ADVERTISEMENT

ಸಂಪಾದಕೀಯ | ಅತಿವೃಷ್ಟಿಯ ಅಪಾಯ ಸಮರ್ಥವಾಗಿ ನಿಭಾಯಿಸಬೇಕಿದೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 19:30 IST
Last Updated 6 ಆಗಸ್ಟ್ 2020, 19:30 IST
ಪ್ರವಾಹ ಪರಿಸ್ಥಿತಿ
ಪ್ರವಾಹ ಪರಿಸ್ಥಿತಿ   

ರಾಜ್ಯದ ನಾನಾ ಭಾಗಗಳಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ಹಳ್ಳಕೊಳ್ಳ, ನದಿಗಳು ಭೋರ್ಗರೆಯುತ್ತಿವೆ. ಊರಿನ ಹೊಸ್ತಿಲಿಗೇ ಬಂದು ನಿಂತಿರುವ ಪ್ರವಾಹವು ಯಾವ ಕ್ಷಣದಲ್ಲಾದರೂ ಒಳನುಗ್ಗಲು ಕಾತರಿಸುತ್ತಿರುವಂತಿದೆ. ಕೊರೊನಾ ಸೋಂಕಿನ ಜತೆ ಪ್ರಕೃತಿಯ ಮುನಿಸೂ ಸೇರಿಕೊಂಡರೆ ಜನಜೀವನ ಅಸಹನೀಯ ಆಗುತ್ತದೆ. ಬರ, ನೆರೆಯಂತಹ ನೈಸರ್ಗಿಕ ಪ್ರಕೋಪಗಳನ್ನು ಸಂಪೂರ್ಣವಾಗಿ ತಡೆಯಲಾಗದು. ಆದರೆ ಇಂತಹ ವಿಪತ್ತುಗಳನ್ನು ಮೊದಲೇ ಗ್ರಹಿಸಿ, ಮುಂಜಾಗ್ರತಾ ಕ್ರಮಗಳನ್ನು ಸಮರ್ಪಕವಾಗಿ ಕೈಗೊಂಡರೆ ಅಮೂಲ್ಯ ಜೀವಹಾನಿ ಹಾಗೂ ಸಂಪನ್ಮೂಲ ಹಾನಿ ತಡೆಯಬಹುದು. ಆಡಳಿತ ವ್ಯವಸ್ಥೆಯ ಬಹುಮುಖ್ಯವಾದ ಹೊಣೆಗಾರಿಕೆ ಇದು. ಮಳೆಯಿಂದ ತೊಂದರೆಗೆ ಸಿಲುಕಿರುವ ಜನರ ರಕ್ಷಣೆಗೆ ಧಾವಿಸಲು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಈಗಾಗಲೇ ಸೂಚಿಸಿದ್ದಾರೆ. ನೆರೆ ಪರಿಸ್ಥಿತಿ ಎದುರಿಸಲು ಹಣದ ಕೊರತೆಯಿಲ್ಲ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದ್ದಾರೆ. ಇಷ್ಟಾದರೂ ಸಂಭಾವ್ಯ ಸಂಕಷ್ಟಗಳನ್ನು ಎದುರಿಸಲು ನಮ್ಮ ಆಡಳಿತ ಯಂತ್ರವು ಮಾಡಿಕೊಳ್ಳುವ ಸಿದ್ಧತೆ ಏನೇನೂ ಸಾಲದು ಎಂಬುದನ್ನು ಈ ಹಿಂದಿನ ಅತಿವೃಷ್ಟಿ ಅನಾಹುತಗಳು ನಮಗೆ ತೆರೆದು ತೋರಿವೆ. ಕಳೆದ ಎರಡು ವರ್ಷಗಳಲ್ಲಿ, ವಿಶೇಷವಾಗಿ ಕೊಡಗು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮಹಾಮಳೆಯಿಂದ ಇನ್ನಿಲ್ಲದಂತೆ ನಲುಗಿದ ಜನಜೀವನದ ಕರಾಳ ನೆನಪುಗಳು, ಈ ಸಂದರ್ಭದಲ್ಲಿ ಅಲ್ಲಿನ ಜನರಿಗೆ ದುಃಸ್ವಪ್ನದಂತೆ ಕಾಡಿದರೆ ಅದು ಅಸಹಜವೇನಲ್ಲ. ಕೊಡಗಿನಲ್ಲಿ ಅತಿವೃಷ್ಟಿ ಮತ್ತು ಭೂಕುಸಿತ ಪುನಃ ಸಂಭವಿಸಿರುವುದು ಅಲ್ಲಿನ ಜನರ ನೆಮ್ಮದಿ ಕದಡಿದೆ.

ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಈಗ ಕೋವಿಡ್‌ನಿಂದ ಆಸ್ಪತ್ರೆ ಸೇರಿದ್ದಾರೆ. ಕೆಲವು ಸಚಿವರು ಕ್ವಾರಂಟೈನ್‌ನಲ್ಲಿದ್ದಾರೆ. ಅಧಿಕಾರಿಗಳು ಹಾಗೂ ಪೊಲೀಸರು ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದು ಅನಿವಾರ್ಯವೂ ಹೌದು. ಇಂತಹ ಸ್ಥಿತಿಯು ಯಾವುದೇ ಆಡಳಿತಕ್ಕೆ ಅತಿದೊಡ್ಡ ಸವಾಲಿನ ಸಂದರ್ಭವೂ ಹೌದು. ಆದರೂ ಮಳೆಯಿಂದ ಉಂಟಾಗಬಹುದಾದ ಎಂತಹುದೇ ಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕಾದ ಮಹತ್ವದ ಹೊಣೆಗಾರಿಕೆಗೆ ಇವು ಯಾವುವೂ ತೊಡರುಗಾಲಾಗಬಾರದು. ಅಪಾಯದಲ್ಲಿ ಸಿಲುಕುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವುದು, ಅಗತ್ಯವಿರುವಲ್ಲಿ ಪರಿಹಾರ ಕೇಂದ್ರಗಳನ್ನು ತೆರೆಯಬೇಕಿರುವುದು ವಿಳಂಬವಿಲ್ಲದೇ ಆಗಬೇಕಾಗಿರುವ ಕೆಲಸ. ಇದಕ್ಕೆಲ್ಲ ಪೂರಕವಾದ ಕ್ರಿಯಾ ಯೋಜನೆಯನ್ನು ತಕ್ಷಣದಲ್ಲೇ ಸಿದ್ಧಗೊಳಿಸಬೇಕಾಗಿದೆ. ಹಣದ ಕೊರತೆಯಿಲ್ಲ ಎಂಬುದು ಹೇಳಿಕೆಯಾಗಷ್ಟೇ ಉಳಿಯದೆ, ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕುವ ಜನರ ತುರ್ತು ಅಗತ್ಯಗಳಿಗೆ ಸಕಾಲದಲ್ಲಿ ಒದಗಿಬರುವಂತೆ ನೋಡಿಕೊಳ್ಳಬೇಕಾಗಿದೆ. ಜಿಲ್ಲಾಡಳಿತಗಳು ಮೈಯೆಲ್ಲಾ ಕಣ್ಣಾಗಿಸಿಕೊಂಡು ಕಾರ್ಯನಿರ್ವಹಿಸಬೇಕಾಗಿದೆ. ಕಳೆದ ಬಾರಿಯ ಪ್ರವಾಹ ಸಂತ್ರಸ್ತರಿಗೆ ಪರಿಹಾರದ ಹಣ ಸಕಾಲದಲ್ಲಿ ಕೈಸೇರಿರಲಿಲ್ಲ. ನೆಲೆ ಕಳೆದುಕೊಂಡವರಿಗೆ ಮನೆ ಕಟ್ಟಿಕೊಳ್ಳಲು ನೀಡಿದ ನೆರವಿನಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ ಎಂಬ ದೂರುಗಳು ಇವೆ. ಪರಿಹಾರ ಕಾರ್ಯಗಳಿಗೆ ಕೇಂದ್ರ ಸರ್ಕಾರದಿಂದ ಬರಬೇಕಾದ ಹಣವಂತೂ ಸರಿಯಾದ ಸಮಯಕ್ಕೆ ಬಾರದೆ, ರಾಜ್ಯ ಸರ್ಕಾರವು ಆಡಲೂ ಆಗದ ಅನುಭವಿಸಲೂ ಆಗದ ಇಕ್ಕಟ್ಟಿಗೆ ಸಿಲುಕಿತ್ತು. ಇವೆಲ್ಲವೂ ಈ ಬಾರಿ ಪುನರಾವರ್ತನೆ ಆಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಅಧಿಕಾರಸ್ಥರ ಮೇಲಿದೆ. ಅತಿವೃಷ್ಟಿಯ ಸಂತ್ರಸ್ತರಿಗೆ ಪರಿಹಾರ ನೀಡುವುದಕ್ಕೆ ತಾಂತ್ರಿಕ ಅಂಶಗಳು ಹಾಗೂ ಮಾರ್ಗಸೂಚಿಗಳು ತೊಡಕಾಗಿ ಪರಿಣಮಿಸದಂತೆ ರಾಜ್ಯದ ಆಡಳಿತಾರೂಢರು ನಿಗಾ ವಹಿಸಬೇಕು. ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಲ್ಲಿ ಸಕಾಲಿಕವಾದ ಇಂತಹ ಕ್ರಮಗಳ ಮೂಲಕ ಬದುಕಿನ ಬಗ್ಗೆ, ವ್ಯವಸ್ಥೆಯ ಬಗ್ಗೆ ಭರವಸೆ ಮೂಡಿಸಬೇಕು. ಇದು ಸಾಧ್ಯವಾಗಬೇಕಾದರೆ, ಆಡಳಿತಯಂತ್ರ ಎಂದಿಗಿಂತ ಹೆಚ್ಚು ಕ್ರಿಯಾಶೀಲವಾಗಿ ಇನ್ನಷ್ಟು ಇಚ್ಛಾಶಕ್ತಿಯಿಂದ ತೊಡಗಿಕೊಳ್ಳಬೇಕಾದುದು ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT