ADVERTISEMENT

ಸಂಪಾದಕೀಯ | ಯುವ ವಿಶ್ವಕಪ್ ಜಯ: ಮಹಿಳಾ ಕ್ರಿಕೆಟ್‌ಗೆ ಮತ್ತಷ್ಟು ಹುರುಪು

ಈ ಸ್ಪರ್ಧೆಯು ದೇಶದ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಶಕ್ತಿ ತುಂಬುವ ವಿಶ್ವಾಸ ಮೂಡಿಸಿದೆ

ಸಂಪಾದಕೀಯ
Published 4 ಫೆಬ್ರುವರಿ 2025, 0:30 IST
Last Updated 4 ಫೆಬ್ರುವರಿ 2025, 0:30 IST
ವಿಶ್ವಕಪ್‌ನೊಂದಿಗೆ ನಿಕಿ ಪ್ರಸಾದ್
ವಿಶ್ವಕಪ್‌ನೊಂದಿಗೆ ನಿಕಿ ಪ್ರಸಾದ್   

ಭಾರತದ ಮಹಿಳಾ ಕ್ರಿಕೆಟ್‌ ವಲಯಕ್ಕೆ ಕರ್ನಾಟಕದ ಕೊಡುಗೆ ಗಮನಾರ್ಹ. ದೇಶದ ಮಹಿಳಾ ತಂಡದ ಮೊದಲ ನಾಯಕಿ ಶಾಂತಾ ರಂಗಸ್ವಾಮಿ ಅವರಿಂದ ಆರಂಭವಾಗಿ ಹಲವು ಆಟಗಾರ್ತಿಯರು ಬೆಳಗಿದ್ದಾರೆ. ಇದೀಗ ಈ ದಿಸೆಯಲ್ಲಿ ಬೆಂಗಳೂರಿನ ನಿಕಿ ಪ್ರಸಾದ್ ಹೆಜ್ಜೆ ಇರಿಸಿದ್ದಾರೆ. 19 ವರ್ಷದೊಳಗಿನ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದ ನಾಯಕಿಯಾಗಿ ಅವರು ಕರ್ನಾಟಕಕ್ಕೆ ಹೆಮ್ಮೆ ಮೂಡಿಸಿದ್ದಾರೆ. ಮಲೇಷ್ಯಾದ ಕ್ವಾಲಾಲಂಪುರದಲ್ಲಿ ನಡೆದ ಎರಡನೇ ವಿಶ್ವಕಪ್ ಟೂರ್ನಿಯಲ್ಲಿ ನಿಕಿ ಪ್ರಸಾದ್ ಬಳಗವು ಅಜೇಯ ಸಾಧನೆಯೊಡನೆ ಟ್ರೋಫಿಗೆ ಮುತ್ತಿಕ್ಕಿತು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಚೊಚ್ಚಲ ಟೂರ್ನಿಯಲ್ಲಿ ಶಫಾಲಿ ವರ್ಮಾ ನಾಯಕತ್ವದ ತಂಡವು ಪ್ರಶಸ್ತಿ ಜಯಿಸಿತ್ತು. ಆ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಈಗಿನ ತರುಣಿಯರ ಪಡೆ ಯಶಸ್ವಿಯಾಗಿದೆ. ಅಂದು ಶಫಾಲಿ ವರ್ಮಾ ಬಳಗದ ಸಾಧನೆ ಚಾರಿತ್ರಿಕವಾಗಿತ್ತು. ಈಗಿನ ಗೆಲುವು ಭಾರತದ ಮಹಿಳಾ ಕ್ರಿಕೆಟ್‌ ಬೆಂಚ್ ಶಕ್ತಿ ಏನು ಎಂಬುದನ್ನು ತೋರಿಸಿದೆ. ಏಕೆಂದರೆ ಎರಡು ವರ್ಷಗಳ ಹಿಂದಿನ ತಂಡದಲ್ಲಿ ಆಡಿದ್ದ ಶಫಾಲಿ ಮತ್ತು ರಿಚಾ ಘೋಷ್ ಅವರಿಗೆ ಭಾರತ ಸೀನಿಯರ್ ತಂಡದಲ್ಲಿ ಆಡಿದ್ದ ಅನುಭವ ಇತ್ತು. ವಿದೇಶಗಳಲ್ಲಿ ಹಲವಾರು ಪಂದ್ಯಗಳನ್ನು ಆಡಿದ್ದರು. ಆದರೆ, ಈ ಸಲ ಅಂತಹ ಅನುಭವಿಗಳ ಸಾಂಗತ್ಯ ತಂಡಕ್ಕೆ ಇರಲಿಲ್ಲ. ನಿಕಿ ಪ್ರಸಾದ್ ಸಹಿತ ಎಲ್ಲ ಆಟಗಾರ್ತಿಯರಿಗೆ ಇದು ಅಪೂರ್ವ ಅನುಭವ. ಹೀಗಾಗಿ, ಇದು ಸಾಧನೆಯೇ ಸರಿ. ಸೀನಿಯರ್ ವಿಭಾಗದ ಯಾವುದೇ ಮಾದರಿಯಲ್ಲಿ ಭಾರತದ ವನಿತೆಯರು ಇದುವರೆಗೂ ವಿಶ್ವಕಪ್ ಗೆದ್ದಿಲ್ಲ. ಇಂತಹ ಸಂದರ್ಭದಲ್ಲಿ ತರುಣಿಯರ ಬಳಗದ ಸಾಧನೆಯು ಕ್ರಿಕೆಟ್‌ ಅಭಿಮಾನಿಗಳ ಮನಸ್ಸಿಗೆ ತಂಪೆರೆದಿದೆ. ಮಹಿಳಾ ಕ್ರಿಕೆಟಿಗರಿಗೂ ಕೇಂದ್ರ ಗುತ್ತಿಗೆ ಮತ್ತು ಸಮಾನ ವೇತನದಂತಹ ಸೌಲಭ್ಯಗಳನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇತ್ತೀಚೆಗಷ್ಟೇ ಜಾರಿಗೆ ತಂದಿದೆ. ಇತ್ತೀಚಿನ ವರ್ಷಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿಯೂ ಹೆಣ್ಣುಮಕ್ಕಳ ಕ್ರಿಕೆಟ್ ಕಲಿಕೆಗೆ ಅವಕಾಶಗಳು ಹೆಚ್ಚುತ್ತಿವೆ. ಇದರಿಂದಾಗಿ ಕ್ರಿಕೆಟ್ ಆಡಲು ಬಾಲಕಿಯರಿಗೆ ಪೋಷಕರಿಂದ ಪ್ರೋತ್ಸಾಹ ದೊರೆಯುತ್ತಿದೆ. ಜೊತೆಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕೂಡ ಜನಪ್ರಿಯಗೊಂಡಿರುವುದು ಹೆಣ್ಣುಮಕ್ಕಳನ್ನು ಕ್ರಿಕೆಟ್‌ನತ್ತ ಸೆಳೆಯುತ್ತಿದೆ.

ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಗೊಂಗಡಿ ತ್ರಿಷಾ (309 ರನ್) ಪಾರಮ್ಯ ಮೆರೆದರು. ಹೈದರಾಬಾದಿನ 19 ವರ್ಷ ವಯಸ್ಸಿನ ತ್ರಿಷಾ ಏಳು ಪಂದ್ಯಗಳಲ್ಲಿ 77.25ರ ಸರಾಸರಿಯಲ್ಲಿ ರನ್‌ ಗಳಿಸಿದರು. ಅಲ್ಲದೆ ಯುವ ವಿಶ್ವಕಪ್ ಟೂರ್ನಿಯಲ್ಲಿ ಶತಕ ಹೊಡೆದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ಲೆಗ್‌ಸ್ಪಿನ್ನರ್ ಕೂಡ ಆಗಿರುವ ತ್ರಿಷಾ ಏಳು ವಿಕೆಟ್ ಪಡೆದರು. ಆರಂಭ ಆಟಗಾರ್ತಿಯಾಗಿ ತಮಿಳುನಾಡಿನ ಜಿ. ಕಮಲಿನಿ ಅವರು ತಂಡಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಬಾಲ್ಯದಲ್ಲಿ ಸ್ಕೇಟಿಂಗ್ ಪಟುವಾಗಿದ್ದ ಅವರು, ಭವಿಷ್ಯ ಅರಸಿ ಕ್ರಿಕೆಟ್‌ನತ್ತ ಒಲವು ತೋರಿದ್ದು ಈಗ ಫಲ ನೀಡುತ್ತಿದೆ. ಎಡಗೈ ಸ್ಪಿನ್–ಆಲ್‌ರೌಂಡರ್ ವೈಷ್ಣವಿ ಶರ್ಮಾ 17 ವಿಕೆಟ್ ಗಳಿಸಿದರು. ಮಲೇಷ್ಯಾ ವಿರುದ್ಧ ಹ್ಯಾಟ್ರಿಕ್ ಕೂಡ ಸಾಧಿಸಿದರು. ಕೇರಳದ ಬೌಲರ್ ವಿ.ಜೆ. ಜೋಶಿತಾ, ವಿಶಾಖಪಟ್ಟಣದ ಶಬ್ನಮ್ ಶಕೀಲ್, ದೆಹಲಿಯ ಪರುಣಿಕಾ ಸಿಸೋಡಿಯಾ ಹಾಗೂ ಮುಂಬೈನ ಆಯುಷಿ ಶುಕ್ಲಾ ಅವರು ಈಗ ಭರವಸೆ ಮೂಡಿಸಿರುವ ಪ್ರಮುಖ ಆಟಗಾರ್ತಿಯರು. ಮೇಲಿನ ಕ್ರಮಾಂಕದ ಮೂವರು ಬ್ಯಾಟರ್‌ಗಳೇ ಹೆಚ್ಚು ಸಮರ್ಥವಾಗಿ ಆಡಿದ್ದರಿಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಗೆ ಹೆಚ್ಚಿನ ಸವಾಲು ಎದುರಾಗಲಿಲ್ಲ. ನಿಕಿ ಪ್ರಸಾದ್‌ ಅವರ ನಾಯಕತ್ವದ ಕೌಶಲಕ್ಕೆ ಪೂರ್ಣ ಅಂಕ ಕೊಡಬಹುದು. ಮುಖ್ಯ ಕೋಚ್ ನೂಷಿನ್ ಅಲ್ ಖಾದಿರ್ ಮತ್ತು ನೆರವು ಸಿಬ್ಬಂದಿಯ ಶ್ರಮವೂ ಈ ಗೆಲುವಿನ ಹಿಂದಿದೆ. ನೂಷಿನ್ ಅವರಿಗೆ ಇದು ಎರಡನೇ ವಿಶ್ವಕಪ್ ಗೆಲುವು. ಈ ಗೆಲುವಿನಿಂದಾಗಿ ಸೀನಿಯರ್ ತಂಡ ಮತ್ತು ಡಬ್ಲ್ಯುಪಿಎಲ್ ತಂಡಗಳ ಕದ ತಟ್ಟುವ ಪ್ರತಿಭಾನ್ವಿತ ಆಟಗಾರರ ಸಂಖ್ಯೆ ಹೆಚ್ಚಲಿದೆ. ಇದರಿಂದಾಗಿ ಸೀನಿಯರ್ ಆಟಗಾರ್ತಿಯರು ಪೈಪೋಟಿ ಎದುರಿಸಬೇಕಾಗಬಹುದು. ಈ ಆರೋಗ್ಯಕರ ಸ್ಪರ್ಧೆಯು ದೇಶದ ಮಹಿಳಾ ಕ್ರಿಕೆಟ್‌ ಬೆಳವಣಿಗೆಗೆ ಮತ್ತಷ್ಟು ಬಲ ತುಂಬಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT