ADVERTISEMENT

ಸಂಪಾದಕೀಯ | ಚುನಾವಣಾ ಬಾಂಡ್‌: ಸಿಂಧುತ್ವದ ಪ್ರಶ್ನೆ ತ್ವರಿತವಾಗಿ ಬಗೆಹರಿಯಲಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2022, 19:31 IST
Last Updated 2 ಜನವರಿ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಂವಿಧಾನ ಪೀಠದ ಮುಂದೆ ದೀರ್ಘ ಕಾಲದಿಂದ ಬಾಕಿ ಇರುವ ಮಹತ್ವದ ಪ್ರಕರಣಗಳನ್ನು ಬೇಗ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿ ನಿವೃತ್ತ ಅಧಿಕಾರಿಗಳು, ವಕೀಲರು, ವಿದ್ವಾಂಸರು ಸೇರಿ ಹಲವು ಮಂದಿ ಗಣ್ಯ ನಾಗರಿಕರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ಚುನಾವಣಾ ಬಾಂಡ್‌ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿರುವ ಒಂದು ಅರ್ಜಿಯೂ ಬಾಕಿಯಿರುವ ಅರ್ಜಿಗಳಲ್ಲಿ ಸೇರಿದೆ. ಈ ಅರ್ಜಿ ಸುಮಾರು ನಾಲ್ಕು ವರ್ಷಗಳಿಂದ ಬಾಕಿ ಇದೆ. ಈ ಪ್ರಕರಣವನ್ನು ವಿಚಾರಣೆಗೆ ಆಯ್ದುಕೊಂಡಿದ್ದರೂ ಇನ್ನೂ ವಿಚಾರಣೆ ಆರಂಭ ಆಗಿಲ್ಲ. ಚುನಾವಣಾ ಬಾಂಡ್‌ಗಳ ಕಾನೂನುಬದ್ಧತೆ ಮತ್ತು ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಬೇಗ ತೀರ್ಮಾನಕ್ಕೆ ಬರುವುದು ಚುನಾವಣಾ ವ್ಯವಸ್ಥೆಯ ಉತ್ತಮ ಆರೋಗ್ಯಕ್ಕೆ
ಬಹಳ ಮುಖ್ಯ. ಹಲವಾರು ಕಾನೂನುಗಳಿಗೆ ಹಲವು ತಿದ್ದುಪಡಿಗಳನ್ನು ಮಾಡಿ 2018ರಲ್ಲಿ ಚುನಾವಣಾ ಬಾಂಡ್‌ ಯೋಜನೆಯ ಅಧಿಸೂಚನೆ ಹೊರಡಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಮತ್ತು ಅಮಿತವಾದ ದೇಣಿಗೆ ನೀಡುವುದನ್ನು ವಿವಿಧ ತಿದ್ದುಪಡಿಗಳ ಮೂಲಕ ಕಾನೂನುಬದ್ಧಗೊಳಿಸಲಾಗಿದೆ. ಸರ್ಕಾರದ ಈ ನಡೆಯ ಬಗ್ಗೆವಿರೋಧವೂ ವ್ಯಕ್ತವಾಗಿತ್ತು.

ಚುನಾವಣಾ ಬಾಂಡ್‌ಗಳು ಅಂದರೆ, ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಬ್ಯಾಂಕ್‌ನಿಂದ ಖರೀದಿಸಬಹುದಾದ ಬಾಂಡ್‌. ಹೀಗೆ ಬಾಂಡ್‌ ಖರೀದಿಸುವಾಗ ದೇಣಿಗೆ ನೀಡುವವರು ತಮ್ಮ ಗುರುತನ್ನು ಬಹಿರಂಗಪಡಿಸಬೇಕಿಲ್ಲ. ಇಂತಹ ದೇಣಿಗೆ ವ್ಯವಸ್ಥೆಯು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯನ್ನು ಕಪ್ಪುಹಣದಿಂದ ಮುಕ್ತಗೊಳಿಸು
ತ್ತದೆ ಎಂಬುದು ಸರ್ಕಾರದ ಪ್ರತಿಪಾದನೆ. ಆದರೆ, ಈ ಪ್ರತಿಪಾದನೆಯು ಹಲವು ರೀತಿಯಲ್ಲಿ ಲೋಪಗಳಿಂದ ಕೂಡಿದ್ದಾಗಿದೆ. ಈ ಯೋಜನೆಯು ಪಾರದರ್ಶಕವಲ್ಲ, ದೇಣಿಗೆ ನೀಡಿದವರು ಅನಾಮಧೇಯರಾಗಿಯೇ ಉಳಿಯುತ್ತಾರೆ; ಅದಲ್ಲದೆ, ಮೇಲ್ನೋಟಕ್ಕೆ ಕಾಣಿಸುವ ಮತ್ತು ಕಾಣಿಸದ ವಿವಿಧ ಕಾರಣ ಗಳಿಂದಾಗಿ ದೇಣಿಗೆದಾರರು ಆಡಳಿತ ಪಕ್ಷದ ಪಕ್ಷಪಾತಿಯಾಗುತ್ತಾರೆ. ಸಂದಾಯವಾಗಿರುವ ಒಟ್ಟು ದೇಣಿಗೆಯಲ್ಲಿ ಶೇ 92ರಷ್ಟು ₹ 1 ಕೋಟಿ ಮೌಲ್ಯದ ಬಾಂಡ್‌ಗಳಾಗಿವೆ. ಇದರಲ್ಲಿ ಶೇ 70ಕ್ಕಿಂತ ಹೆಚ್ಚು ಬಿಜೆಪಿಗೆ ಸಿಕ್ಕಿದೆ. ಕೋಟ್ಯಂತರ ರೂಪಾಯಿಗಳನ್ನು ಬಾಂಡ್‌ಗಳ ಮೂಲಕ ಬಿಜೆಪಿ ಸಂಗ್ರಹಿಸಿದೆ. ದೇಣಿಗೆ ಕೊಟ್ಟವರು ಯಾರು ಮತ್ತು ಅವರು ಯಾವ ಪಕ್ಷಕ್ಕೆ ಕೊಟ್ಟಿದ್ದಾರೆ ಎಂಬುದು ಮತದಾರರಿಗೆ ತಿಳಿಯುವುದಿಲ್ಲ. ಆದರೆ, ಈ ಮಾಹಿತಿ ಸರ್ಕಾರಕ್ಕೆ ತಿಳಿಯುತ್ತದೆ. ಸರ್ಕಾರದ ನೀತಿಗಳ ಮೇಲೆ ದೇಣಿಗೆಯು ಪ್ರಭಾವ ಬೀರಿದೆಯೇ ಎಂಬುದು ಮತದಾರರಿಗೆ ಸ್ಪಷ್ಟವಾಗುವುದಿಲ್ಲ. ಹಾಗಾಗಿ, ಇದು ಮತದಾರರ ಹಕ್ಕುಗಳ ಉಲ್ಲಂಘನೆ ಎನಿಸಿಕೊಳ್ಳುತ್ತದೆ. ಚುನಾವಣೆಯಲ್ಲಿ ಹಣವು ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬುದು, ಭಾರತದಲ್ಲಿ ಹೇಗೆ ಚುನಾವಣೆ ನಡೆಯುತ್ತಿದೆ ಎಂಬುದು ಬಲ್ಲವರಿಗೆ ಗೊತ್ತು. ಹಾಗಾಗಿಯೇ, ದೇಣಿಗೆ ನೀಡಿಕೆ ವ್ಯವಸ್ಥೆಯು ನ್ಯಾಯಯುತವಾಗಿ, ಪಾರದರ್ಶಕವಾಗಿ ಮತ್ತು ಸರಿಯಾಗಿ ಇರುವುದು ಬಹಳ ಮುಖ್ಯ. ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್‌ ಯೋಜನೆಯ ಬಗ್ಗೆ ಸಮ್ಮತಿ ಇರಲಿಲ್ಲ. ಆದರೆ, ಅದಕ್ಕಿಂತ ಭಿನ್ನವಾದ ನಿಲುವನ್ನು ಆಯೋಗವು ನ್ಯಾಯಾಲಯದಲ್ಲಿ ತಳೆಯಲು ಕಾರಣವೇನು ಎಂಬುದು ಗೊತ್ತಿಲ್ಲ.

ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ 2018ರ ಬಳಿಕ ಹಲವಾರು ಚುನಾವಣೆಗಳು ನಡೆದಿವೆ. ಚುನಾವಣಾ ಬಾಂಡ್‌ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯು ಈ ಅವಧಿಯಲ್ಲಿ ವಿಚಾರಣೆಗೆ ಬರಲೇ ಇಲ್ಲ. ಬಾಂಡ್‌ ಮಾರಾಟಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್‌ ನಿರಾಕರಿಸಿತ್ತು. ಕೆಲವು ರಾಜ್ಯಗಳ ಚುನಾವಣೆಗೆ ಮೊದಲು, 2021ರ ಏಪ್ರಿಲ್‌ನಲ್ಲಿ ಬಾಂಡ್‌ ಮಾರಾಟಕ್ಕೆ ತಡೆ ನೀಡಬೇಕು ಎಂದು ಕೋರಿ ತುರ್ತು ಅರ್ಜಿಯೊಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆ ಆಗಿತ್ತು. ಕಾನೂನಿನ ಯಾವುದೇ ಅಡ್ಡಿ ಇಲ್ಲದೆಚುನಾವಣಾ ಬಾಂಡ್‌ ಮಾರಾಟಕ್ಕೆ ಹಿಂದಿನ ವರ್ಷಗಳಲ್ಲಿ ಅನುಮತಿ ನೀಡಲಾಗಿತ್ತು; ಹಾಗಾಗಿ, ಬಾಂಡ್ ಮಾರಾಟಕ್ಕೆ ತಡೆ ನೀಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ ಎಂದು ಆಗಿನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಹೇಳಿದ್ದರು. ಕೆಲವೇ ತಿಂಗಳುಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಚುನಾವಣಾ ಬಾಂಡ್‌ ಮಾರಾಟದ ಹತ್ತು ದಿನಗಳ ಅವಧಿಯು ಜನವರಿ 1ರಂದು ಶುರುವಾಗಿದೆ. ಬಾಂಡ್‌ ಯೋಜನೆಯು ಸಾಂವಿಧಾನಿಕವಾಗಿ ಸಿಂಧುವೇ ಎಂಬ ಪ್ರಶ್ನೆಗೆ ದೇಶ ಆದಷ್ಟು ಬೇಗ ಉತ್ತರ ಕಂಡುಕೊಳ್ಳಬೇಕಿದೆ. ಚುನಾವಣಾ ಬಾಂಡ್‌ ಯೋಜನೆಯಲ್ಲಿ ‘ದೇಶದ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯದ ಮೇಲೆ ಭಾರಿ ಪರಿಣಾಮ ಬೀರಬಲ್ಲ ಮಹತ್ವದ ವಿಚಾರಗಳು ಅಡಗಿವೆ’ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ಹೇಳಿತ್ತು ಎಂಬುದು ಗಮನಾರ್ಹ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.