ADVERTISEMENT

ಎಡಪಕ್ಷಗಳು ಎದುರಿಸುತ್ತಿರುವ ಏಕಾಕಿತನ ಆತಂಕಕಾರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 20:33 IST
Last Updated 25 ಮಾರ್ಚ್ 2019, 20:33 IST
ಎಡಪಕ್ಷಗಳು
ಎಡಪಕ್ಷಗಳು   

ಚುನಾವಣೆಗಳಲ್ಲಿ ಗೆಲ್ಲುವ ಸಾಮರ್ಥ್ಯ ಕುಂದತೊಡಗಿದಂತೆ ಎಡಪಕ್ಷಗಳು ದೇಶದ ಶಕ್ತಿ ರಾಜಕಾರಣದಲ್ಲಿ ಏಕಾಂಗಿ ಆಗತೊಡಗಿವೆ. ಹಾಲಿ ಲೋಕಸಭಾ ಚುನಾವಣೆಯ ವಿದ್ಯಮಾನಗಳೇ ಈ ಮಾತಿಗೆ ಸಾಕ್ಷಿ. 2004ರ ಚುನಾವಣೆಯಲ್ಲಿ ನಾಲ್ಕು ಎಡಪಂಥೀಯ ಪಕ್ಷಗಳ 59 ಪ್ರತಿನಿಧಿಗಳನ್ನು ಜನ ಲೋಕಸಭೆಗೆ ಆರಿಸಿ ಕಳಿಸಿದ್ದರು. ಹಾಲಿ ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳು ಇತರೆ ಜಾತ್ಯತೀತ ಪಕ್ಷಗಳತ್ತ ಸೀಟು ಹೊಂದಾಣಿಕೆಯ ಹಸ್ತ ಚಾಚಿವೆ. ಆದರೆ ಆ ಕೈಯನ್ನು ಹಿಡಿಯುವವರಿಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ನಿರುತ್ಸಾಹ ತೋರಿದೆ. ಬಿಹಾರದಲ್ಲಿ ಲಾಲೂ ಪ್ರಸಾದ್ ಅವರ ರಾಷ್ಟ್ರೀಯ ಜನತಾದಳವು ಎಡಪಕ್ಷಗಳಿಗೆ ಒಂದೇ ಒಂದು ಸೀಟನ್ನೂ ಬಿಟ್ಟುಕೊಟ್ಟಿಲ್ಲ. ಹಜಾರಿಬಾಗ್ ಕ್ಷೇತ್ರವನ್ನು ಎಡಪಕ್ಷಗಳಿಗೆ ಬಿಡೋಣವೆಂಬ ಜಾರ್ಖಂಡ್ ಮುಕ್ತಿ ಮೋರ್ಚಾ ಮಾತನ್ನು ಕಾಂಗ್ರೆಸ್ ತಳ್ಳಿ ಹಾಕಿತು.ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ರೈತರ ಭಾರಿ ಶಕ್ತಿಪ್ರದರ್ಶನ ನಡೆಸಿದರೂ ಎನ್‌ಸಿಪಿ– ಕಾಂಗ್ರೆಸ್ ಪಕ್ಷಗಳ ಮೈತ್ರಿಕೂಟದಲ್ಲಿ ಎಡಪಕ್ಷಗಳಿಗೆ ಜಾಗ ಸಿಗಲಿಲ್ಲ.

ಉತ್ತರಪ್ರದೇಶದಲ್ಲೂ ಇದೇ ಕತೆ. ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸಿಪಿಐಗೆ ಎರಡು ಸೀಟುಗಳು ದಕ್ಕಿವೆ. ಮಾರುಕಟ್ಟೆ ಕೇಂದ್ರಿತ ಅರ್ಥನೀತಿ, ನವ ಉದಾರವಾದದ ಗಾಳಿ ಬೀಸತೊಡಗಿದಂತೆ ಎಡಪಂಥೀಯ ರಾಜಕಾರಣ ವಿಶ್ವದ ಇತರೆಡೆಗಳಲ್ಲೂ ಹಿಂಜರಿತ ಎದುರಿಸಿದೆ. ಭಾರತದಲ್ಲಿ ಎಡಪಂಥಕ್ಕೆ ನಿಧಾನ ಗ್ರಹಣ ಹಿಡಿಸಿದ್ದು ಉದಾರ ಆರ್ಥಿಕ ನೀತಿಯ ಜಾರಿಯ ಜೊತೆ ಜೊತೆಗೆ ಮಂಡಲ-ಕಮಂಡಲ ರಾಜಕಾರಣ.

ಬಂಡವಾಳವೇ ಪರದೈವ ಎಂದು ಆರಾಧಿಸುವ ಸರ್ಕಾರಗಳು, ನೆಲ ಕಚ್ಚಿದ ಜನಸಮುದಾಯಗಳನ್ನು ಮರೆತಾಗಲೆಲ್ಲ ಕಿವಿ ಹಿಂಡುವ ಐತಿಹಾಸಿಕ ಹೊಣೆಗಾರಿಕೆಯನ್ನು ಎಡಪಕ್ಷಗಳು ಯಶಸ್ವಿಯಾಗಿ ನಿಭಾಯಿಸಿದ ನಿದರ್ಶನಗಳಿವೆ. ಕನ್ನಡಿಗ ಎಚ್.ಡಿ.ದೇವೇಗೌಡ 1996ರಲ್ಲಿ ಪ್ರಧಾನಮಂತ್ರಿ ಹುದ್ದೆಗೇರಿದರು. ಗೌಡರಿಗೆ ಮುನ್ನ ಈ ಹುದ್ದೆಗೆ ಪಶ್ಚಿಮ ಬಂಗಾಳದ ಎಡರಂಗ ಸರ್ಕಾರದ ಅನುಭವಿ ಮುಖ್ಯಮಂತ್ರಿ ಜ್ಯೋತಿ ಬಸು ಹೆಸರು ಸರ್ವಾನುಮತದಿಂದ ಸೂಚಿತ ಆಗಿತ್ತು. ಆದರೆ, ಸಿಪಿಎಂ ವರಿಷ್ಠ ಮಂಡಳಿಯು ಸೈದ್ಧಾಂತಿಕ ಕಾರಣಗಳಿಗಾಗಿ ಈ ಆಹ್ವಾನವನ್ನು ತಿರಸ್ಕರಿಸಿತ್ತು. ಆ ಸನ್ನಿವೇಶದಲ್ಲಿ ತಲೆಬಾಗಿದ ಬಸು, ಕೆಲ ಕಾಲದ ನಂತರ ಈ ನಿರ್ಧಾರವನ್ನು ‘ಐತಿಹಾಸಿಕ ಪ್ರಮಾದ’ ಎಂದು ಕರೆದರು. 2004ರಲ್ಲಿ ಯುಪಿಎ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಎಡಪಕ್ಷಗಳು, ಅನೇಕ ಜನಪರ ಕಾರ್ಯಕ್ರಮಗಳನ್ನು ಆಗುಮಾಡಿಸಿದ್ದವು. ಅಮೆರಿಕದೊಂದಿಗೆ ಪರಮಾಣು ಒಪ್ಪಂದವನ್ನು ವಿರೋಧಿಸಿ 2008ರಲ್ಲಿ ಬೆಂಬಲ ವಾಪಸು ಪಡೆದವು. ‘ಮುಖ್ಯಧಾರೆಯ ರಾಜಕಾರಣಕ್ಕೆ ಬೆನ್ನು ತೋರಿದ ನಡೆ’ ಎಂದು ಎಡಪಕ್ಷಗಳ ಈ ನಿರ್ಧಾರವು ಜಾತ್ಯತೀತ- ಪ್ರಗತಿಪರ ಶಕ್ತಿಗಳಿಂದ ಟೀಕೆಗೆ ಗುರಿಯಾದದ್ದು ಉಂಟು. ಇದೇ 2004-2014ರ ಅವಧಿಯಲ್ಲಿ ಎಡಪಕ್ಷಗಳ ಚುನಾವಣಾ ರಾಜಕಾರಣ ಶಕ್ತಿಗುಂದಿತು. ಲೋಕಸಭೆಯಲ್ಲಿ ಎಡಪಕ್ಷಗಳ ಪ್ರತಿನಿಧಿಗಳ ಸಂಖ್ಯೆ 59ರಿಂದ 11ಕ್ಕೆ ಕುಸಿದಿದೆ. ಮೂರೂವರೆ ದಶಕಗಳ ಹಿಡಿತದಿಂದ ಬಂಗಾಳವನ್ನು ಮರಳಿ ಗಳಿಸುವ ಮತ್ತು ಕೈಜಾರದಂತೆ ಕೇರಳವನ್ನು ಜತನ ಮಾಡಿಕೊಳ್ಳುವುದು ಎಡಪಕ್ಷಗಳ ಮುಂದಿರುವ ತಕ್ಷಣದ ತುರ್ತು ಸವಾಲುಗಳು.

ADVERTISEMENT

ಬಿಹಾರ, ಪಂಜಾಬ್, ಉತ್ತರಪ್ರದೇಶ, ಅವಿಭಜಿತ ಆಂಧ್ರಪ್ರದೇಶದಲ್ಲಿ ಎಡಪಕ್ಷಗಳು ಗಣನೀಯ ಅಸ್ತಿತ್ವ ಹೊಂದಿದ್ದ ಕಾಲವಿತ್ತು. ಎಡಪಕ್ಷಗಳು ಮೂಲಭೂತವಾಗಿ ಜನಾಂದೋಲನಗಳನ್ನು ಕೇಂದ್ರದಲ್ಲಿ ಇರಿಸಿಕೊಂಡು ರಾಜಕಾರಣ ಮಾಡಿಕೊಂಡು ಬಂದಿವೆ. ಶಾಸನ ಸಭೆಗಳಲ್ಲಿ ಸಂಖ್ಯೆ ಹೆಚ್ಚಿಸಿಕೊಳ್ಳುವ ರಾಜಕಾರಣಕ್ಕೆ ಆದ್ಯತೆ ನೀಡದಿರುವುದು ಅವುಗಳ ಬಲ ಮತ್ತು ದೌರ್ಬಲ್ಯ ಎರಡೂ ಹೌದು. ಮಂಡಲ್ ವರದಿ ಜಾರಿಯಿಂದ ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಹುಟ್ಟಿದ ಅಸ್ಮಿತೆಯ ರಾಜಕಾರಣ ಮತ್ತು ಇದಕ್ಕೆ ಪ್ರತಿಯಾಗಿ ಬಿಜೆಪಿ ಎತ್ತಿಕಟ್ಟಿದ ಮಂದಿರ-ಮಸೀದಿ ರಾಜಕಾರಣ ಒಡ್ಡಿದ ಹೊಸ ಸವಾಲುಗಳಿಗೆ ಎಡಪಕ್ಷಗಳ ಬಳಿ ಉತ್ತರ ಇರಲಿಲ್ಲ. ಜಾತಿಯೂ ವರ್ಗದಷ್ಟೇ ವಾಸ್ತವ ಎಂಬ ಸತ್ಯವನ್ನು ತಡವಾಗಿ ಅರಿತವು. ಸರ್ಕಾರಗಳ ನೀತಿ ನಿರ್ಧಾರಗಳನ್ನು ಪ್ರಭಾವಿಸುವಷ್ಟು ಸಂಖ್ಯಾಬಲವನ್ನು ಎಡಪಕ್ಷಗಳು ಹೊಂದುವುದು ಭಾರತದ ಜನತಂತ್ರದ ಅನಿವಾರ್ಯ. ಚುನಾವಣಾ ರಾಜಕಾರಣದಲ್ಲಿ ಹಿಂದೆ ಉಳಿದಿರುವ ಕಾರಣಗಳನ್ನು ಗುರುತಿಸಿ, ಸೂಕ್ತ ರಣತಂತ್ರವನ್ನು ಎಡಪಕ್ಷಗಳು ಹೆಣೆಯುವುದು ಐತಿಹಾಸಿಕ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.