ADVERTISEMENT

ಸಂಪಾದಕೀಯ: ಪಿಎಸ್‌ಐ ಹುದ್ದೆ ನೇಮಕಾತಿ ಮರುಪರೀಕ್ಷೆ ಹೊಣೆ ಕೆಇಎಗೆ;ಸಮರ್ಪಕ ನಿರ್ಧಾರ

ಸಂಪಾದಕೀಯ
Published 25 ನವೆಂಬರ್ 2023, 0:30 IST
Last Updated 25 ನವೆಂಬರ್ 2023, 0:30 IST
   

ನೇಮಕಾತಿ ಪರೀಕ್ಷೆಗಳ ಪರಿಶುದ್ಧತೆಯನ್ನು ಮರಳಿ ತರಬೇಕಾದರೆ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ‍ಪುನರ್‌ರಚಿಸಬೇಕು

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಮರುಪರೀಕ್ಷೆ ನಡೆಸುವ
ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸುವ ಮೂಲಕ ಕರ್ನಾಟಕ ಸರ್ಕಾರವು ಸರಿಯಾದ ನಿರ್ಧಾರ ಕೈಗೊಂಡಿದೆ. ಮರುಪರೀಕ್ಷೆ ಪ್ರಸ್ತಾವವನ್ನು ಪ್ರಶ್ನಿಸಿ ಸಲ್ಲಿಸ
ಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪಿಎಸ್‌ಐ ಹುದ್ದೆಗಳ ನೇಮಕಕ್ಕೆ ಈ ಹಿಂದೆ ನಡೆದ ಪರೀಕ್ಷೆಯಲ್ಲಿ ಅಕ್ರಮ ಆಗಿದೆ; ಹಾಗಾಗಿ, ಮರುಪರೀಕ್ಷೆ ನಡೆಸಲೇಬೇಕು ಎಂದು ಹೇಳಿದೆ. ಜೊತೆಗೆ, ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಸ್ವತಂತ್ರ ಸಂಸ್ಥೆಯೊಂದಕ್ಕೆ ವಹಿಸಬೇಕು ಎಂದಿದೆ. ಪರೀಕ್ಷೆ ನಡೆಸಲು ಕೆಇಎಯನ್ನು ಆಯ್ಕೆ ಮಾಡಿರುವುದು ಸಮರ್ಪಕವಾಗಿದೆ.

ಏಕೆಂದರೆ, ಈ ಸಂಸ್ಥೆಯು 1994ರಿಂದಲೇ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಎಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸಿದ ಅನುಭವವನ್ನು ಹೊಂದಿದೆ. ಸೊಸೈಟಿಗಳ ನೋಂದಣಿ ಕಾಯ್ದೆಯ ಅಡಿಯಲ್ಲಿ ಈ ಸಂಸ್ಥೆಯನ್ನು ನೋಂದಾಯಿಸುವ ಮೂಲಕ ಸರ್ಕಾರವು ಕೆಇಎಯನ್ನು 2006ರಲ್ಲಿ ಸ್ವಾಯತ್ತ ಸಂಸ್ಥೆಯಾಗಿಸಿದೆ. ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗಳ 545 ಹುದ್ದೆಗಳನ್ನು ಭರ್ತಿ ಮಾಡಲು ಮರುಪರೀಕ್ಷೆಯು ಡಿಸೆಂಬರ್‌ 23ರಂದು ನಡೆಯಲಿದೆ. 

ADVERTISEMENT

ಪೊಲೀಸ್‌ ಇಲಾಖೆಯ ನೇಮಕಾತಿ ವಿಭಾಗವು 2021ರ ಅಕ್ಟೋಬರ್‌ನಲ್ಲಿ ನೇಮಕಾತಿ ಪರೀಕ್ಷೆಯನ್ನು ನಡೆಸಿತ್ತು. ಆದರೆ, ಪರೀಕ್ಷಾ ಅಕ್ರಮಗಳ ಹಲವು ಪ್ರಕರಣಗಳು ಬೆಳಕಿಗೆ ಬಂದ ಕಾರಣ ಆಗ ಅಧಿ
ಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರವು ಇಡೀ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಪರೀಕ್ಷೆಯಲ್ಲಿ ಅಕ್ರಮ ಎಸಗುವುದಕ್ಕಾಗಿ ಕೆಲವು ಆರೋಪಿಗಳು ಬ್ಲೂಟೂತ್‌ ಉಪಕರಣಗಳನ್ನು ಬಳಸಿರುವುದು ಪತ್ತೆಯಾಗಿತ್ತು. ಕೆಲವು ಆರೋಪಿಗಳು ಒಎಂಆರ್‌ ಹಾಳೆಗಳನ್ನು ತಿದ್ದುವ ಕೆಲಸವನ್ನೂ ಮಾಡಿದ್ದರು. 52 ಅಭ್ಯರ್ಥಿ
ಗಳನ್ನು ಕಾಯಂ ಆಗಿ ಡಿಬಾರ್‌ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮೃತ್‌ ಪೌಲ್‌ ಮತ್ತು ಪೊಲೀಸ್‌ ಇಲಾಖೆಯ ಹಲವು ಹಿರಿಯ ಅಧಿಕಾರಿಗಳನ್ನು ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದೆ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಇಡೀ ಪ್ರಕ್ರಿಯೆಯನ್ನು ಸರ್ಕಾರವು ರದ್ದುಗೊಳಿಸಿದ್ದನ್ನು ತಾತ್ಕಾಲಿಕ ಪಟ್ಟಿಗೆ ಆಯ್ಕೆಯಾಗಿದ್ದ ಹಲವು ಅಭ್ಯರ್ಥಿಗಳು ಪ್ರಶ್ನಿಸಿದ್ದರು. ಕಳಂಕಿತ ಅಭ್ಯರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಆದರೆ ಈ ವಾದವನ್ನು ಹೈಕೋರ್ಟ್‌ ಪುರಸ್ಕರಿಸಲಿಲ್ಲ. ಅಂತಹ ವರ್ಗೀಕರಣ ಸಾಧ್ಯವಿಲ್ಲ ಎಂದು ಹೇಳಿತು. ಅಷ್ಟೇ ಅಲ್ಲದೆ, ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವುದರಿಂದ ತಾತ್ಕಾಲಿಕ ಆಯ್ಕೆಪಟ್ಟಿಗೆ ಅರ್ಜಿದಾರರ ಸೇರ್ಪಡೆ ಕೂಡ ಸಂದೇಹದಿಂದ ಮುಕ್ತವಾಗಿಲ್ಲ ಎಂದು ಹೇಳಿದೆ. ನೇಮಕಾತಿಯ ಉಸ್ತುವಾರಿ ಹೊತ್ತಿದ್ದ ಹಿರಿಯ ಅಧಿಕಾರಿಯ ಬಂಧನದಿಂದಾಗಿ ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಇದ್ದ ವಿಶ್ವಾಸವು ಕುಸಿದಿದೆ. ಮರುಪರೀಕ್ಷೆ ನಡೆಸಲು ಸರ್ಕಾರ ಕೈಗೊಂಡ ತೀರ್ಮಾನವು ಸೂಕ್ತ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. 

ನಾಗರಿಕ ಸೇವೆಯ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿಯೇ ಸ್ಥಾಪಿತವಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಾತ್ರದ ಕುರಿತು ಈ ವಿವಾದವು ಗಮನ ಸೆಳೆಯುವಂತೆ ಮಾಡಿದೆ. ಕೆಪಿಎಸ್‌ಸಿ ಮೇಲೆ ಭ್ರಷ್ಟಾಚಾರದ ಹಲವು ಆರೋಪಗಳು ಇರುವ ಕಾರಣ ಈ ಸಂಸ್ಥೆಯು ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಹಾಗಾಗಿಯೇ ಸರ್ಕಾರದ ಇಲಾಖೆಗಳು ಸ್ವತಃ ನೇಮಕಾತಿ ಪ್ರಕ್ರಿಯೆ ನಡೆಸಲು ಬಯಸುತ್ತಿವೆ. ಆದರೆ, ಲೋಕಸೇವಾ ಆಯೋಗದ ಸಮಸ್ಯೆಗೆ ಕಂಡುಕೊಂಡ ಪರಿಹಾರವು ಇನ್ನೂ ಕೆಟ್ಟದ್ದೇ ಆಯಿತು ಎಂಬುದನ್ನು ಪಿಎಸ್‌ಐ ನೇಮಕಾತಿ ಅಕ್ರಮವು ತೋರಿಸಿಕೊಟ್ಟಿದೆ. ನೇಮಕಾತಿ ಪರೀಕ್ಷೆಗಳ ಪರಿಶುದ್ಧತೆಯನ್ನು ಮರಳಿ ತರಬೇಕಾದರೆ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ‍ಪುನರ್‌ ರಚಿಸಬೇಕು, ಗರಿಷ್ಠ ಬದ್ಧತೆ ಉಳ್ಳವರನ್ನು ನೇಮಿಸಬೇಕು ಎಂದು ಹೈಕೋರ್ಟ್‌ ಸಲಹೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಇತ್ತ ಗಮನಹರಿಸಬೇಕಾದ ಜರೂರು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.