ADVERTISEMENT

ಸಂಪಾದಕೀಯ: ವೈದ್ಯಕೀಯ ಗರ್ಭಪಾತ ಕುರಿತ ತೀರ್ಪು ಕಾನೂನಿನ ಉದಾರವಾದಿ ವ್ಯಾಖ್ಯಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 23:45 IST
Last Updated 2 ಅಕ್ಟೋಬರ್ 2022, 23:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗರ್ಭಪಾತದ ಹಕ್ಕುಗಳ ವಿಚಾರವಾಗಿ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿರುವ ಒಂದು ತೀರ್ಪು ಮಹಿಳೆಗೆ ತನ್ನ ದೇಹದ ವಿಚಾರದಲ್ಲಿ ಇರುವ ಸ್ವಾಯತ್ತೆ ಹಾಗೂ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವಂತಿದೆ. ಅಲ್ಲದೆ, ಮಹಿಳೆಗೆ ಇರುವ ಸಮಾನತೆಯ ಹಕ್ಕು ಮತ್ತು ಖಾಸಗಿತನದ ಹಕ್ಕನ್ನು ಈ ತೀರ್ಪು ಪುನರುಚ್ಚರಿಸಿದೆ.

ಈ ತೀರ್ಪು ಸಂತಾನೋತ್ಪತ್ತಿ ವಿಚಾರದಲ್ಲಿ ಮಹಿಳೆಗೆ ಇರುವ ಹಕ್ಕಿನ ವ್ಯಾಪ್ತಿಯನ್ನು ವಿಸ್ತರಿಸಿ, ಅದನ್ನು ಆಕೆಯ ಮೂಲಭೂತ ಹಕ್ಕುಗಳ ಜೊತೆಯಲ್ಲಿ ಇರಿಸಿದೆ. ಹೀಗಾಗಿ ಇದು ಮೈಲಿಗಲ್ಲು ಎನ್ನಬಹುದಾದ ತೀರ್ಪು. ಮಹಿಳೆಗೆ ಮದುವೆ ಆಗಿರಲಿ, ಆಗಿಲ್ಲದಿರಲಿ, ಆಕೆ ಸಮ್ಮತಿಯ ಸಂಬಂಧ ಹೊಂದಿರಲಿ, ಆಕೆ ವೈದ್ಯಕೀಯ ಗರ್ಭ‍ಪಾತ ಕಾಯ್ದೆಯ ಪ್ರಕಾರ ಗರ್ಭಪಾತಕ್ಕೆ ಅವಕಾಶ ಕೋರಲು ಸಮಾನ ಅವಕಾಶ ಇದೆ ಎಂದು ಕೋರ್ಟ್‌ ಸಾರಿದೆ. 25 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯೊಬ್ಬರು ಗರ್ಭ ಧರಿಸಿದ 24 ವಾರಗಳಲ್ಲಿ ತಮಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ತಿರಸ್ಕರಿಸಿತ್ತು.

ವೈದ್ಯಕೀಯ ಗರ್ಭಪಾತ ನಿಯಮ– 2003, ಮದುವೆ ಆಗಿಲ್ಲದ ಹಾಗೂ ಸಮ್ಮತಿಯ ಸಂಬಂಧದಲ್ಲಿ ಇರುವ ಮಹಿಳೆಯರಿಗೆ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್‌ ಹೇಳಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆ ಮಹಿಳೆಯು ತನ್ನ ಸಂಗಾತಿಯ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದ ಕಾರಣದಿಂದಾಗಿ ಗರ್ಭಪಾತಕ್ಕೆ ಮುಂದಾಗಿದ್ದರು. ಮಹಿಳೆಯ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಮಹತ್ವದ ತೀರ್ಪು ನೀಡಿದೆ.

ADVERTISEMENT

ವೈದ್ಯಕೀಯ ಗರ್ಭಪಾತ ಕಾಯ್ದೆ ಹಾಗೂ ಅದರ ಅಡಿಯಲ್ಲಿ ರೂಪಿಸಲಾಗಿರುವ ನಿಯಮಗಳು ಕಾಲಕಾಲಕ್ಕೆ ಪರಿಷ್ಕೃತಗೊಂಡಿವೆ, ಹೆಚ್ಚುಪ್ರಗತಿಪರವಾಗಿವೆ. ಸಮಾಜದ ರೀತಿನೀತಿಗಳು ಹಾಗೂ ಮಹಿಳೆಯ ಹಕ್ಕುಗಳ ಕುರಿತ ಪರಿಕಲ್ಪನೆಗಳು ಬದಲಾದಂತೆಲ್ಲ ಅವುಗಳಿಗೆ ಅನುಗುಣವಾಗಿ ನಿಯಮಗಳು ಬದಲಾವಣೆ ಕಂಡಿವೆ. 2021ರಲ್ಲಿ ತರಲಾದ ತಿದ್ದುಪಡಿಯು, ಭ್ರೂಣವು 20ರಿಂದ 24ನೆಯ ವಾರಗಳ ನಡುವೆ ಇದ್ದಾಗ ಗರ್ಭಪಾತಕ್ಕೆ ಅವಕಾಶ ಕೋರಲು ಮೊದಲಿಗಿಂತ ಹೆಚ್ಚಿನ ಕಾರಣಗಳ ಅಡಿಯಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿದೆ.

ತಿದ್ದುಪಡಿಯು ಅವಿವಾಹಿತ ಹಾಗೂ ವಿವಾಹಿತ ಮಹಿಳೆಯರನ್ನು ಭಿನ್ನವಾಗಿ ಕಂಡಿಲ್ಲದ ಕಾರಣ, ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು, ಅವಿವಾಹಿತ ಮಹಿಳೆಗೂ ಗರ್ಭಪಾತಕ್ಕೆ ಅವಕಾಶ ಕೋರಲು ಅನುವು ಮಾಡಿಕೊಟ್ಟಿದೆ. ‘ವೈವಾಹಿಕ ಸಂಬಂಧದಲ್ಲಿ ಬದಲಾವಣೆ’ ಎಂಬ ಪದಗುಚ್ಛವನ್ನು ಕೋರ್ಟ್ ಹೆಚ್ಚು ಉದಾರವಾದಿ ನೆಲೆಯಿಂದ ವ್ಯಾಖ್ಯಾನಿಸಿದೆ. ಮಹಿಳೆಯ ಸಂಗಾತಿ ಆಕೆಯನ್ನು ತೊರೆದರೆ, ಅದು ಕೂಡ ಗರ್ಭಪಾತಕ್ಕೆ ಅವಕಾಶ ಕೋರಲು ಒಂದು ಕಾರಣವಾಗಬಲ್ಲದು ಎಂದು ಹೇಳಿದೆ. ಜೀವಕ್ಕೆ ಅಥವಾ ಆರೋಗ್ಯಕ್ಕೆ ಅಪಾಯ ಎದುರಾಗಿದ್ದರೆ 24 ವಾರಗಳವರೆಗಿನ ಭ್ರೂಣವನ್ನು ತೆಗೆಸಲು ಅವಕಾಶ ಇದೆ ಎಂದು ಕಾನೂನು ಹೇಳುತ್ತದೆ. ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೆ ಅಪಾಯ ಎದುರಾಗಿದ್ದರೂ ಕಾನೂನಿನ ಅಡಿ ಅವಕಾಶ ಕೋರಬಹುದು ಎಂದು ಕೋರ್ಟ್‌ ಹೇಳಿದೆ.

ಕಾನೂನನ್ನು ಹೆಚ್ಚು ಉದಾರವಾಗಿ ವ್ಯಾಖ್ಯಾನಿಸಿರುವುದು ಮಹಿಳೆಯ ಸ್ವಾತಂತ್ರ್ಯ, ಆಯ್ಕೆಯ ವಿಚಾರದಲ್ಲಿ ಆಕೆಗೆ ಇರುವ ಹಕ್ಕಿಗೆ ಮಹತ್ವವಿದೆ ಎಂಬುದನ್ನು ಸಾರಿದೆ. ಅಲ್ಲದೆ, ಇವುಗಳನ್ನು ಪುರುಷ ಪ್ರಧಾನ ವ್ಯವಸ್ಥೆಯ ಕಟ್ಟುಪಾಡುಗಳಿಂದ ಹೊರಗೆ ತಂದಿದೆ. ಈ ಕಾಯ್ದೆಯ ಅಡಿಯಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಾದವರ ಗುರುತನ್ನು ಬಹಿರಂಗಪಡಿಸುವಂತಿಲ್ಲ ಎಂದು ಕೋರ್ಟ್‌ ಹೇಳಿರುವುದು ಸರಿಯಾಗಿಯೇ ಇದೆ. ಆದರೆ, ಇದು ಇಷ್ಟು ದಿನ ಜಾರಿಯಲ್ಲಿ ಇರಲಿಲ್ಲ ಎಂಬುದು ಆಶ್ಚರ್ಯಕರ.

ಗರ್ಭಪಾತ ಕಾನೂನಿನ ವ್ಯಾಪ್ತಿಯಲ್ಲಿ ಅತ್ಯಾಚಾರ ಎಂಬ ಪದದ ವ್ಯಾಖ್ಯಾನವನ್ನು ಕೋರ್ಟ್‌ ಹಿಗ್ಗಿಸಿದೆ, ವೈವಾಹಿಕ ಸಂಬಂಧದ ಒಳಗೆ ನಡೆಯುವ ಅತ್ಯಾಚಾರವನ್ನೂ ಅದು ಗುರುತಿಸಿದೆ. ಇದು, ಈ ತೀರ್ಪಿನ ಇನ್ನೊಂದು ಮಹತ್ವದ ಅಂಶ. ವಿವಾಹಿತ ಮಹಿಳೆ ಕೂಡ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಬಹುದು, ಸಮ್ಮತಿ ಇಲ್ಲದಿದ್ದರೂ ಪತಿ ಲೈಂಗಿಕ ಕ್ರಿಯೆ ನಡೆಸಿ ಮಹಿಳೆ ಗರ್ಭವತಿ ಆಗಬಹುದು ಎಂದು ಕೋರ್ಟ್‌ ಹೇಳಿದೆ. ಅಂದರೆ, ವೈವಾಹಿಕ ಸಂಬಂಧದ ಒಳಗಿನ ಅತ್ಯಾಚಾರಕ್ಕೆ ಗುರಿಯಾಗಿ ಗರ್ಭಧಾರಣೆ ಮಾಡುವ ಮಹಿಳೆ ಕೂಡ 24 ವಾರಗಳ ಒಳಗೆ ಗರ್ಭಪಾತಕ್ಕೆ ಅವಕಾಶ ಕೋರಬಹುದು ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಇದರ ಅರ್ಥ ವೈವಾಹಿಕ ಸಂಬಂಧದ ಒಳಗಿನ ಅತ್ಯಾಚಾರವು ಅಪರಾಧವೆಂದು ಪರಿಗಣಿತವಾಗಿದೆ ಎಂಬುದಲ್ಲ.

ಬದಲಿಗೆ, ಅದು ಗರ್ಭಪಾತಕ್ಕೆ ಅವಕಾಶ ಕೋರಲು ಒಂದು ಕಾರಣ ಎಂದು ಅರ್ಥ. ಈ ವ್ಯಾಖ್ಯಾನವು, ವೈವಾಹಿಕ ಸಂಬಂಧದೊಳಗಿನ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬೇಕು ಎಂಬ ಆಗ್ರಹಕ್ಕೆ ಬಲ ತಂದುಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.