ರೇಣುಕಸ್ವಾಮಿ ಕೊಲೆ ಆರೋಪಿಗಳಿಗೆ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು, ನ್ಯಾಯದ ಎದುರು ಎಲ್ಲರೂ ಸಮಾನರು ಎನ್ನುವ ನಂಬಿಕೆಯನ್ನು ಬಲಪಡಿಸುವಂತಿದೆ.
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಚಲನಚಿತ್ರ ನಟ ದರ್ಶನ್ ತೂಗುದೀಪ, ಪವಿತ್ರಾ ಗೌಡ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿರುವ ನ್ಯಾಯಪೀಠದ ಆದೇಶಕ್ಕೆ ನಿರ್ದಿಷ್ಟ ಘಟನೆಯನ್ನು ಮೀರಿದ ಮಹತ್ವವಿದೆ. ಅಧಿಕಾರ, ಹಣ ಅಥವಾ ಜನಪ್ರಿಯತೆ ಸೇರಿದಂತೆ ಕಾನೂನಿನ ಎದುರು ಯಾವುದೂ ದೊಡ್ಡದಲ್ಲ ಎನ್ನುವುದನ್ನು ಈ ನಿರ್ದೇಶನ ದೃಢೀಕರಿಸುವಂತಿದೆ ಹಾಗೂ ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ನ್ಯಾಯಾಂಗದ ಮೂಲಭೂತ ತತ್ತ್ವವನ್ನು ಎತ್ತಿಹಿಡಿಯುವಂತಿದೆ. ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನುವ ಕಾರಣಕ್ಕೆ ರೇಣುಕಸ್ವಾಮಿಯನ್ನು ಅಪಹರಿಸಿ, ಶೆಡ್ ಒಂದರಲ್ಲಿ ಬಂಧನದಲ್ಲಿರಿಸಿ, ಚಿತ್ರಹಿಂಸೆ ನೀಡಿ ಕೊಲ್ಲಲಾಗಿದೆ; ಕೊಲೆಗೀಡಾದ ವ್ಯಕ್ತಿಯ ದೇಹವನ್ನು ಚರಂಡಿಗೆ ಎಸೆಯಲಾಗಿದೆ ಎನ್ನುವ ಗುರುತರ ಆರೋಪವನ್ನು ದರ್ಶನ್ ಹಾಗೂ ಆತನ ಸಹವರ್ತಿಗಳು ಎದುರಿಸುತ್ತಿದ್ದಾರೆ. ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಇತ್ತೀಚೆಗಷ್ಟೇ ಆಜೀವ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಆ ಪ್ರಕರಣದ ನಂತರ, ಪೊಲೀಸ್ ತನಿಖೆ ಹಾಗೂ ಪ್ರಾಸಿಕ್ಯೂಷನ್ ವಾದಕ್ಕೆ ನ್ಯಾಯಾಂಗದ ಅನುಮೋದನೆ ದೊರೆತಿರುವ ಎರಡನೇ ಪ್ರಮುಖ ಪ್ರಕರಣ ಇದಾಗಿದೆ. ಜನರ ಗಮನಸೆಳೆದಿರುವ ಈ ಪ್ರಕರಣದಲ್ಲಿ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್ ತೀರ್ಮಾನ ನ್ಯಾಯಾಂಗದ ವಿವೇಚನೆಯ ಬಗ್ಗೆ ಜನಸಾಮಾನ್ಯರಲ್ಲಿ ಗೌರವ ಮೂಡಿಸುವಂತಹದ್ದಾಗಿದೆ.
ನ್ಯಾಯಾಂಗ ಯಾರೊಬ್ಬರ ಪಕ್ಷಪಾತಿಯೂ ಆಗಿರದೆ– ವಿಶೇಷವಾಗಿ ಪ್ರಭಾವಿಗಳ ಒತ್ತಡಕ್ಕೆ ಮಣಿಯದೆ– ಕಾನೂನು ನಿಯಮಗಳನ್ನು ಎತ್ತಿಹಿಡಿಯಲು ನೀಡಿರುವ ಕರೆಯ ರೂಪದಲ್ಲಿಯೂ ಪ್ರಸಕ್ತ ತೀರ್ಪಿಗೆ ಮಹತ್ವವಿದೆ.ಆರೋಪಕ್ಕೆ ಗುರಿಯಾದ ವ್ಯಕ್ತಿ ಯಾರೇ ಆಗಿರಲಿ, ಎಷ್ಟೇ ಉನ್ನತ ಸ್ಥಾನದಲ್ಲಿರಲಿ, ಅವರು ಕಾನೂನಿನ ಚೌಕಟ್ಟಿಗಿಂತಲೂ ದೊಡ್ಡವರಲ್ಲ ಎನ್ನುವ ಸಂಗತಿಯನ್ನು ಸುಪ್ರೀಂ ಕೋರ್ಟ್ ನಿರ್ದೇಶನ ಅನುಮಾನಕ್ಕೆ ಆಸ್ಪದವಿಲ್ಲದಂತೆ ಸ್ಪಷ್ಟಪಡಿಸಿದೆ. ಸೆಲೆಬ್ರಿಟಿ ಸ್ಥಾನಮಾನ ಅಥವಾ ರಾಜಕೀಯ ಅಧಿಕಾರವು ನ್ಯಾಯಾಂಗ ಪ್ರಕ್ರಿಯೆಯ ಮೇಲೆ ಪ್ರಭಾವ ಬೀರಬಲ್ಲದು ಎನ್ನುವ ಸಾರ್ವಜನಿಕ ಆತಂಕಕ್ಕೆ ನೀಡಿರುವ ಪ್ರತಿಕ್ರಿಯೆಯ ರೂಪದಲ್ಲೂ ಈ ತೀರ್ಪನ್ನು ಗಮನಿಸಬಹುದು. ಹೈಕೋರ್ಟ್‌ನಿಂದ ಜಾಮೀನು ದೊರೆಯುವ ಮೊದಲು ಜೈಲಿನಲ್ಲಿದ್ದಾಗ ದರ್ಶನ್ ಧೂಮಪಾನ ಮಾಡಿದ್ದನ್ನು ಉಲ್ಲೇಖಿಸಿರುವ ಕೋರ್ಟ್, ರಾಜಾತಿಥ್ಯ ಮುಂದುವರಿದಲ್ಲಿ ಬಂದೀಖಾನೆಯ ಅಧಿಕಾರಿಗಳನ್ನು ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದೆ. ಕಾನೂನು ಎಲ್ಲರೂ ಪಾಲಿಸಬೇಕಾದ ಕರ್ತವ್ಯವಾಗಿದೆಯೇ ಹೊರತು, ಆಯ್ದ ಕೆಲವರಿಗೆ ಅನುಕೂಲ ದೊರಕಿಸಿಕೊಡುವ ಸವಲತ್ತು ಅಲ್ಲ ಎನ್ನುವುದನ್ನು ಕೋರ್ಟ್‌ನ ಎಚ್ಚರಿಕೆ ಧ್ವನಿಸುವಂತಿದೆ. ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ನ್ಯಾಯಪೀಠ ಅತ್ಯಂತ ಕಠಿಣವಾಗಿ ಪ್ರತಿಕ್ರಿಯಿಸಿದ್ದು, ಜಾಮೀನು ನೀಡಿರುವ ಆದೇಶವು ವಿವೇಚನಾ ಅಧಿಕಾರವನ್ನು ಯಾಂತ್ರಿಕವಾಗಿ ಬಳಸಿರುವುದರ ಫಲವಾಗಿದೆ ಎಂದು ಹೇಳಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಸಾಕ್ಷಿಗಳ ಹೇಳಿಕೆಗಳನ್ನು ಸಮರ್ಪಕವಾಗಿ ಪರಿಗಣಿಸದಿರುವುದನ್ನೂ ನ್ಯಾಯಪೀಠ ಗುರ್ತಿಸಿದೆ.
ರೇಣುಕಸ್ವಾಮಿ ಕೊಲೆ ಆರೋಪಿಗಳಿಗೆ ಜಾಮೀನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ಆದೇಶವು, ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಆಗಿರುವ ಲೋಪವೊಂದರ ತಿದ್ದುಪಡಿಯಷ್ಟೇ ಆಗಿಲ್ಲ; ಅದು, ನ್ಯಾಯಾಂಗದ ಶಿಸ್ತಿನ ಬಲವರ್ಧನೆಯ ಪ್ರಯತ್ನವೂ ಆಗಿದೆ. ಫೊರೆನ್ಸಿಕ್ ಸಾಕ್ಷ್ಯಗಳ ಪ್ರಬಲ ಒತ್ತಾಸೆಯಿರುವುದನ್ನು ಪ್ರಕರಣದ ಸಂಕೀರ್ಣತೆಯ ಸೂಚನೆಯಾಗಿ ಪರಿಗಣಿಸಿರುವ ನ್ಯಾಯಪೀಠ, ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಗೊಳಿಸಿದೆ. ನ್ಯಾಯದಾನದ ಪ್ರಕ್ರಿಯೆಯಲ್ಲಿ ಯಾಂತ್ರಿಕ ತೀರ್ಮಾನಗಳಿಗೆ ಅವಕಾಶವಿಲ್ಲ; ತಪ್ಪಾದ ದಯೆ– ಅನುಕಂಪ ಅಥವಾ ಯಾವುದೇ ರೀತಿಯ ಪ್ರಭಾವಗಳಿಗೂ ಅವಕಾಶವಿಲ್ಲ ಎನ್ನುವ ಪ್ರಬಲ ಸಂದೇಶವನ್ನೂ ಸುಪ್ರೀಂ ಕೋರ್ಟ್ ತೀರ್ಪು ನೀಡುವಂತಿದೆ. ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರುವ ಸಂಸ್ಥೆಗಳ ಕಾರ್ಯಾಚರಣೆಯ ಬಗ್ಗೆ ನಾಗರಿಕರು ವಿಶ್ವಾಸ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಂತಹ ತೀರ್ಪನ್ನು ನ್ಯಾಯಪೀಠ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.