
ರಾಜ್ಯದ ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳನ್ನು ರಾಜ್ಯ ಸರ್ಕಾರ ನಿರಾಕರಿಸಿರುವುದು ಒಪ್ಪುವಂಥದ್ದೂ ಅಲ್ಲ, ಸರ್ಕಾರದ ವಿವರಣೆಯು ಸಮರ್ಪಕವಾಗಿಯೂ ಇಲ್ಲ. ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ ಬಯಲಾಗುತ್ತಿರುವ ಸಂಗತಿಗಳು ವರ್ತಕರ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಕ್ಕೆ ಪುಷ್ಟಿ ನೀಡುವಂತಿವೆ. ಈ ಆರೋಪಗಳೆಲ್ಲ ರಾಜಕೀಯಪ್ರೇರಿತ ಎಂದು ಹೇಳುವುದು ಸರಿಯಲ್ಲ. ಮದ್ಯ ಮಾರಾಟ ಸನ್ನದು ಪಡೆಯಲು ಹಾಗೂ ಅಂಗಡಿ ನಡೆಸಲು ₹6,000 ಕೋಟಿ ಲಂಚ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಮದ್ಯ ಮಾರಾಟಗಾರರ ಸಂಘ ಆರೋಪಿಸಿದೆ. ಮದ್ಯದ ಬಳಕೆಯ ಮೇಲೆ ಮಿತಿ ಹೇರುವ ಉದ್ದೇಶದಿಂದ ಹೊಸದಾಗಿ ಮದ್ಯದ ಅಂಗಡಿಗಳಿಗೆ ಮತ್ತು ಬಾರ್ ಆ್ಯಂಡ್ ರೆಸ್ಟಾರೆಂಟ್‌ಗಳ ಆರಂಭಕ್ಕೆ ಪರವಾನಗಿ (ಸಿಎಲ್–9) ನೀಡುವುದನ್ನು ತಡೆಹಿಡಿದ 33 ವರ್ಷಗಳಷ್ಟು ಹಳೆಯದಾದ ತೀರ್ಮಾನವು ಈ ಪರಿಸ್ಥಿತಿಗೆ ಮೂಲ ಕಾರಣ. ಹೊಸ ಪರವಾನಗಿ ನೀಡುವುದಕ್ಕೆ ಆಗ ಜಾರಿಗೊಳಿಸಿದ ನಿರ್ಬಂಧವು ಈಗ ಅರ್ಥ ಕಳೆದುಕೊಂಡಿದೆ. 33 ವರ್ಷಗಳಲ್ಲಿ ಕರ್ನಾಟಕದ ಜನಸಂಖ್ಯೆ ಹೆಚ್ಚಾಗಿದೆ, ನಗರ ಪ್ರದೇಶಗಳ ವ್ಯಾಪ್ತಿ ಹೆಚ್ಚಾಗಿದೆ ಮತ್ತು ಇಲ್ಲಿನ ಆತಿಥ್ಯ ಉದ್ಯಮವು ವ್ಯಾಪಕ ಬೆಳವಣಿಗೆ ಕಂಡಿದೆ. ಆದರೆ, ಪರವಾನಗಿ ನೀಡುವ ವ್ಯವಸ್ಥೆಯು ಗತಿಸಿಹೋದ ಕಾಲಘಟ್ಟದಲ್ಲಿಯೇ ನಿಂತುಬಿಟ್ಟಿದೆ. ಕೃತಕವಾದ ಕೊರತೆಯು ಪರವಾನಗಿಗಳನ್ನು ಮಾರಾಟ ಮಾಡ
ಬಹುದಾದ ಸರಕನ್ನಾಗಿಸಿದೆ. ಪರವಾನಗಿ ಮಾರಾಟ, ಖರೀದಿಗಾಗಿ ಒಂದು ಕಾಳಸಂತೆ ಸೃಷ್ಟಿಯಾಗಿದೆ. ಪರಿಣಾಮವಾಗಿ ರಾಜ್ಯ ಸರ್ಕಾರಕ್ಕೆ ವರಮಾನ ನಷ್ಟ ಆಗುತ್ತಿದೆ. ಈ ಪರಿಸ್ಥಿತಿಯು ವ್ಯಾಪಾರ
ವಹಿವಾಟಿನ ಮೇಲೆಯೂ ದುಷ್ಪರಿಣಾಮ ಬೀರಿದೆ. ಹೊಸದಾಗಿ ಸಿಎಲ್–9 ಪರವಾನಗಿ ಸಿಗುತ್ತಿಲ್ಲವಾದ ಕಾರಣದಿಂದಾಗಿ ಉದ್ಯಮಿಗಳು ಅನಿವಾರ್ಯವಾಗಿ ಸಿಎಲ್–7 ಪರವಾನಗಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಪ್ರತಿ ಹಂತದಲ್ಲಿಯೂ ದೊಡ್ಡ ಮೊತ್ತದ ಲಂಚ ನೀಡಬೇಕಾಗುತ್ತದೆ ಎಂಬ ಆರೋಪ ಇದೆ.
ಹಿರಿಯ ಅಬಕಾರಿ ಅಧಿಕಾರಿಯೊಬ್ಬರು ಸಿಎಲ್–7 ಪರವಾನಗಿ ನೀಡಲು ಲಂಚ ಪಡೆಯುತ್ತಿದ್ದ ಆರೋಪದ ಅಡಿಯಲ್ಲಿ ಈಚೆಗೆ ಬಂಧನಕ್ಕೆ ಒಳಗಾಗಿರುವುದು ವ್ಯವಸ್ಥೆಯಲ್ಲಿನ ಕೊಳಕಿಗೆ ಉದಾಹರಣೆಯಂತಿದೆ. ಇಷ್ಟೇ ಸಮಸ್ಯಾತ್ಮಕವಾಗಿ ಇರುವುದು ವರ್ಗಾವಣೆ ದಂಧೆ. ಇಲ್ಲಿ ಆಕರ್ಷಕ ಹುದ್ದೆಗಳನ್ನು ಖರೀದಿಸುವ, ಮಾರಾಟ ಮಾಡುವ ಕೆಲಸ ನಡೆಯುತ್ತದೆ ಎಂಬ ಆರೋಪ ಇದೆ. ಇಂತಹ ಹುದ್ದೆಗಳಿಗೆ ಬರಲು ‘ಪಾವತಿ’ ಮಾಡಿದ ಅಧಿಕಾರಿಗಳಿಗೆ, ತಮ್ಮ ‘ಪಾವತಿ’ಯನ್ನು ಮರಳಿ ಪಡೆಯುವ ಉದ್ದೇಶದಿಂದ ವರ್ತಕರನ್ನು ಬೆದರಿಸಲು ಹಾಗೂ ಅವರಿಂದ ಲಂಚ ಕೀಳಲು ಅಬಕಾರಿ ಕಾಯ್ದೆಯ ಅಂಶಗಳನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ ಎಂಬ ಆರೋಪ ಇದೆ. ಇದರ ಜೊತೆಯಲ್ಲೇ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಪದೇ ಪದೇ, ಅವೈಜ್ಞಾನಿಕವಾಗಿ ಹೆಚ್ಚು ಮಾಡಲಾಗುತ್ತಿದೆ. ಅಬಕಾರಿ ಇಲಾಖೆಯು 2024–25ನೆಯ ಸಾಲಿಗೆ ತನಗೆ ನೀಡಲಾಗಿದ್ದ ವರಮಾನ ಸಂಗ್ರಹ ಗುರಿ ಸಾಧಿಸುವಲ್ಲಿ ವಿಫಲವಾಗಿದೆ, ₹3,000 ಕೋಟಿಯಷ್ಟು ಕಡಿಮೆ ವರಮಾನ ಸಂಗ್ರಹಿಸಿದೆ. ರಾಜ್ಯದಲ್ಲಿ ಬಿಯರ್ ಮಾರಾಟವು ಸುಮಾರು ಶೇ 20ರಷ್ಟು ಕಡಿಮೆ ಆಗಿದೆ, ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಮದ್ಯದ ಅಂಗಡಿಗಳು ಕಡಿಮೆ ವಹಿವಾಟು ಕಂಡಿವೆ. ಆಂಧ್ರಪ್ರದೇಶದಲ್ಲಿ ಜಾರಿಯಲ್ಲಿ ಇರುವ ಹೆಚ್ಚು ಪಾರದರ್ಶಕವಾದ ನೀತಿಯ ಕಾರಣದಿಂದಾಗಿ ಕಡಿಮೆ ಬೆಲೆಗೆ ಮದ್ಯ ಸಿಗುವಂತೆ ಆಗಿದೆ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಹಳೆಯ ಕಾಲದ ಸಿಬ್ಬಂದಿ ನಿಯೋಜನೆ ವ್ಯವಸ್ಥೆ ಹಾಗೂ ಖಾಲಿ ಹುದ್ದೆಗಳು ಹೆಚ್ಚಾಗಿರುವುದು ಆಧುನಿಕ ಕಾಲದ, ಸಂಕೀರ್ಣ ಮಾರುಕಟ್ಟೆಯನ್ನು ನಿಭಾಯಿಸಲು ಇಲಾಖೆಗೆ ಸಾಧ್ಯವಾಗದಂತೆ ಮಾಡಿವೆ.
ಇಂತಹ ಸಂದರ್ಭದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳ ನಿರಾಕರಣೆಯು ಸರಿಯಲ್ಲ. ವಾಸ್ತವ ಏನು ಎಂಬುದನ್ನು ತಿಳಿದುಕೊಳ್ಳಲು ಹಾಗೂ ವಿಶ್ವಾಸವನ್ನು ಮರುಸ್ಥಾಪಿಸಲು ಲೋಕಾಯುಕ್ತ ತನಿಖೆ ಅಗತ್ಯ. ಇದೇ ಸಂದರ್ಭದಲ್ಲಿ ಉತ್ತರದಾಯಿತ್ವ ಹಾಗೂ ರಾಚನಿಕ ಸುಧಾರಣೆಗಳು ಅಗತ್ಯ. ಹೊಸ ಪರವಾನಗಿ ನೀಡುವುದಕ್ಕೆ ಇರುವ ನಿರ್ಬಂಧವನ್ನು ಹೋಗಲಾಡಿಸಿ, ಜನಸಂಖ್ಯೆಗೆ ಅನುಗುಣವಾಗಿ ಪಾರದರ್ಶಕವಾಗಿ ಪರವಾನಗಿ ನೀಡುವ ವ್ಯವಸ್ಥೆಯೊಂದು ಬರಬೇಕು. ಅಧಿಕಾರಿಗಳ ವಿವೇಚನಾ ಅಧಿಕಾರಕ್ಕೆ ಕಡಿವಾಣ ಹಾಕಬೇಕು. ಹೊರರಾಜ್ಯಗಳಲ್ಲಿ ಇರುವ ಮಾದರಿಯಲ್ಲೇ ಸುಂಕವನ್ನು ತರ್ಕಬದ್ಧ ಆಗಿಸಬೇಕು. ಅಧಿಕಾರಿಗಳ ವರ್ಗಾವಣೆಯನ್ನು ರಾಜಕೀಯದ ಪ್ರಭಾವದಿಂದ ರಕ್ಷಿಸಬೇಕು. ಅಬಕಾರಿ ಇಲಾಖೆ ಇರುವುದು ಬಹಳ ಸಂಕೀರ್ಣವಾದ ಉತ್ಪನ್ನವೊಂದರ ಮೇಲೆ ಕಾನೂನಿನ ನಿಯಂತ್ರಣ ಇರಿಸಲು ಹಾಗೂ ಸರ್ಕಾರದ ವರಮಾನವನ್ನು ರಕ್ಷಿಸಲು. ಆದರೆ, ಇಂದು ಇದು ಕೆಲವು ವರ್ಗದವರು ಹೇಗಾದರೂ ಮಾಡಿ ತಮ್ಮ ಸಂಪತ್ತು ಹೆಚ್ಚಿಸಿಕೊಳ್ಳುವ ಕೆಲಸಕ್ಕೆ ನೆರವಾಗುವ ವ್ಯವಸ್ಥೆಯಂತೆ ಆಗಿಬಿಡುವ ಅಪಾಯ ಎದುರಿಸುತ್ತಿದೆ. ಎಚ್ಚರಿಕೆಯ ಕರೆಗಂಟೆಯನ್ನು ಮರೆಮಾಚುವುದರಿಂದ ಸಮಸ್ಯೆ ಪರಿಹಾರ ಆಗುವುದಿಲ್ಲ. ಅದರಿಂದ ಸಾರ್ವಜನಿಕರ ವಿಶ್ವಾಸಕ್ಕೆ ಕುಂದುಬರುತ್ತದೆ, ಸರ್ಕಾರದ ವರಮಾನ ತಗ್ಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.