ADVERTISEMENT

ದುಡಿಮೆಯ ಕ್ಷೇತ್ರದಲ್ಲಿ ಲಿಂಗ ತಾರತಮ್ಯ ಕೊನೆಗೊಳಿಸಲು ಬದ್ಧತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 20:07 IST
Last Updated 18 ಡಿಸೆಂಬರ್ 2019, 20:07 IST
ಸಂಪಾದಕೀಯ
ಸಂಪಾದಕೀಯ   

ವಿಶ್ವ ಆರ್ಥಿಕ ವೇದಿಕೆಯು ವರ್ಷದ ಕೊನೆಗೆ ಪ್ರಕಟಿಸಿರುವ ಲಿಂಗ ಸಮಾನತೆ ಕುರಿತ ವರದಿಯನ್ನು ಅವಲೋಕಿಸಿದಾಗ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಇರುವ ದುಡಿಮೆಯ ಅವಕಾಶಗಳ ವಿಚಾರದಲ್ಲಿನ ತಾರತಮ್ಯ ಕಣ್ಣಿಗೆ ರಾಚುವಂತೆ ಕಾಣಿಸುತ್ತದೆ. ಮಹಿಳೆಯರಿಗೆ ಪುರುಷರಷ್ಟೇ ಸಮಾನ ಅವಕಾಶ ಕೊಡುವ ವಿಷಯದಲ್ಲಿ, ವಿಶ್ವದ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ153 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 112ನೇ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಕಳೆದ ವರ್ಷ ಇದ್ದ 108ನೇ ಸ್ಥಾನದಿಂದ ಈ ವರ್ಷ ಭಾರತವು ಮತ್ತಷ್ಟು ಕೆಳಕ್ಕೆ ಕುಸಿದಿರುವುದು ಕಳವಳಕಾರಿ ಸಂಗತಿ. ಪಾಕಿಸ್ತಾನ, ಯೆಮನ್‌, ಸಿರಿಯಾ ಮತ್ತು ಇರಾಕ್‌ನಂತಹ ದೇಶಗಳಿಗಿಂತ ಪಟ್ಟಿಯಲ್ಲಿ ಭಾರತವು ತುಸು ಮೇಲಿದೆ. ಈ ನಾಲ್ಕೂ ದೇಶಗಳು ಯುದ್ಧ ಅಥವಾ ಭಯೋತ್ಪಾದನೆಯ ಹೊಡೆತಕ್ಕೆ ಸಿಲುಕಿ ನಲುಗಿರುವ ದೇಶಗಳು. ಆದಕಾರಣ ಮಹಿಳೆಯರು ಇಲ್ಲಿ ಸಹಜವಾಗಿಯೇ ಅವಕಾಶವಂಚಿತರಾಗಿರುತ್ತಾರೆ.

ಆದರೆ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಮತ್ತು ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತದಲ್ಲಿ ಹೆಣ್ಣುಮಕ್ಕಳಿಗೆ ಸಮಾನವಾಗಿ ಅವಕಾಶ ಸಿಗದೇ ಇರುವುದು ಚಿಂತಿಸಬೇಕಾದ ವಿಚಾರ. ದುಡಿಮೆಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸುವುದರಲ್ಲಿ ನೆರೆಯ ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕೂಡಾ ನಮಗಿಂತ ಮೇಲಿವೆ. ಆರೋಗ್ಯ ಮತ್ತು ಹಣಕಾಸಿನ ಕ್ಷೇತ್ರದಲ್ಲಿ ಭಾರತದ ಮಹಿಳೆಯರ ದಯನೀಯ ಸ್ಥಿತಿ ನಮ್ಮ ಸರ್ಕಾರ ಮತ್ತು ಸಮಾಜದ ಕಣ್ಣು ತೆರೆಸದಿದ್ದರೆ, ನಾವು ಆಡುತ್ತಿರುವ ಮಹಿಳಾ ಸಬಲೀಕರಣದ ಮಾತುಗಳಿಗೆ ಯಾವುದೇ ಅರ್ಥವಿರುವುದಿಲ್ಲ.

ಭಾರತದಲ್ಲಿ ಸುಮಾರು 65 ಕೋಟಿ ಮಹಿಳೆಯರಿದ್ದಾರೆ. ಇದು, ದಕ್ಷಿಣ ಏಷ್ಯಾದ ಒಟ್ಟು ಮಹಿಳೆಯರ ಸಂಖ್ಯೆಯ ನಾಲ್ಕನೇ ಮೂರರಷ್ಟು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರನ್ನು ಹೊಂದಿರುವ ನಮ್ಮ ದೇಶದಲ್ಲಿ ಶೇ 25ರಷ್ಟು ಮಹಿಳೆಯರು ಮಾತ್ರ ವೇತನಸಹಿತ ದುಡಿಮೆಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುರುಷರಿಗೆ ಹೋಲಿಸಿದರೆ (ಶೇ 82) ಇದು ಅತ್ಯಂತ ಕಡಿಮೆ. ನೆರೆಯ ಬಾಂಗ್ಲಾದೇಶದಲ್ಲಿ ಶೇ 84ರಷ್ಟು ಪುರುಷರು ಮತ್ತು ಶೇ 38ರಷ್ಟು ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಭಾರತದ ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಿಗುವ ಸಂಬಳವೂ ಕಡಿಮೆ. ಪುರುಷ ಮತ್ತು ಮಹಿಳೆಯರ ನಡುವಣ ಸಂಬಳದ ವ್ಯತ್ಯಾಸದಲ್ಲೂ ನಾವು 153 ರಾಷ್ಟ್ರಗಳ ಪಟ್ಟಿಯಲ್ಲಿ 144ನೇ ಸ್ಥಾನದಲ್ಲಿದ್ದೇವೆ. ಅಂದರೆ ಮಹಿಳೆಯರ ದುಡಿಮೆಯನ್ನೂ ತಾರತಮ್ಯದಿಂದ ನೋಡುತ್ತಿದ್ದೇವೆ. ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ.

ADVERTISEMENT

ಭಾರತದಲ್ಲಿ ಮಹಿಳೆಯರು ಕುಟುಂಬದ ಪೋಷಣೆಗೆ ಮತ್ತು ಒಕ್ಕಲುತನಕ್ಕೆ ಸಂಬಂಧಿಸಿ ಮಾಡುವ ಕೆಲಸವು ಗಣನೆಗೇ ಒಳಪಡುತ್ತಿಲ್ಲ. ಆ ಕೆಲಸಕ್ಕೆ ಯಾವ ಮೌಲ್ಯವೂ ನಿಗದಿಯಾಗಿಲ್ಲ. ಇಂತಹ ಕೆಲಸಗಳನ್ನು ಪುರುಷರೂ ಮಾಡುತ್ತಿದ್ದಾರೆ. ಆದರೆ ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಮಾಡುವ ಇಂತಹ ಕೆಲಸದ ಪ್ರಮಾಣ 12 ಪಟ್ಟು ಹೆಚ್ಚು.ಅಮೆರಿಕ, ನಾರ್ವೆ ಮುಂತಾದ ದೇಶಗಳಲ್ಲಿ ಮಹಿಳೆಯರು ಸಂಬಳವಿಲ್ಲದೆ ಮಾಡುವ ಕೆಲಸದ ಪ್ರಮಾಣವು ಪುರುಷರಿಗಿಂತ ಎರಡು ಪಟ್ಟು ಮಾತ್ರ ಹೆಚ್ಚು. ಭಾರತೀಯ ಮಹಿಳೆಯರು ಇತರ ದೇಶಗಳ ಜೊತೆಗೆ ತುಲನೆ ಮಾಡಿ ಸಮಾಧಾನ ಪಡಬಹುದಾದ ಒಂದು ಅಂಶವೆಂದರೆ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶ ನೀಡಿರುವ ಪಟ್ಟಿಯಲ್ಲಿ ಭಾರತ 18ನೇ ಸ್ಥಾನದಲ್ಲಿದೆ ಎನ್ನುವುದು. ಹಾಗಿದ್ದೂ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಸಿಕ್ಕಿರುವ ಪ್ರಾತಿನಿಧ್ಯ ಕಡಿಮೆ ಎನ್ನುವುದನ್ನು ಮರೆಯಲಾಗದು. ಮಹಿಳೆಯರನ್ನು ತಾರತಮ್ಯದಿಂದ ನೋಡುವ ನಮ್ಮ ಸಮಾಜದ ದೃಷ್ಟಿಕೋನವನ್ನು ಬದಲಾಯಿಸಲು ಸರ್ಕಾರ ಇನ್ನಷ್ಟು ಪರಿಣಾಮಕಾರಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಿದೆ. ಮಹಿಳೆಯರಿಗೆ ಸೂಕ್ತ ಅವಕಾಶಗಳನ್ನು ನೀಡುವಲ್ಲಿ ನಾವು ಸೋತಿದ್ದೇವೆ. ಅವಕಾಶ ದೊರೆತ ಕ್ಷೇತ್ರದಲ್ಲೂ ಮಹಿಳೆಯರ ಶ್ರಮಕ್ಕೆ ತಕ್ಕ ವೇತನವನ್ನು ಕೊಡುವುದರ ಬಗ್ಗೆ ತಾರತಮ್ಯದ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ.ಮಹಿಳೆಯರ ಕುರಿತು ಇರುವ ನಮ್ಮ ರೂಢಿಗತ ಪಾಳೆಗಾರಿಕೆ ಮನೋಭಾವವನ್ನು ಬದಲಿಸದ ಹೊರತು ಸಮಾನತೆ ಸಾಧಿಸುವುದು ಸಾಧ್ಯವಿಲ್ಲ. ಸಮಾಜದ ಧೋರಣೆಗಳನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕ್ಷೇತ್ರದ ಮುಖಂಡರು ಲಿಂಗ ಅಸಮಾನತೆಯನ್ನು ಹೋಗಲಾಡಿಸಲು ಇಚ್ಛಾಶಕ್ತಿ ಪ್ರದರ್ಶಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.