ADVERTISEMENT

ಅಸುರಕ್ಷಿತ ಕಟ್ಟಡ ನಿರ್ಮಾಣ ಕಟ್ಟುನಿಟ್ಟಿನ ಕಾನೂನು ಜಾರಿಯಾಗಲಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
   

ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ಮಂಗಳವಾರ ತಡರಾತ್ರಿ, ಅಕ್ಕಪಕ್ಕದ ಎರಡು ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಬೇಸ್‌ಮೆಂಟ್‌ ಕುಸಿದು ಐವರು ಸಾವಿಗೀಡಾಗಿದ್ದಾರೆ. ಇವುಗಳಲ್ಲಿ ಒಂದು ಅಪಾರ್ಟ್‌ಮೆಂಟ್‌ ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾಗಿದ್ದು, ಜನ ವಾಸವಿದ್ದರು. ಇದರ ಪಕ್ಕದಲ್ಲೇ ಇರುವ ಮತ್ತೊಂದು ಅಪಾರ್ಟ್‌ಮೆಂಟ್‌, ಕಳೆದ 8 ತಿಂಗಳಿನಿಂದ ನಿರ್ಮಾಣ ಹಂತದಲ್ಲಿತ್ತು. ಈ ಕಟ್ಟಡಗಳ ಮಾಲೀಕರು, ವಾಹನ ನಿಲ್ಲಿಸುವ ನೆಲಮಹಡಿ ಸೇರಿದಂತೆ ಮೂರು ಅಂತಸ್ತುಗಳಿಗೆ ಮಾತ್ರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಿಂದ (ಬಿಬಿಎಂಪಿ) ಅನುಮತಿ ಪಡೆದಿದ್ದರಾದರೂ ಮತ್ತೊಂದು ಅಂತಸ್ತನ್ನು ಅನಧಿಕೃತವಾಗಿ ನಿರ್ಮಿಸಿದ್ದರು. ಬೆಂಗಳೂರಿನಲ್ಲಿ ಬಿಬಿಎಂಪಿ ಆಡಳಿತಯಂತ್ರ ಹದಗೆಟ್ಟಿರುವುದಕ್ಕೆ ಈ ದುರಂತ ಮಾತ್ರವೇ ಸಾಕ್ಷಿಯಲ್ಲ. ಕಳೆದ ವರ್ಷ ನಗರದಲ್ಲಿ ಆರು ಕಟ್ಟಡಗಳು ಕುಸಿದಿದ್ದವು. ಇದೇ ವರ್ಷದ ಏಪ್ರಿಲ್‌ನಲ್ಲಿ ನಿರ್ಮಾಣ ಹಂತದ ಕಟ್ಟಡವೊಂದು ಉರುಳಿತ್ತು. ಈ ಘಟನೆಗಳಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಇಂತಹ ದುರಂತಗಳು ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಈ ವರ್ಷದ ಆರಂಭದಲ್ಲಿ, ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ವಾಣಿಜ್ಯ ಸಂಕೀರ್ಣ ಕುಸಿದು 19 ಜನ ಸಾವಿಗೀಡಾದರು. ಈ ಎಲ್ಲ ಪ್ರಕರಣಗಳಲ್ಲೂ ಕಳಪೆ ಕಾಮಗಾರಿ ಮತ್ತು ಕಟ್ಟಡ ನಕ್ಷೆಗೆ ಅನುಮೋದನೆ ನೀಡುವ ಸ್ಥಳೀಯ ಆಡಳಿತದ ಲೋಪ ಎದ್ದು ಕಾಣುತ್ತದೆ. ಕಟ್ಟಡ ಕಾಮಗಾರಿ ಆರಂಭಕ್ಕೆ ಮುನ್ನ ‘ಪ್ರಾರಂಭಿಕ ಪ್ರಮಾಣಪತ್ರ’ (ಸಿ.ಸಿ) ಪಡೆಯಬೇಕು. ಇದಾದ ನಂತರ, ಸ್ಥಳೀಯ ಆಡಳಿತದ ಎಂಜಿನಿಯರ್‌ಗಳು ಹಂತಹಂತವಾಗಿ ಸ್ಥಳ ಪರಿಶೀಲನೆ ಮಾಡಿ, ನಕ್ಷೆ ಉಲ್ಲಂಘನೆ ನಡೆಯುತ್ತಿಲ್ಲ ಎನ್ನುವುದನ್ನು ಖಾತರಿಪಡಿಸಿಕೊಳ್ಳಬೇಕು. ಆನಂತರ
ವಷ್ಟೇ ಕಟ್ಟಡಕ್ಕೆ ಸ್ವಾಧೀನಾನುಭವ ಪ್ರಮಾಣ ಪತ್ರ (ಒ.ಸಿ) ನೀಡಬೇಕು. ಆದರೆ, ಎಷ್ಟೋ ಬಾರಿ ಈ ಕಾರ್ಯಗಳು ನಡೆಯುವುದೇ ಇಲ್ಲ. ನಡೆದರೂ ಅವನ್ನು ‘ವಸೂಲಿ’ಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವ ಆಪಾದನೆಯಿದೆ. ‘ವಸೂಲಿ’ಯಲ್ಲಿ ಬಿಬಿಎಂಪಿ ಇಲ್ಲವೇ ಸ್ಥಳೀಯ ಆಡಳಿತದ ಸದಸ್ಯರು ಶಾಮೀಲಾಗಿರುತ್ತಾರೆ ಅಥವಾ ಅವರ ಕೃಪಾ ಪೋಷಣೆಯಲ್ಲೇ ಅಕ್ರಮ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತದೆ. ಕೆಲ ಸಂದರ್ಭಗಳಲ್ಲಿ ಅವರು ಇಂತಹ ಕಟ್ಟಡಗಳ ವಿರುದ್ಧ ಕ್ರಮ ಜರುಗಿಸದಂತೆ ಎಂಜಿನಿಯರ್‌ಗಳ ‘ಕೈ ಕಟ್ಟಿ’ ಹಾಕುತ್ತಾರೆ ಎನ್ನುವ ಆರೋಪವೂ ಇದೆ. ರಾಷ್ಟ್ರೀಯ ಕಟ್ಟಡ ನೀತಿ ಪ್ರಕಾರ, ನೆಲಮಹಡಿ ಸೇರಿ ನಾಲ್ಕು ಅಂತಸ್ತಿನ ಕಟ್ಟಡ ಅಥವಾ 15 ಮೀಟರ್‌ಗಿಂತ ಎತ್ತರವಿರುವ ಕಟ್ಟಡದ ನಿರ್ಮಾಣಕ್ಕೆ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ಪಡೆಯಬೇಕಾದುದು ಕಡ್ಡಾಯ. ಆದರೆ, ರಾಜಧಾನಿಯ 35 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಸುರಕ್ಷಾ ಮಾನದಂಡಗಳಿಗೆ ಅನುಗುಣವಾಗಿಲ್ಲ. ಅಷ್ಟಾದರೂ ಇವೆಲ್ಲವೂ ಬಿಬಿಎಂಪಿ ಅನುಮತಿ ಪಡೆದಿರುವುದನ್ನು ತನಿಖಾ ವರದಿಗಳು ಬಹಿರಂಗಪಡಿಸಿವೆ. ಅನುಮತಿ ಪಡೆದುದಕ್ಕಿಂತಲೂ ಹೆಚ್ಚು ಅಂತಸ್ತುಗಳನ್ನು ಕಟ್ಟುವುದಂತೂ ಸಾರ್ವತ್ರಿಕವಾಗಿದೆ. ಹೆಚ್ಚುವರಿ ಅಂತಸ್ತು ಕಟ್ಟಲು ಗಟ್ಟಿಮುಟ್ಟಾದ ಪಿಲ್ಲರ್‌ಗಳನ್ನು ನಿರ್ಮಿಸದಿದ್ದರೆ ದುರಂತ ಶತಃಸಿದ್ಧ. ಇಂತಹ ಅಪಾಯಕಾರಿ ಕಟ್ಟಡಗಳ ನಿರ್ಮಾಣಕ್ಕೆ ಕಾರಣರಾದವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ, ಸ್ಥಳೀಯ ಆಡಳಿತ ಮತ್ತು ಸರ್ಕಾರಕ್ಕೆ ಪ್ರತೀ ವರ್ಷ ಸಲ್ಲಿಸುವ ವರದಿಯಲ್ಲಿ ಇಲಾಖೆಯ ಅಧಿಕಾರಿಗಳು ಆಗ್ರಹಿಸುತ್ತಲೇ ಬಂದಿದ್ದಾರೆ. ಆ ವರದಿಗಳು ಮೂಲೆ ಸೇರುತ್ತಿವೆ.

ಸ್ವಾಧೀನಾನುಭವ ಪ್ರಮಾಣಪತ್ರ ಇಲ್ಲವಾದರೆ, ಕೊಳ್ಳುವವರು ಅಂತಹ ಕಟ್ಟಡದಿಂದ ದೂರವೇ ಉಳಿಯಬೇಕು. ಅಕ್ರಮ ಕಟ್ಟಡಗಳಿಗೆ ಬೇಡಿಕೆ ಕಡಿಮೆಯಾದರೆ ಅವುಗಳ ನಿರ್ಮಾಣ ಸಂಖ್ಯೆಯೂ ತಂತಾನೇ ಕಡಿಮೆಯಾಗುತ್ತದೆ. ಅಕ್ರಮ ಕಟ್ಟಡಗಳನ್ನು ಗಂಭೀರವಾಗಿ ಪರಿಗಣಿಸದ ಎಂಜಿನಿಯರ್‌ಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗಿರುವ ‘ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ ಕಾಯ್ದೆ’ಯಲ್ಲಿ ಅವಕಾಶವೇ ಇಲ್ಲ. ಅಂತಹ ಅವಕಾಶ ಕಲ್ಪಿಸುವ ಸಲುವಾಗಿ ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ನಗರಾಭಿವೃದ್ಧಿ ಇಲಾಖೆ ಇತ್ತೀಚೆಗೆ ಸದ್ದಿಲ್ಲದೇ ಹಿಂದಕ್ಕೆ ಪಡೆದಿದೆ. ಇಂತಹ ಕಾರಣಗಳಿಂದ, ಕಾನೂನಿನ ದುರುಪಯೋಗ ಮಾಡಿಕೊಂಡು ಅಮಾಯಕ ಜೀವಗಳ ಜೊತೆ ಚೆಲ್ಲಾಟ ಆಡುವ ಕಾರ್ಯ ಎಗ್ಗಿಲ್ಲದೇ ನಡೆಯುತ್ತಿದೆ. ಅಕ್ರಮ ಕಟ್ಟಡ ತಲೆಯೆತ್ತಿದರೆ, ಅದಕ್ಕೆ ಅವಕಾಶ ಕಲ್ಪಿಸಿದ ಅಧಿಕಾರಿಗಳು ಮಾತ್ರವಲ್ಲದೆ, ಆ ಕಟ್ಟಡ ಮಾಲೀಕನಿಗೆ ಬೆಂಗಾವಲಾಗಿ ನಿಲ್ಲುವ ಸ್ಥಳೀಯ ರಾಜಕಾರಣಿಗಳಿಗೂ ಶಿಕ್ಷೆಯಾಗುವಂತೆ ಕಟ್ಟುನಿಟ್ಟಿನ ಕಾನೂನು ಜಾರಿಯಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT