ADVERTISEMENT

ಸಂಪಾದಕೀಯ | ಚಿಕಿತ್ಸೆ ಹೆಸರಲ್ಲಿ ರೋಗಿಗಳ ಸುಲಿಗೆ ತಪ್ಪಿಸಲು ನಿಗಾ ಇರಲಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 21:38 IST
Last Updated 28 ಜುಲೈ 2020, 21:38 IST
ಸಂಪಾದಕೀಯ
ಸಂಪಾದಕೀಯ   

ಕೊರೊನಾ ಬಿಕ್ಕಟ್ಟಿನ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳುವ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸುವ ಮೂಲಕ, ಸಾರ್ವಜನಿಕರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಕೊನೆಗೂ ಮುಂದಾಗಿದೆ. ತುಂಬಾ ಮೊದಲೇ ಆಗಬೇಕಿದ್ದ ಈ ಕಣ್ಗಾವಲು ಕೆಲಸ ಈಗಲಾದರೂ ಚುರುಕಾಗಿರುವುದು ಸಮಾಧಾನಕರ ಸಂಗತಿ. ಬೆಂಗಳೂರಿನ ಕೆಲವು ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡುತ್ತಿದ್ದುದು ಹಾಗೂ ನಿಗದಿತ ಸಂಖ್ಯೆಯಲ್ಲಿ ಹಾಸಿಗೆಗಳನ್ನು ಕಾಯ್ದಿರಿಸದಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದಿದ್ದವು. ಆ ದೂರುಗಳ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿ ಹರ್ಷ ಗುಪ್ತ ಹಾಗೂ ಐಪಿಎಸ್‌ ಅಧಿಕಾರಿ ಡಿ. ರೂಪಾ ಅವರ ನೇತೃತ್ವದ ತಂಡವು ಖಾಸಗಿ ಆಸ್ಪತ್ರೆಗಳಿಗೆ ನೀಡಿದ ದಿಢೀರ್‌ ಭೇಟಿಯ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಪ್ರಕರಣಗಳು ಗಮನಕ್ಕೆ ಬಂದಿದ್ದವು. ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳು ₹ 24 ಲಕ್ಷ ಹಣವನ್ನು ಹೆಚ್ಚುವರಿಯಾಗಿ ಪಡೆದಿರುವುದು ಪತ್ತೆಯಾಗಿತ್ತು. ಆ ಹಣವನ್ನು ಇದೀಗ ಸೋಂಕಿತರ ಖಾತೆಗಳಿಗೆ ಆಸ್ಪತ್ರೆಗಳು ಹಿಂದಿರುಗಿಸಿವೆ. ಇನ್ನೊಂದೆಡೆ, ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ಕೂಡ ನಗರದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಸರ್ಕಾರದ ನೀತಿನಿಯಮಗಳು ಯಾವ ರೀತಿ ಪಾಲನೆ ಆಗುತ್ತಿವೆ ಎನ್ನುವುದನ್ನು ಪರಿಶೀಲಿಸಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಸರ್ಕಾರ ದರ ನಿಗದಿಪಡಿಸಿದ್ದು, ಅದಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಆಸ್ಪತ್ರೆ ಪಡೆಯುವಂತಿಲ್ಲ. ಹಾಗೆಯೇ ಶೇ 50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಕಾಯ್ದಿರಿಸುವಂತೆ ಸರ್ಕಾರ ಸೂಚಿಸಿದೆ. ಈ ಸೂಚನೆಗಳನ್ನು ಪಾಲಿಸದಿರುವ ಆಸ್ಪತ್ರೆಗಳಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಸೋಂಕಿಗೊಳಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ದೈಹಿಕವಾಗಿಯೂ ಮಾನಸಿಕವಾಗಿಯೂ ಕಂಗೆಟ್ಟಿರುತ್ತಾರೆ. ಅವರನ್ನು ಕಾಳಜಿಯಿಂದ ಉಪಚರಿಸುವುದು ಎಲ್ಲ ವೈದ್ಯರು ಹಾಗೂ ಆಸ್ಪತ್ರೆಗಳ ಕರ್ತವ್ಯ. ಆ ಚಿಕಿತ್ಸೆಗೆ ನ್ಯಾಯಬದ್ಧ ಶುಲ್ಕ ಪಡೆಯುವುದನ್ನು ಯಾರೂ ಆಕ್ಷೇಪಿಸಲಾರರು. ಆದರೆ ಆತಂಕದ ಪರಿಸ್ಥಿತಿ ಹಾಗೂ ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ಸುಲಿಗೆ ಮಾಡುವುದು ಅಮಾನವೀಯ. ಖಾಸಗಿ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ಶುಲ್ಕ ವಿಧಿಸಿದರೆ ಬಡವರು ಹಾಗೂ ಜನಸಾಮಾನ್ಯರು ಆ ದುಬಾರಿ ಮೊತ್ತವನ್ನು ಭರಿಸುವುದಾದರೂ ಹೇಗೆ? ಅಂಥ ಧನದಾಹಿ ಆಸ್ಪತ್ರೆಗಳಿಗೆ ಸರ್ಕಾರ ಕಡಿವಾಣ ಹಾಕುವುದು ಅಗತ್ಯ. ಸಮಾಜದ ಎಲ್ಲ ವಲಯಗಳಲ್ಲೂ ಸೇವಾ ಮನೋಭಾವ ಮುಂಚೂಣಿಗೆ ಬರುವುದು ಅಪೇಕ್ಷಣೀಯವಾದ ಪ್ರಸಕ್ತ ಬಿಕ್ಕಟ್ಟಿನ ಸಂದರ್ಭದಲ್ಲಿ, ಸೇವೆಯೇ ಪ್ರಧಾನವಾದ ವೈದ್ಯಕೀಯ ಕ್ಷೇತ್ರ ಲಾಭಕೋರ ಮನಃಸ್ಥಿತಿ ಪ್ರದರ್ಶಿಸಬಾರದು. ಇದುವರೆಗೂ ಖಾಸಗಿ ಆಸ್ಪತ್ರೆಗಳ ಬಗ್ಗೆ ಸರ್ಕಾರ ಮೆದು ಧೋರಣೆಯನ್ನೇ ಅನುಸರಿಸುತ್ತಾ ಬಂದಿದೆ. ಶುಲ್ಕ ಪಾವತಿಸಲು ಪಾಲಕರ ಮೇಲೆ ಒತ್ತಡ ಹೇರದಿರುವಂತೆ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದ ಸರ್ಕಾರ, ಅದೇ ಬಗೆಯ ನಿಯಂತ್ರಣವನ್ನು ಖಾಸಗಿ ಆಸ್ಪತ್ರೆಗಳ ಮೇಲೆ ಸಾಧಿಸುವಲ್ಲಿ ವಿಫಲವಾಗಿತ್ತು. ಕೊರೊನಾ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದ ಪ್ರಕರಣಗಳು ನಾಡಿನ ವಿವಿಧ ಭಾಗಗಳಲ್ಲಿ ವರದಿಯಾಗಿದ್ದವು. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಕೆಲವು ರೋಗಿಗಳು ಸಾವಿಗೀಡಾಗಿರುವ ಉದಾಹರಣೆಗಳೂ ಇವೆ. ಕೊರೊನಾ ಅಲ್ಲದೆ ಇತರೆ ತೊಂದರೆಗಳಿಂದ ಬಳಲುತ್ತಿರುವವರ ಪಡಿಪಾಟಲುಗಳಂತೂ ಒಂದೆರಡಲ್ಲ. ಕೊರೊನಾ ಸೋಂಕಿನ ನೆಪವೊಡ್ಡಿ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಆಸ್ಪತ್ರೆಗಳು ನಿರಾಕರಿಸಿರುವ, ಚಿಕಿತ್ಸೆಗೆ ವೈದ್ಯರು ಹಿಂಜರಿದಿರುವ ಘಟನೆಗಳು ವೈದ್ಯಕೀಯ ಕ್ಷೇತ್ರದ ಘನತೆಯನ್ನು ಕುಗ್ಗಿಸುವಂತಹವು.

ಇಂಥ ದುರ್ಘಟನೆಗಳಿಗೆ ವೈದ್ಯಕೀಯ ಸಂಸ್ಥೆಗಳು ಹೇಗೆ ಜವಾಬ್ದಾರಿಯಾಗಿರುತ್ತವೆಯೋ ಹಾಗೆಯೇ ಅವುಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರವೂ ಹೊಣೆ ಹೊರಬೇಕಾಗುತ್ತದೆ. ಇನ್ನು ಮುಂದಾದರೂ ಜನಸಾಮಾನ್ಯರಿಗೆ ಆತ್ಮಸ್ಥೈರ್ಯ ತುಂಬುವ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಖಾಸಗಿ ಆಸ್ಪತ್ರೆಗಳ ಕಿವಿ ಹಿಂಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.