ADVERTISEMENT

ಆರ್ಥಿಕತೆಗೆ ಚೈತನ್ಯ ತುಂಬಲು ತೆರಿಗೆ ದರ ಕಡಿತದ ಕೊಡುಗೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 20:12 IST
Last Updated 22 ಸೆಪ್ಟೆಂಬರ್ 2019, 20:12 IST
   

ಕಾರ್ಪೊರೇಟ್‌ ತೆರಿಗೆ ದರ ತಗ್ಗಿಸುವ ಮೂಲಕ ಕೇಂದ್ರ ಸರ್ಕಾರವುನೇರ ತೆರಿಗೆಗೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ಆರ್ಥಿಕತೆಯ ಬಹುತೇಕ ವಲಯಗಳಲ್ಲಿ ನಿರಾಶೆಯ ಕಾರ್ಮೋಡ ಕವಿದಿರುವ ಈ ಸಂದರ್ಭದಲ್ಲಿ, ಹೂಡಿಕೆ ಹೆಚ್ಚಿಸಲು ಮತ್ತು ಆರ್ಥಿಕ ಚಟುವಟಿಕೆಗಳಿಗೆ ವೇಗ ತುಂಬಲುಇಂತಹ ಉಪಕ್ರಮದ ಅಗತ್ಯ ಇತ್ತು. ₹ 1.45 ಲಕ್ಷ ಕೋಟಿಯಷ್ಟು ವರಮಾನ ಬಿಟ್ಟುಕೊಡುವ ಈ ತೀರ್ಮಾನದ ಹಿಂದಿನ ಲೆಕ್ಕಾಚಾರ ಸಂಕೀರ್ಣವಾದುದು.

ಸರ್ಚಾರ್ಜ್‌, ಸೆಸ್‌ ಒಳಗೊಂಡಂತೆ ಶೇ 34.94ರಷ್ಟಿದ್ದ ಕಾರ್ಪೊರೇಟ್‌ ತೆರಿಗೆ ದರವನ್ನು ಶೇ 25.17ಕ್ಕೆ ತಗ್ಗಿಸಲಾಗಿದೆ. ವಾರ್ಷಿಕವಾಗಿ ₹ 2 ಕೋಟಿಗಿಂತ ಹೆಚ್ಚು ಆದಾಯ ಉಳ್ಳವರು ಷೇರು ಮಾರಾಟದಿಂದ ಪಡೆಯುವ ಲಾಭದ ಮೇಲಿನ ಸರ್ಚಾರ್ಜ್‌ ಹೆಚ್ಚಳವನ್ನು ಕೈಬಿಡಲಾಗಿದೆ. ಹೊಸ ತಯಾರಿಕಾ ಘಟಕ ಸ್ಥಾಪಿಸುವ ಕಂಪನಿಗಳ ಮೇಲಿನ ತೆರಿಗೆ ದರವನ್ನು ಶೇ 25ರಿಂದ ಶೇ 15ಕ್ಕೆ ಇಳಿಸಲಾಗಿದೆ. ಆರ್ಥಿಕತೆಯನ್ನು ಹಳಿಗೆ ತರಲು ಸರ್ಕಾರ ಸರಣಿಯೋಪಾದಿಯಲ್ಲಿ ಪ್ರಕಟಿಸು ತ್ತಿರುವ ಕೊಡುಗೆಗಳಲ್ಲಿ ಶುಕ್ರವಾರ ಮಾಡಿರುವ ಘೋಷಣೆಯು ಅತಿದೊಡ್ಡದು. ಅರ್ಥ ವ್ಯವಸ್ಥೆಯ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರಿ, ಉದ್ಯಮಿಗಳು ಮತ್ತು ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸುವ ನಿರೀಕ್ಷೆ ಇದೆ. ಕಂಪನಿಗಳನ್ನು ಹೊಸದಾಗಿ ಸ್ಥಾಪಿಸುವವರಲ್ಲಿ ಉತ್ಸಾಹ ಮೂಡಿಸಬಹುದು. ವಿದೇಶಿ ಬಂಡವಾಳ ಹರಿವು ಹೆಚ್ಚಲಿದೆ. ಒಟ್ಟಾರೆ ಪರಿಣಾಮವಾಗಿಉದ್ಯೋಗ ಅವಕಾಶಗಳು ಹೆಚ್ಚಾಗಬಹುದು.

ತೆರಿಗೆ ದರಗಳನ್ನು ಏಷ್ಯಾದ ಇತರ ದೇಶಗಳ ಮಟ್ಟಕ್ಕೆ ತಂದಿರುವುದು ದೇಶಿ ಕಂಪನಿಗಳ ಸ್ಪರ್ಧಾತ್ಮಕತೆ, ಬಂಡವಾಳ ಹೂಡುವ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ‘ದುಬಾರಿ ತೆರಿಗೆ ದೇಶ’ ಎನ್ನುವ ಅಪವಾದದಿಂದಲೂ ಭಾರತ ಈಗ ಹೊರಬರಲಿದೆ. ತೆರಿಗೆ ಪ್ರಮಾಣವನ್ನು ಇಳಿಸಿರುವುದರಿಂದ ಕಾರ್ಪೊರೇಟ್‌ ಸಂಸ್ಥೆಗಳ ತೆರಿಗೆ ಪಾವತಿ ನಂತರದ ವರಮಾನವು ಹೆಚ್ಚಳಗೊಳ್ಳಲಿದೆ. ಈ ಮೊತ್ತವನ್ನು ಸಾಲದ ಹೊರೆ ತಗ್ಗಿಸಲು ಮತ್ತು ಷೇರುದಾರರಿಗೆ ಹೆಚ್ಚಿನ ಲಾಭಾಂಶ ನೀಡಲು ಬಳಕೆ ಮಾಡಿಕೊಳ್ಳುವುದರ ಬದಲಿಗೆ ವಿಸ್ತರಣೆ ಮತ್ತು ಹೊಸ ತಯಾರಿಕಾ ಘಟಕಗಳ ಸ್ಥಾಪನೆಗೆ ಸದ್ವಿನಿಯೋಗ ಮಾಡಿಕೊಂಡರೆ ಮಾತ್ರ ಈ ನಿರ್ಧಾರ ಸಾರ್ಥಕಗೊ ಳ್ಳಲಿದೆ. ಇದೇ ಅಕ್ಟೋಬರ್‌ 1ರಿಂದ 2023ರ ಮಾರ್ಚ್‌ 31ರ ಒಳಗೆ ತಯಾರಿಕೆ ಆರಂಭಿಸುವ ಎಲ್ಲ ದೇಶಿ ಕಂಪನಿಗಳು ಪಾವತಿಸಬೇಕಾದ ತೆರಿಗೆ ದರ ಶೇ 15ಕ್ಕೆ ಇಳಿಕೆಯಾಗಲಿದೆ. ಇದರಿಂದ ತಯಾರಿಕಾ ಕ್ಷೇತ್ರಕ್ಕೆ ಹೆಚ್ಚು ಉದ್ಯಮಿಗಳು ಪ್ರವೇಶಿಸಲಿದ್ದಾರೆ ಎಂಬುದು ಸರ್ಕಾರದ ನಿರೀಕ್ಷೆ.

ADVERTISEMENT

ಅರ್ಥ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲು ಈ ನಿರ್ಧಾರ ಗಮನಾರ್ಹ ಕೊಡುಗೆ ನೀಡಲಿದೆ. ತೆರಿಗೆ ದರ ಕಡಿಮೆ ಮಾಡುವ ಘೋಷಣೆ ಹೊರಬೀಳುತ್ತಿದ್ದಂತೆಯೇ ಷೇರು ಮಾರುಕಟ್ಟೆಯಲ್ಲಿ ದೊಡ್ಡ ಜಿಗಿತ ಉಂಟಾಗಿದೆ. ಆರ್ಥಿಕ ಹಿಂಜರಿತದಿಂದ ನಲುಗಿದ್ದ ಮಾರುಕಟ್ಟೆಗೆ ಆನೆ ಬಲ ಬಂದಂತಾಗಿದೆ. ಸಂವೇದಿ ಸೂಚ್ಯಂಕವು 1,921 ಅಂಶಗಳಷ್ಟು ಏರಿದೆ. ಕಾರ್ಪೊರೇಟ್‌ ವಲಯದಲ್ಲಿ ಈ ನಿರ್ಧಾರ ಮೂಡಿಸಿರುವ ಉತ್ಸಾಹದ ಪ್ರತೀಕ ಇದು. ಈ ಘೋಷಣೆಯ ಬೆನ್ನಿಗೇ, ಜಿಎಸ್‌ಟಿ ಮಂಡಳಿಯು ಹೋಟೆಲ್‌ ಉದ್ದಿಮೆಯ ಬೆಳವಣಿಗೆಗೂ ಪೂರಕವಾಗುವಂತಹ ಕ್ರಮ ಕೈಗೊಂಡಿದೆ. ಕೊಠಡಿಗಳ ಬಾಡಿಗೆಯ ಮೇಲಿನ ತೆರಿಗೆ ದರವನ್ನು ಇಳಿಸಲಾಗಿದೆ. ಆದರೆ, ವಾಹನ ತಯಾರಿಕಾ ಉದ್ಯಮದ ಬೇಡಿಕೆಗೆ ಸರ್ಕಾರ ಓಗೊಡದಿರುವುದು ನಿರಾಸೆ ಮೂಡಿಸಿದೆ. ಕಾರ್ಪೊರೇಟ್‌ ತೆರಿಗೆ ದರ ಇಳಿಸಿರುವುದರಿಂದ ವಿತ್ತೀಯ ಕೊರತೆಯು ಜಿಡಿಪಿಯ ಶೇ 3.4ರಿಂದ ಶೇ 3.9ಕ್ಕೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಹೂಡಿಕೆ ಹೆಚ್ಚಿ, ಬೆಳವಣಿಗೆ ಗರಿಗೆದರಿ, ತೆರಿಗೆ ಸಂಗ್ರಹ ಹೆಚ್ಚಳಗೊಂಡರೆ ಈ ಕೊರತೆ ಪ್ರಮಾಣ ಕಡಿಮೆಯಾಗಬಹುದು. ಸದ್ಯದ ಆರ್ಥಿಕ ಹಿಂಜರಿತಕ್ಕೆ ಸರಕು ಮತ್ತು ಸೇವೆಗಳ ಬೇಡಿಕೆ ಕುಸಿತವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ, ವೈಯಕ್ತಿಕ ಆದಾಯ ತೆರಿಗೆಯಲ್ಲಿ ರಿಯಾಯಿತಿ ನೀಡುವ ನಿರ್ಧಾರ ಕೈಗೊಂಡರೆ ಮಾರುಕಟ್ಟೆಗೆ ಹುರುಪು ಬರಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.