ADVERTISEMENT

ಸಂಪಾದಕೀಯ: ಕೆಆರ್‌ಐಡಿಎಲ್ ಅಕ್ರಮಕ್ಕೆ ಲಗಾಮು ಹಾಕುವ ಇಚ್ಛಾಶಕ್ತಿ ಪ್ರದರ್ಶಿಸಿ

ಈ ರೂಪದಲ್ಲಿ ಈ ನಿಗಮವನ್ನು ಉಳಿಸಿಕೊಳ್ಳಬೇಕಾದ ಅಗತ್ಯ ಇದೆಯೇ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 1:08 IST
Last Updated 11 ಫೆಬ್ರುವರಿ 2022, 1:08 IST
   

ಸರ್ಕಾರದ ಕಾಮಗಾರಿ ಗುತ್ತಿಗೆಯ ಟೆಂಡರ್‌ನಲ್ಲಿ ಶೇಕಡ 40ರಷ್ಟು ಮೊತ್ತ ಲಂಚಕ್ಕೆ ಬಳಕೆಯಾಗುತ್ತದೆ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗೆ ದೂರು ಸಲ್ಲಿಸಿದ್ದು ಕೆಲವು ತಿಂಗಳ ಹಿಂದೆ ದೊಡ್ಡ ಸದ್ದು ಮಾಡಿತ್ತು.

ಈ ಆರೋಪ ಹಸಿಯಾಗಿರುವಾಗಲೇ ಕಾಮಗಾರಿಗಳನ್ನು ನಡೆಸದೇ ₹118 ಕೋಟಿಗೂ ಹೆಚ್ಚು ಮೊತ್ತದ ಬಿಲ್ ಪಾವತಿ ಮಾಡಿ, ಅಕ್ರಮ ನಡೆಸಿರುವುದು ಪತ್ತೆಯಾಗಿದೆ. ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರು ಲೋಕಾಯುಕ್ತ ಸ್ಥಾನದಿಂದ ನಿವೃತ್ತಿಯಾಗುವ ಮೂರು ದಿನಗಳ ಮುನ್ನ ಸರ್ಕಾರಕ್ಕೆ ವರದಿಯೊಂದನ್ನು ಸಲ್ಲಿಸಿದ್ದಾರೆ.

ಸಾರ್ವಜನಿಕರ ತೆರಿಗೆ ಹಣವನ್ನು ಹೇಗೆಲ್ಲ ಲೂಟಿ ಮಾಡಲಾಗುತ್ತಿದೆ ಎಂಬುದಕ್ಕೆ ಇದೊಂದು ಅಧಿಕೃತ ದಾಖಲೆ. ತೋಟಗಾರಿಕೆ, ಯೋಜನೆ ಮತ್ತು ಸಾಂಖ್ಯಿಕ ಸಚಿವ ಮುನಿರತ್ನ ಅವರು ಪ್ರತಿನಿಧಿಸುವ ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿಯೇ ಇಂತಹ ಅಡಾವುಡಿ ನಡೆದಿದೆ. ಯೋಜನಾ ಇಲಾಖೆಯ ಹೊಣೆ ಹೊತ್ತ ಸಚಿವರ ಕ್ಷೇತ್ರದಲ್ಲೇ ಹೀಗೆ ಅಕ್ರಮ ನಡೆದಿರುವುದು ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರಕ್ಕೆ ಇಚ್ಛಾಶಕ್ತಿ ಇದೆಯೇ ಎಂಬ ಪ್ರಶ್ನೆಯನ್ನೂ ಹುಟ್ಟಿಸುತ್ತದೆ.

ADVERTISEMENT

ಕ್ಷೇತ್ರ ವ್ಯಾಪ್ತಿಯಲ್ಲಿ ನಿರ್ವಹಿಸಲಾದ 126 ಕಾಮಗಾರಿಗಳ ಪೈಕಿ 10 ಪುನರಾವರ್ತನೆಯಾಗಿವೆ. ಎರಡು ಕಾಮಗಾರಿಗಳ ಅನುಷ್ಠಾನದಲ್ಲಿ ಲೋಪ ಕಂಡುಬಂದಿಲ್ಲ. 114 ಕಾಮಗಾರಿಗಳಲ್ಲಿ ಹೆಚ್ಚಿನವು ನಡೆದೇ ಇಲ್ಲ; ಕೆಲವು ನಡೆದಿದ್ದರೂ ಅಲ್ಪಸ್ವಲ್ಪ, ಮತ್ತೆ ಹಲವು ಕಳಪೆ ಎಂದು ಲೋಕಾಯುಕ್ತ ವರದಿ ಹೇಳಿದೆ. ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ನಿರ್ವಹಿಸಿರುವ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದೂ ವರದಿ ಉಲ್ಲೇಖಿಸಿದೆ.

ಬಿಬಿಎಂಪಿಯು ಯಾವುದೇ ಕಾಮಗಾರಿಯನ್ನು ಇನ್ನು ಮುಂದೆ ನಿಗಮಕ್ಕೆ ವಹಿಸಕೂಡದು ಹಾಗೂಇಲ್ಲಿಯವರೆಗೆ ನಿರ್ವಹಿಸಿರುವ ಅಥವಾ ಅನುಷ್ಠಾನ ಹಂತದಲ್ಲಿರುವ ಕಾಮಗಾರಿಗಳ ಶೇ 10ರಷ್ಟು ಕಾಮಗಾರಿಗಳ ಸಮೀಕ್ಷೆಗೆ ಉನ್ನತಾಧಿಕಾರಿ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂದು ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ.

ಕಾಮಗಾರಿಗಳನ್ನು ನಡೆಸದೇ ದುಡ್ಡು ಹೊಡೆಯುವ ವ್ಯವಸ್ಥಿತ ಜಾಲವೊಂದನ್ನುಲೋಕಾಯುಕ್ತರು ಬಯಲಿಗೆ ತಂದಿದ್ದಾರೆ. ಗುಣಮಟ್ಟದ ಕಾಮಗಾರಿ ನಡೆಸದೇ ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಚಾಳಿ ಅನೇಕ ದಶಕಗಳಿಂದ ಚಾಲ್ತಿಯಲ್ಲಿದೆ. ಕೆಆರ್‌ಐಡಿಎಲ್‌ ನಡೆಸಿರುವ ಭ್ರಷ್ಟಾಚಾರವೆಂಬ ಬೃಹತ್ ಬೆಟ್ಟದ ಒಂದು ಕೊರಕಲನ್ನಷ್ಟೇ ಈ ವರದಿ ಪತ್ತೆ ಹಚ್ಚಿದೆ. ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಿಗಮ ನಡೆಸಿದ ಕಾಮಗಾರಿಗಳನ್ನು ಪರಿಶೋಧನೆಗೆ ಒಳಪಡಿಸಿದರೆ ಸಾರ್ವಜನಿಕರ ತೆರಿಗೆ ಹಣ ಹೇಗೆ ಪೋಲಾಗಿದೆ ಎಂಬುದು ಬಹಿರಂಗವಾಗಲಿದೆ.

ನಿಗಮದ ಇತಿಹಾಸ ಕೆದಕಿದರೆ ಅಕ್ರಮದ ಗಬ್ಬು ವಾಸನೆ ಬರುತ್ತದೆ. ರಾಜ್ಯದಲ್ಲಿ ಕಳಪೆ ಕಾಮಗಾರಿ ನಡೆಸಿದ, ಕಾಮಗಾರಿ ನಡೆಸದೇ ಬಿಲ್ ಮಾಡುತ್ತಿದ್ದ ಭೂಸೇನಾ ನಿಗಮಕ್ಕೆ ಭಾರಿ ವಿರೋಧ ಎದುರಾಯಿತು. 2009ರಲ್ಲಿ ಈ ನಿಗಮದ ಹೆಸರು ಕೆಆರ್‌ಐಡಿಎಲ್‌ ಎಂದು ಬದಲಾಯಿತು. ಹೆಸರು ಬದಲಾಯಿತೇ ವಿನಾ ನಿರ್ವಹಿಸುವ ಕೆಲಸದಲ್ಲಿ ಗುಣಾತ್ಮಕ ಬದಲಾವಣೆ ಹಾಗೂ ಹಣ ಉಳಿತಾಯವೇನೂ ಸಾಧ್ಯವಾಗಲಿಲ್ಲ. ಕಾಮಗಾರಿಗಳನ್ನು ನಿರ್ವಹಿಸುವ ಮೂಲಕ ಸ್ಥಳೀಯನಿರುದ್ಯೋಗಿಗಳಿಗೆ ಕೆಲಸವನ್ನು ಒದಗಿಸಿ, ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯನ್ನು ಬಲಗೊಳಿಸುವುದು ಸಂಸ್ಥೆಯ ಉದ್ದೇಶ ಎಂದು ಕೆಆರ್‌ಐಡಿಎಲ್‌ ಹೇಳಿಕೊಂಡಿದೆ.

ಕಾಮಗಾರಿಗಳನ್ನು ಸಂಸ್ಥೆಯು ನೇರವಾಗಿಯೇ ನಿರ್ವಹಿಸುವುದರಿಂದ, ಮಧ್ಯವರ್ತಿಗಳು ಹಾಗೂ ಗುತ್ತಿಗೆದಾರರನ್ನು ದೂರವಿಟ್ಟು, ಯೋಜನೆಗಳಿಗೆಂದು ಮೀಸಲಿಟ್ಟ ಹಣದ ಪೂರ್ಣ ಫಲವನ್ನು ಗ್ರಾಮೀಣ ಜನರಿಗೆ ತಲುಪಿಸುವುದು ತನ್ನ ಆಶಯ ಎಂದೂ ಸಂಸ್ಥೆ ಬಿಂಬಿಸಿಕೊಂಡಿದೆ. ರಾಜ್ಯದ ವಿವಿಧ ಕಡೆ ಕಾಮಗಾರಿ ನಿರ್ವಹಿಸುವುದಾಗಿ ಹೇಳಿಕೊಳ್ಳುವ ಸಂಸ್ಥೆಯಲ್ಲಿ ಒಟ್ಟು ಸಿಬ್ಬಂದಿ ಸಂಖ್ಯೆ 848 ಮಾತ್ರ. ಅದರಲ್ಲಿ 315 ಮಂದಿ ನುರಿತ ಸಿಬ್ಬಂದಿ ಇದ್ದರೆ, 533 ಲಿಪಿಕ ಸಿಬ್ಬಂದಿ ಇದ್ದಾರೆ.

ಕಾಮಗಾರಿಯ ಮೇಲ್ವಿಚಾರಣೆ ನಡೆಸುವ, ಪರಿಶೀಲಿಸುವ ಗೋಜಿಗೆ ಹೋಗುವವರು ಇಲ್ಲ. ಅವೆಲ್ಲವನ್ನೂ ತಟಸ್ಥ ಸಂಸ್ಥೆ ಮೂಲಕವೇ ಪರಿಶೀಲಿಸಲಾಗುತ್ತದೆ. ‘ಕೆಆರ್‌ಐಡಿಎಲ್‌ ಯಾವುದೇ ಕಾಮಗಾರಿಯನ್ನು ನಿರ್ವಹಿಸುವುದಿಲ್ಲ. ವಿವಿಧ ಇಲಾಖೆಗಳ ಕಾಮಗಾರಿಯನ್ನು ತನ್ನ ಹೆಸರಿಗೆ ಹಂಚಿಕೆ ಮಾಡಿಸಿಕೊಂಡು ಜನಪ್ರತಿನಿಧಿಗಳ ಆಪ್ತರಿಗೆ ನೀಡುವ ದಲ್ಲಾಳಿ ಕೆಲಸವನ್ನಷ್ಟೇ ಇದು ಮಾಡುತ್ತದೆ’ ಎಂಬ ಆಪಾದನೆ ಲಾಗಾಯ್ತಿನಿಂದಲೂ ಇದೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸಮಾಲೋಚಕರು, ತಟಸ್ಥ ಸಂಸ್ಥೆ, ಗುತ್ತಿಗೆದಾರರಿಗೆ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಲು ಅವಕಾಶ ಮಾಡಿಕೊಡುವ ಕಳ್ಳಕಿಂಡಿಯಂತೆ ಇದು ಕಾರ್ಯನಿರ್ವಹಿಸುತ್ತದೆ.

ರಾಜ್ಯ ಸರ್ಕಾರದಲ್ಲಿ ಕಾಮಗಾರಿ ನಿರ್ವಹಿಸಲು ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ಪಂಚಾಯತ್ ರಾಜ್‌ ಇಲಾಖೆಯ ಎಂಜಿನಿಯರಿಂಗ್ ವಿಭಾಗ, ಆರೋಗ್ಯ ಇಲಾಖೆಯಲ್ಲೂ ಪ್ರತ್ಯೇಕ ವಿಭಾಗವೇ ಇದೆ. ಹೀಗಿರುವಾಗ, ದಲ್ಲಾಳಿ ಕೆಲಸ ಮಾಡಲು, ಕಾಮಗಾರಿ ನಿರ್ವಹಿಸದೇ ಹಣ ಕೊಳ್ಳೆ ಹೊಡೆಯಲು ಕೆಆರ್‌ಐಡಿಎಲ್ ಅಗತ್ಯವಿದೆಯೇ ಎಂಬ ಪ್ರಶ್ನೆಗೆ ಆಳುವವರೇ ಉತ್ತರ ಕೊಡಬೇಕು. ₹2 ಕೋಟಿವರೆಗಿನ ಕಾಮಗಾರಿಗಳನ್ನು ಟೆಂಡರ್ ಕರೆಯದೇ ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆಯ ಸೆಕ್ಷನ್ 4ರ ಅಡಿ ವಿನಾಯಿತಿ ನೀಡಲು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

₹50 ಲಕ್ಷದವರೆಗಿನ ಕಾಮಗಾರಿಗಳ ಗುತ್ತಿಗೆ ಟೆಂಡರ್‌ನಲ್ಲಿ‍ಪರಿಶಿಷ್ಟ ಜಾತಿ–ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ನೀಡಬೇಕು ಎಂಬ ನಿಯಮ ರಾಜ್ಯದಲ್ಲಿ ಜಾರಿಯಲ್ಲಿದೆ. ಮೀಸಲಾತಿ ತಪ್ಪಿಸುವ ಜತೆಗೆ ಕೆಆರ್‌ಐಡಿಎಲ್‌ಗೆ ಕಾಮಗಾರಿಯನ್ನು ನೇರವಾಗಿ ವಹಿಸಲು ಈ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ ಎಂಬ ಆರೋಪವನ್ನು ಪರಿಶಿಷ್ಟ ಸಮುದಾಯದ ಗುತ್ತಿಗೆದಾರರು ಮಾಡಿದ್ದರು. ₹2 ಕೋಟಿವರೆಗಿನ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸಿದರೆ ಕಾಮಗಾರಿ ನಿರ್ವಹಿಸದೇ ಹಣ ಹೊಡೆಯಲು ಸಾಧ್ಯ ಎಂಬುದು ಜನಪ್ರತಿನಿಧಿ–ಅಧಿಕಾರಿ–ಗುತ್ತಿಗೆದಾರರ ಕೂಟಕ್ಕೆ ಗೊತ್ತಿದೆ.

ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವುದು ಬೇಡ ಎಂದು ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ. ಕಾಮಗಾರಿಯನ್ನೇ ಮಾಡದೆ ಜನರ ಹಣವನ್ನು ಸಲೀಸಾಗಿ ನುಂಗುವುದಕ್ಕಾಗಿಯೇ ಇರುವಂತಿರುವ ಕೆಆರ್‌ಐಡಿಎಲ್‌ ಅನ್ನು ಶಾಶ್ವತವಾಗಿ ಮುಚ್ಚಿದರೆ ಸಮಾಜಕ್ಕಾಗಲೀ ಸರ್ಕಾರಕ್ಕಾಗಲೀ ನಷ್ಟವಿಲ್ಲ. ಸರ್ಕಾರ ಈ ಬಗ್ಗೆ ಆಲೋಚಿಸಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.