವಸ್ಥೆಯನ್ನು ರಾಜ್ಯ ಸರ್ಕಾರಗಳು ಕಲ್ಪಿಸಬೇಕು. ಎಸ್‌ಎಸ್ಎಲ್‌ಸಿ, ಪಿಯು ಮತ್ತು ಸಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ಕರ್ನಾಟಕದ ಸಾಧನೆಯು ಜೆಇಇ, ನೀಟ್‌ ಪರೀಕ್ಷೆಗಳಿಗೆ ಮಾದರಿಯಾಗಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಬಹಳಷ್ಟು ವಿರೋಧ ವ್ಯಕ್ತವಾಗಿತ್ತು. ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಆತ್ಮವಿಶ್ವಾಸ ಮೂಡಿಸುವ ಮೂಲಕ ಪರೀಕ್ಷಾ ಪ್ರಕ್ರಿಯೆಯನ್ನು ಸರ್ಕಾರ ಯಶಸ್ವಿಯಾಗಿ ನಡೆಸಿತ್ತು. ಆ ಸಂಕಲ್ಪಶಕ್ತಿಯನ್ನು ಜೆಇಇ, ನೀಟ್‌ ಪರೀಕ್ಷೆಗಳನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೋರಿಸಬೇಕಾಗಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ನಡೆಯಬೇಕಾಗಿದ್ದ ಈ ಪರೀಕ್ಷೆಗಳನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಮತ್ತೊಮ್ಮೆ ಪರೀಕ್ಷೆ ಮುಂದಕ್ಕೆ ಹೋಗುವುದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಥನೀಯವಲ್ಲ. ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಪರೀಕ್ಷೆಗಳು ಯಶಸ್ವಿಯಾಗಿ ನಡೆಯುವುದಕ್ಕೆ ಸಹಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT