ADVERTISEMENT

ಅರಣ್ಯ ಸಂಪತ್ತು ಅಗ್ನಿಗೆ ಆಹುತಿ: ಮುನ್ನೆಚ್ಚರಿಕೆ ಕೊರತೆ ಅಕ್ಷಮ್ಯ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2019, 19:46 IST
Last Updated 26 ಫೆಬ್ರುವರಿ 2019, 19:46 IST
   

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಹುಲಿಗಳ ಆವಾಸಸ್ಥಾನ. ರಾಷ್ಟ್ರೀಯ ಹುಲಿ ಪ್ರಾಧಿಕಾರದ ಅಂದಾಜಿನ ಪ್ರಕಾರ 406 ಬಂಗಾಳ ಹುಲಿಗಳು ಇಲ್ಲಿವೆ. 874 ಚದರ ಕಿಲೊಮೀಟರ್‌ನ ಈ ಕಾಡು ನೀಲಗಿರಿ ಅಭಯಾರಣ್ಯದ ಪ್ರಮುಖ ಕೇಂದ್ರ.

ತಮಿಳುನಾಡಿನ ಮುದುಮಲೈ, ಕೇರಳದ ವಯನಾಡು, ಕರ್ನಾಟಕದ ನಾಗರಹೊಳೆ, ಬಿಳಿಗಿರಿರಂಗನಬೆಟ್ಟ, ಮಹದೇಶ್ವರ ಬೆಟ್ಟ ಮತ್ತು ಕಾವೇರಿ ವನ್ಯಜೀವಿಧಾಮಕ್ಕೂ ಬಂಡೀಪುರ ಕೊಂಡಿಯಾಗಿದೆ. ಇಂತಹ ಜೀವವೈವಿಧ್ಯ ತಾಣದ 30 ಚದರ ಕಿ.ಮೀ. ಪ್ರದೇಶ ಏಳು ದಿನಗಳಿಂದ ಸತತವಾಗಿ ಉರಿದು ಕರಕಲಾಗಿದೆ. ಆರಂಭದಲ್ಲಿ ಕರ್ನಾಟಕ ಮತ್ತು ತಮಿಳುನಾಡು ಅರಣ್ಯವನ್ನು ಪ್ರತ್ಯೇಕಿಸುವ ಮೊಯಾರ್‌ ಕಣಿವೆಯ ಮೇಲ್ಭಾಗದಲ್ಲಿರುವ ಅರಣ್ಯದ ಹೃದಯಭಾಗ ಎಂದೇ ಹೇಳಬಹುದಾದ ಕುಂದುಕೆರೆ ವಲಯದ ಲೊಕ್ಕೆರೆ ಬಳಿ ಫೆ. 21ರಂದು ಬೆಂಕಿ ಕಾಣಿಸಿಕೊಂಡಿತು. ಎದಿರು ದಿಕ್ಕಿನಲ್ಲಿರುವ ಜನವಸತಿ ಪ್ರದೇಶವಾದ ಮೇಲುಕಾಮನಹಳ್ಳಿ ಬಳಿಯ ಗೋಪಾಲಸ್ವಾಮಿ ಬೆಟ್ಟದ ಕುರುಚಲು ಕಾಡಿಗೆ ಅದರ ಮರುದಿನ ಬಿದ್ದ ಕಾಳ್ಗಿಚ್ಚು ಊಟಿ ಮುಖ್ಯ ರಸ್ತೆಯನ್ನು ದಾಟಿ ಅಪಾಯಕಾರಿ ಮಟ್ಟವನ್ನು ತಲುಪಿತ್ತು.

ಕಾಡಿನ ಬೆಂಕಿಯಲ್ಲಿ ಎರಡು ವಿಧ. ನೆಲಮಟ್ಟದಲ್ಲಿ ಕೇವಲ ಒಣಗಿದ ಹುಲ್ಲು, ಎಲೆಯನ್ನು ಸುಡುತ್ತಾ ಹರಡುವ ಬೆಂಕಿ; ಮತ್ತೊಂದು, ಒಣಗಿದ ಮರವನ್ನೇ ಸುಡುತ್ತಾ ಅನಿಯಂತ್ರಿತವಾಗಿ ಎತ್ತರದಲ್ಲಿ ಹರಡುವ ಬೆಂಕಿ. ಇಲ್ಲಿ, ಒಣಗಿದ ಬಿದಿರು ಉರಿದು ಬಾಂಬ್‌ನಂತೆ ಸಿಡಿದು ಬೆಂಕಿ ಹರಡಿದೆ. ಬೇಸಿಗೆಯಲ್ಲೂ ತಂಪಾದ ಹವೆ, ಅಪರೂಪದ ಶೋಲಾ ಅರಣ್ಯ ಹೊಂದಿದ್ದ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಚೇತರಿಸಿಕೊಳ್ಳಲು ಆರೇಳು ವರ್ಷಗಳೇ ಬೇಕಾಗುತ್ತದೆ. ಬೆಂಕಿ ಆರಿಸಲು ಸೇನೆಯ ಹೆಲಿಕಾಪ್ಟರ್‌ ಸಹಾಯ ದೊರಕದಿದ್ದರೆ ಮತ್ತಷ್ಟು ಕಾಡು ಬೆಂಕಿಗೆ ಆಹುತಿಯಾಗುತ್ತಿತ್ತು.

ADVERTISEMENT

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಕಾಡಿನಂಚಿನ ಸ್ಥಳೀಯರ ತಿಕ್ಕಾಟದಿಂದ ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವುದು ಹೊಸತೇನಲ್ಲ. ಆದರೆ ಅರಣ್ಯ ಕಾವಲು ವ್ಯವಸ್ಥೆ ಬಲವಾಗಿದ್ದರೆ, ಹೃದಯಭಾಗದಲ್ಲಿರುವ ಲೊಕ್ಕೆರೆಯಲ್ಲಿ ಬೆಂಕಿ ಹಾಕಿದವರನ್ನು ಕೂಡಲೇ ಪತ್ತೆಹಚ್ಚಬಹುದಿತ್ತು. ಸಿಡಿಲು ಅಥವಾ ಒಣಬಿದಿರಿನ ತಿಕ್ಕಾಟದಿಂದ ನೈಸರ್ಗಿಕವಾಗಿ ಬೆಂಕಿ ಬೀಳುವುದು ತೀರಾ ಕಡಿಮೆ. ಇಲಾಖೆಯಲ್ಲಿ ಕೂಲಿ ಕೆಲಸ ನೀಡದಿದ್ದರೆ, ಅಪರಾಧ ಪ್ರಕರಣದಲ್ಲಿ ಕ್ರಮ ತೆಗೆದುಕೊಂಡರೆ ಸ್ಥಳೀಯರು ಕಾಡಿಗೆ ಬೆಂಕಿ ಹಾಕುವ ಮೂಲಕ ಪ್ರತೀಕಾರ ತೀರಿಸಿಕೊಳ್ಳುತ್ತಾರೆ.

ಇಲಾಖೆಯು ಕೆಲಸಕ್ಕೆ ಯಂತ್ರಗಳನ್ನು ಬಳಸುವ ಬದಲು ಆದಷ್ಟೂ ಹೆಚ್ಚು ಸ್ಥಳೀಯರಿಗೆ ಕೆಲಸ ಕೊಡುವ ಬಗ್ಗೆ ಯೋಚಿಸಬೇಕು. ಅಲ್ಲದೆ, ಸುತ್ತಮುತ್ತಲ ಗ್ರಾಮಸ್ಥರನ್ನು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳನ್ನು ಇಲಾಖೆಯು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬಂಡೀಪುರ ಹುಲಿ ಅಭಯಾರಣ್ಯಕ್ಕೆ ಎರಡು ತಿಂಗಳಿನಿಂದ ಮುಖ್ಯಸ್ಥರೇ ಇಲ್ಲ. ಹಿಂದಿನ ಮುಖ್ಯಸ್ಥರಾಗಿದ್ದ ಅಂಬಾಡಿ ಮಾಧವ್‌ ಅವರಿಗೆ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಡ್ತಿ ದೊರಕಿದ ನಂತರವೂ ಬಂಡೀಪುರದಲ್ಲಿ ಮುಂದುವರಿದಿದ್ದರು. ಅರಣ್ಯ ಸುಟ್ಟ ನಂತರ ಮಂಗಳವಾರ ಅಂಬಾಡಿ ಅವರನ್ನು ಎತ್ತಂಗಡಿ ಮಾಡಿ, ಮತ್ತೊಬ್ಬರನ್ನು ನೇಮಿಸಲಾಗಿದೆ.

ಕಳೆದ ವರ್ಷ ಅದೃಷ್ಟವಶಾತ್‌ ಬೆಂಕಿ ಅನಾಹುತ ಸಂಭವಿಸಿರಲಿಲ್ಲ. ಇದರಿಂದ ಅಧಿಕಾರಿ ವರ್ಗ ಮೈಮರೆತಿರುವ ಸಾಧ್ಯತೆ ಇದ್ದಿರಬಹುದು. ಬಂಡೀಪುರದ ಜೊತೆಗೆ ನಾಗರಹೊಳೆ, ಕಾವೇರಿ ವನ್ಯಜೀವಿಧಾಮ, ಚಾಮುಂಡಿಬೆಟ್ಟ, ಕಪ್ಪತಗುಡ್ಡ, ಮುಂಡಗೋಡದಲ್ಲೂ ಬೆಂಕಿ ಕಾಣಿಸಿಕೊಂಡಿದೆ. ಬೇಸಿಗೆಯ ಆರಂಭದಲ್ಲೇ ಈ ರೀತಿ ಬೆಂಕಿ ಕಾಣಿಸಿಕೊಂಡಿರುವುದು ಅಪಾಯದ ಮುನ್ಸೂಚನೆ. ಹಣ, ಮಾನವ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಇಲಾಖೆಗೆ ಸರ್ಕಾರ ಎಲ್ಲಾ ಅಗತ್ಯಗಳನ್ನು ಪೂರೈಸಿ, ವನ್ಯ ಸಂಪತ್ತನ್ನು ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.