ADVERTISEMENT

ಸಂಪಾದಕೀಯ | ಹೃದಯಾಘಾತಗಳ ದಿಢೀರ್‌ ಹೆಚ್ಚಳ: ಅಧ್ಯಯನದಿಂದ ಸತ್ಯ ಹೊರಬರಲಿ

ಹೃದಯಾಘಾತಗಳು ಹೆಚ್ಚುತ್ತಿರುವುದರ ಬಗ್ಗೆ ವೈಜ್ಞಾನಿಕ ಸಮೀಕ್ಷೆಗಳು ಅಗತ್ಯ. ನಿಖರ ಹಾಗೂ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದ ಸಂಗತಿಗಳು ಅಭಿಪ್ರಾಯಗಳಾಗಿಯಷ್ಟೇ ಉಳಿದಿರುತ್ತವೆ.

ಸಂಪಾದಕೀಯ
Published 1 ಜುಲೈ 2025, 23:28 IST
Last Updated 1 ಜುಲೈ 2025, 23:28 IST
   

ಒಂದೂವರೆ ತಿಂಗಳ ಅವಧಿಯಲ್ಲಿ ಹಾಸನ ಜಿಲ್ಲೆಯ ಇಪ್ಪತ್ತೊಂದು ಮಂದಿ ಹೃದಯಾಘಾತದಿಂದ ಸಾವಿಗೀಡಾಗಿರುವುದು ಕಳವಳಕಾರಿ ವಿದ್ಯಮಾನ. ದೈಹಿಕವಾಗಿ ಸದೃಢರಾಗಿ ಇರುವವರೂ ತೀವ್ರ ಹೃದಯಾಘಾತ, ಹೃದಯಸ್ತಂಭನಕ್ಕೆ ತುತ್ತಾಗುತ್ತಿದ್ದಾರೆ. ಕೊರೊನಾ ನಂತರ ಯುವಜನ ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವ ಪ್ರಕರಣಗಳು ದೇಶದ ವಿವಿಧ ಭಾಗಗಳಿಂದ ವರದಿ ಆಗುತ್ತಿರುವುದರ ಹಿನ್ನೆಲೆಯಲ್ಲಿ, ಜಿಲ್ಲೆಯೊಂದರಲ್ಲಿ ದಿಢೀರ್‌ ಸಂಭವಿಸುತ್ತಿರುವ ಹೃದಯಾಘಾತಗಳು ನಾಗರಿಕರ ಆತಂಕಕ್ಕೆ ಕಾರಣವಾಗಿವೆ. ಹಾಸನ ಜಿಲ್ಲೆಯೊಂದರಲ್ಲಿಯೇ ಹೆಚ್ಚಿನ ಹೃದಯಾಘಾತಗಳು ಏಕೆ ಸಂಭವಿಸುತ್ತಿವೆ ಎನ್ನುವುದರ ಬಗ್ಗೆ ಅಧ್ಯಯನ ನಡೆಸಲು ಸರ್ಕಾರ ಸಮಿತಿ ರಚಿಸಿರುವುದು ಸ್ವಾಗತಾರ್ಹ. ಅಧ್ಯಯನ ತ್ವರಿತವಾಗಿ ಪೂರ್ಣಗೊಂಡು ಜನರ ಸಂಶಯಗಳಿಗೆ ಉತ್ತರ ದೊರೆಯಲಿ. ಹೆಚ್ಚುತ್ತಿರುವ ಹೃದಯಾಘಾತಗಳಿಗೂ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳಿಗೂ ಇರಬಹುದಾದ ಸಂಬಂಧದ ಬಗ್ಗೆ ವಿಶ್ಲೇಷಣೆಗಳೂ ನಡೆದಿವೆ. ಈಗಿನ ಜೀವನಶೈಲಿ, ಆಹಾರ ಪದ್ಧತಿ, ಮೊಬೈಲ್‌ ಫೋನ್‌ ವ್ಯಸನದಿಂದಲೂ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದೆ; ಅಧಿಕ ರಕ್ತದೊತ್ತಡ, ಮಧುಮೇಹ ಸಮಸ್ಯೆಗಳು ಕಿರಿಯರಲ್ಲೂ ಕಾಣಿಸಿಕೊಳ್ಳುತ್ತಿವೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ. ಜೀವನಶೈಲಿಗೂ ಆರೋಗ್ಯಕ್ಕೂ ಸಂಬಂಧ ಇದೆ ಎನ್ನುವುದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಆದರೆ, ಹಾಸನ ಜಿಲ್ಲೆಯಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿರುವುದಕ್ಕೂ ಅನಾರೋಗ್ಯಕರ ಜೀವನಶೈಲಿಗೂ ಸಂಬಂಧ ಕಲ್ಪಿಸುವುದು ಕಷ್ಟ. ಜೀವನ ಶೈಲಿಯಲ್ಲಿನ ಬದಲಾವಣೆ ನಿರ್ದಿಷ್ಟ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು, ಇಡೀ ವಿಶ್ವವನ್ನು ಬಾಧಿಸುತ್ತಿರುವ ಸಮಸ್ಯೆ. ಹಾಗೆಯೇ, ಕೊರೊನಾ ನಂತರ ಹೃದಯ ಸಂಬಂಧಿ ಸಮಸ್ಯೆಗಳ ಸಂಖ್ಯೆ ಹೆಚ್ಚಾಗಿರುವುದರ ಬಗೆಗಿನ ಆತಂಕವೂ ವಿಶ್ವವ್ಯಾಪಿ ಆದುದೇ ಆಗಿದೆ. 2020ರ ನಂತರ ಭಾರತದಲ್ಲಿ ಹೃದಯಾಘಾತಗಳ ಸಂಖ್ಯೆಯಲ್ಲಿ ದಿಢೀರ್‌ ಹೆಚ್ಚಳ ಆಗಿದ್ದು, ಶೇ 50ರಷ್ಟು ಹೃದಯಾಘಾತಗಳು 40 ವರ್ಷದೊಳಗಿನ ವಯೋಮಾನದವರಲ್ಲೇ ಸಂಭವಿಸುತ್ತಿವೆ. ಪುಟ್ಟ ಮಕ್ಕಳು ಕೂಡ ಹೃದ್ರೋಗಕ್ಕೆ ಬಲಿಯಾಗಿರುವ ಪ್ರಕರಣಗಳು ವರದಿಯಾಗಿವೆ. ಈ ವರ್ಷದ ಆರಂಭದಲ್ಲಿ, ಚಾಮರಾಜನಗರ ಜಿಲ್ಲೆಯಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ಹೃದಯ ಸ್ತಂಭನದಿಂದ ಸಾವಿಗೀಡಾಗಿದ್ದಳು. ಈ ಅಂಕಿಅಂಶಗಳೆಲ್ಲ, ನಾಗರಿಕರು ತಮ್ಮ ಹೃದಯದ ಆರೋಗ್ಯದ ಬಗ್ಗೆ ಆತಂಕಪಡಲು ಕಾರಣವಾಗಿವೆ.

ಹೃದಯಾಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಬಗ್ಗೆ ಜನರಲ್ಲಿ ಇರುವ ಆತಂಕವನ್ನು ಪರಿಹರಿಸಬೇಕಾದುದು ಸರ್ಕಾರದ ಕರ್ತವ್ಯ. ವೈಜ್ಞಾನಿಕ ಅಧ್ಯಯನಗಳ ಮೂಲಕ ಹೃದಯಾಘಾತಕ್ಕೆ ಕಾರಣಗಳನ್ನು ಕಂಡುಕೊಂಡು, ಸತ್ಯಾಂಶವನ್ನು ಜನರ ಮುಂದಿಡುವ ಕೆಲಸ ಆದಷ್ಟು ತ್ವರಿತವಾಗಿ ನಡೆಯಬೇಕಾಗಿದೆ. ‘ಕೋವಿಡ್‌–19’ ಲಸಿಕೆಯ ಅಡ್ಡ ಪರಿಣಾಮದ ರೂಪದಲ್ಲಿ ಹೃದಯಾಘಾತಗಳ ಹೆಚ್ಚಳದ ಸಾಧ್ಯತೆಯನ್ನು ಕೆಲವು ವೈದ್ಯರು ನಿರಾಕರಿಸಿದ್ದಾರೆ. ಆದರೆ, ನಿಖರ ಹಾಗೂ ವೈಜ್ಞಾನಿಕ ಅಧ್ಯಯನದ ಬೆಂಬಲವಿಲ್ಲದ ಸಂಗತಿಗಳು ಅಭಿಪ್ರಾಯಗಳಾಗಿಯಷ್ಟೇ ಉಳಿದಿರುತ್ತವೆ. ಅಧ್ಯಯನದ ಜೊತೆ ಜೊತೆಗೇ ಹೃದ್ರೋಗ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ಸವಲತ್ತುಗಳನ್ನು ಬಲಪಡಿಸಬೇಕಾದ ಕೆಲಸವನ್ನೂ ಸರ್ಕಾರ ಮಾಡಬೇಕಾಗಿದೆ. ಹೆಚ್ಚುತ್ತಿರುವ ಹೃದಯಾಘಾತಗಳನ್ನು ನಿಭಾಯಿಸುವ ಮಟ್ಟಿಗೆ ನಮ್ಮ ವೈದ್ಯಕೀಯ ವ್ಯವಸ್ಥೆ ಸದೃಢವಾಗಿಲ್ಲ. ಬಹುತೇಕ ಸರ್ಕಾರಿ ಆಸ್ಪತ್ರೆಗಳು ಹೃದಯಾಘಾತದ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲೂ ಸಾಧ್ಯವಾಗದಷ್ಟು ದುರ್ಬಲವಾಗಿವೆ. ಹೃದಯಾಘಾತಕ್ಕೆ ಒಳಗಾದವರಿಗೆ ತಕ್ಷಣ ಚಿಕಿತ್ಸೆ ದೊರೆಯುವುದು ಅಗತ್ಯ. ಕೆಲವು ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕದೆಯೇ ಸಾವು ಸಂಭವಿಸುವುದಿದೆ. ಹೃದ್ರೋಗ ಸಂಬಂಧಿತ ಚಿಕಿತ್ಸೆಗಳು ದುಬಾರಿಯಾದುದರಿಂದ, ಜನಸಾಮಾನ್ಯರು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಹಿಂಜರಿಯುವುದೂ ಇದೆ. ಹೃದ್ರೋಗ ಸಮಸ್ಯೆಗಳು ಮತ್ತು ಚಿಕಿತ್ಸೆಯ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ವ್ಯಾಪಕವಾಗಿ ಮಾಡಬೇಕಾಗಿದೆ. ಹೃದಯಾಘಾತದ ಸಂದರ್ಭದಲ್ಲಿ ಜನಸಾಮಾನ್ಯ ರಿಗೆ ಖಾಸಗಿ ಸಹಭಾಗಿತ್ವದಲ್ಲಿ ಸುಲಭ ದರದಲ್ಲಿ ಚಿಕಿತ್ಸೆ ಒದಗಿಸುವ ಮಾರ್ಗೋಪಾಯಗಳನ್ನೂ ಸರ್ಕಾರ ಕಂಡುಕೊಳ್ಳಬೇಕಾಗಿದೆ. ಹಾಸನ ಜಿಲ್ಲೆಯಲ್ಲಿ, ಮೇ 20ರಿಂದ ಜೂನ್‌ 30ರ ಅವಧಿಯಲ್ಲಿ 21 ಜನರು ಹೃದಯಾಘಾತದಿಂದ ಮೃತಪಟ್ಟಿರುವುದು ವೈದ್ಯಕೀಯ ವ್ಯವಸ್ಥೆ ಎಚ್ಚತ್ತುಕೊಳ್ಳಲು ಕಾರಣವಾಗಬೇಕು. ಸರ್ಕಾರ ನೇಮಿಸಿರುವ ಸಮಿತಿಯ ಅಧ್ಯಯನ ಹಾಸನದ ಪ್ರಕರಣಗಳಿಗಷ್ಟೇ ಸೀಮಿತವಾಗದೆ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ಒಳಗೊಳ್ಳುವಂತಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT