‘ನ್ಯಾಯಾಂಗದ ಬಳಿ ಹಣಬಲವೂ ಇಲ್ಲ, ಬಾಹುಬಲವೂ ಇಲ್ಲ. ನ್ಯಾಯಾಂಗ ಉಳಿದುಕೊಳ್ಳುವುದು ಸಾರ್ವಜನಿಕರು ಇರಿಸಿರುವ ವಿಶ್ವಾಸದ ಆಧಾರದ ಮೇಲೆ ಮಾತ್ರ. ಸಾರ್ವಜನಿಕರು ಇರಿಸಿರುವ ಈ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಮಾಜದ ಸ್ಥಿರತೆಯ ದೃಷ್ಟಿಯಿಂದ ಮಹತ್ವದ್ದು...’ ಎನ್ನುವುದು ಕೆ. ವೀರಸ್ವಾಮಿ ಪ್ರಕರಣದಲ್ಲಿ 1991ರಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖವಾಗಿರುವ ಮಾತುಗಳು. ಈಗ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೊಯಿ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಈಹಿನ್ನೆಲೆಯಲ್ಲಿ ನೋಡಿದಾಗ, 28 ವರ್ಷಗಳ ಹಿಂದೆ ಕೋರ್ಟ್ ಆಡಿದ್ದ ಮಾತು ಎಷ್ಟು ಮಹತ್ವದ್ದು ಎಂಬುದು ಸ್ಪಷ್ಟವಾಗುತ್ತದೆ. ನ್ಯಾಯಮೂರ್ತಿ ಗೊಗೊಯಿ ವಿರುದ್ಧ ಸುಪ್ರೀಂ ಕೋರ್ಟ್‌ನ ಮಾಜಿ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಅವರು ತಮ್ಮ ಆರೋಪವನ್ನು ಪ್ರಮಾಣ ಪತ್ರದ ರೂಪದಲ್ಲಿ ಸುಪ್ರೀಂ ಕೋರ್ಟ್‌ನ 22 ನ್ಯಾಯಮೂರ್ತಿಗಳಿಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಈ ಆರೋಪಗಳು ಕೆಲವು ಆನ್‌ಲೈನ್ ಸುದ್ದಿಸಂಸ್ಥೆಗಳ ಮೂಲಕ ಬಹಿರಂಗವಾಗುತ್ತಿದ್ದಂತೆಯೇ, ಅದರ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಬಹಿರಂಗ ವಿಚಾರಣೆ ನಡೆಸಿತು. ಆ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿ ಗೊಗೊಯಿ ಅವರೂ ಇದ್ದರು. ಈ ನಡುವೆ, ಸಾಮಾಜಿಕ ಜಾಲತಾಣಗಳ ಮೂಲಕ ಇನ್ನೊಂದು ಆಘಾತಕಾರಿ ವಿಚಾರ ಬಹಿರಂಗಪಡಿಸಿದ ಸುಪ್ರೀಂ ಕೋರ್ಟ್‌ನ ವಕೀಲರೊಬ್ಬರು, ‘ಸಿಜೆಐ ಅವರನ್ನು ಸಿಲುಕಿಸಲು’ ಪಿತೂರಿ ನಡೆದಿದೆ ಎಂದು ಆರೋಪಿಸಿದರು. ಈ ಕೆಲಸಕ್ಕೆ ತಮಗೆ ₹ 1.5 ಕೋಟಿ ಆಮಿಷ ಒಡ್ಡಲಾಗಿತ್ತು ಎಂದೂ ಅವರು ಹೇಳಿಕೊಂಡಿದ್ದಾರೆ. ಅಲ್ಲದೆ ಅವರು, ತಮ್ಮ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ‘ಕಾರ್ಪೊರೇಟ್ ವಲಯದ ವ್ಯಕ್ತಿಯೊಬ್ಬರು ಸಿಜೆಐ ಅವರನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ, ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಡ ತರಲು’ ಹುನ್ನಾರ ನಡೆಸಿದ್ದಾರೆ ಎಂಬ ಉಲ್ಲೇಖವನ್ನು ಪ್ರಮಾಣಪತ್ರದಲ್ಲಿ ಮಾಡಿದ್ದಾರೆ ಎಂದೂ ವರದಿಯಾಗಿದೆ. ಸಿಜೆಐ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳದ ಆರೋಪ ಮತ್ತು ಸಿಜೆಐ ಅವರು ರಾಜೀನಾಮೆ ನೀಡುವಂತೆ ಮಾಡಲು ಹುನ್ನಾರ ನಡೆದಿದೆ ಎಂಬ ಆರೋಪ ಅತ್ಯಂತ ಗಂಭೀರವಾದವು. ಇವೆರಡರ ಬಗ್ಗೆಯೂ ಸ್ವತಂತ್ರವಾಗಿ ವಿಚಾರಣೆ ಆಗಬೇಕು. ಸತ್ಯ ಹೊರಬರಬೇಕು.
ಆದರೆ, ಈ ಪ್ರಕರಣದಲ್ಲಿ ಸಿಜೆಐ ನಡೆದುಕೊಂಡ ಬಗೆ ಕೂಡ ಪ್ರಶ್ನಾರ್ಹವಾಗಿದೆ ಎಂಬುದನ್ನು ವಿಷಾದದಿಂದಲೇ ಹೇಳಬೇಕಾಗಿದೆ. ನ್ಯಾಯಶಾಸ್ತ್ರದಲ್ಲಿ ಮತ್ತೆ ಮತ್ತೆ ಹೇಳುವ ಎರಡು ಮಾತುಗಳಿವೆ; ‘ತನಗೆ ಸಂಬಂಧಿಸಿದ ಪ್ರಕರಣದಲ್ಲಿ ತಾನೇ ತೀರ್ಪುಗಾರ ಆಗಬಾರದು’, ‘ಇನ್ನೊಂದು ಬದಿಯಲ್ಲಿ ಇರುವವರ ಮಾತುಗಳನ್ನೂ ಆಲಿಸಬೇಕು’ ಎಂಬುವು ಆ ಎರಡು ಮಾತುಗಳು. ಆದರೆ, ಗೊಗೊಯಿ ಅವರು ತಮ್ಮ ವಿರುದ್ಧದ ಆರೋಪದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಪೀಠದ ಭಾಗವಾಗಿದ್ದು ಯುಕ್ತವಾದ ನಡೆಯಲ್ಲ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸಿಜೆಐ ಆಗಿದ್ದಾಗ, ಅತ್ಯಂತ ಹಿರಿಯ ನ್ಯಾಯಮೂರ್ತಿಗಳನ್ನು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಪೀಠಗಳಿಂದ ಹೊರಗಿರಿಸಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ನೋವು ತೋಡಿಕೊಂಡ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಗೊಗೊಯಿ ಅವರೂ ಒಬ್ಬರಾಗಿದ್ದರು. ಈಗ ಗೊಗೊಯಿ ಅವರೇ, ತಮ್ಮ ವಿರುದ್ಧ ಆರೋಪ ಇರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದ ಭಾಗವಾಗಿದ್ದು, ಆ ನ್ಯಾಯಪೀಠದಲ್ಲಿ ಸಿಜೆಐ ನಂತರದ ಅತ್ಯಂತ ಹಿರಿಯ ನ್ಯಾಯಮೂರ್ತಿಗಳು ಇಲ್ಲವಾಗಿದ್ದು ಸೋಜಿಗದ ಸಂಗತಿ. ಆರೋಪ ಹೊರಿಸಿದ ಮಹಿಳೆಯ ಅನುಪಸ್ಥಿತಿಯಲ್ಲಿ ವಿಚಾರಣೆ ನಡೆಸಿದ್ದು ಕೂಡ ಸರಿಯಾದ ಕ್ರಮವಲ್ಲ. ಮಹಿಳೆಯೊಬ್ಬರು ಮಾಡಿದ ಲೈಂಗಿಕ ಕಿರುಕುಳದ ಆರೋಪದ ವಿಚಾರಣೆ ನಡೆಸಿದ ಪೀಠದಲ್ಲಿ ಮಹಿಳಾ ನ್ಯಾಯಮೂರ್ತಿಯೊಬ್ಬರು ಇರಬೇಕಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸಿಜೆಐ ವಿರುದ್ಧ ಲೈಂಗಿಕ ಆರೋಪ ಕೇಳಿಬಂದಾಗ ಅನುಸರಿಸಬೇಕಾದ ಕ್ರಮಗಳು ಏನು ಎಂಬ ಪ್ರಶ್ನೆಯೂ ಈಗ ಎದುರಾಗಿದೆ. ಆರೋಪಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯದ ಪೂರ್ಣ ಪೀಠದಿಂದ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ವಕೀಲರ ಸಂಘಟನೆಗಳು ಆಗ್ರಹಿಸಿವೆ. ಇದೇನೇ ಇರಲಿ, ವಿಶ್ವಾಸಾರ್ಹ ವಿಚಾರಣೆ ಆಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.