ADVERTISEMENT

ಕಣ್ಣೀರು ತರಿಸಿದ ಈರುಳ್ಳಿಪೂರೈಕೆ ವ್ಯವಸ್ಥೆ ಸುಧಾರಿಸಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:02 IST
Last Updated 8 ಡಿಸೆಂಬರ್ 2019, 20:02 IST
ಸಂಪಾದಕೀಯ
ಸಂಪಾದಕೀಯ   

ಅಡುಗೆಗೆ ದಿನನಿತ್ಯ ಬಳಸುವ ಈರುಳ್ಳಿ ಬೆಲೆ ಪ್ರತಿ ಕೆ.ಜಿಗೆ ದೇಶದಾದ್ಯಂತ ₹ 100ರಿಂದ ₹ 200ರವರೆಗೂ ಏರಿಕೆಯಾಗಿರುವುದು ಕಳವಳಕಾರಿ ಸಂಗತಿ. ಈರುಳ್ಳಿಯ ಬೆಲೆ, ಬಳಕೆದಾರರ ಕೈಗೆಟುಕದ ಮಟ್ಟಕ್ಕೆ ತಲುಪಿದೆ. ಕೆಲವು ಅಡುಗೆಮನೆ ಮತ್ತು ಹೋಟೆಲ್‌ಗಳಿಂದ ಈರುಳ್ಳಿಯೇ ಮಾಯವಾಗಿದೆ. ಪೂರೈಕೆಯಲ್ಲಿನ ತೀವ್ರ ಕೊರತೆಯೇ ಈ ಬಿಕ್ಕಟ್ಟಿಗೆ ಮೂಲ ಕಾರಣ. ದೇಶದಲ್ಲಿ ಈರುಳ್ಳಿಯ ವಾರ್ಷಿಕ ಬೇಡಿಕೆ ಸುಮಾರು 1.50 ಕೋಟಿ ಟನ್‌.

ಈರುಳ್ಳಿಯನ್ನು ಹೆಚ್ಚಿಗೆ ಬೆಳೆಯುವ ಕರ್ನಾಟಕ, ಮಹಾರಾಷ್ಟ್ರ ಹಾಗೂ ಇತರ ಕೆಲವು ರಾಜ್ಯಗಳಲ್ಲಿನ ಬರಗಾಲ, ಮುಂಗಾರು ವಿಳಂಬ, ಅಕಾಲಿಕ ಮಳೆ ತಂದೊಡ್ಡಿದ ಪ್ರವಾಹ, ಬೆಳೆ ವೈಫಲ್ಯದಿಂದಶೇಕಡ 50ರಷ್ಟು ಫಸಲು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಬೆಲೆ ಹೆಚ್ಚುತ್ತಲೇ ಇದೆ. ಶೈತ್ಯಾಗಾರಗಳ ಕೊರತೆಯೂ ಬೆಲೆ ಏರಿಕೆಗೆ ಮತ್ತೊಂದು ಕಾರಣ. 2018ರ ಜನವರಿಯಲ್ಲಿ ಬೆಂಗಳೂರಿನ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಈರುಳ್ಳಿ ಬೆಲೆ ಸುಮಾರು ₹ 4,000 ಇತ್ತು. ಈಗ ₹ 15 ಸಾವಿರ ಮುಟ್ಟಿದೆ. ಬೆಳೆ ವೈಫಲ್ಯದ ಸೂಚನೆ ದೊರೆತ ಕೂಡಲೇ ಇಂತಹದ್ದೊಂದು ಸ್ಥಿತಿ ಬರಬಹುದು ಎಂದು ಗ್ರಹಿಸಬಹುದಿತ್ತು. ಆಡಳಿತ ನಡೆಸುವವರಿಗೆ ದೂರದರ್ಶಿತ್ವ ಇಲ್ಲದಿರುವುದೇ ಈ ಬಿಕ್ಕಟ್ಟಿಗೆ ಪ್ರಧಾನ ಕಾರಣ. ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ಏರುತ್ತಲೇ ಇದೆ. ಆದರೆ, ಬೆಲೆ ಏರಿಕೆಗೆ ತಕ್ಕಂತೆ ಬೆಳೆಗಾರರಿಗೆ ಪ್ರಯೋಜನ ದೊರೆಯುತ್ತಿಲ್ಲ ಎಂಬುದು ಇನ್ನೊಂದು ವಿಪರ್ಯಾಸ. ಮಧ್ಯವರ್ತಿಗಳೇ ಹೆಚ್ಚಿನ ಲಾಭ ಬಾಚಿಕೊಳ್ಳುತ್ತಿದ್ದಾರೆ ಎಂಬ ಆರೋಪದಲ್ಲಿ ಸತ್ಯಾಂಶ ಇಲ್ಲದೇ ಇಲ್ಲ.

‘ನಾನು ಈರುಳ್ಳಿ ಬಳಸದ ಕುಟುಂಬದವಳು’, ‘ನಾನು ಸಸ್ಯಾಹಾರಿ, ಬೆಲೆ ಹೆಚ್ಚಳ ನನ್ನ ಅನುಭವಕ್ಕೆ ಬಂದಿಲ್ಲ’ ಎಂದು ಕೇಂದ್ರ ಸಚಿವರಿಬ್ಬರು ನೀಡಿರುವ ಹೇಳಿಕೆಗಳು ಅವರ ಅಸಡ್ಡೆಯನ್ನಷ್ಟೆ ತೋರುತ್ತವೆ. ಬೆಳೆಗಾರರು ಮತ್ತು ಗ್ರಾಹಕರು ಎದುರಿಸುವ ಸಂಕಷ್ಟಗಳ ಕುರಿತು ಆಳುವ ವರ್ಗಕ್ಕೆ ಎಷ್ಟು ಕಾಳಜಿ ಇದೆ ಎಂಬುದಕ್ಕೆ ಇದು ನಿದರ್ಶನ.ರೈತಾಪಿ ಜನರು ಮಳೆಯ ಜೂಜಾಟದ ಜತೆಗೆ ಏಗುತ್ತಲೇ ಬಂದಿದ್ದಾರೆ. ಈಗ ಹವಾಮಾನ ವೈಪರೀತ್ಯವೂ ಸೇರಿಕೊಂಡು ಅವರ ಸಂಕಷ್ಟ ಹೆಚ್ಚಿಸಿದೆ. ಈ ವೈಪರೀತ್ಯದಿಂದಾಗಿ, ಎರಡು ವರ್ಷಗಳಿಗೊಮ್ಮೆ ಬೆಳೆ ವೈಫಲ್ಯ ಮತ್ತು ಅದರ ಪರಿಣಾಮವಾಗಿ ಬೆಲೆಯಲ್ಲಿ ಜಿಗಿತ ಆಗುತ್ತಿರುವುದು ದೃಢಪಟ್ಟಿದೆ.

ADVERTISEMENT

ಸಗಟು ಮತ್ತು ಚಿಲ್ಲರೆ ಮಾರಾಟ ದರ ಏರುಮುಖ ಕಂಡಾಗಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು, ಅಕ್ರಮ ದಾಸ್ತಾನಿಗೆ ಕಡಿವಾಣ ಹಾಕಿದ್ದಿದ್ದರೆ ಪರಿಸ್ಥಿತಿ ಈ ಮಟ್ಟಿಗೆ ಬಿಗಡಾಯಿಸುತ್ತಿರಲಿಲ್ಲ. ಈರುಳ್ಳಿ ಬೆಲೆ ಕೆಲವೊಮ್ಮೆ ಪಾತಾಳಕ್ಕೆ ಕುಸಿದು ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತದೆ. ಇನ್ನೊಮ್ಮೆ ನಾಗಾಲೋಟದಲ್ಲಿ ಏರಿಕೆಯಾಗಿ ಬಳಕೆದಾರರ ಕಣ್ಣಲ್ಲಿ ನೀರು ತರಿಸುತ್ತದೆ. ಬೆಲೆ ಏರಿಕೆಗೆ ಲಗಾಮು ಹಾಕಲು ವಿದೇಶಗಳಿಂದ 21 ಸಾವಿರ ಟನ್‌ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಬೆಲೆ ಕೊಂಚ ತಹಬಂದಿಗೆ ಬರಬಹುದು. ಇದು, ಸದ್ಯದ ಪರಿಹಾರ. ಆದರೆ, ಪ್ರತಿವರ್ಷ ಕಾಣಿಸಿಕೊಳ್ಳುವ ಬೆಲೆ ವ್ಯತ್ಯಯ ಬಿಕ್ಕಟ್ಟುಗಳಿಗೆ ಕಾಯಂ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಸರ್ಕಾರ ಗಂಭೀರ ಗಮನ ಹರಿಸಬೇಕು.ಬೇಗ ಕೊಳೆಯುವ ಗುಣವುಳ್ಳ ಫಸಲು ಸಂಗ್ರಹಿಸಿ ಇಡಲು ಅಗತ್ಯ ಪ್ರಮಾಣದಲ್ಲಿ ಶೈತ್ಯಾಗಾರಗಳನ್ನು ನಿರ್ಮಿಸಬೇಕು.

ತೀವ್ರ ಸ್ವರೂಪದ ಬೆಲೆ ಏರಿಳಿತದ ಸಂದರ್ಭದಲ್ಲಿ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಬೆಳೆಗಾರರು ಮತ್ತು ಬಳಕೆದಾರರ ಹಿತರಕ್ಷಣೆ ಮಾಡಬೇಕು. ಇದು, ಈರುಳ್ಳಿಗೆ ಸೀಮಿತವಾದ ವಿಚಾರ ಅಲ್ಲ. ಟೊಮೆಟೊ ಮತ್ತಿತರ ಬೆಳೆಗಳಿಗೂ ಬೆಲೆ ವಿಚಾರದಲ್ಲಿ ಇದೇ ರೀತಿಯ ಪರಿಸ್ಥಿತಿ ಉಂಟಾಗುತ್ತದೆ. ಕಷ್ಟಪಟ್ಟು ಬೆಳೆದ ಫಸಲನ್ನು ರಸ್ತೆಗೆ ಸುರಿದು ರೈತರು ಆಕ್ರೋಶ ತೋಡಿಕೊಳ್ಳುವ ವಿದ್ಯಮಾನಗಳು ಪದೇ ಪದೇ ವರದಿಯಾಗುತ್ತಲೇ ಇರುತ್ತವೆ. ಇದಕ್ಕೆಲ್ಲ ಸಮಗ್ರ ಮತ್ತು ವೈಜ್ಞಾನಿಕವಾದ ಪರಿಹಾರೋಪಾಯ ಕಂಡುಕೊಳ್ಳುವುದು ಸರ್ಕಾರದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.