ಸಂಪಾದಕೀಯ
ಪ್ರಜಾಪ್ರಭುತ್ವವು ಸದೃಢವಾಗಿ ಹೆಜ್ಜೆ ಇಡುವಂತಾಗಲು ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ನೆಲದ ಕಾನೂನನ್ನು ಎತ್ತಿ ಹಿಡಿಯುವ ಜೊತೆಗೆ, ಸಾರ್ವಜನಿಕ ಸೇವೆಯಲ್ಲಿ ಒಟ್ಟಾಗಿ ಮತ್ತು ಪರಸ್ಪರ ಗೌರವದಿಂದ ಕೆಲಸ ಮಾಡಬೇಕು. ಯಾರೇ ಆಗಲಿ ಅಹಮಿಕೆ ತೋರಿ ಪರಸ್ಪರರ ನಡುವಿನ ಸಂಬಂಧಗಳು ಹದಗೆಟ್ಟರೆ, ಅದರಿಂದಾಗುವ ಹಾನಿಯು ಆ ವ್ಯಕ್ತಿಗಳಿಗೆ ಸೀಮಿತವಾಗಿ ಉಳಿಯದೆ, ಇಡೀ ವ್ಯವಸ್ಥೆಗೆ ವಿಸ್ತರಿಸುತ್ತದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಎನ್.ವಿ. ಭರಮನಿ ಅವರ ಪ್ರಕರಣ ಈ ಮಾತಿಗೊಂದು ಜ್ವಲಂತ ಉದಾಹರಣೆ. ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಆದ ಅವಮಾನದಿಂದ ಮನನೊಂದಿರುವ ಭರಮನಿ ಅವರು ಸ್ವಯಂನಿವೃತ್ತಿ ಹೊಂದಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಿದ್ದಾರೆ. ತಾವು ಮಾತನಾಡುವ ಹೊತ್ತಿನಲ್ಲಿ ಬಿಜೆಪಿಯ ಕಾರ್ಯಕರ್ತೆಯರು ಕಪ್ಪು ಬಾವುಟ ಪ್ರದರ್ಶಿಸಿದ್ದನ್ನು ಕಂಡು ಅಸಮಾಧಾನಗೊಂಡಿದ್ದ ಮುಖ್ಯಮಂತ್ರಿ ಅವರು, ಎಎಸ್‌ಪಿ ಅವರತ್ತ ಕೈ ಎತ್ತಿ ತೋರಿಸಿದ್ದರು. ಈ ಒರಟು ನಡವಳಿಕೆಯಿಂದ ಎಎಸ್‌ಪಿ ಅವರು ಮುಜುಗರ ಅನುಭವಿಸಿದ್ದರು. ಸಿದ್ದರಾಮಯ್ಯ ಅವರು ಹೀಗೆ ವರ್ತಿಸಿರುವುದು ಅದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಸಭೆಯೊಂದರಲ್ಲಿ ಸಾರ್ವಜನಿಕರ ಎದುರೇ ಜಿಲ್ಲಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ರೀತಿಯ ಸಿಡುಕಿನ ನಡವಳಿಕೆಗಳು ರಾಜಕೀಯದ ಭೂಮಿಕೆಯಲ್ಲಿ ತಾತ್ಕಾಲಿಕವಾಗಿ ರಂಗು ತುಂಬಬಹುದು. ಆದರೆ, ಕೊನೆಗೆ ದೊಡ್ಡ ಹಾನಿಯನ್ನೇ ಉಂಟು ಮಾಡುತ್ತವೆ. ಅವಮಾನದ ಘಟನೆಗಳಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಂದುತ್ತದೆ, ತಮ್ಮ ಕೆಳಹಂತದ ಸಿಬ್ಬಂದಿಯ ಮುಂದೆ ಅವರು ದುರ್ಬಲರಂತೆ ಗೋಚರಿಸ ತೊಡಗುತ್ತಾರೆ. ಅಲ್ಲದೆ, ಆದೇಶ ಪರಿಪಾಲನಾ ಶ್ರೇಣಿಯ ಸರಪಳಿಯನ್ನೂ ಇಂತಹ ಘಟನೆಗಳು ತುಂಡರಿಸಿ ಹಾಕುತ್ತವೆ.
ಭರಮನಿ ಅವರು ಸರ್ಕಾರಕ್ಕೆ ಬರೆದ ಪತ್ರದಲ್ಲಿ, ‘ಮಾಡದೇ ಇರುವ ತಪ್ಪಿಗೆ ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಿ ಅವಮಾನಗೊಂಡ ನನಗೆ ಅನ್ಯಮಾರ್ಗವಿಲ್ಲದೇ ಸ್ವಯಂನಿವೃತ್ತಿಗಾಗಿ ಮನವಿ ಸಲ್ಲಿಸುತ್ತಿದ್ದೇನೆ’ ಎಂಬ ಉಲ್ಲೇಖ ಇದೆ. ‘ವೇದಿಕೆಯ ಭದ್ರತೆಯಷ್ಟೇ ನನ್ನ ಹೊಣೆಯಾಗಿತ್ತು. ಅದನ್ನು ಸಮರ್ಥವಾಗಿಯೇ ನಿಭಾಯಿಸಿದ್ದೇನೆ. ಕಾರಣವಿಲ್ಲದೆ ನನ್ನನ್ನು ಅವಮಾನಿಸಿದ ಘಟನೆ ಕಂಡು ನನ್ನ ಪತ್ನಿ ಹಾಗೂ ಮಕ್ಕಳು ಕಣ್ಣೀರು ಸುರಿಸಿದರು’ ಎಂದೂ ಅವರು ಬರೆದಿದ್ದಾರೆ. ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯೂ ಇದುವರೆಗೆ ಅವರನ್ನು ಭೇಟಿ ಮಾಡಿ ಸಂತೈಸುವ ಕೆಲಸ ಮಾಡಿಲ್ಲ. ಪೊಲೀಸ್ ವ್ಯವಸ್ಥೆಯಲ್ಲಿ ನಾಯಕತ್ವದ ಕೊರತೆ ಇರುವುದರತ್ತ ಇದು ಬೊಟ್ಟು ಮಾಡುತ್ತದೆ. ಸ್ವಯಂನಿವೃತ್ತಿಗೆ ಸಲ್ಲಿಸಿದ ಮನವಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಇಬ್ಬರೂ ಭರಮನಿ ಅವರೊಂದಿಗೆ ಮಾತನಾಡಿ, ಸಮಾಧಾನಪಡಿಸುವ ಮತ್ತು ಸ್ವಯಂನಿವೃತ್ತಿ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ರಾಜೀನಾಮೆ ಪತ್ರವನ್ನು ಭರಮನಿ ಅವರು ಇನ್ನೂ ಹಿಂಪಡೆದಿಲ್ಲ. ‘ಶಿಸ್ತಿನ ಇಲಾಖೆಯಲ್ಲಿ ಇದ್ದೇನೆ. ನನ್ನ ಭಾವನೆಗಳನ್ನು ಮೇಲಧಿಕಾರಿಗಳಿಗೆ ತಿಳಿಸಿರುವೆ. ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಮೇಲಧಿಕಾರಿಗಳು ನನ್ನೊಂದಿಗೆ ಮಾತನಾಡಿದ್ದಾರೆ. ದೈನಂದಿನ ಕೆಲಸಕ್ಕೆ ಹಾಜರಾಗಿರುವೆ. ಮುಂದಿನದ್ದು ಸರ್ಕಾರ ನಿರ್ಧರಿಸಲಿದೆ’ ಎಂದವರು ಹೇಳಿದ್ದಾರೆ. ದುರದೃಷ್ಟವಶಾತ್, ಇಂತಹ ನಡವಳಿಕೆ ಯಾವುದೇ ಒಂದು ಪಕ್ಷದ ನಾಯಕರಿಗೆ ಸೀಮಿತವಾಗಿಲ್ಲ. ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕೂಡ ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರನ್ನು ನಿಂದಿಸುತ್ತಿರುವ ವಿಡಿಯೊ ಹರಿದಾಡಿತ್ತು. ದೊಡ್ಡ ಹುದ್ದೆಯಲ್ಲಿದ್ದವರೇ ಇಂತಹ ಕೆಟ್ಟ ನಡವಳಿಕೆ ಪ್ರದರ್ಶಿಸಿದರೆ ಮಿಕ್ಕವರಿಂದ ಏನನ್ನು ನಿರೀಕ್ಷಿಸಬಹುದು? ಪ್ರತಿಯೊಬ್ಬ ಅಧಿಕಾರಿಯಿಂದ ಉತ್ತರದಾಯಿತ್ವ ಬಯಸುವ ಅಧಿಕಾರ ಸರ್ಕಾರಕ್ಕೆ ಇದ್ದೇ ಇದೆ. ಹಾಗೆ ಉತ್ತರದಾಯಿತ್ವವನ್ನು ಬಯಸುವಾಗ ಸಮಯ, ಸಂದರ್ಭ, ಸ್ಥಳ ಮತ್ತು ಕೇಳುವ ಧಾಟಿ ಮುಖ್ಯವಾಗುತ್ತದೆ. ಸಾರ್ವಜನಿಕವಾಗಿ ಅವಮಾನಿಸುವುದು ಒಳ್ಳೆಯ ನಾಯಕತ್ವದ ಲಕ್ಷಣವಲ್ಲ. ಮುತ್ಸದ್ಧಿತನಕ್ಕೂ ಇಂತಹ ವರ್ತನೆ ಶೋಭೆ ತರುವುದಿಲ್ಲ. ಅಧಿಕಾರಿ ವರ್ಗ ಮತ್ತು ಪೊಲೀಸ್ ಪಡೆಯೇ ಸರ್ಕಾರದ ಬೆನ್ನೆಲುಬು ಎಂಬುದನ್ನು ಆಡಳಿತದ ಹೊಣೆ ಹೊತ್ತವರು ಸದಾ ನೆನಪಿಡಬೇಕು. ಸರ್ಕಾರ ರೂಪಿಸುವಂತಹ ನೀತಿಗಳನ್ನು ಅನುಷ್ಠಾನಕ್ಕೆ ತರುವ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕಾರ್ಯದ ಹೊಣೆ ಹೊಂದಿರುವವರನ್ನು ರಾಜಕಾರಣಿಗಳು ಕೀಳಾಗಿ ಕಾಣುವುದನ್ನು ಮುಂದುವರಿಸಿದರೆ, ಇಡೀ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕುತ್ತದೆ. ಸಂಯಮದ ಕೊರತೆಯು ಸಾರ್ವಜನಿಕ ಸೇವೆಯ ಸಮಗ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ನಾಗರಿಕ ಸೇವೆಯಲ್ಲಿ ಇರುವವರನ್ನು ಘನತೆಯಿಂದ ನಡೆಸಿಕೊಳ್ಳುವುದು ಅತ್ಯಗತ್ಯ. ಅದಕ್ಕಾಗಿ ಅನುಭವಿ ರಾಜಕಾರಣಿಗಳು ವಿವೇಕ ಮತ್ತು ಸ್ಥಾನಮಾನದ ಜವಾಬ್ದಾರಿ ಅರಿತು ವರ್ತಿಸುವ ನಡವಳಿಕೆಯನ್ನು ತೋರಬೇಕು. ಅಧಿಕಾರವನ್ನು ವೃತ್ತಿಪರತೆ, ನ್ಯಾಯತತ್ಪರತೆ ಮತ್ತು ಗೌರವದ ಮೂಲಕ ಅನುಭವಿಸಬೇಕೇ ಹೊರತು ಅವಮಾನಿಸುವುದು ಇಲ್ಲವೆ ಬೆದರಿಸುವ ಮೂಲಕ ಅಲ್ಲ ಎಂಬುದನ್ನು ನಾಯಕರು ಅರ್ಥಮಾಡಿಕೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.