ADVERTISEMENT

ಕಾಶ್ಮೀರಕ್ಕೆ ವಿದೇಶಿ ಸಂಸದರ ಭೇಟಿ; ಉತ್ತರಕ್ಕಿಂತ ಪ್ರಶ್ನೆಗಳೇ ಹೆಚ್ಚು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 5:27 IST
Last Updated 12 ಫೆಬ್ರುವರಿ 2020, 5:27 IST
ಸಂಪಾದಕೀಯ
ಸಂಪಾದಕೀಯ   

ಜಮ್ಮು– ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ಬಳಿಕ ಇದೇ ಮೊದಲ ಬಾರಿಗೆ ವಿದೇಶಿ ಸಂಸದರ ನಿಯೋಗವೊಂದು ಶ್ರೀನಗರಕ್ಕೆ ಭೇಟಿ ನೀಡಿತ್ತು. ನವದೆಹಲಿಗೆ ಭೇಟಿ ನೀಡಿದ್ದ ಐರೋಪ್ಯ ಒಕ್ಕೂಟದ 27 ಸಂಸದರಲ್ಲಿ 23 ಮಂದಿ ಮಾತ್ರ ಶ್ರೀನಗರಕ್ಕೆ ಭಾರಿ ಭದ್ರತೆಯೊಂದಿಗೆ ತೆರಳಿದ್ದರು. ಈ ಭೇಟಿಯ ಮೂಲಕ, ಜಮ್ಮು– ಕಾಶ್ಮೀರದಲ್ಲಿ ಶಾಂತ– ಸಹಜ ಸ್ಥಿತಿ ನೆಲೆಸಿದೆಯೆಂದು ಜಗತ್ತಿಗೆ ತೋರಿಸಿಕೊಡಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಆದರೆ, ಅಲ್ಲಿಗೆ ಭೇಟಿ ನೀಡಲು ಬಯಸಿದ ಭಾರತದ ವಿರೋಧ ಪಕ್ಷಗಳ ಸಂಸದರನ್ನು ತಡೆದು, ವಿದೇಶಿ ಸಂಸದರನ್ನು ಮಾತ್ರ ಕರೆದುಕೊಂಡು ಹೋಗಿರುವುದು ಎಷ್ಟರಮಟ್ಟಿಗೆ ಸರಿ? ಐರೋಪ್ಯ ಒಕ್ಕೂಟದ ಸಂಸದರ ಈ ಭೇಟಿಯ ಸಂದರ್ಭದಲ್ಲೇ ಉಗ್ರಗಾಮಿಗಳು ಕಾಶ್ಮೀರದಲ್ಲಿ ಪಶ್ಚಿಮ ಬಂಗಾಳದ ಆರು ಮಂದಿ ವಲಸೆ ಕಾರ್ಮಿಕರ ಹತ್ಯೆ ನಡೆಸಿದ್ದಾರೆ.


ಶ್ರೀನಗರದಲ್ಲಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದ್ದರು, ಅಲ್ಲಲ್ಲಿ ಪ್ರತಿಭಟನೆ ನಡೆದದ್ದೂ ವರದಿಯಾಗಿದೆ. ಇದನ್ನು ಗಮನಿಸಿದರೆ, ವಿಶೇಷ ಸ್ಥಾನಮಾನ ರದ್ದುಗೊಳಿಸಿ 85 ದಿನ ಕಳೆದ ಬಳಿಕವೂ ಕಾಶ್ಮೀರ ಸಹಜ ಸ್ಥಿತಿಗೆ ಬಂದಿಲ್ಲ ಎನ್ನುವುದು ಸ್ಪಷ್ಟ. ವಿದೇಶಿ ನಿಯೋಗದ ಸದಸ್ಯರು ವಿಮಾನ ನಿಲ್ದಾಣದಿಂದ ಬಿಗಿಭದ್ರತೆಯೊಂದಿಗೆ ಗುಂಡುನಿರೋಧಕ ಕಾರುಗಳಲ್ಲಿ ಹೋಟೆಲ್‌ಗೆ ತೆರಳಿದ್ದಾರೆ. ಬಳಿಕ ದಾಲ್‌ ಸರೋವರದಲ್ಲಿ ದೋಣಿ ವಿಹಾರ ಮಾಡಿ ಫೋಟೊಗಳನ್ನು ತೆಗೆಸಿಕೊಂಡದ್ದು ಬಿಟ್ಟರೆ ಅಲ್ಲಿನ ಜನಸಾಮಾನ್ಯರ ಜೊತೆಗೆ ಬೆರೆತದ್ದಾಗಲೀ, ಮಾತುಕತೆ ನಡೆಸಿದ್ದಾಗಲೀ ವರದಿಯಾಗಿಲ್ಲ. ಭೇಟಿಯ ಬಳಿಕ ನಿಯೋಗದ ಸದಸ್ಯರು ಕಾಶ್ಮೀರದ ಪ್ರಕೃತಿ ಸೌಂದರ್ಯವನ್ನು ಹೊಗಳಿದ್ದಾರೆ. ‘ವಿಶೇಷ ಸ್ಥಾನಮಾನ ರದ್ದತಿಯು ಭಾರತದ ಆಂತರಿಕ ವಿಷಯ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ನಾವು ಬೆಂಬಲಿಸುತ್ತೇವೆ’ ಎಂಬ ಹೇಳಿಕೆಯನ್ನೂ ನೀಡಿದ್ದಾರೆ.

ಬ್ರಿಟನ್‌, ಫ್ರಾನ್ಸ್‌, ಇಟಲಿ, ಪೋಲಂಡ್‌ ಮತ್ತು ಜರ್ಮನಿಯ ಬಲಪಂಥೀಯ ನಿಲುವಿನ ಈ ಸಂಸದರು, ಅದೇ ನಿಲುವಿನ ಎನ್‌ಡಿಎ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವುದರಲ್ಲಿ ವಿಶೇಷವೇನೂ ಇಲ್ಲ. ನಿಯೋಗವು ಕಾಶ್ಮೀರದ ಜನಸಾಮಾನ್ಯರನ್ನು ಭೇಟಿ ಮಾಡಿ ಪರಿಸ್ಥಿತಿಯ ಬಗ್ಗೆ ಚರ್ಚೆ, ಮಾತುಕತೆ ನಡೆಸಿದ್ದರೆ ಅಲ್ಲಿಯ ನೈಜ ಪರಿಸ್ಥಿತಿ ಏನು ಎನ್ನುವುದು ಗೊತ್ತಾಗುತ್ತಿತ್ತು. ನಿಯೋಗದಲ್ಲಿದ್ದ ಒಬ್ಬ ವಿದೇಶಿ ಸಂಸದ, ‘ಕಾಶ್ಮೀರಕ್ಕೆ ಭಾರತದ ಸಂಸದರ ಭೇಟಿಗೆ ಏಕೆ ಅವಕಾಶವನ್ನು ಕೊಡುತ್ತಿಲ್ಲ’ ಎಂದು ಪ್ರಶ್ನಿಸಿರುವುದು ಸರಿಯಾಗಿಯೇ ಇದೆ. ಈಗಲೂ ಅಲ್ಲಿ ಮಾಜಿ ಮುಖ್ಯಮಂತ್ರಿಗಳ ಸಹಿತ ವಿರೋಧ ಪಕ್ಷಗಳ ನೂರಾರು ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧನದಲ್ಲಿ ಇಡಲಾಗಿದೆ.

ADVERTISEMENT

ಕಡಿತಗೊಳಿಸಲಾದ ಸಂಪರ್ಕ ವ್ಯವಸ್ಥೆಯನ್ನು ಪೂರ್ಣವಾಗಿ ಮರಳಿ ಸ್ಥಾಪಿಸಲಾಗಿಲ್ಲ. ರಾಜ್ಯವನ್ನು ವಿಭಜಿಸಿದ ಬಳಿಕ ಅಲ್ಲಿಗೆ ಹೆಚ್ಚುವರಿಯಾಗಿ ಕಳುಹಿಸಲಾದ 50 ಸಾವಿರದಷ್ಟು ಭದ್ರತಾ ಸಿಬ್ಬಂದಿ ಇನ್ನೂ ಅಲ್ಲೇ ಇದ್ದಾರೆ. ಇವೆಲ್ಲದರ ಮಧ್ಯೆ ಉಗ್ರಗಾಮಿಗಳು ಆರು ಮಂದಿ ವಲಸೆ ಕಾರ್ಮಿಕರನ್ನು ಹತ್ಯೆಗೈದಿರುವುದನ್ನು ಗಮನಿಸಿದರೆ, ಅಲ್ಲಿ ಪರಿಸ್ಥಿತಿ ಈಗಲೂ ಸೂಕ್ಷ್ಮವಾಗಿದೆ ಎನ್ನಬೇಕಾಗುತ್ತದೆ.

ಈ ಮಧ್ಯೆ, ಬ್ರಸೆಲ್ಸ್‌ನಲ್ಲಿ ನೆಲೆಸಿರುವ, ಪತ್ರಿಕೆಯೊಂದರ ವರದಿಗಾರ್ತಿ ಎಂದು ಹೇಳಿಕೊಂಡಿರುವ ಮಾದಿ ಶರ್ಮಾ ಅವರು, ತಾವೇ ನಡೆಸುವ ಸೇವಾ ಸಂಸ್ಥೆಯೊಂದರ ನೆರವಿನೊಂದಿಗೆ ವಿದೇಶಿ ಸಂಸದರ ಈ ಕಾಶ್ಮೀರ ಭೇಟಿಯ ವ್ಯವಸ್ಥೆ ಮಾಡಿದ್ದಾರೆ ಎಂದು ವರದಿಯಾಗಿದೆ. ವಿದೇಶಿ ಸಂಸದರ ನಿಯೋಗವೊಂದನ್ನು ಕಾಶ್ಮೀರಕ್ಕೆ ಕರೆದೊಯ್ಯಲು ಈ ರೀತಿಯಲ್ಲಿ ವ್ಯವಸ್ಥೆ ಮಾಡಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಭಾರತದ ವಿದೇಶಾಂಗ ಸಚಿವಾಲಯವೇ ನೇರವಾಗಿ ಈ ಭೇಟಿಯನ್ನು ಏಕೆ ಏರ್ಪಡಿಸಲಿಲ್ಲ ಎನ್ನುವ ಪ್ರಶ್ನೆಯನ್ನು ವಿರೋಧ ಪಕ್ಷಗಳು ಎತ್ತಿರುವುದರಲ್ಲಿ ಅರ್ಥ ಇದೆ.

ಕಾಶ್ಮೀರದ ಕುರಿತು ವಿದೇಶಿಯರಲ್ಲಿ ಇರುವ ಭಾವನೆಗಳನ್ನು ಬದಲಾಯಿಸುವ ಮೊದಲು ಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪನೆಗೆ ಕೇಂದ್ರ ಸರ್ಕಾರ ಯತ್ನಿಸಬೇಕು. ಇದಕ್ಕಾಗಿ ಅಲ್ಲಿಯ ಜನರನ್ನು, ರಾಜಕೀಯ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಲ್ಲಿನ ಜನರಲ್ಲಿ ದೀರ್ಘ ಅವಧಿಯವರೆಗೆ ಆತಂಕ ಮತ್ತು ಅಭದ್ರತೆಯ ವಾತಾವರಣ ಮುಂದುವರಿಯುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಿತು ಉಂಟುಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.